ಸಾರಾಂಶ
ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಉದ್ದೇಶಿಸಿರುವ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಯ ಯೋಜನಾ ಪೂರ್ವ ಸಿದ್ಧತೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ.
ಅಲ್ಲದೆ, ಕೇಂದ್ರ ಸರ್ಕಾರದ ಅನುಮೋದನೆ ಪಡೆದ ಬಳಿಕ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಪುಟ ಸಲಹೆ ನೀಡಿದೆ. 28,405 ಕೋಟಿ ರು. ಅಂದಾಜು ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಜೀ. ಸುರಂಗ ಮಾರ್ಗದ ಕಾಮಾರಿ ನಡೆಸಬೇಕಿದೆ.
ಈ ಬಗ್ಗೆ ಭಾರತ ಸರ್ಕಾರದ ಮೂಲಕ ಸಾವರಿನ್ ಲೋನ್ ಅಥವಾ ಪಾಸ್-ಥ್ರೂ - ಅಸಿಸ್ಟೆನ್ಸ್ (ಪಿಟಿಎ) ರೀತಿಯಲ್ಲಿ ಸಾಲ ಮಾಡಬೇಕಿದೆ. ಈ ಬಗ್ಗೆ ಕೇಂದ್ರದ ಅನುಮೋದನೆ ನಿರೀಕ್ಷಿಸಿ ಪೂರ್ವ ಯೋಜನಾ ಚಟುವಟಿಕೆ ನಡೆಸಬಹುದು. ಕೇಂದ್ರದ ಅನುಮೋದನೆ ಬಳಿಕ ಸಿವಿಲ್ ಕಾಮಗಾರಿ ಕೈಗೊಳ್ಳಬಹುದು ಎಂದು ಸಂಪುಟ ನಿರ್ಣಯ ತೆಗೆದುಕೊಂಡಿದೆ.
ಬಿಬಿಎಂಪಿ ಅಭಿವೃದ್ಧಿಗೆ ಘಟನೋತ್ತರ ಅನುಮತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ 1611 ಕಿ.ಮೀ. ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಪೈಕಿ ಕೆಲವು ರಸ್ತೆಗಳು ಹಾಳಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿತ್ತು. ಹೀಗಾಗಿ 389.68 ಕಿ.ಮೀ. ರಸ್ತೆಯನ್ನು 694 ಕೋಟಿ ರು. ವೆಚ್ಚದಲ್ಲಿ ತುರ್ತಾಗಿ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮತಿ ಪಡೆಯಲಾಗಿದೆ.
ಇನ್ನು ಬೆಂಗಳೂರು ನಗರ ಜಿಲ್ಲೆಯ ಬಿದರಹಳ್ಳಿ ಹೋಬಳಿಯ ಹುಸ್ಕೂರು ಗ್ರಾಮದ 2.06 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಪಿಪಿಪಿ ಮಾದರಿಯಲ್ಲಿ ಬಹುಮಹಡಿ ವಸತಿ ಸಮುಚ್ಛಯ ಯೋಜನೆ ಕೈಗೊಳ್ಳಲು ಸಂಪುಟ ಅಂಗೀಕಾರ ನೀಡಿದೆ. ಇದಕ್ಕೆ 64.78 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ.