ಚರ್ಚ್‌ಗಳಲ್ಲಿ ಕ್ರೈಸ್ತ ಧರ್ಮ ಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿದರು. ಮಹಾನ್ ದೈವ ಏನು ಕ್ರಿಸ್ತ ನೀಡಿರುವ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ನೆರೆದ ಭಕ್ತರಿಗೆ ಸಂದೇಶವನ್ನು ರವಾನಿಸಿದರು.

ಕನ್ನಡಪ್ರಡ ವಾರ್ತೆ ರಾಯಚೂರು

ಮನುಕುಲಕ್ಕೆ ಶಾಂತಿಯ ಪಥದೊಂದಿಗೆ ದೈವತ್ವದ ಮಾರ್ಗತೋರಿದ ಏಸು ಕ್ರಿಸ್ತನ ಜನ್ಮ ದಿನ ನಿಮಿತ್ತ ಕ್ರೈಸ್ತ ಬಾಂಧವರ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ದೊಡ್ಡದಾದ ಕ್ರಿಸ್ಮಸ್ ಹಬ್ಬವನ್ನು ಎಲ್ಲಡೆ ಸಂಭ್ರಮ-ಸಡಗರದಿಂದ ಗುರುವಾರ ಆಚರಿಸಲಾಯಿತು.

ನಗರದ ಸೇರಿದಂತೆ ಜಿಲ್ಲೆಯ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗದ ಚರ್ಚ್‌ಗಳಲ್ಲಿ ಕ್ರಿಸ್ಮಸ್ ನಿಮಿತ್ತ ವಿಶೇಷ ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬ ಹಿನ್ನೆಲೆಯಲ್ಲಿ ಕ್ರೈಸ್ತಬಾಂಧವರು ಹೊಸಬಟ್ಟೆಗಳನ್ನು ಧರಿಸಿಕೊಂಡು ಸಮೀಪದ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ನೆರವೇರಿಸಿ, ಏಸುವಿನ ಜೀವನ, ಸಾಧನೆ, ಪವಾಡಗಳ ಮೆಲುಕನ್ನು ಹಾಕಿದ್ದರು.

ಕ್ರಿಸ್ ಮಸ್ ನಿಮಿತ್ತ ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಏಸು ಕ್ರಿಸ್ತನ ಜನ್ಮಸ್ಥಾನ ದನದ ಗೋಂದಲಿಯನ್ನು ಅಲಂಕೃತಗೊಳಿಸಿ, ದೀಪಗಳನ್ನು ಹಾಕಿದ್ದರು, ಕ್ರಿಸ್ಮಸ್ ಮರಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು, ಚರ್ಚ್‌, ಕ್ರೈಸ್ತರ ಪ್ರಾರ್ಥನಾ ಮಂದಿರಗಳಲ್ಲಿ ದೀಪಾಲಂಕಾರ, ಕೇಕ್ ಕತ್ತರಿಸಿ ಪರಸ್ಪರ ಹಂಚಿಕೊಂಡು, ಏಸು ನಾಮಸ್ಮರಣಾ ಕಾರ್ಯಕ್ರಮಗಳು ನಡೆದವು.

ನಗರದ ಇನ್ಫೆಂಟ್ ಜೀಸಸ್ ಶಾಲೆ, ಮೆಥೋಡಿಸ್ಟ್, ಕ್ಯಾಥೋಲಿಕ್, ಸೆಂಟ್ ಮೇರಿ, ಅಗಾಪೆ ಹಾಗೂ ತಾಲೂಕಿನ ಶಕ್ತಿನಗರದ ಚರ್ಚ್‌ಗಳಲ್ಲಿ, ಫಾನ್ಸಿಸ್ ದೇವಾಲಯಗಳಲ್ಲಿಯೂ ಕ್ರೈಸ್ತ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ ಇಡೀ ದಿನ ಸಂತ ಏಸುಕ್ರಿಸ್ತನ ಸ್ಮರಣೆಯನ್ನು ಮಾಡಿದರು.

ಎಲ್ಲೆಡೆ ಇರುವ ಕ್ರೈಸ್ತ ಪ್ರಾರ್ಥನಾಲಯಗಳಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಗುರುವಾರ ಬೆಳಗಿನಿಂದಲೇ ತಂಡೋಪತಂಡವಾಗಿ ಚರ್ಚ್‌ಗಳಿಗೆ ತೆರಳಿದ ಕ್ರಿಶ್ಚಿಯನ್ ಬಾಂಧವರು ಫಾದರ್‌ಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಕ್ಷತ್ರಗಳ ಮಿಂಚು, ಬಲೂನ್ಗಳಿಂದ ಚರ್ಚ್‌ಗಳು ಸಿಂಗಾರಗೊಂಡಿದ್ದವು.

ಚರ್ಚ್‌ಗಳಲ್ಲಿ ಕ್ರೈಸ್ತ ಧರ್ಮ ಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿದರು. ಮಹಾನ್ ದೈವ ಏನು ಕ್ರಿಸ್ತ ನೀಡಿರುವ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ನೆರೆದ ಭಕ್ತರಿಗೆ ಸಂದೇಶವನ್ನು ರವಾನಿಸಿದರು.

ಶಾಂತಿ ಪ್ರಿಯನಾಗಿರುವ ಏನು ಕ್ರಿಸ್ತನು ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ದೇವನಾಗಿದ್ದು, ಅದಕ್ಕಾಗಿಯೇ ಜಗತ್ತಿನಲ್ಲಿ ಅತೀ ಹೆಚ್ಚಿನ ಜನರು ಏಸು ಪ್ರಭುವನ್ನು ಆರಾಧಿಸುತ್ತಾರೆ. ಪ್ರಪಂಚದ ಎಲ್ಲ ಧರ್ಮಗಳ ಉದ್ದೇಶ ಶಾಂತಿ, ಸಹಭಾಳ್ವೆ, ನೆಮ್ಮದಿ ಹಾಗೂ ಸಾಮರಸ್ಯದ ಜೀವನ ನಡೆಸುವುದಾಗಿದ್ದು, ಆ ಅಂಶಗಳಡಿಯಲ್ಲಿಯೇ ಕ್ರೈಸ್ತ ಧರ್ಮದ ಸ್ಥಾಪನೆಗೊಂಡಿದ್ದು, ನಮ್ಮೆಲ್ಲರಿಗೂ ಏಸು ಕ್ರಿಸ್ತನು ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ಗಣ್ಯರು, ಗುರುಗಳು ಪ್ರಾರ್ಥಿಸಿದರು.

ಈ ಸಂದಭರ್ದಲ್ಲಿ ಶಾಸಕರಾದ ಡಾ.ಶಿವರಾಜ ಪಾಟೀಲ್‌, ಬಸನಗೌಡ ದದ್ದಲ್, ಕ್ರೈಸ್ತ ಧರ್ಮಗುರುಗಳು,ವಿವಿಧ ಪಕ್ಷಗಳ ಮುಖಂಡರು, ಮಹಿಳೆಯರು, ಮಕ್ಕಳು, ಸೇರಿದಂತೆ ಪ್ರಮುಖರು, ಕ್ರೈಸ್ತಬಾಂಧವರು ಭಾಗವಹಿಸಿದ್ದರು.

ಇ-ಟೆಕ್ನೋ ಶಾಲೆಯಲ್ಲಿ

ಮಕ್ಕಳ ನೃತ್ಯ ರೂಪಕ:ಮಾನ್ವಿ: ಕ್ರಿಸ್ ಮಸ್ ಹಬ್ಬದ ಅಂಗವಾಗಿ ಪಟ್ಟಣದ ಬಿವಿಆರ್ ಇ-ಟೆಕ್ನೋ ಶಾಲೆಯಲ್ಲಿ ಮಕ್ಕಳು ನೃತ್ಯ ರೂಪಕದ ಮೂಲಕ ವಿದ್ಯಾರ್ಥಿಗಳಿಗೆ ಕ್ರಿಸ್ ಮಸ್ ಹಬ್ಬ ಹಾಗೂ ಯೇಸು ಕ್ರೀಸ್ತನ ಜನ್ಮ ವೃತ್ತಾಂತವನ್ನು ತಿಳಿಸಿಕೊಡಲಾಯಿತು. ಛದ್ಮವೇಷವನ್ನು ಧರಿಸಿದ ಮಕ್ಕಳುಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಶ್ರೀ ಬಿ.ವಿ.ರೆಡ್ಡಿ, ಕಾರ್ಯದರ್ಶಿ ಬಿ.ಪದ್ಮಾವತಿ, ಮುಖ್ಯಗುರು ಸರ್ ಮತ್ ಖಾನ್, ಶಿಕ್ಷಕರಾದ ಶ್ರೀಕಾಂತ್ ತಡಕಲ್, ಇಸಾಕ್ ,. ಅಲ್ಬರ್ಟ, ಸುನಿತಾ, ತ್ರಿವೇಣಿ ವಿದ್ಯಾರ್ಥಿಗಳು ಭಾಗವಹಿಸಿದರು.

ಸಿಂಧನೂರಲ್ಲಿ ಅದ್ಧೂರಿ ಕ್ರಿಸ್‌ಮಸ್‌:ಸಿಂಧನೂರು: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಚರ್ಚ್‌ಗಳಲ್ಲಿ ಗುರುವಾರ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು.

ಸ್ಥಳೀಯ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಬುಧವಾರ ರಾತ್ರಿಯಿಂದಲೇ ಕ್ರಿಸ್ಮಸ್ ಹಬ್ಬದ ಸಂಭ್ರಮ ಆರಂಭವಾಗಿತ್ತು. ಮಧ್ಯರಾತ್ರಿ ಬಲಿಪೂಜೆ ಅರ್ಪಿಸಿ ಶಾಂತಿ, ಪ್ರೀತಿಯ ಸಂದೇಶ ಸಾರಿದ ಯೇಸುವಿನ ಜನ್ಮದಿನವನ್ನು ಆಚರಿಸಲಾಯಿತು. ಪವಿತ್ರ ಬಲಿಪೂಜೆ ಸಂದರ್ಭದಲ್ಲಿ ಕ್ರಿಸ್ಮಸ್ ಕೀರ್ತನೆಗಳು, ಬೈಬಲ್ ವಾಚನ ಗಳು ಮತ್ತು ವಿಶೇಷ ಪ್ರಾರ್ಥನೆಗಳು ನಡೆದವು. ಇದರಿಂದ ಚರ್ಚ್ ವಾತಾವರಣವು ಆಧ್ಯಾತ್ಮಿಕತೆಯಿಂದ ತುಂಬಿತ್ತು. ಸದಸ್ಯರು ಪರಸ್ಪರ ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವ್ಯಕ್ತಿಯೊಬ್ಬರು ಸಾಂತಾ ಕ್ಲಾಸ್ ವೇಷ ಧರಿಸಿ ಕ್ರೈಸ್ತ ಬಾಂಧವರಿಗೆ ಕಾಣಿಕೆ ನೀಡಿ ರಂಜಿಸಿದರು.ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಏಸು ಕ್ರಿಸ್ತನ ಪ್ರತಿಮೆಗೆ ಬಣ್ಣ ಬಣ್ಣದ ನಕ್ಷತ್ರಗಳ ಮಿಂಚು, ಬಲೂನ್ಗಳ ಚಿತ್ತಾರ, ಹಚ್ಚ ಹಸುರಿನ ಕ್ರಿಸ್ಮಸ್ ಟ್ರೀಗಳು, ವಿಭಿನ್ನ ವಿನ್ಯಾಸದ ಗೋದಲಿ, ಸಾಂತಾಕ್ಲಾಸ್ ಪ್ರತಿಬಿಂಬಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿಶೇಷವಾಗಿ ಯೇಸು ಕ್ರಿಸ್ತ್ನ ಜೀವನ ಚರಿತ್ರೆ ಹಾಗೂ ಸಂದೇಶ ಸಾರುವ ರೂಪಕ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ಗುರುವಾರ ಬೆಳಗ್ಗೆ ರೆವರೆಂಟ್ ಫಾದರ್ ಜ್ಞಾನಪ್ರಕಾಶ ನೇತೃತ್ವದಲ್ಲಿ ಹೋಲಿ ಫ್ಯಾಮಿಲಿ ಚರ್ಚ್ ನಲ್ಲಿ ಕೈಸ್ತ ಬಾಂಧವರು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಕೇಕ್ ಕತ್ತರಿಸುವ ಮೂಲಕ ಏಸುವಿನ ಜನ್ಮದಿನವನ್ನು ಆಚರಿಸಿದರು.

ಆದರ್ಶ ಕಾಲೋನಿಯ ಕ್ರೈಸ್ತ ಪ್ರಾರ್ಥನಾ ಮಂದಿರ, ಮಹಿಬೂಬಿಯ ಕಾಲೊನಿಯ ಆಶೀರ್ವಾದ ಪಾರ್ಥನಾ ಮಂದಿರ, ಶಿವಜ್ಯೋತಿ ನಗರ, ನಟರಾಜ್ ಕಾಲೋನಿ ಚರ್ಚ್ ಸೇರಿದಂತೆ ತಾಲ್ಲೂಕಿನ ಗಾಂಧಿನಗರ, ಜವಳಗೇರಾ, ಪಾಂಡುರಂಗಕ್ಯಾಂಪ್, ಮುದ್ದಾಪುರ ಕ್ರಾಸ್, ಬಸಾಪುರ ಇ.ಜೆ, ಹಾರಾಪುರ, ಬರ್ಮಾಕ್ಯಾಂಪ್, ಹೊಸಳ್ಳಿ ಇ.ಜೆ, ಶ್ರೀಪುರಂಜಂಕ್ಷನ್, ನಾಲ್ಕು ಮೈಲ್ಕ್ಯಾಂಪ್ ಮತ್ತಿತರ ಗ್ರಾಮಗಳಲ್ಲಿ ಕ್ರಿಸ್‌ ಮಸ್‌ ಸಂಭ್ರಮದಿಂದ ಆಚರಿಸಲಾಯಿತು.ಕೇಕ್ ಕತ್ತರಿಸಿ ಶುಭಾಶಯ:

ಸಿರವಾರ: ಪಟ್ಟಣದ ವಿನಾಲಯ, ಮೆಥೋಡಿಸ್ಟ್ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು. ಕ್ರೈಸ್ತ ಮಹಿಳೆಯರು, ಮಕ್ಕಳು, ಮುಖಂಡರು ಹೊಸ ಬಟ್ಟೆ ತೊಟ್ಟು ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಪಟ್ಟಣದ ಚರ್ಚುಗಳಲ್ಲಿ ಕೇಕ್ ಕತ್ತರಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಏಸುವಿನ ಜನನದ ಮೂಲಕ ಪ್ರಪಂಚದಲ್ಲಿ ಶಾಂತಿ ನೆಲೆಸಿದ್ದು, ಪ್ರತಿಯೊಬ್ಬರೂ ದೇವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿರಿ ಎಂದು ಫಾದರ್ ಸಲಹೆ ನೀಡಿದರು. ವಿವಿಧ ಪಕ್ಷ, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.

ಕ್ರಿಸ್‌ಮಸ್: ಬಡವರಿಗೆ ಆಹಾರ ಸಾಮಗ್ರಿ ವಿತರಣೆಸಿರವಾರ : ಕ್ರಿಸ್ ಮಸ್ ಪ್ರಯುಕ್ತ ಪಟ್ಟಣದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಬಡವರಿಗೆ ಆಹಾರ ಸಾಮಗ್ರಿಗಳು ಹಾಗೂ ಬಟ್ಟೆಗಳನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಚರ್ಚ್ ಜಿಲ್ಲಾ ಮೇಲ್ವಿಚಾರಕ ಸುಂದರ ರಾಜ್ ಸ್ಯಾಮುವೆಲ್, ಬಡವರನ್ನು ರಕ್ಷಿಸಲು, ಬಡವರ ಉದ್ಧಾರಕ್ಕಾಗಿ, ಸಹಾಯಕ್ಕಾಗಿ ಯೇಸು ಜನಿಸಿದ್ದು, ಅವರ ಅನುಯಾಯಿಗಳಾದ ನಾವು ಬಡಜನರಿಗೆ ಸಹಾಯ ಮಾಡಬೇಕು. ಅಂತಹ ಕಾರ್ಯವನ್ನು ಮಾಡುತ್ತಿರುವ ಪ.ಪಂ ಸದಸ್ಯರ ಕುಟುಂಬ ದವರು ಆಹಾರ ಸಾಮಗ್ರಿ ಹಾಗು ಬಟ್ಟೆ ಬರೆಗಳನ್ನು ನೀಡುತ್ತಿದ್ದು, ಅವರಿಗೆ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಮಾಡುವ ಶಕ್ತಿ ನೀಡಲಿ ಎಂದರು. ಈ ವೇಳೆ ಸಭಾಪಾಲಕ ರಾಜಪ್ಪ,ಪಪಂಸದಸ್ಯೆ ಹನುಮಂತಿ, ಮುಖಂಡರಾದ ಮಲ್ಲಪ್ಪ ದೊಡ್ಮನಿ, ಗ್ಯಾನಪ್ಪ, ಅಬ್ರಹಾಂ ಹೊನ್ನುಟಗಿ, ಜಯಪ್ಪ ಕೆಂಪು, ಹರಳಪ್ಪ ಯದ್ದಲದಿನ್ನಿ, ಎಂ.ಮನೋಹರ, ಎಂ.ದುರುಗಪ್ಪ, ಸವಾರೆಪ್ಪ, ಜಯಪ್ಪ ಇದ್ದರು.