ಸಾರಾಂಶ
ಈಡಿಗ ಸಮುದಾಯ ಕಾರ್ಯೋನ್ಮುಖವಾದರೆ ಎಂಜನಿಯರಿಂಗ್ ಕಾಲೇಜಷ್ಟೇ ಅಲ್ಲ, ಮೆಡಿಕಲ್ ಕಾಲೇಜನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಂಗಳೂರು: ಈಡಿಗ ಸಮುದಾಯ ಕಾರ್ಯೋನ್ಮುಖವಾದರೆ ಎಂಜನಿಯರಿಂಗ್ ಕಾಲೇಜಷ್ಟೇ ಅಲ್ಲ, ಮೆಡಿಕಲ್ ಕಾಲೇಜನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ’ ಉದ್ಘಾಟಿಸಿ ಮಾತನಾಡಿ, ಎಸ್.ಬಂಗಾರಪ್ಪನವರ ಆಡಳಿತಾವಧಿಯಲ್ಲಿ ತಿಮ್ಮೇಗೌಡರಿಗೆ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವುದಾಗಿ ಹೇಳಿ ಮಂಜೂರು ಮಾಡಲಿಲ್ಲ. ಈಗ ನೀವು ಮುಂದಾದರೆ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಈಡಿಗರ ಸಂಘದ ಸಮುದಾಯ ಭವನಕ್ಕೆ 10 ಎಕರೆ ಭೂಮಿ ನೀಡಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ನೋಂದಣಿ ಮಾಡಿಸಿ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಇರಿಸಿರುವ 10 ಕೋಟಿ ರು. ನಾರಾಯಣ ಗುರು ಅಭಿವೃದ್ಧಿ ನಿಗಮದಲ್ಲಿ ಇರಿಸಲಾಗುವುದು ಎಂದರು.
ನೀವು ಯಾವುದೇ ವೃತ್ತಿ ಮಾಡಿ. ಆದರೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ವಿದ್ಯೆ ಕಲಿಯದಿದ್ದರೆ ನಾನು ಸೇರಿ ಬಂಗಾರಪ್ಪ, ದೇವರಾಜ ಅರಸು, ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದರು.
ಆರ್ಯ ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ, ನಾರಾಯಣ ಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಮುದಾಯದ ಮುಖಂಡ ತಿಮ್ಮೇಗೌಡ ಉಪಸ್ಥಿತರಿದ್ದರು.
ಬಂಗಾರಪ್ಪ ನನ್ನ ಗುರು: ಡಿಕೆಶಿ
ಎಸ್.ಎಂ.ಕೃಷ್ಣ ಅವರು ಬೇರೆ ರೀತಿಯಲ್ಲಿ ಗುರುವಾದರೆ. ನನಗೆ ಮಾರ್ಗದರ್ಶನ ನೀಡಿ, ಅಡಿಪಾಯ ಹಾಕಿ, ತಿದ್ದಿ ತೀಡಿದ ಗುರು ಬಂಗಾರಪ್ಪ ಅವರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ರಾಜಕಾರಣದ ಬದುಕಿನಲ್ಲಿ ಅವರ ಶಿಷ್ಯನಾಗಿ ಬೆಳೆದೆ. ನನ್ನನ್ನು ಚಿಕ್ಕ ವಯಸ್ಸಿಗೆ ಮಂತ್ರಿ ಮಾಡಿ ಬೆಳೆಸಿದರು. ಜನಾರ್ದನ ಪೂಜಾರಿ ಅವರನ್ನೂ ನಾನು ಮರೆಯುವಂತಿಲ್ಲ ಎಂದರು.
ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿದೆ. ಜಾತಿ ಹೇಳಬೇಡ, ಜಾತಿ ಕೇಳಬೇಡ, ಜಾತಿ ಮಾಡದೆ ಬದುಕು ಸಾಗಿಸು ಎಂದು ನಾರಾಯಣ ಗುರುಗಳು ಹೇಳಿದ್ದಾರೆ. ನಾನು ಜಾತಿಯ ಮೇಲೆ ನಿಂತಿರುವ ವ್ಯಕ್ತಿಯಲ್ಲ. ನನ್ನಿಂದ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತಿತರರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.