ಕಾರ್ಯನಿಮಿತ್ತ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಜೀವನಶೈಲಿ ಬಿಟ್ಟುಕೊಡದ ಕರಾವಳಿಗರು

| Published : Dec 16 2024, 02:01 AM IST / Updated: Dec 16 2024, 06:09 AM IST

ಸಾರಾಂಶ

ಕರಾವಳಿಯವರು ಕಾರ್ಯನಿಮಿತ್ತ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಜೀವನಶೈಲಿಯನ್ನು ಬಿಟ್ಟುಕೊಡುವುದಿಲ್ಲ. ಅದೇ ರೀತಿ, ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

 ಬೆಂಗಳೂರು : ಕರಾವಳಿಯವರು ಕಾರ್ಯನಿಮಿತ್ತ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಜೀವನಶೈಲಿಯನ್ನು ಬಿಟ್ಟುಕೊಡುವುದಿಲ್ಲ. ಅದೇ ರೀತಿ, ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡಿಗರ ಸಂಘದಿಂದ ಭಾನುವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರಾವಳಿಯವರು ಉದ್ಯೋಗ ಅರಸಿ ಎಲ್ಲಿಗೇ ತೆರಳಿದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಾರೆ. ದಕ್ಷಿಣ ಕನ್ನಡಿಗರು ತಾವು ಇರುವ ಸ್ಥಳದಲ್ಲಿ ತಮ್ಮ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿಯನ್ನು ಪರಿಚಯಿಸುತ್ತಾರೆ. ಹೀಗಾಗಿಯೇ ಯಕ್ಷಗಾನವು ವಿಶ್ವಕ್ಕೆ ಪರಿಚಯವಾಯಿತು. ಕರಾವಳಿಯವರು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಪ್ರಶಂಸಿಸಿದರು.

ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಮಾತನಾಡಿ, ದಕ್ಷಿಣ ಕನ್ನಡಿಗರ ಸಂಘವು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ. ಸಮಾಜಕ್ಕಾಗಿ ಶ್ರಮಿಸುತ್ತಿರುವವರನ್ನು ಗೌರವಿಸಿದರೆ, ಅವರಿಗೆ ಇನ್ನಷ್ಟು ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದಂತೆಯೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ದಕ್ಷಿಣ ಕನ್ನಡ ಮೂಲದ 35 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್‌, ಉಪಾಧ್ಯಕ್ಷ ವೈ.ಜಯಂತ್‌ ರಾವ್‌ ಮತ್ತಿತರರು ಹಾಜರಿದ್ದರು.

ಕರಾವಳಿ ರತ್ನ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ವರು ಗಣ್ಯರಿಗೆ ಇದೇ ಸಂದರ್ಭದಲ್ಲಿ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಟೀಕೇಸ್‌ ಸಮೂಹದ ಸಂಸ್ಥಾಪಕ ಉಮರ್‌ ಟೀಕೇ, ಮುಂಬೈನ ವರ್ಲ್ಡ್‌ ಫೆಡರೇಷನ್‌ ಆಫ್‌ ಬಂಟ್ಸ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕ್ಯಾಂಟರ್ಬೆರಿ ಸಮೂಹದ ಅಧ್ಯಕ್ಷ ಲಿಯೋ ಕ್ವಾಡ್ರೋಸ್‌ ಮತ್ತು ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ದಿವ್ಯಾ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.