ಸಾರಾಂಶ
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪಿಆರ್‌ಆರ್) ನಿರ್ಮಾಣ ಯೋಜನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ, ಭೂಮಿ ಕೊಡುವ ರೈತರಿಗೆ ಏನು ಪರಿಹಾರ ಕೊಡಬೇಕೆಂಬುದು ಇನ್ನೂ ನಿಗದಿಯಾಗಿಲ್ಲ.
ಬೆಂಗಳೂರು : ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪಿಆರ್‌ಆರ್) ನಿರ್ಮಾಣ ಯೋಜನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ, ಭೂಮಿ ಕೊಡುವ ರೈತರಿಗೆ ಏನು ಪರಿಹಾರ ಕೊಡಬೇಕೆಂಬುದು ಇನ್ನೂ ನಿಗದಿಯಾಗಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಪರಿಹಾರದ ದರ ನಿಗದಿ ವಿಚಾರವನ್ನು ಸರ್ಕಾರದ ಹೆಗಲಿಗೆ ವರ್ಗಾಯಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ರೈತರಿಗೆ ಭೂ ಪರಿಹಾರವನ್ನು ಹಳೆಯ ಕಾಯಿದೆಯಂತೆ ಕೊಡುವುದಾ ಅಥವಾ ಹೊಸ ಕಾಯಿದೆಯಂತೆ ನೀಡಬೇಕಾ ಎಂಬ ಗೊಂದಲ ಬಿಡಿಎ ಮುಂದಿದೆ. ಹಳೆ ಕಾಯಿದೆ ಪ್ರಕಾರ ಪರಿಹಾರ ಕೊಟ್ಟರೆ ಶೇ.12ರಂತೆ ಈವರೆಗೆ (ಅಧಿಸೂಚನೆ ಹೊರಡಿಸಿದ 2008-08ರಿಂದ) ಬಡ್ಡಿ ಸೇರಿಸಿ ಕೊಡಬೇಕು. ಇಲ್ಲವೇ ಹೊಸ ಕಾಯಿದೆಯಂತೆ ಪರಿಹಾರ ನೀಡುವುದಾದರೆ ಮಾರುಕಟ್ಟೆ ದರದಲ್ಲಿ 4 ಪಟ್ಟು ದರ ಹೆಚ್ಚಿಸಿ ನೀಡಬೇಕು. ಹೀಗಾಗಿ ಪರಿಹಾರದ ಕುರಿತು ಇನ್ನೂ ಅಂತಿಮಗೊಂಡಿಲ್ಲ. ಈ ಬಗ್ಗೆ ಸರ್ಕಾರವೇ ಮಧ್ಯಸ್ಥಿಕೆ ವಹಿಸಿ ಪರಿಹಾರದ ದರ ನಿಗದಿಪಡಿಸಲಿ ಎಂದು ಬಿಡಿಎ ಚೆಂಡನ್ನು ಸರ್ಕಾರದ ಅಂಗಳಕ್ಕೆ ತಳ್ಳಲು ಸಿದ್ಧತೆ ನಡೆಸಿದೆ.
ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ ಸಂಬಂಧ ಬಿಡಿಎ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದಾರೆ. ಭೂಮಿ ಬಿಟ್ಟುಕೊಟ್ಟು ಪರಿಹಾರ ಪಡೆಯುವ ಸಂಬಂಧ ತಮ್ಮ ಒಪ್ಪಿಗೆ ಸೂಚಿಸುವಂತೆ ರೈತರನ್ನು ಕೋರಿದ್ದಾರೆ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಭೂಸ್ವಾಧೀನ ಕಾಯಿದೆ1894ರ ಅನ್ವಯ ಪರಿಹಾರ ನೀಡಲು 16 ವರ್ಷಗಳ ಹಿಂದೆಯೇ ನಿರ್ಧರಿಸಿದೆ. ಆಗ ಪಿಆರ್‌ಆರ್ ರಸ್ತೆ ಹಾದುಹೋಗುವ ಮಾರ್ಗದಲ್ಲಿ ಪ್ರತಿ ಎಕರೆಗೆ ಕೋಟಿ ರು.ಗಳಿಗೂ ಅಧಿಕ ದರ ಇತ್ತು. ಆದರೆ, ಇದೀಗ ಅದರ ಬೆಲೆ ಮೂರ್ನಾಲ್ಕು ಪಟ್ಟು ಜಾಸ್ತಿಯಾಗಿದೆ. ಹೀಗಾಗಿ, ವಿಳಂಬ ಮಾಡಿದ್ದು ಬಿಡಿಎ ತಪ್ಪು. ಇದಕ್ಕೆ ನಾವು ಜವಾಬ್ದಾರರಲ್ಲ. ಹೀಗಾಗಿ, ನಮಗೆ ಹೊಸ ದರ ನೀಡಬೇಕು. ಇಲ್ಲವೇ ಯೋಜನೆ ಕೈಬಿಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
8 ಕೆಎಎಸ್ ಅಧಿಕಾರಿಗಳ ನಿಯೋಜನೆ:
ಯೋಜನೆಗೆ ಅಗತ್ಯ ಭೂಮಿಯ ಸ್ವಾಧೀನ, ಪರಿಹಾರ ಸೇರಿ ಇನ್ನಿತರ ಕಾರ್ಯಗಳಿಗಾಗಿ ವಿವಿಧ ಇಲಾಖೆಗಳ 8 ಮಂದಿ ಕೆಎಎಸ್ ಅಧಿಕಾರಿಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳಾಗಿ ನಿಯೋಜಿಸಲಾಗಿದೆ. ಈ ಅಧಿಕಾರಿಗಳಿಗೆ ಅನುಸೂಚಿತ ಭೂಮಿಯನ್ನು ಪ್ರದೇಶವಾರು ಹಂಚಿಕೆ ಮಾಡಲಾಗಿದ್ದು, ಅಧಿಕಾರಿಗಳು ಆಯಾ ಗ್ರಾಮಗಳ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಯೋಜನೆಗೆ ಮೊದಲ ಹಂತದಲ್ಲಿ 1800 ಎಕರೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಸುಮಾರು 4000 ರೈತರು ಯೋಜನೆಗೆ ಭೂಮಿ ನೀಡಿದ್ದು, ಇದೀಗ ಈ ಎಲ್ಲಾ ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆದರೆ 2022ರಲ್ಲಿ ಆರುನೂರು ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು ಇವರಿಗೆ ನೋಟಿಸ್ ಕೊಡಲು ಬರುವುದಿಲ್ಲ.
ಮುಂದೆ ಬರದ ಬಿಡ್‌ದಾರರು:
ಪಿಆರ್‌ಆರ್ ಯೋಜನೆಗೆ ಬರೋಬ್ಬರಿ ₹30 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಸಾಕಷ್ಟು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾವ ಬಿಡ್‌ದಾರರೂ ಟೆಂಡರ್ ಪಡೆಯಲು ಮುಂದೆ ಬಂದಿರಲಿಲ್ಲ. ಎರಡ್ಮೂರು ಬಾರಿ ಟೆಂಡರ್ ಕರೆದು, ಯಾರು ಬರದ ಹಿನ್ನೆಲೆ ಕೈಬಿಡಲಾಗಿತ್ತು. ಕೊನೆಗೆ ಜಾಗತಿಕ ಟೆಂಡರ್‌ಗೆ ಆಹ್ವಾನ ನೀಡಲಾಗಿತ್ತು. ವಿದೇಶದ ಸಂಸ್ಥೆಯೊಂದು ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬಂದಿತ್ತು. ಆ ನಂತರ ಹಿಂದೆ ಸರಿಯಿತು. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ₹30 ಸಾವಿರ ಕೋಟಿ ಸಾಲ ಪಡೆದು ಈ ಯೋಜನೆ ಪೂರ್ಣಗೊಳಿಸಲು ಮುಂದಾಗಿದೆ.
73 ಕಿಮೀ ರಸ್ತೆ ನಿರ್ಮಾಣ:
ಬೆಂಗಳೂರು ನಗರ ಸಂಚಾರಿ ದಟ್ಟಣೆ ನಿವಾರಣೆ ಉದ್ದೇಶದ ಸುಮಾರು 73 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ 8 ಪಥಗಳ ರಸ್ತೆ ನಿರ್ಮಾಣ ಯೋಜನೆ ಇದಾಗಿದೆ. ಇದು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಹೊಸಕೋಟೆ ರಸ್ತೆ ಮತ್ತು ಸರ್ಜಾಪುರ ಸೇರಿ 77 ಗ್ರಾಮಗಳ ಮೂಲಕ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ.