ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ನಗರದ ಕನಕಪುರ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಬಿಬಿಎಂಪಿಯು ಬನಶಂಕರಿಯಿಂದ ನೈಸ್ ರಸ್ತೆ ವರೆಗೆ ಸುಮಾರು 10 ಕಿ.ಮೀ ಉದ್ದದ ಎಲಿವೇಟೆಡ್ ಫ್ಲೈಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕನಕಪುರ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಈಗಾಗಲೇ ಕನಕಪುರ ರಸ್ತೆಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರೇಡ್ ಸಪರೇಟ್ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಕನಕಪುರ ರಸ್ತೆಗೆ ಸಮಾಂತರವಾಗಿ ಎಲಿವೇಟೆಡ್ ಫ್ಲೈಓವರ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಕುರಿತು ಈಗಾಗಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಂಭಾವನೀಯ ವರದಿ ಹಾಗೂ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವುದಕ್ಕೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಬಿಎಂಪಿಯ ಯೋಜನಾ ವಿಭಾಗದ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.
ಕಾವೇರಿ ಪೈಪ್‌ಲೈನ್ ರಸ್ತೆ ಗುರುತು:
ಕನಕಪುರ ರಸ್ತೆಯಲ್ಲಿ ಈಗಾಗಲೇ ನಮ್ಮ ಮೆಟ್ರೋ ಮಾರ್ಗ ಇರುವುದರಿಂದ ಆ ರಸ್ತೆಯಲ್ಲಿ ಎಲಿವೇಟೆಡ್ ಫ್ಲೈಓವರ್ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ. ಅಕ್ಕ-ಪಕ್ಕದಲ್ಲಿರುವ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ನಿರ್ಮಾಣ ಮಾಡುವುದಕ್ಕೆ ಭೂ ಸ್ವಾಧೀನ ವೆಚ್ಚವು ದುಬಾರಿ ಆಗಲಿದೆ ಎಂಬ ಕಾರಣಕ್ಕೆ ತೊರೆಕಾಡನಹಳ್ಳಿಯಿಂದ ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆಗೆ ಅಳವಡಿಕೆ ಮಾಡಿರುವ ಪೈಪ್ ಲೈನ್ ರಸ್ತೆಯಲ್ಲಿ ಎಲಿವೇಟೆಡ್ ಫ್ಲೈಓವರ್ ನಿರ್ಮಾಣ ಉತ್ತಮವಾಗಿದೆ. ಈ ಮಾರ್ಗದಲ್ಲಿ ಬಹುತೇಕ ಸರ್ಕಾರಿ ಜಾಗವೇ ಇದೆ. ಅಪ್ ರ್‍ಯಾಂಪ್ ಮತ್ತು ಡೌನ್ ರ್‍ಯಾಂಪ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಖಾಸಗಿ ಭೂ ಸ್ವಾಧೀನ ಮಾಡುವ ಅಗತ್ಯ ಉಂಟಾಗಬಹುದಾಗಿದೆ ಎನ್ನುವ ಕಾರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
10 ಕಿ.ಮೀ., ನಾಲ್ಕು ಪಥ
ಎಲಿವೇಟೆಡ್ ಫ್ಲೈಓವರ್ ಬನಶಂಕರಿಯ ಬೆಂಗಳೂರು ಜಲಮಂಡಳಿಯ ಜಲಾಗಾರದಿಂದ ಆರಂಭಗೊಂಡು ನೈಸ್ ರಸ್ತೆಯಿಂದ ಮುಂದೆ ಹೋಗಿ ಕನಕಪುರ ರಸ್ತೆಯಲ್ಲಿ ಅಂತ್ಯಗೊಳ್ಳಲಿದೆ. ಒಟ್ಟು ನಾಲ್ಕು ಪಥದ ಎಲಿವೇಟೆಡ್ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತದೆ. 10 ಕಿ.ಮೀ ಉದ್ದದಲ್ಲಿ 4 ರಿಂದ 5 ಅಪ್ ರ್‍ಯಾಂಪ್ ಹಾಗೂ ಡೌನ್ ರ್‍ಯಾಂಪ್ ನಿರ್ಮಾಣ ಮಾಡಲಾಗುತ್ತದೆ.
₹1200 ಕೋಟಿ ವೆಚ್ಚ
ಎಲಿವೇಟೆಡ್ ಫ್ಲೈಓವರ್ ನಿರ್ಮಾಣಕ್ಕೆ ಸುಮಾರು ₹1 ಸಾವಿರದಿಂದ ₹1,200 ಕೋಟಿವರೆಗೆ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರ ವಿಶೇಷ ಅನುದಾನದಲ್ಲಿ ನಿರ್ಮಾಣಕ್ಕೆ ಬಿಬಿಎಂಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.
)
;Resize=(128,128))
;Resize=(128,128))
;Resize=(128,128))
;Resize=(128,128))