ಸಾರಾಂಶ
ಹಿರಿಯ ಸಾಹಿತಿ ಡಾ.ಸಿಪಿಕೆ ಅವರ 800 ಚಿಂತನ ಬರಹಗಳ ಬೃಹತ್ ಗ್ರಂಥ ಚಿಂತನ ಚಿಂತಾಮಣಿ ಲೋಕಾರ್ಪಣೆ ಸಮಾರಂಭ ಜ. 7ರಂದು ಸಂಜೆ 5.30ಕ್ಕೆ ನಗರದ ಜೆಎಸ್ಎಸ್ ಆಸ್ಪತ್ರೆ ಬಳಿಯ ಡಾ. ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಟಿ.ಶೈಲಜಾ ತಿಳಿಸಿದರು.
ಮೈಸೂರು : ಹಿರಿಯ ಸಾಹಿತಿ ಡಾ.ಸಿಪಿಕೆ ಅವರ 800 ಚಿಂತನ ಬರಹಗಳ ಬೃಹತ್ ಗ್ರಂಥ ಚಿಂತನ ಚಿಂತಾಮಣಿ ಲೋಕಾರ್ಪಣೆ ಸಮಾರಂಭ ಜ. 7ರಂದು ಸಂಜೆ 5.30ಕ್ಕೆ ನಗರದ ಜೆಎಸ್ಎಸ್ ಆಸ್ಪತ್ರೆ ಬಳಿಯ ಡಾ. ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಟಿ.ಶೈಲಜಾ ತಿಳಿಸಿದರು.
ಸಂವಹನ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ.ಎ. ಶಂಕರ್ ಕೃತಿ ಲೋಕಾರ್ಪಣೆಗೊಳಿಸುವರು. ಕೃತಿ ಕುರಿತು ಹಿರಿಯ ವಿದ್ವಾಂಸ ಎಚ್.ವಿ. ನಾಗರಾಜ ರಾವ್ ಮಾತನಾಡುವರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕನ್ನಡ ಸಾಹಿತ್ಯ ಕಲಾಕೂಟದ ಆಧ್ಯಕ್ಷ ಎಂ. ಚಂದ್ರಶೇಖರ್, ಪ್ರಕಾಶಕ ಡಿ.ಎನ್. ಲೋಕಪ್ಪ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.
‘ಚಿಂತನ ಚಿಂತಾಮಣಿ’ ಎಂಬುದು ಡಾ. ಸಿಪಿಕೆ ಅವರ ಸಮಗ್ರ ಚಿಂತನ ಬರಹಗಳ ಕೃತಿ. ಇದರಲ್ಲಿ ಸಿಪಿಕೆ ಅವರ 800 ಚಿಂತನ ಬರಹಗಳಿದ್ದು, ಅವರ ಹಿಂದಿನ 22 ಚಿಂತನ ಕೃತಿಗಳನ್ನು ಒಗ್ಗೂಡಿಸಿರುವ 1,060 ಪುಟಗಳ ಸಮಗ್ರ ಸಂಪುಟದ ಬೃಹತ್ ಕೃತಿಯಾಗಿದೆ. ಚಿಂತನ ಸಾಹಿತ್ಯದಲ್ಲಿ ಇಂತಹ ಬೃಹತ್ ಸಂಪುಟವೊಂದು ಪ್ರಕಟವಾಗಿರುವುದು ಇದೇ ಪ್ರಥಮ ಎಂದು ಅವರು ತಿಳಿಸಿದರು.
ಒಂದು ಸಾವಿರ ರೂ. ಮುಖಬೆಲೆಯ ಈ ಕೃತಿಯನ್ನು ಲೋಕಾರ್ಪಣೆ ದಿನ 550 ರೂ. ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.
ಕ್ಯಾಲೆಂಡರ್ ಬಿಡುಗಡೆ:
ಈ ಸಂದರ್ಭದಲ್ಲಿ ಸಂವಹನ ಪ್ರಕಾಶನ ಹೊರತಂದಿರುವ ಕನ್ನಡ ಅಂಕಿಗಳನ್ನು ಒಳಗೊಂಡ 2025ನೇ ವರ್ಷದ ಕ್ಯಾಲೆಂಡರ್ ಅನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯಕಲಾಕೂಟದ ಆಧ್ಯಕ್ಷ ಎಂ. ಚಂದ್ರಶೇಖರ್, ಪ್ರಕಾಶಕ ಡಿ.ಎನ್. ಲೋಕಪ್ಪ, ಜಿನಹಳ್ಳಿ ಸಿದ್ದಲಿಂಗಪ್ಪ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಇದ್ದರು.