ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಸ್ತುತ ಮಾಲ್ಡೀವ್ಸ್ ಜತೆಗೆ ಭಾರತದ ಸಂಬಂಧ ಹಳಸಿರುವುದರಿಂದ ಪ್ರವಾಸೋದ್ಯಮಕ್ಕೆ ಪರ್ಯಾಯ ತಾಣವಾಗಿ ಲಕ್ಷದ್ವೀಪಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತಿದೆ.
ಅಲ್ಲಿಗೆ ಸಂಪರ್ಕ ವ್ಯವಸ್ಥೆ ಬಲಗೊಳಿಸಬೇಕು ಎಂಬ ಕೂಗು ಎದ್ದಿದ್ದು, ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಅಗತ್ಯ ಸಾಮಗ್ರಿಗಳು, ಸರಕು ನಿರಂತರವಾಗಿ ಹೋಗುತ್ತಿರುವಾಗ ಇಲ್ಲಿನ ಪ್ರವಾಸಿಗರಿಗೂ ಅಲ್ಲಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಹೆಚ್ಚಿದೆ.
ಕೆಲ ವರ್ಷಗಳ ಹಿಂದೆ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ಪ್ರವಾಸಿ ಹಡಗಿನ ಸೌಲಭ್ಯವಿತ್ತು. 300 ರು.ಗಳಲ್ಲಿ ಲಕ್ಷದ್ವೀಪ ತಲುಪಬಹುದಿತ್ತು. ಆರು ಸಾವಿರ ರು.ಗೆ ಮೂರು ದಿನಗಳ ಕಾಲ ಊಟೋಪಚಾರ, ವಸತಿ ಸಹಿತ ಪ್ಯಾಕೇಜ್ ವ್ಯವಸ್ಥೆಯೂ ಇತ್ತು. ಕಾರಣಾಂತರಗಳಿಂದ ಅದು ನಿಂತಿದೆ. ಈ ವ್ಯವಸ್ಥೆಯನ್ನು ಮರು ಆರಂಭಿಸಬೇಕು ಎನ್ನುವ ಆಗ್ರಹ ಜಾಲತಾಣಗಳಲ್ಲಿ ಆರಂಭವಾಗಿದೆ.
ಸರಕು ಸಾಗಾಟ, ಪ್ರಯಾಣಿಕರಿಗೆ ನಿರ್ಬಂಧ: ಪ್ರಸ್ತುತ ಲಕ್ಷದ್ವೀಪಕ್ಕೆ ಮಂಗಳೂರು ಬಂದರಿನಿಂದ ನಿರಂತರವಾಗಿ ಅಗತ್ಯ ಆಹಾರ ಸಾಮಗ್ರಿಗಳು, ತರಕಾರಿ, ಹಣ್ಣುಗಳು, ನಿರ್ಮಾಣ ಸಾಮಗ್ರಿಗಳು ಪೂರೈಕೆಯಾಗುತ್ತಿದೆ.
ಲಕ್ಷದ್ವೀಪದಿಂದ ಜನರು ಇಲ್ಲಿಗೆ ಬಂದು ಸರಕು ಕೊಂಡೊಯ್ಯಲು ಅವಕಾಶವಿದೆ. ಆದರೆ ಇಲ್ಲಿಂದ ಮಾತ್ರ ಅಲ್ಲಿಗೆ ಪ್ರವಾಸಿಗರು ಹೋಗಲು ಅವಕಾಶವಿಲ್ಲ. ಸರಕು ಸಾಗಾಟ ನಿರಂತರವಾಗಿ ಆಗುತ್ತಿರುವಾಗ ಪ್ರವಾಸೋದ್ಯಮಕ್ಕೂ ಲಕ್ಷದ್ವೀಪದ ಬಾಗಿಲು ತೆರೆಯಬೇಕು. ಅದಕ್ಕೆ ಸರ್ಕಾರ, ಜನಪ್ರತಿಪನಿಧಿಗಳು ಇಚ್ಛಾಶಕ್ತಿ ತೋರಿಸಬೇಕು ಎನ್ನುವ ಒತ್ತಾಯ ನಾಗರಿಕ ವಲಯದಲ್ಲಿ ಹೆಚ್ಚಿದೆ.
ಜಾಲತಾಣದಲ್ಲೂ ಈ ಬಗ್ಗೆ ಅಭಿಯಾನ ಶುರುವಾಗಿದೆ. ಪ್ರವಾಸೋದ್ಯಮಕ್ಕೆ ಇರುವ ಅಡೆತಡೆ ನಿವಾರಿಸಿದರೆ ಈ ಯೋಜನೆ ಯಶಸ್ವಿಯಾಗಲಿದೆ ಎಂದು ಟ್ರಾವೆಲ್ ಏಜೆನ್ಸಿಯವರು ಅಭಿಪ್ರಾಯಪಡುತ್ತಾರೆ.
ಪ್ರಸ್ತುತ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋಗುವವರು ಲಕ್ಷಾಂತರ ರು. ಖರ್ಚು ಮಾಡಬೇಕಾಗುತ್ತದೆ. ಅದಕ್ಕಿಂತ ಅತಿ ಕಡಿಮೆ ಖರ್ಚಿನಲ್ಲಿ ಲಕ್ಷದ್ವೀಪಕ್ಕೆ ತೆರಳುವ ಯೋಜನೆ ಆರಂಭಿಸಿದರೆ ದೇಶದ ಆದಾಯಕ್ಕೂ ಪೂರಕವಾಗಲಿದೆ.
ಲಕ್ಷದ್ವೀಪಕ್ಕೆ ಪ್ರಸ್ತುತ ಕೇರಳದ ಕೊಚ್ಚಿಯಿಂದ ಪ್ರವಾಸಿಗರಿಗೆ ತೆರಳಲು ಅವಕಾಶವಿದೆ. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ 391 ಕಿ.ಮೀ. ದೂರ ಇದ್ದರೆ, ಮಂಗಳೂರಿನಿಂದ 357 ಕಿ.ಮೀ ಮಾತ್ರ.
ಕೊಚ್ಚಿಗಿಂತ ಮಂಗಳೂರು ಹತ್ತಿರವಿದ್ದರೂ ಈ ಬಗ್ಗೆ ಕಾರ್ಯಸಾಧುವಾದ ಯೋಜನೆ ಹಾಕಿಕೊಳ್ಳದೆ ಇರುವುದರಿಂದ ಲಕ್ಷದ್ವೀಪದ ಬಗ್ಗೆ ಹೆಚ್ಚಿನ ಜನರಿಗೆ ಅರಿವೇ ಇಲ್ಲ. ಸಂಪರ್ಕ ವ್ಯವಸ್ಥೆ ಆರಂಭಿಸಿದರೆ ನಾಡಿನೆಲ್ಲೆಡೆಗಳಿಂದ ಜನರ ದಂಡು ಮಂಗಳೂರಿನತ್ತ ಬರಲಿದ್ದು, ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಲಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.
ಲಕ್ಷದ್ವೀಪಕ್ಕೆ ಹೋಗಲೆಂದೇ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಆರೇಳು ವರ್ಷಗಳ ಹಿಂದೆಯೇ ಯೋಜಿಸಲಾಗಿತ್ತು. 65 ಕೋಟಿ ರು.ಗಳ ಈ ಯೋಜನೆ ಸಾಕಾರವಾಗಿದ್ದಿದ್ದರೆ ಇಷ್ಟೊತ್ತಿಗೆ 300 ಮೀ. ಉದ್ದದ ಜೆಟ್ಟಿ, ಗೋದಾಮು ಹಾಗೂ ಪ್ರಯಾಣಿಕರಿಗೆ ಸುಸಜ್ಜಿತ ತಂಗುದಾಣ ನಿರ್ಮಾಣವಾಗಬೇಕಿತ್ತು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ಇನ್ನೂ ನನೆಗುದಿಗೆ ಬಿದ್ದಿದೆ.
ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಲ್ಲಿಗೆ ತೆರಳಲು ಪರ್ಮಿಟ್ ಪಡೆಯಬೇಕು. ಇಲ್ಲಿಂದ ತೆರಳುವ ಪ್ರವಾಸಿಗರು ತಮಗೆ ಪರಿಚಯ ಇದೆಯೆಂದು ಲಕ್ಷದ್ವೀಪದ ನಿವಾಸಿಯ ಒಪ್ಪಿಗೆ ಪಡೆಯಬೇಕು.
ಹೋಗುವ ಎರಡು ವಾರದ ಮೊದಲೇ ಅರ್ಜಿ ಸಲ್ಲಿಸಬೇಕು. ಅದಕ್ಕೆ ಪೊಲೀಸ್ ಕ್ಲಿಯರೆನ್ಸ್, ಒಪ್ಪಿಗೆ ಎಲ್ಲ ಪಡೆದ ಬಳಿಕವೇ ಲಕ್ಷದ್ವೀಪಕ್ಕೆ ಹೋಗಲು ಸಾಧ್ಯ. ಪ್ರಸ್ತುತ ಕೇರಳ ಕೊಚ್ಚಿನ್‌ನ ಟ್ರಾವೆಲ್ ಏಜೆಂಟ್‌ಗಳಿಂದ ಮಾತ್ರ ಪರ್ಮಿಟ್ ದೊರೆಯುತ್ತಿದೆ. ಕೆಲವು ಕಠಿಣ ನಿಯಮಗಳ ಸರಳೀಕರಣವೂ ಆಗಬೇಕಿದೆ.
ಲಕ್ಷದ್ವೀಪಕ್ಕೆ ತೆರಳಲು ಜನರಿಂದ ಫೋನ್ ಕರೆಗಳು ಬರತೊಡಗಿವೆ. ಸಂಪರ್ಕ ವ್ಯವಸ್ಥೆ, ನಿಯಮ ಸರಳೀಕರಣ ಸಾಧ್ಯವಾದರೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ ಎನ್ನುತ್ತಾರೆ ಟ್ರಾವೆಲ್ ಏಜೆಂಟರು.