ವರದಾಮೂಲದಲ್ಲಿ ಎಳ್ಳಮಾವಾಸ್ಯೆ ಜಾತ್ರೆ: ಶತಚಂಡಿಯಾಗ

| Published : Jan 12 2024, 01:47 AM IST / Updated: Jan 12 2024, 05:08 PM IST

ವರದಾಮೂಲದಲ್ಲಿ ಎಳ್ಳಮಾವಾಸ್ಯೆ ಜಾತ್ರೆ: ಶತಚಂಡಿಯಾಗ
Share this Article
  • FB
  • TW
  • Linkdin
  • Email

ಸಾರಾಂಶ

ಎಳ್ಳಮಾವಾಸ್ಯೆಯ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜಾತ್ರಾ ಮಹೋತ್ಸವ, ತೀರ್ಥಸ್ನಾನ ಜರುಗಿದವು. ಸಾಗರ, ಹೊಸನಗರ ತಾಲೂಕಿನ ವರದಾಮೂಲ, ಹಿಂಡ್ಲೆಮನೆಯ ಶ್ರೀ ಕ್ಷೇತ್ರ ರಾಮತೀರ್ಥದಲ್ಲೂ ವಿಜೃಂಭಣೆಯಿಂದ ಜಾತ್ರೆ ಜರುಗಿತು.

ಕನ್ನಡಪ್ರಭವಾರ್ತೆ ಸಾಗರ/ ಹೊಸನಗರ

ಎಳ್ಳಮಾವಾಸ್ಯೆಯ ಪ್ರಯುಕ್ತ ಗುರುವಾರ ತಾಲೂಕಿನ ವರದಾಮೂಲದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ಪ್ರಧಾನಅರ್ಚಕ ವ.ಶಂ.ಗುರುದತ್ತ ಶರ್ಮ ಕುಟುಂಬದವರ ಮುಂದಾಳತ್ವದಲ್ಲಿ ಶತಚಂಡಿಯಾಗ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಸಾವಿರಾರು ಜನ ಆಸ್ತಿಕರು ಭಾಗವಹಿಸಿ, ವರದೆಯ ತೀರ್ಥಸ್ನಾನ ಮಾಡಿ, ದೇವಿಯದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾದರು.

ಲೋಕ ಕಲ್ಯಾಣಾರ್ಥವಾಗಿ ದೇವಸ್ಥಾನದ ಪ್ರಧಾನಅರ್ಚಕರಾದ ವ.ಶಂ. ಗುರುದತ್ತ ಶರ್ಮಕುಟುಂಬದವರ ಮುಂದಾಳತ್ವದಲ್ಲಿ ಘನಪಾಟಿರವೀಶ್ ಭಟ್ತಲನೇರುಅವರ ನೇತೃತ್ವದಲ್ಲಿ ನಾಗರಾಜ್ ಭಟ್ ಮುಂಗರವಳ್ಳಿ, ವೇ.ಮೂ. ಮನು ಭಟ್ಕವಲಕೋಡು, ಪ್ರಶಾಂತ್ ಭಟ್ ಸಾಗರ, ದತ್ತಾತ್ರೇಯಘನಪಾಟಿ ನಗರ ಸೇರಿದಂತೆಕುಂದಾಪುರ, ಹೊನ್ನಾವರ ಮೊದಲಾದೆಡೆಗಳಿಂದ ಆಗಮಿಸಿದ್ದ ೩೫ಕ್ಕೂ ಹೆಚ್ಚು ವೈದಿಕರ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ಸಾಂಗ ಶತಚಂಡಿ ಹವನವು ನಡೆದು ಗುರುವಾರ ಪೂರ್ಣಹುತಿಯೊಂದಿಗೆ ಸಂಪನ್ನಗೊಂಡಿತು.

ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ಪ್ರಾರಂಭವಾದ ಶತಚಂಡಿಯಾಗದಲ್ಲಿ ೮೦ ಕೆಜಿ ಪಾಯಸದಿಂದ ಆಹುತಿ ಮತ್ತು ೧ ಲಕ್ಷ ನವಾಕ್ಷರಿಜಪ, ತದ್ದಶಾಂಶ ಹೋಮ, ಪೂರ್ಣಾಹುತಿಗಳು ಅದ್ಧೂರಿಯಾಗಿ ನೆರವೇರಿದವು. 

ಸುತ್ತಲಿನ ಗ್ರಾಮಗಳು ಹಾಗೂ ತಾಲೂಕಿನ ವಿವಿಧೆಡೆಗಳಿಂದ ಸಾವಿರಾರು ಆಸ್ತಿಕರು ಮುಂಜಾನೆಯಿAದಲೇ ಆಗಮಿಸಿ, ವರದಾತೀರ್ಥದಲ್ಲಿ ಸ್ನಾನ ಮಾಡಿ, ಶ್ರದ್ಧಾ ಭಕ್ತಿಯಿಂದ ತಾಯಿ ವರದಾಂಬೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ ಹಾಗೂ ಶತಚಂಡಿಯಾಗದಲ್ಲಿಯೂ ಭಾಗವಹಿಸಿ ಪುನೀತರಾದರು.

ಹಿಂಡ್ಲೆಮನೆಯ ಶ್ರೀ ಕ್ಷೇತ್ರದಲ್ಲೂ ವಾರ್ಷಿಕೋತ್ಸವ ಸಂಭ್ರಮ: ಹೊಸನಗರದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವ ಸ್ಥಾನದಲ್ಲಿ ಗುರುವಾರ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ 42 ನೇ ವರ್ಷದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶರ್ಮೀಣ್ಯಾವತಿ ನದಿಯಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು. ಸುತ್ತಮುತ್ತಲ ಗ್ರಾಮಗಳಾದ ಹುಗುಡಿ, ಮಳಲಿಕೊಪ್ಪ, ಗರ್ತಿಕೆರೆ, ಕೋಡೂರು, ಕರಿಗೆರಸು, ಕುನ್ನೂರು, ನೆಣೆಬಸ್ತಿ, ಕಲ್ಲುಕೊಪ್ಪ, ನಂದಿಗ, ಜಂಬಳ್ಳಿ, ಹೊಳೆಕೇವಿಗಳಿಂದ ತಂಡೋಪತಂಡ ವಾಗಿ ಬಂದ ಭಕ್ತರು ನದಿಯಲ್ಲಿ ಮಿಂದೆದ್ದು, ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆಯಿಂದ ಕೆಂಜಿಗಾಪುರದ ಶ್ರೀಧರ ಭಟ್ ಅವರ ಸಾಂಗತ್ಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ಮತ್ತು ಕಲಾತತ್ವ ಹೋಮ ಹಾಗೂ ಹಾಲಂದೂರು ಶ್ರೀಧರ್ ಭಟ್, ದೇವಸ್ಥಾನದ ನಿತ್ಯ ಪೂಜೆ ಅರ್ಚಕರಾದ ಎ.ವಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ಪ್ರಸಾದ ವಿನಿಯೋಗ ನೆರವೇರಿತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ಹೊಳೆ ದೀಪೋತ್ಸವ ವಿಶೇಷ ಪೂಜೆಗಳು ನೆರವೇರಿದವು.

ದೇವಸ್ಥಾನದ ಪದಾಧಿಕಾರಿಗಳಾದ ಹೆಚ್. ಜಿ. ಶೇಖರಪ್ಪ, ಗಂಗಾಧರ, ಕರುಣಾಕರ, ಗಿರೀಶ್, ಶಶಿಕುಮಾರ್, ಚಂದ್ರಶೇಖ‌ರ್, ಶೇಖರಪ್ಪ, ಚಂದ್ರಕಲಾ, ನಾಗರಾಜ್, ಕೊಲ್ಲೂರಪ್ಪ, ಕೃಷ್ಣಯ್ಯ, ರಾಘವೇಂದ್ರ, ಅಚ್ಚುತಾಚಾರ್ಯ, ಉಮೇಶ್, ಜಯಂತ್ ಕೆ. ವೈ, ಸಂತೋಷ್, ನಾಗೇಶ್, ಗೀತಾ, ಲಲಿತಮ್ಮ ಮತ್ತಿತರರು ಪಾಲ್ಗೊಂಡಿದ್ದರು.