ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳು ಯುವ ಜನಸಂಖ್ಯೆ ಮತ್ತು ತಂತ್ರಜ್ಞಾನ. ಹೀಗಿರುವಾಗ, ರುಪಾಯಿ ಬೆಲೆ ಕುಸಿತದ ಆಘಾತವನ್ನು ಕೃತಕವಾಗಿ ನಿಯಂತ್ರಿಸಲು ಯತ್ನಿಸುವ ಬದಲು, ಯುವ ಜನತೆ ಮತ್ತು ಮುಂದುವರಿದ ತಂತ್ರಜ್ಞಾನವನ್ನು ಅವಲಂಬಿಸಿದರೆ, ನಮ್ಮ ಆರ್ಥಿಕತೆಯು ಜಾಗತಿಕ ಆಘಾತಗಳನ್ನು ನಿಭಾಯಿಸುವಷ್ಟು ಪ್ರಬಲವಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
===
ಶಮಿಕಾ ರವಿ
ಸದಸ್ಯೆ, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ
ಭಾರತದ ಆರ್ಥಿಕತೆಯೀಗ ಕಷ್ಟದ ಹಾದಿಯಲ್ಲಿದೆ ಹಾಗೂ ನಾವು ಅದನ್ನು ಒಪ್ಪಿಕೊಳ್ಳಬೇಕು. ಆದರೆ ಈ ಸಮಸ್ಯೆಗಳು ನಾವು ಭಾರತದಲ್ಲಿ ಮಾಡಿದ ಯಾವುದೇ ತಪ್ಪುಗಳಿಂದ ಉಂಟಾಗಿಲ್ಲ. ಕೊರೋನಾ ನಂತರ ಕಳೆದ 5 ವರ್ಷಗಳಿಂದ ನಮ್ಮ ಮೂಲಭೂತ ಆರ್ಥಿಕ ಅಂಶಗಳು ಸ್ಥಿರವಾಗಿವೆ. ಪ್ರಸ್ತುತ ಮುಖ್ಯ ಸಮಸ್ಯೆಯಾಗಿ ಕಾಡುತ್ತಿರುವುದು ಇಂಧನ ಬಿಕ್ಕಟ್ಟು. ಭಾರತವು ಆಮದು ಮಾಡಿಕೊಂಡ ತೈಲ ಮತ್ತು ಅನಿಲದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಿರುವಾಗ, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಅವುಗಳ ಬೆಲೆಯಲ್ಲಿ ತೀವ್ರ ಏರಿಕೆ ಆಗಿದೆ. ಪರಿಣಾಮ, ತೈಲ ಬೆಲೆ ಸೇರಿದಂತೆ ಯಾವುದೇ ಸಂಖ್ಯೆಯಲ್ಲಿ ಸಣ್ಣ ಏರಿಕೆಯಾದರೂ ಅದನ್ನು ಕಂಡು ಜನ ಆತಂಕಗೊಳ್ಳುವುದು ಸಹಜ. ಆದಾಗ್ಯೂ, ಸರ್ಕಾರವು ತನ್ನ ಖರ್ಚಿನ ಬಗ್ಗೆ ಬಹಳ ಜಾಗರೂಕವಾಗಿದೆ.
₹ ಮತ್ತು ಹಣದುಬ್ಬರ:
ಕಳೆದ ಕೆಲ ದಿನಗಳ ಹಿಂದೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಾ ಸಾಗಿ, ದಿನದಿನಕ್ಕೂ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿಯುತ್ತಿತ್ತು. ಇದು ಜನರನ್ನು ಚಿಂತೆಗೆ ತಳ್ಳಿತ್ತು. ಆದರೆ ನನ್ನ ಪ್ರಕಾರ, ಪ್ರತಿ ಡಾಲರ್‌ಗೆ 100 ರು. ಸಮ ಎಂದಾದರೂ ಅದೊಂದು ಸಂಖ್ಯೆಯಷ್ಟೆ. ವಿನಿಮಯ ದರ ಕಾರ್ಯತಂತ್ರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಆರ್ಥಿಕತೆಯನ್ನು ಪ್ರೆಶರ್ ಕುಕ್ಕರ್‌ಗೆ ಹೋಲಿಸಿ ನೋಡೋಣ. ಭೌಗೋಳಿಕ ರಾಜಕೀಯ, ಮಧ್ಯಪ್ರಾಚ್ಯ ಸಂಘರ್ಷ, ಪೂರೈಕೆ ಸರಪಳಿ ಅಡಚಣೆಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಒತ್ತಡ ಸೃಷ್ಟಿಯಾಗುತ್ತದೆ. ದೇಶದ ಆರ್ಥಿಕತೆಯ ಪರಿಸ್ಥಿತಿಯೂ ಹಾಗೇ ಆಗಿರುತ್ತದೆ. ಹೀಗಿರುವಾಗ, ವಿನಿಮಯ ದರದ ಮೂಲಕ ಆರ್ಥಿಕತೆಯೆಂಬ ಕುಕ್ಕರ್‌ನಲ್ಲಿರುವ ಪ್ರೆಶರ್ ಹೊರಹೋಗುತ್ತದೆ.
ಇಂಥ ಸಂದರ್ಭದಲ್ಲಿ, ಸರ್ಕಾರ ಅಥವಾ ಆರ್‌ಬಿಐ ಮಧ್ಯಪ್ರವೇಶಿಸಿ ರು. ಮೌಲ್ಯವನ್ನು ಬಲವಂತವಾಗಿ ರಕ್ಷಿಸಲು ಯತ್ನಿಸಿದರೆ, ಇದು ಹಣದುಬ್ಬರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ರುಪಾಯಿ ಮೌಲ್ಯ ವೃದ್ಧಿಗಾಗಿ ವಿದೇಶಿ ವಿನಿಮಯ ಮೀಸಲನ್ನು ಮಾರಿದರೆ, ಆ ಕ್ರಮವು ಆರ್ಥಿಕ ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ತೈಲ ಅಥವಾ ಇಂಧನದ ಜಾಗತಿಕ ಪೂರೈಕೆ ಕಡಿಮೆಯಾದಾಗ, ಹೆಚ್ಚಿದ ಬೇಡಿಕೆಯನ್ನು ಸರಿದೂಗಿಸಲು ಬೆಲೆ ಏರಿಕೆಯಾಗುವುದು ಸಹಜ. ಈ ಬಾಹ್ಯ ಆಘಾತಗಳನ್ನು ಸಹಿಸಿಕೊಳ್ಳಲು ಕರೆನ್ಸಿಗಳ ಮೌಲ್ಯದಲ್ಲಿ ಬದಲಾವಣೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯರ್ಥ ಖರ್ಚುಗಳನ್ನು ಮಾಡದೆ ಇರುವುದು, ಅನಗತ್ಯ ವಿದೇಶಿ ಪ್ರಯಾಣಗಳನ್ನು ಮುಂದೂಡುವುದು ಸೇರಿದಂತೆ ಮಿತವ್ಯಯದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.
ಕೊಳ್ಳುವಿಕೆ ಶಕ್ತಿ ವೃದ್ಧಿ:
ಜನರ ಕೊಳ್ಳುವಿಕೆ ಶಕ್ತಿ ಕ್ಷೀಣಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದರೆ ಅಸಲಿಗೆ ಆಗಿರುವುದು ಆದಾಯ ಹಂಚಿಕೆಯಲ್ಲಿನ ಬದಲಾವಣೆ. ಮೊದಲೆಲ್ಲಾ, ಶಿಕ್ಷಿತರು, ಕೌಶಲ್ಯ ಹೊಂದಿರುವವರಿಗೆ ಅಧಿಕ ಆದಾಯ ಸಿಗುತ್ತಿತ್ತು. ಆದರೆ ಇಂದು ಕೌಶಲ್ಯರಹಿತ ಮತ್ತು ಅರೆ-ಕುಶಲ ಕಾರ್ಮಿಕರಿಗೂ ಮೊದಲಿಗಿಂತ ಹೆಚ್ಚು ಸಂಬಳ ಸಿಗುತ್ತಿದೆ. ಕಾರ್ಮಿಕರ ಕನಿಷ್ಠ ಆದಾಯದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಕೊಳ್ಳುವಿಕೆಯ ಶಕ್ತಿಯು ಸಮಾಜದ ಎಲ್ಲಾ ವರ್ಗಗಳಲ್ಲಿ ಹಾಗೂ ವಲಯಗಳಲ್ಲಿ ಹಂಚಿಕೆಯಾಗಿ, ಜನಸಾಮಾನ್ಯರ ಜೇಬೂ ತುಂಬುತ್ತಿದೆ ಹಾಗೂ ಅವರ ಕೊಳ್ಳುವಿಕೆ ಶಕ್ತಿ ವೃದ್ಧಿಸುತ್ತಿದೆ.
ವಿದೇಶಿ ಹೂಡಿಕೆ ಹೆಚ್ಚಳ:
ವಿದೇಶಿ ಹೂಡಿಕೆದಾರರು ತಮ್ಮ ಹಣವನ್ನು ಹೂಡಿಕೆ ಮಾಡುವ ಮುನ್ನ ಬಡ್ಡಿದರ, ಹಣದ ಲಭ್ಯತೆ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಬದಲಾವಣೆಗಳಂತಹ ಜಾಗತಿಕ ಅಂಶಗಳನ್ನು ಪರಿಗಣಿಸುತ್ತಾರೆ, ಹೀಗಿರುವಾಗ, ಒಂದು ಕಾಲಘಟ್ಟದಲ್ಲಿ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) ತಗ್ಗಿದರೆ ಅಥವಾ ಭಾರತ ಬಿಟ್ಟು ಬೇರೆ ರಾಷ್ಟ್ರಗಳತ್ತ ಹರಿದು ಹೋದರೆ, ನಮ್ಮ ಆರ್ಥಿಕ ಬೆಳವಣಿಗೆಯ ಕಥೆ ಮುಗಿದುಹೋಯಿತು ಎಂದುಕೊಳ್ಳುವುದು ಸಲ್ಲದು. ಕಾರಣ. ವಿದೇಶಿ ಹೂಡಿಕೆಗಿಂತ ಮುಖ್ಯವಾದುದು ದೇಶದ ಆಂತರಿಕ ಶಕ್ತಿ. ಹೆಚ್ಚುತ್ತಿರುವ ಉತ್ಪಾದಕತೆ, ಬೃಹತ್ ಮೂಲಸೌಕರ್ಯ ಬೆಳವಣಿಗೆ, ಹೆಚ್ಚಿದ ಬೇಡಿಕೆ, ಜನರ ಖರ್ಚಿನಲ್ಲಿ ಹೆಚ್ಚಳವು ದೇಶದ ಪ್ರಮುಖ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ತೋರಿಸುತ್ತದೆ.
ಎಐ ಬೆಳವಣಿಗೆ:
ಜನರು ಸಾಮಾನ್ಯವಾಗಿ ಕೃತಕ ಬುದ್ಧಿಮತ್ತೆ (ಎಐ) ಅನ್ನು ಉದ್ಯೋಗಗಳನ್ನು ಕಸಿದುಕೊಳ್ಳುವ ಭೂತದಂತೆ ನೋಡುತ್ತಾರೆ. ಆದರೆ ಭಾರತದಲ್ಲಿ ಎಐ ಪಾತ್ರ ಭಿನ್ನವಾಗಿದೆ. ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳು ಜನಸಂಖ್ಯೆ ಕುಸಿತ, ವಯಸ್ಸಾದವರ ಸಂಖ್ಯೆ ಹೆಚ್ಚಳದಂತಹ ಸವಾಲುಗಳನ್ನು ಎದುರಿಸುತ್ತಿವೆ.
ಆದರೆ ಭಾರತದ ಬಲ ಇಲ್ಲಿನ ಯುವಸಮೂಹ. ಇಲ್ಲಿ ಕೆಲಸ ಮಾಡಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಸಿದ್ಧರಿರುವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಭಾರತವು ಭವಿಷ್ಯದಲ್ಲಿ ಎಐಗೆ ನೈಸರ್ಗಿಕ ನೆಲೆಯಾಗಲಿದೆ. ನಾವು ಅದನ್ನು ಮನುಷ್ಯರಿಗೆ ಪರ್ಯಾಯವಾದ ಯಂತ್ರವಾಗಿ ನೋಡುವುದಿಲ್ಲ. ಬದಲಿಗೆ, ನಾವು ಅದನ್ನು ಮಾನವರ ಉತ್ಪಾದಕತೆಯನ್ನು ಹೆಚ್ಚಿಸುವ ಸಾಧನವಾಗಿ ನೋಡುತ್ತೇವೆ.
ಬೆಳವಣಿಗೆಗೆ 2 ಬಲ:
ಭಾರತದ ಆರ್ಥಿಕತೆಯು 2 ಸ್ತಂಭಗಳ ಮೇಲೆ ನಿಂತಿದೆ ಹಾಗೂ ಅವುಗಳಿಂದಲೇ ನಡೆಸಲ್ಪಡುತ್ತಿದೆ. ಅವು ಯುವ ಜನಸಂಖ್ಯೆ ಮತ್ತು ತಂತ್ರಜ್ಞಾನ. ಡಿಜಿಟಲ್ ಮೂಲಸೌಕರ್ಯ (ಯುಪಿಐ, ಆಧಾರ್ ಮತ್ತು ಇತರ ವೇದಿಕೆಗಳು) ದೇಶದ ಬಹುತೇಕ ನಾಗರಿಕರನ್ನು ತಲುಪಿರುವ ಈ ಸಮಯದಲ್ಲಿ ಯುವಕರ ಉತ್ಪಾದಕತೆಯೂಹೆಚ್ಚುತ್ತಿದೆ. ತಂತ್ರಜ್ಞಾನವು ವೆಚ್ಚವನ್ನು ಕಡಿಮೆ ಮಾಡಿ, ಸಣ್ಣ ಉದ್ಯಮಿಗಳಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡುತ್ತಿದೆ.
ರುಪಾಯಿ ಬೆಲೆ ಕುಸಿತದ ಆಘಾತವನ್ನು ಕೃತಕವಾಗಿ ನಿಯಂತ್ರಿಸಲು ಯತ್ನಿಸುವ ಬದಲು, ಯುವ ಜನತೆ ಮತ್ತು ಮುಂದುವರಿದ ತಂತ್ರಜ್ಞಾನವನ್ನು ಅವಲಂಬಿಸಿದರೆ, ನಮ್ಮ ಆರ್ಥಿಕತೆಯು ಜಾಗತಿಕ ಆಘಾತಗಳನ್ನು ನಿಭಾಯಿಸುವಷ್ಟು ಪ್ರಬಲವಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
