ಸಾರಾಂಶ
ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾ.ರಾ. ಮಹೇಶ್ ಸೋದರ ರಾಜೀನಾಮೆ- ಜಿಲ್ಲಾಧ್ಯಕ್ಷರಿಗೆ ಪತ್ರ ಕಳುಹಿಸಿರುವ ಜಿಪಂ ಮಾಜಿ ಸದಸ್ಯ ಸಾ.ರಾ. ನಂದೀಶ್,ಭೇರ್ಯ
- ಜಿಲ್ಲಾಧ್ಯಕ್ಷರಿಗೆ ಪತ್ರ ಕಳುಹಿಸಿರುವ ಜಿಪಂ ಮಾಜಿ ಸದಸ್ಯ ಸಾ.ರಾ. ನಂದೀಶ್
---ಕನ್ನಡಪ್ರಭ ವಾರ್ತೆ ಭೇರ್ಯ
ಮೈಸೂರು ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಜಿಪಂ ಮಾಜಿ ಸದಸ್ಯ ಸಾ.ರಾ. ನಂದೀಶ್ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಸೋದರರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದಲ್ಲಿ ಸುಮಾರು 18 ವರ್ಷಗಳ ಕಾಲ ನನ್ನ ಕೈಲಾದ ಸೇವೆಯನ್ನು ಮಾಡಿಕೊಂಡು ಬಂದಿದ್ದು, ಪಕ್ಷವು ಸಹಾ ನನ್ನನ್ನು ಗುರುತಿಸಿ ಜಿಪಂಗೆ ಸ್ಪರ್ಧಿಸಲು ಟಿಕೆಟ್ ನೀಡಿ ಜಿಪಂ ಹಂಗಾಮಿ ಅಧ್ಯಕ್ಷನಾಗಲು ಅವಕಾಶ ಮಾಡಿಕೊಟ್ಟಿದ್ದು, ಸಂತೋಷ ತಂದಿದೆ. ಆದರೆ ಈಗ ರಾಜಕೀಯದಿಂದ ದೂರ ಉಳಿಯಲು ಇಚ್ಚಿಸಿದ್ದು, ಯಾರು ದೇಶದ ಅಭಿವೃದ್ಧಿಗೋಷ್ಠರ ಹಾಗೂ ಜನರ ಏಳಿಗೆಗಾಗಿ ಸೇವೆ ಸಲ್ಲಿಸಲು ಪಣತೊಡುವರು, ಅಂತಹವರಿಗೆ ಯಾವುದೇ ಸ್ವಾರ್ಥವಿಲ್ಲದೇ ನಿಸ್ವಾರ್ಥದಿಂದ ಜಾತ್ಯತೀತವಾಗಿ, ಪಕ್ಷಾತೀತವಾಗಿ, ವ್ಯಕ್ತಿಗತವಾಗಿ ಸೇವೆ ಸಲ್ಲಿಸಲು ತೀರ್ಮಾನಿಸಿರುವುದರಿಂದ, ನನ್ನ ಕೊನೆಯ ಅಂತ್ಯದವರೆಗೂ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಪ್ರಮಾಣಿಸುತ್ತಾ, ಈ ನನ್ನ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದು ನನ್ನ ಮಾನಸಿಕ ಒಳ ಒತ್ತಡದಿಂದ ತಗೆದುಕೊಂಡಿರುವ ನಿರ್ಧಾರವೇ ಹೊರತು, ಬೇರೆ ಯಾರು ಸಹ ಕಾರಣರಾಗಿರುವುದಿಲ್ಲ ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷರಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.