ಗಂಧದಬೀಡು, ಚಂದನದ ನಾಡು, ನಮ್ಮ ಈ ಕರುನಾಡು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ಗಂಧದ ಬೀಡು ಎನ್ನುವ ಅನ್ವರ್ಥಕ ನಾಮವನ್ನು ನಿಜ ಮಾಡಲು ಅರಣ್ಯ ಇಲಾಖೆ ಪಣ ತೊಟ್ಟಿದೆ. ಇಡೀ ರಾಜ್ಯದಲ್ಲಿ ಶ್ರೀಗಂಧದ ಘಮಲು ಪಸರಿಸುವಂತೆ ನೋಡಿಕೊಳ್ಳಲು ಅನೇಕ ಯೋಜನೆಗಳನ್ನು ರೂಪಿಸಿದೆ.
ಕರ್ನಾಟಕದ ಮಣ್ಣಿನ ಗುಣವೇ ಹಾಗೆ. ಇಲ್ಲಿನ ಹವಾಗುಣ, ಮಣ್ಣು, ನೀರಿನಲ್ಲಿ ಅದೆಂತಹ ಶಕ್ತಿ ಇದೆ ಎಂದರೆ, ಶ್ರೀಗಂಧದ ಲಕ್ಷಾಂತರ ಮರಗಳು ನಮ್ಮ ಕಾಡಿನಲ್ಲಿವೆ. ಈ ಶ್ರೀಗಂಧ ಈಗ ವಾಣಿಜ್ಯೀಕರಣಗೊಂಡಿದೆ. ಅಂದರೆ, ಈ ಹಿಂದೆ ಕೇವಲ ಕಾಡಿನಲ್ಲಿ ಮಾತ್ರ ಬೆಳೆಯುತ್ತಿದ್ದ, ಕಂಡು ಬರುತ್ತಿದ್ದ ಶ್ರೀಗಂಧ ಈಗ ರೈತರ ಹೊಲಗಳಲ್ಲಿಯೂ ಜಾಗ ಕಂಡುಕೊಂಡಿದೆ. ರಾಜ್ಯದ ಸುಮಾರು 2 ಸಾವಿರಕ್ಕೂ ಹೆಚ್ಚು ರೈತರು 8 ರಿಂದ 10 ಸಾವಿರ ಎಕರೆ ಪ್ರದೇಶದಲ್ಲಿ ಗಂಧದ ಕೃಷಿ ಮಾಡುತ್ತಿದ್ದಾರೆ. ಕಳೆದೊಂದು ದಶಕದಿಂದ ಆರಂಭಗೊಂಡಿರುವ ಈ ವಾಣಿಜ್ಯ ಕೃಷಿ ಈಗ ಫಸಲು ಕೊಡುವ ಹಂತಕ್ಕೆ ಬಂದಿದೆ. ಅಂದರೆ, ರೈತ ಲಕ್ಷ ಲಕ್ಷ ಹಣ ನೋಡುವ ಕಾಲ ಸನ್ನಿಹಿತವಾಗಿದೆ.
ಬೇರೆಲ್ಲೂ ಸಿಗದು ಕರುನಾಡಿನಂಥ ಶ್ರೀಗಂಧ
ಕರ್ನಾಟಕದ ಶ್ರೀಗಂಧ ಅತ್ಯಂತ ವಿಶಿಷ್ಟ. ಇಲ್ಲಿ ಬೆಳೆಯುವ ಮರಗಳಲ್ಲಿ ಬರುವ ಸುವಾಸನೆ ಬೇರೆ ಯಾವುದೇ ರಾಜ್ಯಗಳ ಶ್ರೀಗಂಧಕ್ಕಿಂತಲೂ ಹೆಚ್ಚು ಪರಿಮಳಯುಕ್ತವಾಗಿರುತ್ತದೆ. ಅಷ್ಟೇ ಅಲ್ಲ, ಶ್ರೀಗಂಧದ ಮರದ ಸುಗಂಧ ತೈಲವೂ ಅಷ್ಟೆ. ನಮ್ಮ ಮರಗಳಲ್ಲಿ ಅತ್ಯಂತ ಉತ್ಕಷ್ಟ ದರ್ಜೆಯ ಶ್ರೀಗಂಧದ ತೈಲ ಸಹ ಸಿಗುತ್ತದೆ. ಇದನ್ನು ಶತಮಾನಗಳ ಹಿಂದೆಯೇ ಮನಗಂಡಿದ್ದ ಮೈಸೂರು ಮಹಾರಾಜರು, ಶ್ರೀಗಂಧದ ಸಾಬೂನು ಮತ್ತು ತೈಲದ ಫ್ಯಾಕ್ಟರಿ ಸ್ಥಾಪಿಸಿದ್ದರು. ಮೈಸೂರು ಸ್ಯಾಂಡಲ್ ಸೋಪ್ ಬಂದಿದ್ದೇ ನಮ್ಮ ಶ್ರೀಗಂಧದ ಘಮಲಿನಿಂದ.
ಶ್ರೀಗಂಧ ಪರಾವಲಂಬಿ ಸಸ್ಯ. ಅಂದರೆ, ಈ ಸಸ್ಯ ಬೇರೊಂದು(ಆತಿಥೇಯ) ಸಸ್ಯದ ನೆರವು ಪಡೆದರಷ್ಟೇ ಚೆನ್ನಾಗಿ ಬೆಳೆಯುತ್ತದೆ. ಶ್ರೀಗಂಧದ ಬೇರು ಕ್ಯಾಸುರಿನಾ, ಸೀಬೆ, ಮಾವು, ಸೀತಾಫಲ ಮುಂತಾದ ತೋಟಗಾರಿಕಾ ಮರಗಳು ಮತ್ತು ಹೊಂಗೆ ಹೀಗೆ ಕೆಲ ನಿರ್ದಿಷ್ಟ ಜಾತಿಯ ಮರಗಳ ಬೇರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು, ಅದರಿಂದ ತನಗೆ ಬೇಕಾದ ಪೋಷಕಾಂಶಗಳು ಮತ್ತು ನೀರನ್ನು ಹೀರಿಕೊಂಡು ಬೆಳೆಯುತ್ತಾ ಹೋಗುತ್ತದೆ. ನೆಲದಲ್ಲಿರುವ ಮಣ್ಣನ್ನು ಕೇವಲ ತನ್ನ ಬೇರು ಹರಡಿಕೊಳ್ಳಲು ಮಾತ್ರ ಬಳಸುತ್ತದೆ. 35 ರಿಂದ 40 ವರ್ಷ ಆಯಸ್ಸು ಹೊಂದಿರುವ ಈ ಮರ 15 ವರ್ಷಕ್ಕೆ ಕಾಂಡನ್ನು ಗಟ್ಟಿಗೊಳಿಸಿಕೊಳ್ಳುತ್ತದೆ. ಆಗ ಅದರ ತಿರುಳು ಸುವಾಸನಾಯುಕ್ತವಾಗುತ್ತದೆ. ಅದರೊಳಗಿನ ದ್ರವಾಂಶ ತೈಲವಾಗಿ ರೂಪುಗೊಳ್ಳುತ್ತದೆ. ಅರಣ್ಯ ಇಲಾಖೆಯ ಸಂಶೋಧನೆ ಪ್ರಕಾರ, ಯಾವ ಮರದ ಕಾಂಡದ ಸುತ್ತಳತೆ 45 ಸೆಂಟಿ ಮೀಟರ್ ದಪ್ಪ ಆಗುತ್ತದೋ ಅದರಲ್ಲಿ ಪರಿಮಳ ಸ್ಥಿರೀಕರಣಗೊಂಡಿದೆ ಎಂದರ್ಥ.
ಬೆಳೆಗಾರರಿಗೆ ಕಾಡಿನಿಂದ ಸಿಗುತ್ತೆ ಬೀಜ
ಸದ್ಯ ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಶ್ರೀಗಂಧ ಕೃಷಿ ನಡೆಯುತ್ತಿದೆ. ಇದನ್ನು ಮನಗಂಡ ಸರ್ಕಾರ ಶ್ರೀಗಂಧದ ಬೆಳೆಗಾರರನ್ನು ಉತ್ತೇಜಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ. ಕಾಡಿನಿಂದ ಅತ್ಯಂತ ಉತ್ಕಷ್ಟ ದರ್ಜೆಯ ಮರಗಳನ್ನು ಹುಡುಕಿ, ಅದರ ಬೀಜಗಳನ್ನು ತಂದು ನರ್ಸರಿಗಳಲ್ಲಿ ಬೆಳೆಸಿ ಉತ್ತಮ ಸಸಿಗಳನ್ನಾಗಿ ಮಾಡಿ ಬೆಳೆಸಿ ರೈತರಿಗೆ ನೀಡುತ್ತಿದೆ. ಆದರೆ, ರಾಜ್ಯದ ಬಹುತೇಕ ರೈತರು ಬೇರೆ ರಾಜ್ಯಗಳಿಂದಲೋ ಅಥವಾ ಖಾಸಗಿ ನರ್ಸರಿಗಳಿಂದಲೋ ತಂದು ನೆಡುತ್ತಿದ್ದಾರೆ. ಶ್ರೀಗಂಧ ಬೆಳೆಗಾರರ ಕಷ್ಟ-ನಷ್ಟ ಅರಿಯಲು ಇಲಾಖೆ ಹೊಸ ಸಮೀಕ್ಷೆಯನ್ನೇ ಶುರು ಮಾಡಿದೆ.
ಶ್ರೀಗಂಧ ಬೆಳೆಯಲು ಬಹಳಷ್ಟು ಜನರಿಗೆ ಆಸಕ್ತಿ ಇದೆಯಾದರೂ, ಲಾಭಕ್ಕಾಗಿ 15 ವರ್ಷ ಕಾಯಬೇಕಲ್ಲ ಎನ್ನುವ ಬೇಸರವೂ ಇದೆ. ಆದರೆ, ಈಗ ಸಿಹಿ ಸುದ್ದಿಯೊಂದು ಬಂದಿದ್ದು, ಶ್ರೀಗಂಧದ ಬೀಜಗಳನ್ನು ಸಹ ಅನೇಕ ಖಾಸಗಿ ಕಂಪನಿಗಳು ಖರೀದಿಸಲಾರಂಭಿಸಿವೆ. ಶ್ರೀಗಂಧ ವರ್ಷಕ್ಕೆ ಎರಡು ಬಾರಿ ಬೀಜ ಬಿಡುತ್ತದೆ. ಆದ್ದರಿಂದ ವರ್ಷದಲ್ಲಿ ಎರಡು ಬಂಪರ್ ಬೆಳೆ ಸಿಕ್ಕಂತಾಯಿತು. ಈ ಬೀಜಗಳಿಂದ ಕಾಸ್ಮೆಟಿಕ್ಸ್(ಸೌಂಧರ್ಯವರ್ಧಕ) ತಯಾರಿಸುತ್ತಾರೆ. ಅದಕ್ಕಾಗಿ ವಿದೇಶದಲ್ಲಿ ಬಹಳ ಬೇಡಿಕೆ ಹೆಚ್ಚಿದೆ. ಎರಡದಿಂದ ನಾಲ್ಕು ವರ್ಷಗಳ ನಡುವೆ ಶ್ರೀಗಂಧದ ಸಸಿ ಬೀಜ ಬಿಡಲು ಶುರು ಮಾಡುತ್ತದೆ. ಆದ್ದರಿಂದ ಈಗ ಅಂತಿಮ ಫಸಲಿಗಿಂತ ಮುಂಚೆಯೇ ರೈತರ ಕೈಗೆ ಹಣ ಸೇರಲಾರಂಭಿಸುತ್ತದೆ.
ಅರಣ್ಯ ಇಲಾಖೆ ಅನುಮತಿ ಪಡೆದು ಕಟಾವು
ಅರಣ್ಯ ಇಲಾಖೆ ಶ್ರೀಗಂಧದ ಕೃಷಿ ಪ್ರೋತ್ಸಾಹಿಸಲು ಅದಕ್ಕಿದ್ದ ಕೆಲ ಕಾನೂನು ಅಡಚಣೆಗಳನ್ನು ನಿವಾರಿಸಲು ಕ್ರಮ ಕೈಗೊಂಡಿದೆ. ಮಾರಾಟ ಸರಳೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದೆ. ರೈತ ತನ್ನ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧವನ್ನು ಕಟಾವು ಮಾಡುವ ಮುನ್ನ ಕಂದಾಯ ಇಲಾಖೆಯ ಆರ್ಟಿಸಿಯಲ್ಲಿ ಕಡ್ಡಾಯವಾಗಿ ನಮೂದಾಗಬೇಕಿತ್ತು. ಇದನ್ನು ತೆಗೆಸಲು ಕಂದಾಯ ಇಲಾಖೆಗೆ ಪತ್ರ ಬರೆದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದೆ. ಅರಣ್ಯ ಇಲಾಖೆ ಅನುಮತಿ ಪಡೆದು ನೇರವಾಗಿ ಕಟಾವು ಮಾಡಬಹುದಾಗಿದೆ. ಉತ್ಕೃಷ್ಟ ದರ್ಜೆಯ ಒಂದು ಕೆಜಿ ಶ್ರೀಗಂಧದ ಕೊರಡು ಸರಕಾರಿ ದರದ ಪ್ರಕಾರ 32,000 ರುಪಾಯಿಗೆ ಮಾರಾಟವಾಗುತ್ತದೆ.
ಶ್ರೀಗಂಧ ಬೆಳೆದು ಪ್ರೌಢಾವಸ್ಥೆಗೆ ಬಂದ ಮೇಲೆ ಅದನ್ನು ಕಟಾವು ಮಾಡಿ ಅರಣ್ಯ ಇಲಾಖೆ ಅಥವಾ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿಗೆ ಮಾರಾಟ ಮಾಡಬೇಕಿತ್ತು. ಹಣ ರೈತರ ಕೈಸೇರುವುದು ತಡವಾಗುತ್ತಿತ್ತು. ಈಗ ಅದಕ್ಕಾಗಿ ನೋಂದಾಯಿತ ಖರೀದಿದಾರರನ್ನು ಅರಣ್ಯ ಇಲಾಖೆ ನೋಂದಾಯಿಸಲು ಶುರು ಮಾಡಿದೆ. ಈ ನೋಂದಾಯಿತ ಖರೀದಿಗಾರರಿಗೆ ರೈತರು ನೇರವಾಗಿ ಮಾರಾಟ ಮಾಡಬಹುದು. ಅರಣ್ಯ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ದಿನಗಳಲ್ಲಿ ರೈತರೇ ಶ್ರೀಗಂಧದ ಕೊರಡಿನಿಂದ ಎಣ್ಣೆ ತೆಗೆಯಲು ಅನುಮತಿ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ. ಅದಕ್ಕಾಗಿ ರೈತರಿಗೆ ದಾಸ್ತಾನು ಅನುಮತಿ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ. ರೈತ ತನ್ನ ಜಮೀನಿನಲ್ಲೇ ದಾಸ್ತಾನು ಮಾಡಿಕೊಂಡರೆ ಯಾವಾಗ ಶ್ರೀಗಂಧಕ್ಕೆ ಹೆಚ್ಚಿನ ಬೆಲೆ ಬರುತ್ತದೆಯೋ ಅಲ್ಲಿಯವರೆಗೆ ಇಟ್ಟುಕೊಂಡು ನಂತರ ಮಾರಾಟ ಮಾಡಲು ಅನುಕೂಲವಾಗುತ್ತದೆ.
ಅರಣ್ಯ ಇಲಾಖೆ ಶ್ರೀಗಂಧದ ಬೆಳೆಗಾರರನ್ನು ಭೇಟಿ ಮಾಡಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ರೈತರು ಶ್ರೀಗಂಧದ ಸುರಕ್ಷತೆಗೆ ಅಳವಡಿಸಿಕೊಂಡಿರುವ ಕ್ರಮಗಳು, ಉತ್ತಮ ಫಸಲನ್ನು ಪಡೆಯಲು ಮಾಡಿಕೊಂಡಿರುವ ಉಪಾಯಗಳು ಹೀಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಜೊತೆಗೆ ರೈತರಿಗೆ ಇನ್ನೇನು ಅನುಕೂಲ ಮಾಡಿಕೊಡಬಹುದು ಎನ್ನುವುದನ್ನೂ ಅರಿಯುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ 9 ಜಿಲ್ಲೆಗಳ 940 ಶ್ರೀಗಂಧದ ಬೆಳೆಗಾರರ ಮಾಹಿತಿ ಸಂಗ್ರಹಿಸಿದೆ. ರೈತರಿಗೆ ಅಗತ್ಯ ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ನೀಡುವ ಜೊತೆಗೆ ಮೌಲ್ಯವರ್ಧನೆಗೆ ಏನೇನು ಮಾಡಬಹುದು ಎನ್ನುವ ವಿಚಾರದಲ್ಲಿ ಚಿಂತನ-ಮಂಥನ ನಡೆಯುತ್ತಿದೆ.
ಇನ್ನು ಕೆಲವೇ ವರ್ಷಗಳಲ್ಲಿ ಶ್ರೀಗಂಧ ನಮ್ಮ ರಾಜ್ಯದ ಜಿಡಿಪಿ ಹೆಚ್ಚಳ ಮಾಡುವ ಜೊತೆಗೆ ವಿದೇಶಿ ವಿನಿಮಯದ ಲಾಭ ಪಡೆಯಲೂ ಸಹ ಸಹಕಾರಿಯಾಗಲಿದೆ. ಬೆಳೆಗಾರರಿಗೆ ಸರ್ಕಾರದಿಂದ ಸಾಕಷ್ಟು ನೆರವು ಸಿಗಬೇಕಷ್ಟೇ.
ಸರ್ಕಾರ ನೆರವಾಗಲಿ
ಶ್ರೀಗಂಧ ಬೆಳೆಗಾರರಿಗೆ ಕಾನೂನಿನ ಕೆಲ ಸಮಸ್ಯೆಗಳು ಬಿಟ್ಟರೆ ಉಳಿದ ತೊಂದರೆಗಳು ಹೆಚ್ಚೇನಿಲ್ಲ. ತೇಗದ ಸಿರಿ ಯೋಜನೆಗೆ ಸರ್ಕಾರ ಆರ್ಥಿಕ ನೆರವು ಘೋಷಣೆ ಮಾಡಿದ ಹಾಗೆ ಶ್ರೀಗಂಧದ ಬೆಳೆಗೂ ನೆರವು ಘೋಷಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಅರಣ್ಯ ಇಲಾಖೆ ಕೆಲ ತೊಡಕುಗಳನ್ನು ಸರಳೀಕರಿಸಿ ನಮ್ಮ ಸಹಾಯಕ್ಕೆ ಬರಬೇಕು. ರೈತರೇ ಮೌಲ್ಯವರ್ಧನೆ ಮಾಡಿಕೊಳ್ಳಲು ಅನುಮತಿ ನೀಡಬೇಕು.
-ರಮೇಶ್ ಬಳೂಟಗಿ, ಶ್ರೀಗಂಧ ಬೆಳೆಗಾರರು, ಕುಷ್ಟಗಿ
