ಬೆಂಗಳೂರು ನಗರದೆಲ್ಲೆಡೆ ಗಾಂಧೀಜಿ ಜಯಂತಿ ಆಚರಣೆ: ಅಹಿಂಸಾ ತತ್ವ ಮೆಲುಕು

| N/A | Published : Oct 03 2025, 02:00 AM IST

ಸಾರಾಂಶ

ನಗರದಲ್ಲಿ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನವನ್ನು ಸರ್ಕಾರಿ ಕಚೇರಿ, ಪಕ್ಷಗಳು, ಸಂಘ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಆಚರಿಸಲಾಯಿತು. ವಿವಿಧೆಡೆ ಶ್ರಮದಾನ ನಡೆಸಿ, ರಾಷ್ಟ್ರಪಿತ ಗಾಂಧೀಜಿಗೆ ನಮಿಸಿ ಸ್ವಾತಂತ್ರ್ಯ ಹೋರಾಟದ ಕೊಡುಗೆ ಸ್ಮರಿಸಲಾಯಿತು.

  ಬೆಂಗಳೂರು :  ನಗರದಲ್ಲಿ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನವನ್ನು ಸರ್ಕಾರಿ ಕಚೇರಿ, ಪಕ್ಷಗಳು, ಸಂಘ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಆಚರಿಸಲಾಯಿತು. ವಿವಿಧೆಡೆ ಶ್ರಮದಾನ ನಡೆಸಿ, ರಾಷ್ಟ್ರಪಿತ ಗಾಂಧೀಜಿಗೆ ನಮಿಸಿ ಸ್ವಾತಂತ್ರ್ಯ ಹೋರಾಟದ ಕೊಡುಗೆ ಸ್ಮರಿಸಲಾಯಿತು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್‌ ಮಾತನಾಡಿ, ಅಹಿಂಸೆಯನ್ನು ಪ್ರಚೋದಿಸುವ ಮಾನಸಿಕ ಸ್ಥಿತಿಯನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಗಾಂಧೀಜಿ ಅವರ ತತ್ವ ಸಿದ್ಧಾಂತಗಳು ಯಶಸ್ವಿ ಆಗುವುದಿಲ್ಲ ಎಂದರು.

ಜನರ ಮನಸ್ಸಿನಲ್ಲಿ ಹಿಂಸೆಯನ್ನು ತುಂಬುವುದು ಅಪರಾಧ. ಯುವ ಸಮುದಾಯವು ಗಾಂಧೀಜಿ ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಂತಹ ಹೇಳಿಕೆಗಳನ್ನು ಖಂಡಿಸಬೇಕು. ಗಾಂಧೀಜಿ ಅವರ ಮಾತು, ತತ್ವಗಳನ್ನು ಮೆಲುಕು ಹಾಕಿ ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಸತ್ಯ ಇರುವವರೆಗೆ ಗಾಂಧೀಜಿ ಇರುತ್ತಾರೆ ಎಂದರು.

ಜಿ.ಎನ್. ದಯಾನಂದ ಅವರ ಗಾಂಧಿ ಆಂತರ್ಯ ಪುಸ್ತಕಕ್ಕೆ ಜಯಲಕ್ಷ್ಮೀ ಡಾ.ಹೊ. ಶ್ರೀನಿವಾಸಯ್ಯ ದತ್ತಿ’ ಪುರಸ್ಕಾರ ಪ್ರದಾನ ಮಾಡಲಾಯಿತು.

‘ಪ್ರೊ.ಜಿ.ಬಿ. ಶಿವರಾಜು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ರಾಜ್ಯ ಪ್ರಶಸ್ತಿಯನ್ನು ಮಂಡ್ಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕ ಕೆ.ಎಂ. ಪ್ರಸನ್ನಕುಮಾರ್, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಅವರಿಗೆ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿಯನ್ನು ಮಂಡ್ಯದ ಸಚಿನ್ ಎಸ್.ಎಸ್., ಮೈಸೂರಿನ ಹರ್ಷವರ್ಧನ್, ರಾಯಚೂರಿನ ಸನಾ ಅಮ್ದಿಹಾಲ್, ಕೊಪ್ಪಳದ ಮಂಜುನಾಥ್ ಪವಾರ್ ಅವರಿಗೆ ಪ್ರದಾನ ಮಾಡಲಾಯಿತು.

ಕೆ. ಪುಟ್ಟರಂಗಪ್ಪ ವಿರಚಿತ ‘ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಪುಸ್ತಕ ಬಿಡುಗಡೆಗೊಂಡಿತು.

ರೈಲ್ವೆಯಿಂದ ಆಚರಣೆ:

ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಕೆಎಸ್‌ಆರ್‌ ಬೆಂಗಳೂರು ರೈಲು ನಿಲ್ದಾಣದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್‌ ಕುಮಾರ್‌ ಸಿಂಗ್‌ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಪ್ರಯಾಣಿಕರಿಗೆ ಸ್ವಚ್ಛತೆಯ ಪ್ರತಿಜ್ಞೆ ಬೋಧಿಸಿದರು. ಪ್ರಯಾಣಿಕರಿಗೆ ಬಟ್ಟೆಯ ಬ್ಯಾಗ್‌ ಗಳನ್ನು ವಿತರಿಸಿ ಏಕಬಳಕೆಯ ಪ್ಲಾಸ್ಟಿಕ್‌ ಬಳಸದಂತೆ ಸಲಹೆ ನೀಡಿದರು. ಸ್ವಚ್ಛತೆಯ ಸಂದೇಶವನ್ನು ನೀಡುವ ಕಂಸಾಳೆ ಪ್ರದರ್ಶನ ಮತ್ತು ಕಿರು ನಾಟಕ ಪ್ರದರ್ಶನಗಳನ್ನು ಸಹ ಆಯೋಜಿಸಲಾಗಿತ್ತು.

ಕೆಎಸ್‌ಆರ್‌ ನಿಲ್ದಾಣದ ಆವರಣದಲ್ಲಿ ವಿವಿಧ ಕಡೆ ಸ್ವಚ್ಛತಾ ಶ್ರಮದಾನ ಆಯೋಜಿಸಲಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

Read more Articles on