ಸಾರಾಂಶ
24-12-1924ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನಕ್ಕೆ ಈಗ ಒಂದು ನೂರು ವರ್ಷ. ಮಹಾತ್ಮಾ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಎಂಬುದು ಅದರ ಮಹಾವಿಶೇಷ
ಅಕರ: ಕುವೆಂಪು - ನೆನಪಿನ ದೋಣಿಯಲ್ಲಿ
24-12-1924ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನಕ್ಕೆ ಈಗ ಒಂದು ನೂರು ವರ್ಷ. ಮಹಾತ್ಮಾ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಎಂಬುದು ಅದರ ಮಹಾವಿಶೇಷ. ಅಂತಹ ಅದಿವೇಶನವನ್ನು, ಮುಖ್ಯವಾಗಿ ಮಹಾತ್ಮಾ ಗಾಂಧಿಯವರನ್ನು ಕಾಣಲು ಆಗತಾನೆ ಬಿ.ಎ. ಓದುತ್ತಿದ್ದ, ಇಂಗ್ಲಿಷಿನಲ್ಲಿ ಬರವಣಿಗೆ ಪ್ರಾರಂಭಿಸಿದ್ದ ೨೦ರ ತರುಣ ಕುವೆಂಪು (ಆಗಿನ್ನೂ ಕೆ.ವಿ.ಪುಟ್ಟಪ್ಪ) ತಮ್ಮ ಸ್ನೇಹಿತರೊಂದಿಗೆ ಹೋಗಿರುತ್ತಾರೆ. ಅದರ ಬಗ್ಗೆ ಸುಮಾರು ೫೦ ವರ್ಷಗಳ ನಂತರ, ಕೇವಲ ನೆನಪಿನ ಆಧಾರದ ಮೇಲೆ ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ ದಾಖಲಿಸಿದ್ದಾರೆ. ಉದಯೋನ್ಮುಖ ಕವಿಯೊಬ್ಬರ ಅಧಿವೇಶನದ ವರದಿ ಇದು!
ಕುವೆಂಪು ಕಂಡಂತೆ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ (ಲೋಗೋ)
ನಾನು ಮೊದಲನೇ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ ೧೯೨೪ನೆಯ ಡಿಸೆಂಬರ್ ತಿಂಗಳ ಉತ್ತಾರಾರ್ಧದಲ್ಲಿ ಬೆಳಗಾಂನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆಂದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆಯ ಅನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮಾ ಗಾಂಧಿಯವರು ಆ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಆಕರ್ಷಿಸಿತು. ಭರತಖಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು ಗಾಂಧೀಜಿ. ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರ ಚಿಕಿತ್ಸೆಯಾಗಿದ್ದು ಸೆರೆಯ ಅವಧಿ ಮುಗಿಯುವ ಮುನ್ನವೆ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು ಎಲ್ಲವೂ ಪತ್ರಿಕೆಗಳಲ್ಲಿ ದಿನವೂ ಅನೇಕ ತಿಂಗಳುಗಳಿಂದ ದಪ್ಪಕ್ಷರದ ಮೊದಲನೆಯ ಪುಟದ ವಾರ್ತೆಗಳಾಗಿ, ಜನತೆಯ ಹೃದಯ ಸಮುದ್ರ ಕಡೆದಂತಾಗಿ, ದೇಶದ ಬದುಕು ವಿಕ್ಷುಬ್ಧವಾಗಿತ್ತು. ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್ ರಜವೂ ಪ್ರಾರಂಭವಾಗುತ್ತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು.
ರೈಲು ಪ್ರಯಾಣವೂ ಒಂದು ಸಾಹಸವೇ ಆಗಿತ್ತು.
ಅಧಿವೇಶನದ ಜಾಗಕ್ಕೆ ಸ್ವಲ್ಪ ದೂರವಾಗಿದ್ದ ಬೆಳಗಾವಿಯ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯೆ ನಾವೆಲ್ಲ ಇಳಿದುಕೊಳ್ಳುವಂತೆ ಏರ್ಪಾಡಾಗಿತ್ತು. ಅಲ್ಲಿ ಸ್ನಾನಗೀನ ಮುಗಿಸುತ್ತಿದ್ದೆವು; ಊಟಗೀಟಕ್ಕೆಲ್ಲ ಅಧಿವೇಶನದ ಮಹಾಬೃಹತ್ ಭೋಜನ ಶಾಲೆಗೆ ಹೋಗುತ್ತಿದ್ದೆವು.
ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ಧರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ: ಗಾಂಧೀಜಿಯ ದರ್ಶನ! ಆದರೆ ಅದೇನು ಸುಲಭ ಸಾಧ್ಯವಾಗಿತ್ತೇ? ಆ ಜನಜಂಗುಳಿಯ ನೂಕುನುಗ್ಗಲಲ್ಲಿ? ಅಧಿವೇಶನದ ವೇದಿಕೆಯ ಮೇಲೆ ಅವರನ್ನೇನೋ ನೋಡಬಹುದಾಗಿತ್ತು. ಆದರೆ ಅದು ನಾವು ಕೊಂಡಿದ್ದ ಟಿಕೆಟ್ಟಿನ ಸ್ಥಳಕ್ಕೆ ಬಹುಬಹುದೂರವಾಗಿತ್ತು. ಅಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ತಲಿಯ ಗೊಂಬೆಯಷ್ಟೆ ಆಕಾರದಲ್ಲಿ ಕಾಣಿಸುತ್ತಿದ್ದರು. ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರವನ್ನೂ ಪತ್ತೆಹಚ್ಚಿ ಬಿಸಿಲಿನಲ್ಲಿ ಕಾದೆವು.
ಮೈಗೆಂಪಾಗಿ ಬಟ್ಟೆಗೆಂಪಾಗಿ ಒಂದು ಮಹಾದ್ವಾರದೆಡೆ ನೂಕು ನುಗ್ಗಲಿನಲ್ಲಿ ನಿಂತು ನೋಡುತ್ತಿದ್ದೆವು, ನೆರೆದ ಜಾತ್ರೆಯ ಜನಜಂಗುಳಿಯ ನಡುವೆ ಆನೆಯೊಂದು ನಡೆದು ಬರುತ್ತಿದ್ದರೆ ಹೇಗೆ ಮೇಲೆದ್ದು ಕಾಣಿಸುವುದೊ ಹಾಗೆ ಜನಸಮುದ್ರದಲ್ಲಿ ತೇಲಿ ಬರುವ ಹಡಗುಗಳಂತೆ ಇಬ್ಬರು ಬೃಹದ್ ವ್ಯಕ್ತಿಗಳು ಬರುತ್ತಿದ್ದುದು ಕಾಣಿಸಿತು. ಗುಸುಗುಸು ಹಬ್ಬಿತು, ಗಾಂಧೀಜಿ ಬರುತ್ತಿದ್ದಾರೆ ಎಂದು. ಕತ್ತು ನಿಕ್ಕುಳಿಸಿ ನೋಡಿದೆ. ಗಾಂಧೀಜಿ ಎಲ್ಲಿ?
ಪಕ್ಕದಲ್ಲಿದ್ದವರು ಹೇಳಿದರು: ‘ಮೇಲೆದ್ದು ಕಾಣಿಸುತ್ತಾ ಬರುತ್ತಿದ್ದಾರಲ್ಲಾ ಅವರಿಬ್ಬರು ಆಲಿ ಸಹೋದರರು ಕಣ್ರೀ! ಅವರ ಮಧ್ಯೆ ನಡೆದು ಬರುತ್ತಿದ್ದಾರೆ ಗಾಂಧೀಜಿ.’
ಮಹಾತಾಮಸ ಮತ್ತು ಮಹಾರಾಜಸಗಳ ಮಧ್ಯೆ ನಡೆದುಬರುವ ಮಹಾಸಾತ್ವಿಕದಂತೆ ಕಾಣಿಸಿಕೊಂಡರು ಗಾಂಧೀಜಿ. ಮೌಲಾನಾ ಮಹಮ್ಮದಾಲಿ ಮತ್ತು ಮೌಲಾನಾ ಷೌಕತಾಲಿ ಇಬ್ಬರೂ ಪ್ರಾಚೀನ ಪೌರಾಣಿಕ ಅಸುರರಂತೆ ದೈತ್ಯ ಗಾತ್ರರಾಗಿದ್ದರು. ಅಸುರೀ ಸ್ವಭಾವಕ್ಕೆ ತಕ್ಕಂತೆ ಅವರ ಉಡುಪೂ ವಿರಾಜಿಸುತ್ತಿತ್ತು. ಚಂದ್ರ-ನಕ್ಷತ್ರ ಸಂಕೇತದಿಂದ ಶೋಭಿಸುತ್ತಿತ್ತು. ಅವರ ತಲೆಯುಡೆ. ಹೇರೊಡಲನ್ನು ಸುತ್ತಿತ್ತು ನೇಲುತ್ತಾ ಜೋಲುತ್ತಾ ನೆಲ ಗುಡಿಸುವಂತಿದ್ದ ಅವರ ನಿಲುವಂಗಿ. ಅವರ ಹೊಟ್ಟೆಯ ಸುತ್ತಳತೆಯಲ್ಲಿಯೆ ನಾಲ್ಕಾರು ಗಾಂಧಿಗಳು ಆಶ್ರಯ ಪಡೆಯಬಹುದಾಗಿತ್ತೇನೋ!
ತದ್ವಿರುದ್ಧವಾಗಿತ್ತು ಅಣುರೂಪಿ ಗಾಂಧೀಜಿಯ ಆಕೃತಿ, ಅವರಿಬ್ಬರ ನಡುವೆ. ನಮ್ಮ ಗೌರವಸಮಸ್ತವೂ ಸಾಷ್ಟಾಂಗವೆರಗಿತ್ತು ಅವರ ಪದತಲದಲ್ಲಿ: ‘ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀ ಕೀ ಜೈ!’ ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದುವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು!