ವೈದ್ಯಕೀಯ ಸಚಿವರಿಗೊಂದು ಮುಖ್ಯಮಂತ್ರಿ ಬಿನ್ನಹ - ಕಲಬುರಗಿಗೆ ಏನೇ ಸ್ಕೀಂ ತಗೊಂಡು ಹೋದ್ರೂ ಮೈಸೂರು ಮಾತ್ರ ಮರಿಬ್ಯಾಡ್ರಿ

| Published : Dec 23 2024, 10:29 AM IST

Siddaramaiah
ವೈದ್ಯಕೀಯ ಸಚಿವರಿಗೊಂದು ಮುಖ್ಯಮಂತ್ರಿ ಬಿನ್ನಹ - ಕಲಬುರಗಿಗೆ ಏನೇ ಸ್ಕೀಂ ತಗೊಂಡು ಹೋದ್ರೂ ಮೈಸೂರು ಮಾತ್ರ ಮರಿಬ್ಯಾಡ್ರಿ
Share this Article
  • FB
  • TW
  • Linkdin
  • Email

ಸಾರಾಂಶ

-ಕಲಬುರಗಿಗೆ ಏನೇ ಸ್ಕೀಂ ತಗೊಂಡು ಹೋದ್ರೂ ಮೈಸೂರು ಮಾತ್ರ ಮರಿಬ್ಯಾಡ್ರಿ! । ಖರ್ಗೆ ಮುಂದೆ ಸಿಎಂ ಮನವಿ ಮಾಡಿದ್ದೇಕೆ?

-ಕಲಬುರಗಿಗೆ ಏನೇ ಸ್ಕೀಂ ತಗೊಂಡು ಹೋದ್ರೂ ಮೈಸೂರು ಮಾತ್ರ ಮರಿಬ್ಯಾಡ್ರಿ! । ಖರ್ಗೆ ಮುಂದೆ ಸಿಎಂ ಮನವಿ ಮಾಡಿದ್ದೇಕೆ?

ಸರ್ಕಾರದ ಹಂತದಲ್ಲಿ ಅಭಿವೃದ್ಧಿಯ ಹಲವು ಹತ್ತು ಯೋಜನೆಗಳು ತಾವು ಪ್ರತಿನಿಧಿಸೋ ಕ್ಷೇತ್ರ, ಜಿಲ್ಲೆ, ಪ್ರದೇಶಕ್ಕೆ ಮಂಜೂರು ಮಾಡಿಸಿಕೊಳ್ಳಲು ಜನನಾಯಕರಾದವ್ರು ತುಂಬ ಹೆಣಗಾಡ್ಲೇಬೇಕು ಅನ್ನೋದರಲ್ಲಿ ದೂಸ್ರಾ ಮಾತಿಲ್ಲ.

ನಮಗ ಅದು ಬೇಕು, ಇದು ಬೇಕಂತ ಗಂಟ ಬಿದ್ರಷ್ಟೇ ಸಿಗ್ತದ, ಸುಮ್ಕ್‌ ಕುಂತ್ರ ಏನೂ ಸಿಗೋದಿಲ್ಲ ಅಂತ ಎಐಸಿಸಿಸಿ ಚೀಫ್‌, ಕಾಂಗ್ರೆಸ್‌ ಹೈಕಮಾಂಡ್‌ ಖರ್ಗೆ ಸಾಹೇಬರು ಅವಕಾಶ ಸಿಕ್ಕಾಗಲ್ಲಾ ಹೇಳೋದಿದೆ. ಸರ್ಕಾರದ ಯೋಜನೆಗಳಂದ್ರ ಬಫೆ ಸಿಸ್ಟಂದಾಗ ಊಟ ಬಡಿಸ್ಕೊಂಡು ಹೋದ್ಹಂಗ ಅಂತಾನು ಖರ್ಗೆಯವ್ರು ತಮಾಷೆ ಮಾಡ್ತಾರೆ.

ಕಲಬುರಗಿ ಜಯದೇವ ಆಸ್ಪತ್ರೆ ಲೋಕಾರ್ಪಣೆ ಸಮಾರಂಭದಾಗ ಇದೇ ಚರ್ಚೆಯಾಯ್ತು, ಎಐಸಿಸಿ ಚೀಫ್‌ ಖರ್ಗೆಜಿ, ಸಿಎಂ ಸಿದ್ದರಾಮಯ್ಯ ಇಬ್ರೂ ಹಾಜರಿದ್ದ ವೇದಿಕೆಯದಾಗಿತ್ತು.

ಸಿದ್ದರಾಮಯ್ಯ ಹಾಗೇ ಮಾತನಾಡ್ತಾ... ನಮ್ಮ ಮೆಡಿಕಲ್‌ ಎಜುಕೇಷನ್ ಮಿನಿಸ್ಟರ್‌ ಇದ್ದಾರಲ್ಲ, ಡಾ. ಶರಣ ಪಾಟೀಲ್‌ ಆ ಆಸ್ಪತ್ರೆ, ಈ ಆಸ್ಪತ್ರೆ, ಸ್ಕಿಲ್‌ ತರಬೇತಿ ಕೇಂದ್ರ ಅಂತೆಲ್ಲಾ ಕಲಬುರಗಿಗೆ ಒಂದಿಲ್ಲೊಂದು ಸ್ಕೀಂ ಮಂಜೂರು ಮಾಡ್ಕೊತಾರೆ, ಕ್ಯಾಬಿನೆಟ್‌ಗೆ ಇವ್ರ ಪ್ರಸ್ತಾವನೆ ಬಂದಾಕ್ಷಣ ಸಹೋದ್ಯೋಗಿ ಸಚಿವರು ಕೆಲವರು ಎಲ್ಲಾನೂ ಕಲಬುರಗಿಗೆ ಅಂದ್ರ ಹ್ಯಾಂಗ್ರಿ? ಅಂತ ಜಗಳ ಮಾಡ್ತಾರೆ ಎಂದರು.

ಕಲಬುರಗಿ ಸೇರಿದ್ಹಂಗೆ ಕಲ್ಯಾಣದ 7 ಜಿಲ್ಲೆಗಳು ಏನಕೇನ ಕಾರಣಗಲಿಂದಾಗಿ ಹಿಂದುಳಿದ ಪ್ರದೇಶ ಅನ್ನೋದ್ರಲ್ಲಿ ಬೇರೆ ಮಾತಿಲ್ಲ, ಹೊಸ ಯೋಜನೆಗಳನ್ನ ಅಲ್ಲಿಗೆ ಪ್ರೈಯಾರಿಟಿ ಮೇಲೆ ಕೊಡಬೇಕಾಗ್ತದಪ್ಪ ಅಂತ ಹೇಳ್ತಾ ನಮ್ಮ ಕ್ಯಾಬಿನೆಟ್‌ನಲ್ಲೇ ತಕರಾರು ಮಾಡೋ ಮಿನಿಸ್ಟರ್‌ಗಳಿಗೆ ಸಮಾಧಾನ ಮಾಡ್ತೀನಿ.ಹೊಸ ಯೋಜನೆ, ಆಸ್ಪತ್ರೆ ಪ್ರಸ್ತಾಪ ಕ್ಯಾಬಿನೆಟ್ಟಿಗೆ ಬಂದಾಗೆಲ್ಲಾ ನಾನಂತೂ ಮಿನಿಸ್ಟರ್‌ ಶರಣ ಪಾಟೀಲ್‌ಗೆ ಕಲಬುರಗಿ ಗುಂಗಿನ್ಯಾಗ ಮೈಸೂರು ಮರಿಬೇಡಪ್ಪ ಅಂತೀನಿ, ಕಲಬುರಗಿಗೆ ಏನೇನೂ ಮಾಡ್ತಿಯೋ ಅದನ್ನೊಂದು ಮೈಸೂರಿಗೂ ಮಾಡಂತ ತಾಕೀತು ಮಾಡೀನಿ ಎಂದು ಸಿದ್ದರಾಮಯ್ಯಅಂದಾಗ ಸೇರಿದ್ದ ಸಭಿಕರ ಸಮೂಹದಲ್ಲಿ ನಗೆಯ ಅಲೆ.

ಅಷ್ಟೊತ್ತಿಗಾಗಲೇ ಎಐಸಿಸಿ ಚೀಫ್‌ ಡಾ. ಖರ್ಗೆಜಿಯವರು ಕಲಬುರಗಿಗೆ ನಿಮ್ಹಾನ್ಸ್, ಡಯಾಬೆಟಾಲಜಿ ಶಾಖೆಗಳನ್ನ ತನ್ನಿರೆಂದು ಸಿದ್ದರಾಮಯ್ಯ ಗಮನ ಸೆಳೆದಿದ್ದರು.

ತಮ್ಮ ಮಾತಲ್ಲಿ ಖರ್ಗೆಜಿಯವರ ಡಿಮ್ಯಾಂಡ್‌ಗಳ ಬಗ್ಗೆಯೂ ಹೇಳ್ತಾ, ಇವನ್ನೆಲ್ಲ ಕಲಬುರಗಿಗೆ ತರೋಣ ಬಿಡಿ ಎನ್ನುತ್ತಲೇ ಮೆಡಿಕಲ್‌ ಎಜುಕೇಷನ್‌ ಮಿನಿಸ್ಟರ್‌ ಶರಣಪ್ರಕಾಶರತ್ತ ನೋಡ್ತಾ, ಮೈಸೂರು ಮರಿಬ್ಯಾಡ್ರಪ್ಪ... ಅಂತ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಹೇಳಿದಾಗ ಹೈಕಮಾಂಡ್‌ ಡಾ. ಖರ್ಗೆ, ಸಚಿವರು, ಶಾಸಕರು, ಸಾರ್ವಜನಿಕರು ನಕ್ಕಿದ್ದೇ ನಕ್ಕಿದ್ದು.

ಅಶ್ವಮೇಧ ಕುದುರೆಯ ಓಟಕ್ಕೆ ಬ್ರೇಕ್ ಹಾಕಿದ್ದೇ ನಾನು!

ಹುಚ್ಚೆದ್ದ ಕುದುರೆಯೊಂದು ಓಡುತ್ತ ಓಡುತ್ತ ರಾಜ್ಯಾದ್ಯಂತ ಸಂಚರಿಸುತ್ತಿತ್ತು. ಆದರೆ ಅದನ್ನು ಬೀದರಿನಲ್ಲಿ, ಕಲಬುರಗಿಯಲ್ಲಿ, ಯಾದಗಿರಿಯಲ್ಲಿ ಯಾರೂ ಕಟ್ಟಿಹಾಕಲಿಲ್ಲ. ಆದರೆ ವಿಜಯಪುರಕ್ಕೆ ಬಂದ ಕೂಡಲೇ ನಾವು ಅದನ್ನು ಕಟ್ಟಿ ಹಾಕಿದ್ದೇವೆ....

ವಿಜಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ ಸಾಹೇಬ್ರು ಹೀಗೆ ಹೇಳಿದ ಕೂಡಲೇ ಯಾವ ಕುದುರೆ, ಎಲ್ಲಿಗೆ ಬಂತು, ಯಾವಾಗ ಕಟ್ಟಿ ಹಾಕಿದ್ದು ಎಂಬ ಪ್ರಶ್ನೆಗಳು ತಲೆ ಒಳಗೆ ಏಳುತ್ತಿದ್ದಂತೆ ಉದಾಹರಣ ಸಹಿತ ಯತ್ನಾಳರು ಹೇಳತೊಡಗಿದರು.

ಹಿಂದೆ ರಾಜಮಹಾರಾಜರ ಕಾಲದಲ್ಲಿ ಅಶ್ವಮೇಧ ಯಾಗ ಮಾಡುತ್ತಿದ್ದರು. ಈ ವೇಳೆ ಒಂದು ಬಿಳಿ ಕುದುರೆಯನ್ನು ಬಿಚ್ಚಿ ಬಿಡುತ್ತಿದ್ದರು. ಅದನ್ನು ಯಾವ ರಾಜ ಕಟ್ಟುತ್ತಾನೋ ಅವನ ವಿರುದ್ಧ ಯುದ್ಧ ಸಾರುತ್ತಿದ್ದರು. ಅಕಸ್ಮಾತ ಆತ ಆ ಅಶ್ವಮೇಧವನ್ನು ಸ್ವಾಗತ ಮಾಡಿ ಮುಂದೆ ಬಿಟ್ಟರೆ ಆ ರಾಜ ಸೋತಂತೆ ಎಂಬ ನಿಯಮವಿತ್ತು .ಅದೇ ರೀತಿ ಸರ್ಕಾರ ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತಮ್ಮದೇ ರಾಜ್ಯಭಾರ ಮಾಡಲು ಸಚಿವ ಜಮೀರ್ ಅಹಮ್ಮದ ಅವರನ್ನು ಬಿಟ್ಟಿತ್ತು. ಬೇರೆ ಬೇರೆ ಜಿಲ್ಲೆಯಲ್ಲಿ ಸಂಚರಿಸಿದಾಗ ಯಾರೂ ಕಟ್ಟಿಹಾಕಲಿಲ್ಲ. ವಿಜಯಪುರಕ್ಕೆ ಬರುತ್ತಿದ್ದಂತೆ ಆ ಕುದುರೆಯನ್ನು ನಾವು ಕಟ್ಟಿಹಾಕಿದೆವು. ಹೀಗಾಗಿ ಇಲ್ಲಿಂದಲೇ ದೇಶಾದ್ಯಂತ ವಕ್ಫ್‌ ಯುದ್ಧ ಆರಂಭವಾಗಿದೆ ಎಂದು ಯತ್ನಾಳ ಹೇಳಿದರು.

ಬಳಿಕ ಭಾಷಣ ಶುರು ಮಾಡಿದ ಶಾಸಕ ರಮೇಶ ಜಾರಕಿಹೊಳಿ, ಅಶ್ವಮೇಧ ಕುದುರೆಯನ್ನು ನಾವು ವಿಜಯಪುರದಲ್ಲಿ ಕಟ್ಟಿಹಾಕಿದ್ದೇವೆ ಎಂದು ಈಗಷ್ಟೆ ಯತ್ನಾಳ ಹೇಳಿದರು. ಒಂದುವೇಳೆ ಯತ್ನಾಳ ಇಲ್ಲಿ ಕಟ್ಟಿರದಿದ್ದರೇ ನಾವು ಬೆಳಗಾವಿಯಲ್ಲಿ ಕಟ್ಟಿಹಾಕುತ್ತಿದ್ದೆವು ಎಂದು ಹೇಳಿದಾಗ ಭಾಷಣ ಕೇಳುತ್ತಿದ್ದ ಜನರಲ್ಲಿ ನಗು ಕಾಣಿಸಿತು.

ಸ್ಪೀಕರ್‌ಗೆ ನೋಬೆಲ್‌ ಕೊಡಿಸಬೇಕು

ಈ ಬಾರಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಸಾಕಷ್ಟು ಬಿಸಿ ಬಿಸಿಯಾಗಿಯೇ ಇತ್ತು. ಇನ್ನೂ ಕಾವು ಆರಿಯೇ ಇಲ್ಲ. ಆದರೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಕಾರ್ಯವೈಖರಿಯದ್ದೇ ವಿಶೇಷ ಚರ್ಚೆ. ಸಭಾಧ್ಯಕ್ಷರ ನೂತನ ಪೀಠ, ಅನುಭವ ಮಂಟಪದ ಚಿತ್ರ, ಗಣ್ಯರ ಚಿತ್ರ ಅಳವಡಿಕೆ ಮೂಲಕ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದು ಒಂದು ಭಾಗ. ಆದರೆ ಎಲ್ಲರ ಬಾಯಲ್ಲಿ ಸಭಾಧ್ಯಕ್ಷರು ನಡೆಸಿದ ಮಿಡ್‌ ನೈಟ್‌ ಸೆಷನ್‌ ಬಗ್ಗೆ ನಡೆದ ಮಾತುಕತೆ ಮತ್ತೊಂದು ವಿಶೇಷವಾಗಿತ್ತು. ಮಿಡ್‌ನೈಟ್‌ ಸೆಷನ್‌ ಬಗ್ಗೆ ಶ್ಲಾಘನೆ, ವ್ಯಂಗ್ಯದ ಪ್ರತಿಕ್ರಿಯೆ ಸಾಕಷ್ಟು ಇತ್ತು.

ಡಿ.12ರಂದು 10.15ರವರೆಗೆ ಕಲಾಪ ನಡೆಸಿದ್ದರು. ಆದರೆ, ಸೋಮವಾರ (ಡಿ. 16) ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಮಧ್ಯರಾತ್ರಿ 12.50ರವರೆಗೆ ಕಲಾಪ ನಡೆಸಿ ದಾಖಲೆ ಬರೆದರು.

ಮಿಡ್‌ನೈಟ್‌ ಸೆಷನ್‌ ಬಗ್ಗೆ ಮಾಧ್ಯಮದವರೊಂದಿಗೆ ವ್ಯಂಗ್ಯ ಮಿಶ್ರಿತವಾಗಿಯೇ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ‘ಕಲಾಪವನ್ನು ಮಾಡುವ ಸಮಯದಲ್ಲಿ ಮಾಡುವುದಿಲ್ಲ. ಚರ್ಚೆ ಮಾಡುವ ವಿಷಯಕ್ಕೆ ಅವಕಾಶ ನೀಡುವುದಿಲ್ಲ. ಅದನ್ನು ಬಿಟ್ಟು, ಮಧ್ಯರಾತ್ರಿವರೆಗೆ ಕಲಾಪ ನಡೆಸುತ್ತಿದ್ದಾರೆ. ಆಗ ಶಾಸಕರ ಸಂಖ್ಯೆ ಕಡಿಮೆಯಿರುತ್ತದೆ. ಅದರಲ್ಲೂ ವಿರೋಧ ಪಕ್ಷದವರು ಹೆಚ್ಚಿರುವುದಿಲ್ಲ. ಇದ್ದರೂ ಚರ್ಚಿಸುವ, ಸರ್ಕಾರವನ್ನು ಪ್ರಶ್ನಿಸುವ ಹುಮ್ಮಸ್ಸು ಕಳೆದುಕೊಂಡಿರುತ್ತಾರೆ. ಆಗ ಕಲಾಪವನ್ನು ಯಾವುದೇ ವಿರೋಧವಿಲ್ಲದೆ, ತಮಗೆ ಇಷ್ಟ ಬಂದ ಹಾಗೆ ನಡೆಸಬಹುದು ಎಂಬುದು ಸ್ಪೀಕರ್‌ ಅಭಿಪ್ರಾಯವಿರಬಹುದು’ ಎಂದು ಹೇಳಿದರು. ಮುಂದುವರಿದು, ‘ಮಿಡ್‌ನೈಟ್‌ ಸೆಷನ್‌ ನಡೆಸುವ ಸ್ಪೀಕರ್‌ಗೆ ನೋಬೆಲ್‌ ಪ್ರಶಸ್ತಿ ನೀಡಬೇಕು’ ಎಂದು ನಕ್ಕರು.

-ಶೇಷಮೂರ್ತಿ ಅವಧಾನಿ

-ಶಶಿಕಾಂತ ಮೆಂಡೆಗಾರ

-ಗಿರೀಶ್‌ ಗರಗ