ಹುಬ್ಬಳ್ಳಿ ಮತ್ತು ಮೈಸೂರಿಗೆ ಉತ್ತಮ ವಿಮಾನಯಾನ ಸಂಪರ್ಕ ಕಲ್ಪಿಸಿದ ಇಂಡಿಗೋ. ಈ ಕುರಿತ ವಿವರ ಇಲ್ಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು
ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೈಸೂರು ಮತ್ತು ಹುಬ್ಬಳ್ಳಿಯಿಂದ ತನ್ನ ವಿಮಾನ ಸೇವೆಯನ್ನು ಯಶಸ್ವಿಯಾಗಿ ಮುಂದುವರಿಸುವ ಮೂಲಕ ಈ ಪ್ರದೇಶಗಳ ಜನರಿಗೆ ಉತ್ತಮ ವಿಮಾನಯಾನ ಸೌಲಭ್ಯ ಕಲ್ಪಿಸುತ್ತಿದೆ.ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಇಂಡಿಗೋ ವಾರಕ್ಕೆ ಒಟ್ಟು 39 ವಿಮಾನಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಮೂಲಕ ಹುಬ್ಬಳ್ಳಿಯನ್ನು ದೇಶದ ಐದು ಪ್ರಮುಖ ಮಹಾ ನಗರಗಳಿಗೆ ನೇರವಾಗಿ ಸಂಪರ್ಕಿಸುತ್ತಿದೆ. 2018ರಲ್ಲಿ ಕಾರ್ಯಾಚರಣೆ ಆರಂಭಿಸಿದ ಸಂಸ್ಥೆಯು, ಇಂದು ರಾಷ್ಟ್ರೀಯ ಮಾರುಕಟ್ಟೆಗೆ ಉತ್ತರ ಕರ್ನಾಟಕದ ಕೊಂಡಿಯಾಗಿ ಬೆಳೆದು ನಿಂತಿದೆ.
ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಿಂದಲೂ ವಿಮಾನಯಾನ ಚಟುವಟಿಕೆಗಳು ಗರಿಗೆದರಿವೆ. ಮೈಸೂರಿನಿಂದ ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ವಾರಕ್ಕೆ 14 ವಿಮಾನಗಳು ಸಂಚರಿಸುತ್ತಿವೆ. 2019ರಲ್ಲಿ 7 ವಿಮಾನಗಳಿಂದ ಆರಂಭವಾದ ಈ ಸೇವೆ, ಇಂದು ದುಪ್ಪಟ್ಟಾಗಿದೆ. ಇದರಿಂದಾಗಿ ಪ್ರವಾಸೋದ್ಯಮ ಮಾತ್ರವಲ್ಲದೆ ವೈದ್ಯಕೀಯ, ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಿದೆ.