ಸಾರಾಂಶ
ಸಂಪತ್ ತರೀಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುತುಮಕೂರು ರಸ್ತೆ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ನಿರ್ಮಿಸಿರುವ ವಿಲ್ಲಾಗಳ ಮಾರಾಟಕ್ಕೆ ಸಿದ್ಧತೆ ನಡೆಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗಾಗಲೇ ಮೊದಲ ಹಂತದಲ್ಲಿ ಮೂಲೆ ಮತ್ತು ಪ್ರಮುಖ ಪ್ರದೇಶದ ವಿಲ್ಲಾಗಳನ್ನು ಇ-ಹರಾಜಿನ ಮೂಲಕ ಮಾರಾಟ ಆರಂಭಿಸಿದೆ.
ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಸತಿ ಯೋಜನೆಯಡಿ 31 ಎಕರೆಯಲ್ಲಿ 271.46 ಕೋಟಿ ರು. ವೆಚ್ಚಮಾಡಿ 30*40 ಅಳತೆಯಲ್ಲಿ 3 ಬಿಎಚ್‌ಕೆಯ 152 ವಿಲ್ಲಾಗಳು ಮತ್ತು 35*50 ಅಳತೆಯ 4 ಬಿಎಚ್‌ಕೆಯ 170 ವಿಲ್ಲಾಗಳನ್ನು ನಿರ್ಮಾಣ ಮಾಡಲಾಗಿದ್ದು, ಎಲ್ಲವೂ ಡ್ಯುಫ್ಲೆಕ್ಸ್ ಮನೆಗಳಾಗಿವೆ. ಈ ಪೈಕಿ ಇತ್ತೀಚೆಗೆ ಮೂಲೆ ಮತ್ತು ಪ್ರಮುಖ ಪ್ರದೇಶದಲ್ಲಿ ಇದ್ದ 25 ವಿಲ್ಲಾಗಳನ್ನು ಇ-ಹರಾಜು ಮೂಲಕ ಬಿಡಿಎ ಮಾರಾಟಕ್ಕೆ ಇಡಲಾಗಿತ್ತು. ಹರಾಜಿನಲ್ಲಿ 16 ಮಂದಿ ಗ್ರಾಹಕರು ಪಾಲ್ಗೊಂಡಿದ್ದು, ಶೇ.10ಕ್ಕಿಂತ ಹೆಚ್ಚು ಬಿಡ್ ಹಣ ನಮೂದಿಸಿದ್ದ 7 ಗ್ರಾಹಕರಿಗೆ ವಿಲ್ಲಾಗಳನ್ನು ಖಾತರಿ ಪಡಿಸಲಾಗಿದೆ.3 ಬಿಎಚ್‌ಕೆಯ ವಿಲ್ಲಾಗಳಿಗೆ ತಲಾ 1.14 ಕೋಟಿ ರು.ಗಳಿಗೂ ಅಧಿಕ ಮತ್ತು 4 ಬಿಎಚ್‌ಕೆ ವಿಲ್ಲಾಗಳಿಗೆ 1.35 ಕೋಟಿ ರು.ಗಳಂತೆ ಇ-ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ವಿಲ್ಲಾಗಳಿಗೆ ಉತ್ತೇಜನಕಾರಿ ದರ ಸಿಗುತ್ತಿದೆ. ಇದರಿಂದ ಶೀಘ್ರದಲ್ಲೇ ಮೂಲೆ ಮತ್ತು ಪ್ರಮುಖ ಪ್ರದೇಶದಲ್ಲಿರುವ 80 ವಿಲ್ಲಾಗಳ ಪೈಕಿ 50 ವಿಲ್ಲಾಗಳನ್ನು ಇ-ಹರಾಜು ಮೂಲಕ ಒಂದೇ ಬಾರಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಬಿಡಿಎ ಆರ್ಥಿಕ ಸದಸ್ಯ ಲೋಕೇಶ್ ಅವರು ಕನ್ನಡಪ್ರಭಕ್ಕೆ ತಿಳಿಸಿದರು.
ಮೂಲಭೂತ ಸೌಕರ್ಯಕ್ಕೆ ಆದ್ಯತೆ:ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳು ಇರುವುದರಿಂದ ಸಂಪರ್ಕ ಸುಲಭವಿದೆ. ಎಲ್ಲಾ ವಿಲ್ಲಾಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಇವಿ ಚಾರ್ಜಿಂಗ್ ಸೌಲಭ್ಯ, ಡ್ಯುಯಲ್ ಪೈಪ್‌ಲೈನ್ ವ್ಯವಸ್ಥೆ ಇದೆ. ಈಜುಕೊಳ, ಮನರಂಜನಾ ಕೇಂದ್ರ, ಬ್ಯಾಡ್ಮಿಂಟನ್ ಕೋರ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ, ಎರಡು ರೆಸ್ಟೋರೆಂಟ್‌ಗಳು ಇಲ್ಲಿವೆ. 100 ಕೆವಿ ಸಾಮರ್ಥ್ಯದ ಸೋಲಾರ್ ಪ್ಯಾನಲ್‌ಗಲನ್ನು ಅಳವಡಿಸಲಾಗಿದ್ದು ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ವಿಲ್ಲಾ ಯೋಜನೆಲ್ಲಿ 27 ಉದ್ಯಾನಗಳಿವೆ. ಸುತ್ತ 2.1 ಮೀಟರ್ ಎತ್ತರದ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ಒಳಾಂಗಣ ಸೆಟಲ್ ಕೋರ್ಟ್, ರೆಸ್ಟೋರೆಂಟ್, ಜಿಮ್, ಏರೋಬಿಕ್ಸ್ ರೂಂ, ಕಮ್ಯೂನಿಟಿ ಹಾಲ್, ಗ್ರಂಥಾಲಯ, ಸೂಪರ್ ಮಾರ್ಕೆಟ್‌ಗೆ ಅವಕಾಶ ಒದಗಿಸಲಾಗಿದೆ.
ಬೌರಿಂಗ್ ಕ್ಲಬ್‌ನೊಂದಿಗೆ ಕರಾರು!ಹುಣ್ಣಿಗೆರೆ ವಸತಿ ಯೋಜನೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕ್ಲಬ್‌ಹೌಸ್ ನಿರ್ವಹಣೆಗಾಗಿ ಬೌರಿಂಗ್ ಕ್ಲಬ್‌ನೊಂದಿಗೆ ಒಪ್ಪಂದ(ಟೈಅಪ್) ಮಾಡಿಕೊಳ್ಳಲು ಬಿಡಿಎ ಸಿದ್ಧತೆ ನಡೆಸಿದೆ. ಈಗಾಗಲೇ ಬೌರಿಂಗ್ ಕ್ಲಬ್ ಆಡಳಿತ ಮಂಡಳಿ ಹುಣ್ಣಿಗೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದು ಮಾತುಕತೆಯನ್ನು ಕೂಡ ನಡೆಸಿದೆ. ಇನ್ನು ಅಂತಿಮ ನಿರ್ಧಾರವಾಗಿಲ್ಲ. ಶೀಘ್ರದಲ್ಲೇ ಸಕಾರಾತ್ಮಕ ಸ್ಪಂದನೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಜೊತೆಗೆ ಬೌರಿಂಗ್ ಕ್ಲಬ್‌ನ ಕೆಲವರು ಇಲ್ಲಿ ವಿಲ್ಲಾ ಖರೀದಿ ಮಾಡುವ ಸಾಧ್ಯತೆಯೂ ಇದ್ದು, ಒಳ್ಳೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
ಶೀಘ್ರದಲ್ಲೇ ವಿಲ್ಲಾ ಮಾರಾಟ ಮೇಳ:ಮೂಲೆ ಮತ್ತು ಪ್ರಮುಖ ಪ್ರದೇಶದಲ್ಲಿರುವ ವಿಲ್ಲಾಗಳನ್ನುಇ-ಹರಾಜು ಮೂಲಕ ಮಾಡಲಾಗುವುದು. ಉಳಿದಂತ ವಿಲ್ಲಾಗಳನ್ನು ಮಾರಾಟ ಮಾಡಲು ವಿಲ್ಲಾ ಮಾರಾಟ ಮೇಳ ಆಯೋಜಿಸಲಾಗುವುದು. 3 ಬಿಎಚ್‌ಕೆ ಮತ್ತು 4 ಬಿಎಚ್‌ಕೆ ಹಾಗೂ 1 ಬಿಎಚ್‌ಕೆಯ 320 ಮನೆಗಳಿದ್ದು ದರ ನಿಗದಿಪಡಿಸಿ ಮಾರಾಟಕ್ಕೆ ಸಜ್ಜುಗೊಳಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.