ಸಾರಾಂಶ
ಬೆಂಗಳೂರು : ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ’ ಯೋಜನೆಯನ್ನು ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದಿಸಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶಃ ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಎಂದು ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ನಗರದ ಜನದಟ್ಟಣೆ ಕಡಿಮೆ ಮಾಡಲು ಸರ್ಕಾರವು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ರಾಜ್ಯದಲ್ಲಿ ಆಕರ್ಷಕ ನಗರಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ. ಬೆಂಗಳೂರು ಸುತ್ತಮುತ್ತಲ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದರ ಭಾಗವಾಗಿ ಬಿಡದಿ ಸಮಗ್ರ ಉಪನಗರ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದರು.
2024ರ ಸೆಪ್ಟಂಬರ್‌ನಲ್ಲಿ ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಬಿಡದಿ ಹೋಬಳಿಯ 10 ಗ್ರಾಮಗಳ ಜೊತೆಗೆ ಹಾರೋಹಳ್ಳಿ ತಾಲೂಕು, ಹೋಬಳಿಯ ವಡೇರಹಳ್ಳಿ ಗ್ರಾಮಗಳ ಒಟ್ಟು ಸಾಗುವಳಿ ವಿಸ್ತೀರ್ಣ 6023 ಎಕರೆ ಹಾಗೂ "ಎ " ಖರಾಬು ವಿಸ್ತೀರ್ಣದ ಒಟ್ಟು 101.12 ಎಕರೆ ಮತ್ತು "ಬಿ " ಖರಾಬು 2818.39 ಎಕರೆ ಪೈಕಿ 722.31 ಎಕರೆ ಪ್ರದೇಶ ಸೇರಿ ಒಟ್ಟು 8,943.35 ಎಕರೆ ಪ್ರದೇಶದಲ್ಲಿ ಈಗಾಗಲೇ ಸಂಬಂಧಿಸಿದ ಗ್ರಾ.ಪಂಗಳಿಂದ ಖಾತೆ ತೆರೆದಿರುವ ನಿವೇಶಗಳನ್ನು ಒಳಗೊಂಡಂತೆ, ಹ್ಯಾಮ್‌ಲೆಟ್, ಸೆಟಲ್ಮೆಂಟ್, ಶಾಲೆ/ಕಾಲೇಜು, ಕೆರೆ, ಸ್ಮಶಾನ ಮತ್ತಿತರೆ ಸಾರ್ವಜನಿಕ ಉದ್ದೇಶಿತ ಜಾಗಗಳನ್ನು ಯಥಾವತ್ತಾಗಿ ಕಾಯ್ದಿರಿಸಿ ಉಳಿದ ಪ್ರದೇಶಕ್ಕೆ ಪ್ರಸ್ತುತ ಪ್ರಥಮ ಹಂತದಲ್ಲಿ ಬಿಡದಿ ಸಮಗ್ರ ಉಪನಗರ ಅಭಿವೃದ್ಧಿ ಯೋಜನೆಗೆ ಪ್ರಾಥಮಿಕ ಪ್ರಕ್ರಿಯೆಗಳನ್ನು ಕೈಗೊಳ್ಳಲು ತಾತ್ವಿಕ ಅನುಮೋದನೆಯನ್ನು ಸಂಪುಟ ನೀಡಿದೆ ಎಂದು ವಿವರಿಸಿದರು.
8032 ಎಕರೆ ಭೂಸ್ವಾಧೀನಕ್ಕೆ ಅನುಮೋದನೆ:
ಬಿಎಂಆರ್ ಪ್ರದೇಶದ ಎಲ್ಲಾ ಟೌನ್ಶಿಪ್ ಅಭಿವೃದ್ಧಿ ಚಟುವಟಿಕೆಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಾರ್ಯಗತಗೊಳಿಸುತ್ತದೆ. ಯೋಜನೆಗೆ 10 ಗ್ರಾಮಗಳ 8943 ಎಕರೆ ಪೈಕಿ 8032.37 ಎಕರೆ ಪ್ರದೇಶವನ್ನು ಈ ಪ್ರಾಧಿಕಾರದಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಯಮಾನುಸಾರ ಕೈಗೆತ್ತಿಕೊಳ್ಳಲು ಹಾಗೂ 2009ರ ಭೂ ಹಂಚಿಕೆ ಮಾದರಿಯಲ್ಲಿ (ಶೇ.35-50 ಅಭಿವೃದ್ಧಿ ಹೊಂದಿದ ಭೂಮಿಯನ್ನು ಪರಿಹಾರವಾಗಿ) ಪರಿಹಾರ ನೀಡುವ ಮೂಲಕ ಭೂಸ್ವಾಧೀನ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಇನ್ನು ಈಗಾಗಲೇ ಕೆಐಎಡಿಬಿಯಿಂದ ಭೂಸ್ವಾಧೀನಪಡಿಸಿಕೊಂಡಿರುವ 910 ಕೆರೆ ಜಾಗವನ್ನು ಹೊರತುಪಡಿಸಿ ಯೋಜನೆ ಕೈಗೊಳ್ಳಬೇಕು. ಸಮಗ್ರ ಉಪನಗರ ಯೋಜನೆಗಳ ಅನುಷ್ಠಾನಕ್ಕಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರ, ಇಲಾಖೆ ಮತ್ತು ಸಂಸ್ಥೆಗಳನ್ನೊಳಗೊಂಡಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬೇಕು. ಜಾಗತಿಕ ಟೆಂಡರ್ ಮೂಲಕ ಈ ಯೋಜನೆಯನ್ನು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ವರ್ಕ್ ಲೈವ್ ಪ್ಲೇ ಪರಿಕಲ್ಪನೆಯಲ್ಲಿ ಟೌನ್‌ಶಿಪ್‌ಅನ್ನು ವಿನ್ಯಾಸಗೊಳಿಸಲು ಮತ್ತು ಯೋಜಿಸಲು ಅರ್ಹ ಸಂಸ್ಥೆಯನ್ನು ನೇಮಿಸಲು ಸಂಪುಟದಲ್ಲಿ ಅನುಮೋದನೆ ದೊರಕಿದೆ ಎಂದರು.