ತುಮಕೂರಿಗೆ ಮೆಟ್ರೋ ವಿಸ್ತರಿಸುವ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಿನ ಐದು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಪಡೆಯಲಿದೆ. ಸದ್ಯ ನಮ್ಮ ಮೆಟ್ರೋ ಹಸಿರು ಮಾರ್ಗದ (33.5 ಕಿ.ಮೀ.) ಮಾದಾವರ (ಬಿಐಇಸಿ) ನಿಲ್ದಾಣದಲ್ಲಿ ಕೊನೆಗೊಳ್ಳುತ್ತಿದೆ.

ಮಯೂರ್‌ ಹೆಗಡೆ

 ಬೆಂಗಳೂರು : ತುಮಕೂರಿಗೆ ಮೆಟ್ರೋ ವಿಸ್ತರಿಸುವ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಿನ ಐದು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಪಡೆಯಲಿದೆ.

ಸದ್ಯ ನಮ್ಮ ಮೆಟ್ರೋ ಹಸಿರು ಮಾರ್ಗದ (33.5 ಕಿ.ಮೀ.) ಮಾದಾವರ (ಬಿಐಇಸಿ) ನಿಲ್ದಾಣದಲ್ಲಿ ಕೊನೆಗೊಳ್ಳುತ್ತಿದೆ. ಅಲ್ಲಿಂದ 59.60 ಕಿ.ಮೀ. ಮುಂದುವರಿದು ತುಮಕೂರಿನವರೆಗೆ (ಶಿರಾ ಗೇಟ್‌) ಮೆಟ್ರೋ ಕೊಂಡೊಯ್ಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಸೆಪ್ಟೆಂಬರ್‌ನಲ್ಲಿ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಈ ವರದಿ ಸಕಾರಾತ್ಮಕವಾಗಿ ಬಂದ ಹಿನ್ನೆಲೆಯಲ್ಲಿ ಯೋಜನೆಯ ಪ್ರಮುಖ ಘಟ್ಟ ಡಿಪಿಆರ್‌ ತಯಾರಿಕೆಗೆ ಬಿಎಂಆರ್‌ಸಿಎಲ್‌ ಮುಂದಾಗಿದೆ.

ಹೈದ್ರಾಬಾದ್‌ ಮೂಲದ ಆರ್‌ವಿ ಅಸೋಸಿಯೆಟ್ಸ್ ಕಂಪನಿ ಡಿಪಿಆರ್‌ ತಯಾರಿಕೆಯ ಟೆಂಡರ್‌ ಪಡೆದಿದೆ. ₹1.26 ಕೋಟಿ (₹1,26,48,550) ಮೊತ್ತದಲ್ಲಿ ಕಂಪನಿ ವಿಸ್ತೃತ ಯೋಜನಾ ವರದಿ ತಯಾರಿಸಬೇಕಿದೆ. ನೆಲಮಂಗಲ, ದಾಬಸ್‌ಪೇಟೆ, ಕ್ಯಾತಸಂದ್ರ ಮೂಲಕ ತುಮಕೂರುವರೆಗೆ ಮೆಟ್ರೋ ಸಾಗುವ ಯೋಜನಾ ವರದಿ ಮುಂದಿನ ಐದು ತಿಂಗಳಲ್ಲಿ ಬಿಎಂಆರ್‌ಸಿಎಲ್‌ಗೆ ಕೊಡಲಿದೆ.

ಡಿಪಿಆರ್ ವೇಳೆ ಮೆಟ್ರೋ ಮಾರ್ಗದ ನಿಖರ ಸ್ಥಳ, ಪಿಲ್ಲರ್‌ ನಿರ್ಮಾಣ, ಭೂಸ್ವಾಧೀನ, ಕಟಾವಾಗಬೇಕಾದ ಮರ, ನಿಲ್ದಾಣದ ಸ್ವರೂಪದ ಬಗ್ಗೆ ಅಧ್ಯಯನ ಆಗಲಿದೆ. ಭವಿಷ್ಯದಲ್ಲಿ ಇಂಟರ್‌ಚೇಂಜ್‌ಗೆ ಅನುಕೂಲ, ಮೆಟ್ರೋ ರೈಲುಗಳು ಎಷ್ಟು ಬೇಕು ಎಂಬುದು ಸೇರಿ ಇತರೆ ವಿವರಗಳು ಇರಲಿವೆ.

ಮೊದಲ ಅಂತರ್‌ಜಿಲ್ಲೆ ಸಂಪರ್ಕ:

ವರದಿ ಆಧರಿಸಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿ ಯೋಜನೆಗೆ ಅಂತಿಮ ಒಪ್ಪಿಗೆ ಸೂಚಿಸಿದಲ್ಲಿ ಅನುದಾನ ಬಿಡುಗಡೆ ಮಾಡಿದರೆ ಕಾಮಗಾರಿ ಆರಂಭವಾಗಲಿದೆ. ಕಾರ್ಯಸಾಧ್ಯತಾ ವರದಿ ಪ್ರಕಾರ ಇದು ಎರಡುಗಂಟೆ ಸುದೀರ್ಘ ಅವಧಿಯ ಮೆಟ್ರೋ ಮಾರ್ಗವಾಗಿರಲಿದೆ. ನೆಲಮಂಗಲ ಮತ್ತು ತುಮಕೂರುಗಳಲ್ಲಿ ಮೆಟ್ರೋ ಡಿಪೋಗಳನ್ನು ನಿರ್ಮಿಸುವುದಾಗಿ ತಿಳಿಸಲಾಗಿದೆ.

ಡಬಲ್‌ ಡೆಕ್ಕರ್‌?: ಮುಂದಿನ ಎಲ್ಲ ಮೆಟ್ರೋ ಯೋಜನೆಗಳಲ್ಲಿ ಸಾಧ್ಯವಿರುವಲ್ಲಿ ಡಬಲ್‌ ಡೆಕ್ಕರ್‌ (ಎಲಿವೇಟೆಡ್‌ ರಸ್ತೆ ಕಂ ಮೆಟ್ರೋ ಮಾರ್ಗ) ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಸದ್ಯ ಇಲ್ಲಿ ನಿರ್ಮಾಣ ಆಗುವ ನಿಲ್ದಾಣಗಳನ್ನು ಎಲಿವೇಟೆಡ್‌ ಎಂದು ಮಾತ್ರ ಬಿಎಂಆರ್‌ಸಿಎಲ್‌ ಹೇಳಿದೆ. ಡಿಪಿಆರ್‌ ಬಳಿಕವಷ್ಟೇ ಡಬಲ್‌ ಡೆಕ್ಕರ್‌ ಆಗಲಿದೆಯೇ ಎಂಬುದು ದೃಢಪಡಲಿದೆ. ಈಗಾಗಲೇ ಮುಂದಿನ ಕಿತ್ತಳೆ ಹಾಗೂ ಕೆಂಪು ಮೆಟ್ರೋ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

25 ನಿಲ್ದಾಣಗಳು: ಮಾದಾವರದಿಂದ ಮುಂದುವರಿದು, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಹಾಗೂ ಶಿರಾ ಗೇಟ್‌ನ ಬಳಿ ನಿಲ್ದಾಣ (ಸಂಭಾವ್ಯ) ನಿರ್ಮಿಸಲು ಪ್ರಾಥಮಿಕ ಹಂತದಲ್ಲಿ ಯೋಜಿಸಲಾಗಿದೆ. ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗುವಂತೆ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

₹20 ಸಾವಿರ ಕೋಟಿ:

ಖಾಸಗಿ-ಸಾರ್ವಜನಿಕ ಪಾಲುದಾರಿಕೆ ಮಾದರಿಯಲ್ಲಿ ಈ ಯೋಜನೆ ಜಾರಿಯಾದಲ್ಲಿ ₹20,650 ಕೋಟಿ ಬೇಕಾಗಬಹುದು. ಅಥವಾ ಕೇಂದ್ರ-ರಾಜ್ಯ ಸರ್ಕಾರ ಮತ್ತು ಸಾಲದ ರೂಪದಲ್ಲಿ ಯೋಜನೆ ಜಾರಿಗೆ ಮುಂದಾದರೆ ₹18,670 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎರಡರಲ್ಲಿ ಯಾವ ಮಾದರಿ ಸೂಕ್ತ ಎಂಬುದನ್ನು ಕೇಂದ್ರ ನಿರ್ಧರಿಸಲಿದೆ.