ಸಾರಾಂಶ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳ ಬಗ್ಗೆ ನಾಡಿನ 18 ಮಂದಿ ಪ್ರಗತಿಪರ ಮುಖಂಡರು, ಚಿಂತಕರು, ವಿದ್ವಾಂಸರು, ಪತ್ರಕರ್ತರು ಬರೆದಿರುವ ಚಿಂತನಶೀಲ ಲೇಖನಗಳ ಸಂಕಲನ.
ಮೈಸೂರು : ಗ್ಯಾರಂಟಿ ಯೋಜನೆಗಳು- ಬಡವರ ಸುರಕ್ಷತೆ ಮತ್ತು ಕಲ್ಯಾಣ ಕೃತಿಯನ್ನು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ. ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಡಾ.ಡಿ. ಶ್ರೀನಿವಾಸ ಮಣಗಳ್ಳಿ ಸಂಪಾದಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳ ಬಗ್ಗೆ ನಾಡಿನ ವಿವಿಧ ಭಾಗಗಳ 18 ಮಂದಿ ಪ್ರಗತಿಪರ ಮುಖಂಡರು, ಚಿಂತಕರು, ವಿದ್ವಾಂಸರು, ಪತ್ರಕರ್ತರು ಬರೆದಿರುವ ಚಿಂತನಶೀಲ ಲೇಖನಗಳು ಇಲ್ಲಿವೆ.
ಪ್ರೊ.ಆರ್.ಇಂದಿರಾ ಅವರು ಉಚಿತ ಬಸ್ ಪ್ರಯಾಣ ಮಹಿಳೆಯರ ಉನ್ನತಿಗೆ ಹಾದಿ ಎಂದಿದ್ದಾರೆ.
ಕಲ್ಯಾಣ ರಾಜ್ಯ ಪರಿಕಲ್ಪನೆಯ ಕರ್ನಾಟಕ ಸರ್ಕಾರದ ಐದು ಯೋಜನೆಗಳು ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ, ಬಣ್ಣಿಸಿದ್ದಾರೆ. ಇವು ಬಿಟ್ಟಿ ಭಾಗ್ಯಗಳಲ್ಲಃ ಭರವಸೆಯ ಹೆಜ್ಜೆಗಳು ಎಂಬುದು ಸನತ್‌ಕುಮಾರ್ ಬೆಳಗಲಿ ಅವರ ಅಭಿಮತ.
ಉಚಿತ ಸವಲತ್ತುಗಳು ವಂಚಿತ ಸಮುದಾಯಗಳ ಸಾಂವಿಧಾನಿಕ ಹಕ್ಕು ಎಂದು ನಾ. ದಿವಾಕರ ಪ್ರತಿಪಾದಿಸಿದ್ದಾರೆ. ಹೊರೆಯಲ್ಲ, ಇದೊಂದು ಪ್ರಯೋಗ ಎಂದು ಎ. ನಾರಾಯಣ, ಕಲ್ಯಾಣ ರಾಜ್ಯದ ಸಾಧನವಾಗಿರುವ ಸವಲತ್ತುಗಳು ಎಂದು ಡಾ.ಕಿರಣ್ ಎಂ. ಗಾಜನೂರು, ರಾಜ್ಯದ ಆರ್ಥಿಕತೆಯನ್ನು ಗಟ್ಟಿ ಮಾಡುವ ಗ್ಯಾರಂಟಿಗಳು ಎಂದು ವಿಕಾಸ್ ಆರ್. ಮೌರ್ಯ ವಿಶ್ಲೇಷಿಸಿದ್ದಾರೆ.
ಸಮಾಜ ಕಲ್ಯಾಣ ಯೋಜನೆಗಳು ಮತ್ತು ಸಂವಿಧಾನದ ಆಶಯಗಳು ಕುರಿತು ರಾಜೇಂದ್ರ ಚೆನ್ನಿ, ಐದು ಗ್ಯಾರಂಟಿಗಳ ಆರ್ಥಿಕ ಮತ್ತು ರಾಜಕೀಯ ಆಯಾಮಗಳು ಕುರಿತು ಪ್ರೊ.ಟಿ.ಆರ್. ಚಂದ್ರಶೇಖರ್, ಉಚಿತ ಸವಲತ್ತುಗಳ ರಾಜಕೀಯ ಕುರಿತು ಪ್ರೊ.ಎಂ. ಚಂದ್ರ ಪೂಜಾರಿ, ಜನ ಕಲ್ಯಾಣ ಯೋಜನೆಗಳು ಮತ್ತು ಪ್ರಭುತ್ವದ ಉತ್ತರದಾಯಿತ್ವ ಕುರಿತು ಬಿ. ಶ್ರೀಪಾದ ಭಟ್, ಅನ್ನದೇವರ ಕನಸು ಮತ್ತು ವಿಕೃತ ಮನಸುಗಳು ಕುರಿತು ಡಿ. ಉಮಾಪತಿ, ಸಾಮುದಾಯಿಕ ಸಬಲೀಕರಣ ಯೋಜನೆಯ ಸುತ್ತ ಬಡವರನ್ನು ಹಂಗಿಸುವ ಮಾತುಗಳು ಕುರಿತು ಡಾ. ಅಪ್ಪಗೆರೆ ಸೋಮಶೇಖರ್, ಕಲ್ಯಾಣ ಕಾರ್ಯಕ್ರಮಗಳುಃ ಅಭಿವೃದ್ಧಿ ಪರವೋ, ಹಕ್ಕಿನ ಪರವೋ ಕುರಿತು ಡಾ.ವಾಸು,
ಉಚಿತ ಭಾಗ್ಯ ಕುರಿತು ಡಾ.ಎಚ್.ಎಸ್. ಅನುಪಮಾ, ಶಕ್ತಿ ಯೋಜನೆ ಕುರಿತು ಸದಾನಂದ ಗಂಗನಬೀಡು, ಉಚಿತ ನಡಿಗೆ ಮಹಿಳಾ ಸಬಲೀಕರಣದೆಡೆಗೆ ಕುರಿತು ಡಾ.ಡಿ. ಶ್ರೀನಿವಾಸ ಮಣಗಳ್ಳಿ, ಪಂಚ ಗ್ಯಾರಂಟಿಗಳು ಮತ್ತು ನವ ಉದಾರೀಕರಣ ಕುರಿತು ಟಿ.ಎಲ್. ಕೃಷ್ಣೇಗೌಡ ಅವರ ಲೇಖನಗಳು ಇಲ್ಲಿವೆ.
ಅಸಮಾನತೆ, ಶೋಷಣೆಯಿಂದ ಕೂಡಿರುವ ದೇಶದಲ್ಲಿ ಈ ರೀತಿ ಯೋಜನೆಗಳು ಅನಿವಾರ್ಯ ಎಂಬುದನ್ನು ಪ್ರತಿಯೊಂದು ಲೇಖನದಲ್ಲಿಯೂ ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಲಾಗಿದೆ. ಆ ಮೂಲಕ ಈ ಯೋಜನೆಗಳನ್ನು ವಿರೋಧಿಸುತ್ತಿರುವವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗಿದೆ. ಇದಲ್ಲದೇ ಈ ಯೋಜನೆಗಳಿಂದ ಸಾಮಾಜಿಕ ನ್ಯಾಯ ದೊರೆತು, ಬಡವರು, ಮಹಿಳೆಯರು ಪ್ರಗತಿಯಡೆಗೆ ಮುನ್ನಡೆಯಲು ಸಾಧ್ಯವಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗಿದೆ. ಪಂಚ ಗ್ಯಾರಂಟಿಗಳು ಒಂದು ವರ್ಷ ಪೂರೈಸಿ, ಮುನ್ನಡೆಯುತ್ತಿರುವಾಗ ಪರ- ವಿರೋಧ ಚರ್ಚೆಗಳು ನಡೆಯುತ್ತಿರುವಾಗ ಡಾ.ಡಿ. ಶ್ರೀನಿವಾಸ ಮಣಗಳ್ಳಿ ಅವರು ನಾಡಿನ ಪ್ರಬುದ್ಧ ಚಿಂತಕರನ್ನು ಸಂಪರ್ಕಿಸಿ, ಲೇಖನಗಳನ್ನು ಬರೆಸಿ, ಈ ಕೃತಿಯನ್ನು ಪ್ರಕಟಿಸಿರುವುದು ವಿಶೇಷ.
ಮೈಸೂರಿನ ವಿಭ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ನಿವೃತ್ತ ಪ್ರಾಧ್ಯಾಪಕ ಮುಜಾಫರ್ ಅಸ್ಸಾದಿ ಮುನ್ನುಡಿ, ಬಿ.ಪಿ. ಮಹೇಶಚಂದ್ರಗುರು ಅವರ ಆಶಯ ನುಡಿ, ತುಮಕೂರು ವಿವಿ ಪ್ರಾಧ್ಯಾಪಕ ಬಿ. ರಮೇಶ್ ಅವರ ಬೆನ್ನುಡಿ ಇದೆ. ಆಸಕ್ತರು ಡಾ.ಡಿ. ಶ್ರೀನಿವಾಸ ಮಣಗಳ್ಳಿ, ಮೊ.99802 90500 ಸಂಪರ್ಕಿಸಬಹುದು.