ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರವೇ ಅಂತಿಮ

| Published : Nov 04 2023, 12:30 AM IST

ಸಾರಾಂಶ

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರವೇ ಅಂತಿಮ ಹೊರತು ಮುಖಂಡರ ಹೇಳಿಕೆ ಅಪ್ರಸ್ತುತ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಮುಖಂಡರ ಹೇಳಿಕೆ ಅಪ್ರಸ್ತುತ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕನ್ನಡಪ್ರಭ ವಾರ್ತೆ ಮಳವಳ್ಳಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರವೇ ಅಂತಿಮ ಹೊರತು ಮುಖಂಡರ ಹೇಳಿಕೆ ಅಪ್ರಸ್ತುತ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖಂಡರ ಒಲೈಕೆಗಾಗಿ ಮಾತನಾಡುವುದು ಅವರ ವಾಕ್ ಸ್ವಾತಂತ್ರ್ಯವಾಗಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಯಾರು ಏನೇ ಹೇಳಿಕೆ ನೀಡಿದರೂ ಅದು ನಡೆಯುವುದಿಲ್ಲ. ನನ್ನ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿದಾಡುತ್ತಿರುವುದರಿಂದ ಹೈಕಮಾಡ್ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದರಿಂದ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಸದ್ಯಕ್ಕೆ ಅವಶ್ಯಕತೆ ಇಲ್ಲ. ಇಲ್ಲಿ ಏನೇ ಮಾತನಾಡಿದರೂ ವ್ಯರ್ಥ. ಯಾರೇ ಆಗಲಿ ಮಧ್ಯಂತರ ಹೇಳಿಕೆ ಕೊಡುವವರಿಗೆ ಯೋಗ್ಯತೆನೂ ಇಲ್ಲ ಅರ್ಹತೆನೂ ಇಲ್ಲ ಎಂದು ಕಿಡಿಕಾರಿದರು. ಸಚಿವರಾಗಲಿ, ಶಾಸಕರಾಗಲಿ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಸುಪ್ರಿಂ. ಹೈಕಮಾಂಡ್ ಹೇಳಿದ ರೀತಿಯಲ್ಲಿ ಎಲ್ಲರು ತಲೆ ಬಾಗಬೇಕು. ಇಲ್ಲಿ ಯಾರು ಹೆಚ್ಚು, ಕಮ್ಮಿ, ಓಲೈಕೆ ಎನ್ನುವುದು ಇಲ್ಲ. ನಮಗೆ ಒಬ್ಬ ನಾಯಕ ಇಷ್ಟ ಆಗಬಹುದು, ಮತ್ತೊಬ್ಬರು ಇಷ್ಟ ಆಗದೇ ಇರಬಹುದು. ಪಕ್ಷ ನಮ್ಮ ತಾಯಿ ಇದ್ದಂತೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು. ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದ ಬಿಜೆಪಿ ಪಕ್ಷದವರು ಗೊಂದಲವನ್ನು ಸೃಷ್ಠಿಸುತ್ತಿದ್ದಾರೆ. ನಾನು ಕಾಂಗ್ರೆಸ್‌ನ ಶಿಸ್ತಿಯ ನಾಯಕ. ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿಯವರ ಹತ್ತಿರದಲ್ಲಿದ್ದು, ರಾಜೀವ್‌ಗಾಂಧಿಯವರ ಒಡನಾಟದಲ್ಲಿ ಭಾಗಿಯಾಗಿದ್ದೇನು ಎಂದರು. ಇಂದಿರಾಗಾಂಧಿ ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಕೆಲವು ದಿನ ಊಟವನ್ನೇ ಬಿಟ್ಟಿದ್ದೇ. ಕಾಂಗ್ರೆಸ್ ನಲ್ಲಿ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಕಾಂಗ್ರೆಸ್‌ನ ನಿಷ್ಠೆ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಸಿಗಲಿದೆ. ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ ಹಾಗೂ ಬಡವರು ಒಂದಾಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ ಎಂದು ಹೇಳಿದರು. -------------- 3ಕೆಎಂಎನ್ ಡಿ26 ಪಿ.ಎಂ.ನರೇಂದ್ರಸ್ವಾಮಿ