'ಇದೀಗ ಸ್ವ- ಉದ್ಯೋಗಿಗಳಿಗೆ ಸುಲಭವಾಗಿ ಗೃಹ ಸಾಲ ಲಭ್ಯ'

| N/A | Published : Jun 08 2025, 02:44 AM IST / Updated: Jun 08 2025, 04:46 AM IST

'ಇದೀಗ ಸ್ವ- ಉದ್ಯೋಗಿಗಳಿಗೆ ಸುಲಭವಾಗಿ ಗೃಹ ಸಾಲ ಲಭ್ಯ'
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯವಾಗಿ ಸ್ವ-ಉದ್ಯೋಗ ಮಾಡುವವರಿಗೆ ಗೃಹ ಸಾಲ ದೊರೆಯುವುದು ಬಹಳ ಕಷ್ಟಕರವಾಗಿರುತ್ತದೆ. ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ನ ಹೌಸಿಂಗ್ ಫೈನಾನ್ಸ್ ವಿಭಾಗದ ಬಿಸಿನೆಸ್ ಹೆಡ್ ಮನು ಸಿಂಗ್ ವಿಶೇಷ ಲೇಖನ ಬರೆದಿದ್ದಾರೆ.

ಸ್ವಯಂ ಉದ್ಯೋಗ ಈಗ ವೃತ್ತಿ ಆಯ್ಕೆಯಾಗಿ ಮಾತ್ರವೇ ಉಳಿದಿಲ್ಲ; ಬದುಕಿನ ಆಯ್ಕೆಯಾಗಿ ಹೋಗಿದೆ. ಬಹಳಷ್ಟು ಮಂದಿ ಸ್ವ ಉದ್ಯೋಗಿಯಾಗಲು ಮನಸ್ಸು ಮಾಡುತ್ತಿದ್ದಾರೆ. ತನಗೆ ತಾನೇ ಬಾಸ್ ಆಗಲು ಇಚ್ಛಿಸುತ್ತಿದ್ದಾರೆ. 2023-24ರಲ್ಲಿ ನಡೆದ ಒಂದು ಆರ್ಥಿಕ ಸಮೀಕ್ಷೆಯ ಪ್ರಕಾರ ನಮ್ಮ ಉದ್ಯೋಗಿಗಳ ಸಮೂಹದ ಶೇ.58.4ರಷ್ಟು ಮಂದಿ ಈಗಾಗಲೇ ಸ್ವಯಂ ಉದ್ಯೋಗ ಆರಂಭಿಸಿದ್ದಾರೆ. ಈ ಲೆಕ್ಕಾಚಾರವು ತಮಗೆ ಬೇಕಾದಂತೆ ಬದುಕುವ ಬದುಕಿನ ಕಡೆಗೆ ಯುವ ಸಮೂಹದ ಆಸಕ್ತಿಯನ್ನು ತೋರಿಸುತ್ತದೆ.

ಸ್ವಯಂ ಉದ್ಯೋಗಿಗಳು ದೇಶದ ಒಟ್ಟು ಜಿಡಿಪಿಗೆ ಶೇ.30 ಮತ್ತು ರಫ್ತು ವಿಭಾಗಕ್ಕೆ ಶೇ.40ಕ್ಕೂ ಹೆಚ್ಚು ಕೊಡುಗೆ ನೀಡುತ್ತಾರೆ ಎಂದು ಲೆಕ್ಕ ಹೇಳುತ್ತದೆ. ಆದರೆ ಉದ್ಯಮಿಗಳಿಂದ ಹಿಡಿದು ಫ್ರೀಲಾನ್ಸರ್‌ ಗಳವರೆಗೆ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್ಎಂಇ) ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರಿಗಳನ್ನೂ ಒಳಗೊಂಡ ಸ್ವಯಂ ಉದ್ಯೋಗಿಗಳು ಗೃಹ ಸಾಲ ಪಡೆಯುವಲ್ಲಿ ಮಾತ್ರ ಅಡೆತಡೆಗಳನ್ನು ಎದುರಿಸುತ್ತಾರೆ. ಕಾರಣ ಏನ್ ಗೊತ್ತೇ? ಅವರಿಗೆ ಅನಿಯಮಿತ ಆದಾಯ ದೊರೆಯುತ್ತದೆ ಮತ್ತು ಪ್ರಮಾಣಿತವಲ್ಲದ ದಾಖಲೆಗಳನ್ನು ಕೊಡುತ್ತಾರೆ ಎಂಬುದು. ನಮ್ಮ ದೇಶದ ಸಾಂಪ್ರದಾಯಿಕ ಸಾಲದಾತರು ಸ್ಥಿರ ಮತ್ತು ವಿಶ್ವಾಸಾರ್ಹ ಆದಾಯ ದೊರಕುವವರಿಗೆ ಮಾತ್ರ ಆದ್ಯತೆ ನೀಡುತ್ತಾರೆ. ಸೃಜನಶೀಲ ಅಥವಾ ಯೋಜನೆ ಆಧರಿತವಾಗಿ ಕೆಲಸ ಮಾಡುವವರಿಗೆ ಸಾಲ ನೀಡಲು ಹಿಂಜರಿಯುತ್ತಾರೆ.

ಇದೀಗ ಕೋಟಕ್ ಬ್ಯಾಂಕ್ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ. ಸಾಲಗಾರರ ನಿಜವಾದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮುಂದಾಗಿದೆ. ಅಗತ್ಯ ಬಿದ್ದರೆ ಸಂಬಳದ ಉದ್ಯೋಗದ ಆದಾಯದ ದಾಖಲೆಯನ್ನು ಮೀರಿ ಸಾಲ ನೀಡುತ್ತದೆ. ಜೊತೆಗೆ ಗ್ರಾಹಕರ ಕನಸುಗಳನ್ನು ಸಾಕಾರಗೊಳಿಸುವ ಕಸ್ಟಮೈಸ್ಡ್ ಗೃಹ ಸಾಲ ಉತ್ಪನ್ನಗಳನ್ನು ಒದಗಿಸುತ್ತಿದೆ. 

ಈ ಸಾಲಗಳು   ಸಿಎ, ಆರ್ಕಿಟೆಕ್ಟ್‌ ಗಳು, ವೈದ್ಯರು ಮುಂತಾದ ವೃತ್ತಿಪರರಿಗೆ ಮತ್ತು ವ್ಯಾಪಾರಿಗಳು, ಗುತ್ತಿಗೆದಾರರು, ವಿಮಾ ಏಜೆಂಟ್‌ ಗಳಂತಹ ಸ್ವಂತ ವ್ಯವಹಾರ ನಡೆಸುವವರಿಗೆ ಲಭ್ಯವಿದೆ. ಕೋಟಕ್‌ ನಂತಹ ಬ್ಯಾಂಕ್‌ ಗಳು ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತವೆ. ಉದಾಹರಣೆಗೆ ಗೃಹ ಸಾಲ ಪಡೆಯುವ ಗ್ರಾಹಕರ ಸುರಕ್ಷತೆಗಾಗಿ ಭೂಮಿ ಮತ್ತು ಬಿಲ್ಡರ್‌ನ ದಾಖಲೆಗಳನ್ನು ಬ್ಯಾಂಕ್ ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತದೆ.

ಸ್ವಯಂ ಉದ್ಯೋಗಿಗಳು ಗೃಹ ಸಾಲ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಈ ಕೆಳಗೆ ನೋಡೋಣ:

1. ಸಹ-ಅರ್ಜಿದಾರ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್‌:

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಇನ್ನೊಬ್ಬ ವ್ಯಕ್ತಿಯನ್ನು ಅಂದರೆ ಇನ್ನೊಬ್ಬ ಕುಟುಂಬ ಸದಸ್ಯರನ್ನು ಸಹ ಸಾಲಕ್ಕೆ ಅರ್ಜಿದಾರರನ್ನಾಗಿ ಸೇರಿಸಬಹುದು. ಇದರಿಂದ ಸಾಲ ಪಡೆಯುವ ನಿಮ್ಮ ಅರ್ಹತೆ ಜಾಸ್ತಿಯಾಗುತ್ತದೆ. ಈ ಇಬ್ಬರಿಗೂ ಸಾಲ ಮರುಪಾವತಿಯ ಹೊಣೆ ಇರುತ್ತದೆ. ಅಲ್ಲದೆ, ಸಾಲಕ್ಕೆ ಜಾಮೀನುದಾರರನ್ನು ಒದಗಿಸುವುದರಿಂದ ಸಾಲ ಅನುಮೋದನೆಯ ಪ್ರಕ್ರಿಯೆ ಸುಗಮವಾಗುತ್ತದೆ. ಇಬ್ಬರೂ ಅರ್ಜಿದಾರರಿಗೆ ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ತ್ವರಿತ ಅನುಮೋದನೆ, ಉತ್ತಮ ಬಡ್ಡಿದರ ಮತ್ತು ಶೀಘ್ರ ಸಾಲ ವಿತರಣೆ ಲಭ್ಯವಾಗುತ್ತದೆ. ಬ್ಯಾಂಕ್‌ ಗಳು ನಿಮ್ಮ ಹಿಂದಿನ ಮತ್ತು ಪ್ರಸ್ತುತ ಸಾಲಗಳನ್ನು ಪರಿಶೀಲಿಸಿ ನಿಮ್ಮ ಅರ್ಹತೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸುತ್ತವೆ.

2. ವಯಸ್ಸು, ಶಿಕ್ಷಣ, ಆದಾಯ – ಎಲ್ಲವೂ ಮುಖ್ಯ:

ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಲು ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್‌ ಗಳು ಮತ್ತು ಕನಿಷ್ಠ ಎರಡು ವರ್ಷಗಳ ವ್ಯಾಪಾರದ ಲಾಭ- ನಷ್ಟ ಸ್ಟೇಟ್ ಮೆಂಟ್ ಗಳು ಮತ್ತು ಬ್ಯಾಲೆನ್ಸ್ ಶೀಟ್‌ ಗಳನ್ನು (ಲೆಕ್ಕಪರಿಶೋಧಿತವಾದ) ಸಲ್ಲಿಸಬೇಕು. ನಿಮ್ಮ ವಯಸ್ಸು, ಶಿಕ್ಷಣ, ಅವಲಂಬಿತರ ಸಂಖ್ಯೆ, ಒಟ್ಟಾರೆ ಆರ್ಥಿಕ ಸ್ಥಿತಿ ಮತ್ತು ನಿಮ್ಮ ಉದ್ಯಮದ ಲಾಭದಾಯಕ ಸಾಮರ್ಥ್ಯ ಇವೆಲ್ಲವೂ ಮುಖ್ಯವಾಗುತ್ತದೆ. ಆದ್ದರಿಂದ, ದೊಡ್ಡ ಡೌನ್ ಪೇಮೆಂಟ್ ಮೂಲಕ ಸಾಲ ಪಡೆಯುವುದು ಸಾಲದಾತರಿಗೆ ವಿಶ್ವಾಸಾರ್ಹತೆ ಮೂಡಲು ಸಹಾಯವಾಗುತ್ತದೆ.

3. ಮರುಪಾವತಿ ಆಯ್ಕೆಗಳು:

ಸಾಲದ ಅವಧಿಯ ವಿಷಯದಲ್ಲಿ, ಫ್ಲೋಟಿಂಗ್ ದರಕ್ಕೆ ಗರಿಷ್ಠ 30 ವರ್ಷಗಳನ್ನು ಒದಗಿಸಲಾಗುತ್ತದೆ ಮತ್ತು ಸ್ಥಿರ ದರಕ್ಕೆ 20 ವರ್ಷಗಳವರೆಗಿನ ಸಾಲ ಲಭ್ಯವಿದೆ. ಸಾಲದ ಮೊತ್ತವು ಗ್ರಾಹಕರ ಮರುಪಾವತಿ ಸಾಮರ್ಥ್ಯ, ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಲದಾತರು ಲೋನ್ ನ ಭಾಗದ ಆಧಾರದ ಇಎಂಐ ವ್ಯವಸ್ಥೆ, ಆಕ್ಸಲರೇಟೆಡ್ ರೀಪೇಮೆಂಟ್, ಟೆಲಿಸ್ಕೋಪಿಕ್ ರೀಪೇಮೆಂಟ್ ಮುಂತಾದ ವಿವಿಧ ಮರುಪಾವತಿ ಆಯ್ಕೆಗಳನ್ನು ನೀಡುತ್ತಾರೆ. ಈ ಆಯ್ಕೆಯಗಳಲ್ಲಿ ಯಾವುದರಲ್ಲಿ ಹೆಚ್ಚು ಪ್ರಯೋಜನ ದೊರೆಯುತ್ತದೆಯೋ ಅದನ್ನು ಆರಿಸಿ.

4. ತೆರಿಗೆ ಪ್ರಯೋಜನಗಳು:

ಗೃಹ ಸಾಲವು 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 ಮತ್ತು ಸೆಕ್ಷನ್ 80C ಅಡಿಯಲ್ಲಿ ಬಡ್ಡಿ ಮತ್ತು ಮೂಲಧನದ ಮರುಪಾವತಿಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಮೂಲಕ ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಸ್ವಯಂ ಉದ್ಯೋಗಿಗಳ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಬ್ಯಾಂಕ್‌ ಗಳು ಭಾಗಶಃ ಅಥವಾ ಪೂರ್ಣ ಮುಂಗಡ ಪಾವತಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ನಿಮ್ಮ ವ್ಯಾಪಾರ ಉತ್ತಮವಾಗಿ ನಡೆಯುವ ಸಮಯದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಅರ್ಹತೆಯನ್ನು ತಿಳಿಯಲು ಆಸ್ತಿಯನ್ನು ಖರೀದಿಸುವ ಮೊದಲು ಸಾಲಕ್ಕೆ ಅರ್ಜಿ ಸಲ್ಲಿಸಿ.

ಗೃಹ ಸಾಲಗಳು ಸಾಮಾನ್ಯವಾಗಿ ಇತರ ಸಾಲಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ದೊರೆಯುತ್ತವೆ. ಈ ಅನುಕೂಲವನ್ನು ಬಳಸಿಕೊಂಡು, ಸ್ವಯಂ ಉದ್ಯೋಗಿಗಳು ದೀರ್ಘಾವಧಿಯಲ್ಲಿ ಗಣನೀಯ ಉಳಿತಾಯವನ್ನು ಮಾಡಬಹುದು. ಗೃಹ ಸಾಲದಲ್ಲಿ ಆಸ್ತಿಯನ್ನು ಅಡಮಾನ ಇಡುವುದರಿಂದ, ವ್ಯಾಪಾರವನ್ನು ಉಳಿಸಿಕೊಳ್ಳಲು ಅಗತ್ಯವಾದ ಹಣವನ್ನು ಖಾಲಿ ಮಾಡದೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಹಾಗಾಗಿ ಸ್ವಯಂ ಉದ್ಯೋಗಿಗಳು ನಿರಾಳವಾಗಿ ಈ ಗೃಹ ಸಾಲ ಆಯ್ಕೆ ಮಾಡಬಹುದಾಗಿದೆ.

Read more Articles on