ಯತ್ನಾಳ್‌ ಮತ್ತೆ ಮತ್ತೆ ಬಚಾವ್‌ ಆಗುತ್ತಿರುವುದು ಹೇಗೆ? ಪರ, ವಿರೋಧ ಹೈಕಮಾಂಡ್‌ನಲ್ಲಿ ಯಾರುಯಾರು?

| Published : Dec 08 2024, 12:05 PM IST

Basanagouda Patil Yatnal, BY Vijayendra
ಯತ್ನಾಳ್‌ ಮತ್ತೆ ಮತ್ತೆ ಬಚಾವ್‌ ಆಗುತ್ತಿರುವುದು ಹೇಗೆ? ಪರ, ವಿರೋಧ ಹೈಕಮಾಂಡ್‌ನಲ್ಲಿ ಯಾರುಯಾರು?
Share this Article
  • FB
  • TW
  • Linkdin
  • Email

ಸಾರಾಂಶ

ದಿಲ್ಲಿ ನಾಯಕರು ವಿಜಯೇಂದ್ರರನ್ನೂ ಬಿಟ್ಟು ಕೊಡುತ್ತಿಲ್ಲ. ಯತ್ನಾಳರನ್ನು ಹೊರಗೆ ಹಾಕುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ದಿಲ್ಲಿಯಲ್ಲಿ ಕುಳಿತ ಬಿಜೆಪಿ ಮದ್ದು ಅರೆಯುವ ನಾಯಕರಿಗೆ ಸಮಯ ಇಲ್ಲವೋ, ಮನಸ್ಸು ಇಲ್ಲವೋ 

ಬಿ.ವೈ. ವಿಜಯೇಂದ್ರ- ಬಸನಗೌಡ ಪಾಟೀಲ್ ಯತ್ನಾಳ್ ಪರ, ವಿರೋಧ ಹೈಕಮಾಂಡ್‌ನಲ್ಲಿ ಯಾರುಯಾರು?

ಪ್ರಶಾಂತ್ ನಾಥು  - ಏಷ್ಯಾನೆಟ್ ಸುವರ್ಣ ನ್ಯೂಸ್

ದಿಲ್ಲಿ ನಾಯಕರು ವಿಜಯೇಂದ್ರರನ್ನೂ ಬಿಟ್ಟು ಕೊಡುತ್ತಿಲ್ಲ. ಯತ್ನಾಳರನ್ನು ಹೊರಗೆ ಹಾಕುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ದಿಲ್ಲಿಯಲ್ಲಿ ಕುಳಿತ ಬಿಜೆಪಿ ಮದ್ದು ಅರೆಯುವ ನಾಯಕರಿಗೆ ಸಮಯ ಇಲ್ಲವೋ, ಮನಸ್ಸು ಇಲ್ಲವೋ ಅಥವಾ ಅಯ್ಯೋ ಬಿಡಿ ಈ ಕರ್ನಾಟಕ ಬಿಜೆಪಿಯನ್ನು ಏನು ಮಾಡಿದರು ರೀಪೇರಿ ಮಾಡಲು ಆಗುವುದಿಲ್ಲ ಅನ್ನುವ ನಿಷ್ಕರ್ಶೆಗೆ ಬಂದು ಬಿಟ್ಟಿದ್ದಾರೋ ಅರ್ಥ ಆಗುತ್ತಿಲ್ಲ

ಬಿಜೆಪಿ ಗಾಯಕ್ಕೆ ಮದ್ದು ಉಂಟಾ?

ಅದೇನೋ ಗೊತ್ತಿಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಪಾರ್ಟಿಗಳಲ್ಲಿ ಯಾದವಿ ಕಲಹ ಸದಾ ನಡೆಯುತ್ತಲೇ ಇರುತ್ತದೆ. ಕಿತ್ತಾಟ, ಬಂಡಾಯ, ವಿಘಟನೆಯಂಥ ಘಟನೆಗಳು ಹಿಂದೆ ಜನತಾ ಪಾರ್ಟಿ, ಜನತಾ ದಳ ಮತ್ತು ಈಗ ಭಾರತೀಯ ಜನತಾ ಪಾರ್ಟಿಯಲ್ಲಿನ ನಿತ್ಯದ ಗೋಳು. 1983ರಲ್ಲಿ ಹೆಗಡೆ - ದೇವೇಗೌಡರ ನಡುವೆ, 1994ರಲ್ಲಿ ಒಂದು ಕಡೆ ದೇವೇಗೌಡರು ಮತ್ತು ಸಿದ್ಧರಾಮಯ್ಯ ಇನ್ನೊಂದು ಕಡೆ ಜೆ.ಎಚ್. ಪಟೇಲರು ಮತ್ತು ರಾಮಕೃಷ್ಣ ಹೆಗಡೆ. 2006ರಲ್ಲಿ ದೇವೇಗೌಡರು, ಮತ್ತೊಂದು ಕಡೆ ಸಿದ್ಧರಾಮಯ್ಯ ಮರಳಿ 2009ರಲ್ಲಿ ಒಂದು ಕಡೆ ಯಡಿಯೂರಪ್ಪನವರು, ಇನ್ನೊಂದು ಕಡೆ ಅನಂತ ಕುಮಾರ... ಹೀಗೆ ಜಗಳ ನಿತ್ಯ ನೂತನ.

ಆದರೆ ಅ ಜಗಳಗಳಿಗೂ ಈಗಿನ ಬಿಜೆಪಿ ಜಗಳಕ್ಕೂ ಮೂಲ ವ್ಯತ್ಯಾಸ ಅಂದರೆ, ಆಗೆಲ್ಲ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಕುರ್ಚಿಗಾಗಿ, ಅಧಿಕಾರ ಹಂಚಿಕೆಗಾಗಿ ಮಹತ್ವಾಕಾಂಕ್ಷೆಗಾಗಿ ತಾಕಲಾಟ ನಡೆಯುತ್ತಿದ್ದವು. ಆದರೆ ಈಗ ಕುರ್ಚಿಯೂ ಇಲ್ಲ, ಅಧಿಕಾರವೂ ಇಲ್ಲ. ಹಾಗಿರುವಾಗ ಜೊತೆಗೆ ಕೆಲಸ ಮಾಡೋದು ದೂರ ಉಳಿಯಿತು, ಆದರೆ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳಲು ಕೂಡ ವಿಜಯೇಂದ್ರ ಆಗಲಿ ಬಸನಗೌಡ ಪಾಟೀಲ್ ಯತ್ನಾಳ ಆಗಲಿ ತಯಾರಿಲ್ಲದಿರುವಾಗ ಬಿಜೆಪಿ ಜಗಳ ಬಗೆ ಹರಿಸುವುದು ಸಾಧ್ಯ ಆಗುತ್ತಾ ಎನ್ನುವುದೇ ಕುತೂಹಲದ ಪ್ರಶ್ನೆ. ಮೇಲು ನೋಟಕ್ಕೆ ಇವತ್ತಿನ ಪ್ರಕಾರ ಬಿಜೆಪಿ ಜಗಳಕ್ಕೆ ಇರುವ ಒಂದೇ ಪರಿಹಾರ ಎಂದರೆ ಒಂದೋ ವಿಜಯೇಂದ್ರ ಕೈಯಲ್ಲಿ ಪಾರ್ಟಿ ಮುಂದುವರೆಯಬೇಕು, ಇಲ್ಲ ಅಂದರೆ ಯತ್ನಾಳ ಮತ್ತು ಗೆಳೆಯರ ಕೈಯಲ್ಲಿ ಪಾರ್ಟಿ ಕೊಡಬೇಕು. ಹೀಗೆ ಯಾರ ಜೊತೆ ಪೂರ್ತಿಯಾಗಿ ನಿಂತರೂ ಪಾರ್ಟಿ ಮೇಲಿನಿಂದ ಕೆಳಗೆ ಒಡೆದು ನಷ್ಟವಾಗಬಹುದೇ ಹೊರತು ಲಾಭ ಆಗಲು ಸಾಧ್ಯ ಇಲ್ಲ.

ಇದು ಸರಿಯಾಗಿ ಗೊತ್ತಿರುವುದರಿಂದಲೇ ಬಿಜೆಪಿ ದಿಲ್ಲಿ ನಾಯಕರು ಯಡಿಯೂರಪ್ಪ ಪುತ್ರ ವಿಜಯೇಂದ್ರರನ್ನು ಬಿಟ್ಟು ಕೊಡುತ್ತಿಲ್ಲ. ಇನ್ನೊಂದು ಕಡೆ 4 ಶೋಕಾಸ್ ನೋಟಿಸ್ ಕೊಟ್ಟರೂ ಕೂಡ ಯತ್ನಾಳರನ್ನು ಹೊರಗೆ ಹಾಕುತ್ತಿಲ್ಲ. ಇದರಲ್ಲಿ ಬಿಜೆಪಿ ಹೈಕಮಾಂಡ್‌ನದ್ದೂ ಒಂದು ತಪ್ಪು ಇದೆ. ಆಳವಾದ ಗಾಯಕ್ಕೆ ಬರೀ ಪಟ್ಟಿ ಹಚ್ಚಿದರೆ ಮಾಯವಾಗೋದಿಲ್ಲ, ಅದಕ್ಕೆ ಸರಿಯಾದ ಮದ್ದು ಮಾಡಬೇಕು. ದಿಲ್ಲಿಯಲ್ಲಿ ಕುಳಿತ ಬಿಜೆಪಿ ಮದ್ದು ಅರೆಯುವ ನಾಯಕರಿಗೆ ಸಮಯ ಇಲ್ಲವೋ, ಮನಸ್ಸು ಇಲ್ಲವೋ ಅಥವಾ ಅಯ್ಯೋ ಬಿಡಿ ಈ ಕರ್ನಾಟಕ ಬಿಜೆಪಿಯನ್ನು ಏನು ಮಾಡಿದರು ರಿಪೇರಿ ಮಾಡಲು ಆಗುವುದಿಲ್ಲ ಅನ್ನುವ ನಿಷ್ಕರ್ಶೆಗೆ ಬಂದು ಬಿಟ್ಟಿದ್ದಾರೋ ಅರ್ಥ ಆಗುತ್ತಿಲ್ಲ.

ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ

ಕರ್ನಾಟಕದ ಬಿಜೆಪಿ ಸ್ಪಷ್ಟವಾಗಿ ಒಡೆದು ಮೂರು ಹೋಳಾಗಿ ಬಿಟ್ಟಿದೆ. ಒಂದು ಧ್ರುವ ವಿಜಯೇಂದ್ರ ಕೈಯಲ್ಲಿ ಇದ್ದರೆ, ಇನ್ನೊಂದು ಧ್ರುವದಲ್ಲಿ ಯತ್ನಾಳರು. ಮಧ್ಯದ ಮೌನಿಗಳ ಗುಂಪಿನಲ್ಲಿ ಆರ್.ಅಶೋಕ್, ಪ್ರಹ್ಲಾದ ಜೋಶಿ. ಸೋಮಣ್ಣ, ಬೊಮ್ಮಾಯಿ, ಸಿ.ಟಿ.ರವಿ, ಡಾ.ಅಶ್ವಥ್ ನಾರಾಯಣ್‌, ಸುನೀಲ್‌ ಕುಮಾರ್‌, ಶೋಭಾ ಕರಂದ್ಲಾಜೆ ತರಹದ ನಾಯಕರು ಇದ್ದಾರೆ. ಈ ಮಧ್ಯದ ಗುಂಪಿಗೆ ಯತ್ನಾಳ್‌ ಬಗ್ಗೆ ಪ್ರೀತಿ ಏನು ಇಲ್ಲ; ಆದರೆ ಅನುಕಂಪ ಇದೆ. ಇನ್ನೊಂದೆಡೆ ವಿಜಯೇಂದ್ರ ನಾಯಕತ್ವದ ಬಗ್ಗೆ ವಿರೋಧವಿದೆ. ಆದರೆ ಯಾರ ಪರವೂ, ಯಾರ ವಿರುದ್ಧವೂ ಬಹಿರಂಗವಾಗಿ ಹೊರಗೆ ಬರಲು ಮನಸ್ಸಿಲ್ಲ. ಪದೇ ಪದೇ ಯತ್ನಾಳ್‌ ಏನೇ ಮಾತನಾಡಿ ಹೈಕಮಾಂಡ್ ಮುನಿಸಿಗೆ ಕಾರಣ ಆದಾಗಲು ಕೂಡ ಅಮಿತ್ ಶಾ ಮತ್ತು ನಡ್ದಾರ ಹತ್ತಿರ ಹೋಗಿ ಶೋಕಾಸ್‌ ನೋಟಿಸ್ ಕೊಡಿ, ಆದರೆ ದಯವಿಟ್ಟು ಯತ್ನಾಳ ಮೇಲೆ ಕ್ರಮ ತೆಗೆದುಕೊಳ್ಳಬೇಡಿ. ಪಾರ್ಟಿ ವಿಭಜನೆ ಆಗುತ್ತದೆ ನಾವು ಸಮಾಧಾನ ಮಾಡುತ್ತೇವೆ ಎಂದು ಯತ್ನಾಳರನ್ನು ಬಚಾವ್ ಮಾಡುತ್ತಿರುವುದೇ ಈ ನಡುವಿನ ಗುಂಪು.

ಈ ಬಾರಿಯು ಕೂಡ, ಕಳೆದ ಶುಕ್ರವಾರ ಪ್ರಹ್ಲಾದ ಜೋಶಿ ಮತ್ತು ರಾಘವೇಂದ್ರ ನೇತೃತ್ವದಲ್ಲಿ ಸಂಸದರು ಅಮಿತ್ ಶಾ ಭೇಟಿಗೆ ಹೋದಾಗ ‘ಯತ್ನಾಳ್‌ ಪದೇ ಪದೇ ಹಿಂಗೇ ಮಾತಾಡಿದರೆ ಪಾರ್ಟಿಯಲ್ಲಿ ಉಳಿಸಿಕೊಳ್ಳುವುದು ಹೇಗೆ? ವಿಜಯೇಂದ್ರ ರನ್ನು ಅಧ್ಯಕ್ಷ ಮಾಡಿದ್ದು ನಾವೇ. ಯತ್ನಾಳ್‌ ನಮ್ಮ ಕಡೆ ಬರುವುದು ಬಿಟ್ಟು ಮಾಧ್ಯಮಗಳಿಗೆ ಹೋದರೆ ಅದನ್ನು ಸಹಿಸೋದು ಹೇಗೆ’ ಎಂದು ಸಿಟ್ಟಾದಾಗ ಮರುದಿನ ನಡ್ದಾ ಭೇಟಿಗೆ ಹೋದ ಬೊಮ್ಮಾಯಿ, ಸೋಮಣ್ಣ, ‘ನೀವು ಏನಾದರೂ ವಿಪರೀತ ನಿರ್ಣಯ ತೆಗೆದುಕೊಂಡರೆ ಪಾರ್ಟಿ ಲಿಂಗಾಯಿತ ವೋಟ್ ಬ್ಯಾಂಕ್ ವಿಭಜನೆ ಆಗುತ್ತದೆ. ದಯವಿಟ್ಟು ಹಾಗೇ ಮಾಡಬೇಡಿ. ವಿಜಯೇಂದ್ರ ಯಡಿಯೂರಪ್ಪ ಅಲ್ಲ ಅನ್ನೋದು ಗೊತ್ತಿರಲಿ ಎಂದು ಖಾರವಾದ ಶಬ್ದಗಳಲ್ಲಿ ಹೇಳಿ, ನೀವು ಕೋರ್ ಕಮಿಟಿ ಪುನಾರಚನೆ ಮಾಡಿ ಸ್ವಲ್ಪ ಸರಿ ಆಗುತ್ತದೆ’ ಎಂದು ಹೇಳಿ ಬಂದಿದ್ದಾರೆ. ಆಗ ನಡ್ದಾ ‘ಯತ್ನಾಳ್‌ಗೆ ಮಾತು ಕಡಿಮೆ ಮಾಡಿ ಅಂತಾ ಹೇಳಿ, ಇಲ್ಲ ಅಂದರೆ ನಮ್ಮ ಬಳಿ ವಿಕಲ್ಪ ಏನಿದೆ’ ಎಂದು ಹೇಳಿ ಕಳುಹಿಸಿದ್ದಾರೆ. ದಿಲ್ಲಿಯಲ್ಲೂ ಕೂಡ ಅಮಿತ್ ಶಾ, ರಾಧಾ ಮೋಹನ ಅಗರ್‌ವಾಲ್‌ ವಿಜಯೇಂದ್ರ ಪರವಾಗಿ ಇದ್ದರೆ, ಸ್ಥಳೀಯ ಆರ್‌ಎಸ್‌ಎಸ್‌, ಜೆ.ಪಿ.ನಡ್ದಾ ಯತ್ನಾಳ್‌ ಉಚ್ಚಾಟನೆಗೆ ವಿರುದ್ಧ ಇರುವಂತೆ ಕಾಣುತ್ತಿದೆ. ಈ ಎರಡು ಅಭಿಪ್ರಾಯಗಳ ಕಾರಣದಿಂದಲೇ ಏನೋ ಯತ್ನಾಳ್‌ ಬಾರಿ ಬಾರಿ ಜೀವದಾನ ಪಡೆಯುತ್ತಿದ್ದಾರೆ ಅನ್ನಿಸುತ್ತದೆ.

ಯತ್ನಾಳ್‌ ಸ್ವಲ್ಪ ಸೈಲೆಂಟಾಗಿರಿ

ದಿಲ್ಲಿ ಸಾಕೇತ್ ನಲ್ಲಿರುವ ಸೈನಿಕ್ ಫಾರ್ಮ್ಸ್‌ ಮನೆಗೆ ಯತ್ನಾಳ ಮೊದಲು ತನ್ನೆಲ್ಲ ಗೆಳೆಯರ ಬಳಗವನ್ನು ಕರೆದುಕೊಂಡು ಬರುತ್ತೀನಿ ಎಂದಾಗ ಓಂ ಪಾಠಕ್‌, ಬೇಡ ಬೇಡ ನೋಟಿಸ್ ಕೊಟ್ಟಿದ್ದು ನಿಮಗೆ ಅಷ್ಟೇ. ಒಬ್ಬರೇ ಬನ್ನಿ ಎಂದು ಹೇಳಿದರಂತೆ. ಓಂ ಪಾಠಕ್‌ ಮನೆಗೆ ಹೋಗುತ್ತಲೇ ಯತ್ನಾಳ್‌, ಒಬ್ಬರು ಸುಪ್ರೀಂಕೋರ್ಟ್ ವಕೀಲರಿಂದ ತಯಾರಿಸಿದ 6 ಪುಟಗಳ ಆಂಗ್ಲ ಭಾಷೆಯಲ್ಲಿ ಬರೆದ ಪತ್ರ ಕೊಟ್ಟಾಗ ಅದರ ಮೇಲೆ ಕಣ್ಣು ಆಡಿಸಿದ ಓಂ ಪಾಠಕ್, ‘ಈ ಪತ್ರ ಮಾಧ್ಯಮಗಳ ಕೈಗೆ ಹೋದರೆ ಜಗಳ ಉಲ್ಬಣ ಆಗುತ್ತದೆ. ನಾನು ಇದನ್ನು ತೆಗೆದು ಕೊಳ್ಳುವುದಿಲ್ಲ. ನೀವು ಮೌಖಿಕವಾಗಿ ಹೇಳಿ. ನಾನು ನಡ್ದಾ ಅವರಿಗೆ ವಿವರಿಸುತ್ತೇನೆ’ ಎಂದಿದ್ದಾರೆ. ಈ ವೇಳೆ ಯತ್ನಾಳ್‌, ‘2006 ರಿಂದ 2024ರವರೆಗೆ ಏನೆಲ್ಲಾ ಆಯಿತು ಎಂದು ವಿವರಿಸಿ, ಮೊದಲು ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಿರಿ; ನನ್ನನ್ನು ಅಧ್ಯಕ್ಷ ಮಾಡಿ ಅಂತ ನಾನು ಹೇಳೋಲ್ಲ. ಎರಡೂ ಬಣಗಳಿಗೆ ಸೇರದೇ ಇರುವ ಯಾರನ್ನಾದರೂ ತಂದು ಅಧ್ಯಕ್ಷ ಮಾಡಿ. ನಮಗೇನು ತಕರಾರು ಇಲ್ಲ ಎಂದು ಹೇಳುತ್ತಾ ‘ಈ ನಿಮ್ಮ ಉಸ್ತುವಾರಿ ಮಾಡಿದ್ದೀರಲ್ಲ ರಾಧಾ ಮೋಹನ್‌ ಅಗರ್‌ವಾಲ್‌, ಅವರು ನಮ್ಮನ್ನು ಕ್ಯಾರೇ ಅನ್ನುವುದಿಲ್ಲ.ಅದಕ್ಕೆ ಇಷ್ಟು ದನಿ ಎತ್ತರಿಸಿ ಮಾತಾಡುವ ಪರಿಸ್ಥಿತಿ ಬಂತು’ ಎಂದು ದೂರು ನೀಡಿ ಬಂದಿದ್ದಾರೆ. ಯತ್ನಾಳ್‌ ಹೊರಗೆ ಹೋಗುವಾಗ ಓಂ ಪಾಠಕ್, ‘ಮಾಧ್ಯಮಗಳ ಮುಂದೆ ಸೈಲೆಂಟ್ ಆಗಿರಿ ಯತ್ನಾಳ್‌ ಅವರೇ ನೀವು ತುಂಬಾ ಜಾಸ್ತಿ ಮಾತನಾಡುತ್ತೀರಿ’ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಯತ್ನಾಳ್‌, ಊಟ ತಿಂಡಿ ಅಧಿಕಾರದಿಂದ ಬೇಕಾದರೆ ದೂರ ಇರಬಹುದು ಆದರೆ ಮಾತಿನ ಲಂಘನ ಸಾಧ್ಯವಿಲ್ಲದ ಬಾಬತ್ತು ಬಿಡಿ.

ಬಿಜೆಪಿಗೆ ಬೇಕಿದೆ ಬಿಎಸ್‌ವೈ- ಅನಂತ್‌ ಫೈಟ್‌!

ನಾನು ಯಡಿಯೂರಪ್ಪ ಮತ್ತು ಅನಂತ್ ಕುಮಾರ್‌ ಇಬ್ಬರನ್ನು ಸುಮಾರು 11 ವರ್ಷಗಳ ಕಾಲ ಹತ್ತಿರದಿಂದ ನೋಡಿದವನು. ಇಬ್ಬರು ಉತ್ತರ ಕರ್ನಾಟಕದ ಕಡೆ ಅಂತಾರಲ್ಲ ಹಾಗೇ ''ಮಚ್ಚಿ ಮೂರು ಪಾಲು'' ಜಗಳ ಆಡುತ್ತಿದ್ದರು. ಅದರಲ್ಲಿ ಮುಖ್ಯಮಂತ್ರಿ ಸ್ಥಾನ, ಬೆಂಬಲಿಗರಿಗೆ ಅಧಿಕಾರ ಕೊಡಿಸೋ ವಿಚಾರ... ಹೀಗೆ ಏನೇನೊ ವಿಷಯಗಳು. ಆದರೆ ಎಂದೂ ಮಾಧ್ಯಮಗಳ ಎದುರು, ಕಿರಿಯ ಕಾರ್ಯಕರ್ತರ ಎದುರು ಒಬ್ಬರಿಗೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ. ರಾಜಕೀಯ ಒಂದು ಚದುರಂಗದ ಆಟ ಅನ್ನುವ ರೀತಿಯಲ್ಲಿ ಜಗಳ ವಿಷಯ ಆಧಾರಿತವಾಗಿ ಇರುತ್ತಿತ್ತು. ಆದರೆ ಇಬ್ಬರ ನಡುವೆ ಒಂದು ದೋಸ್ತಿ ಇತ್ತು. 1989ರಲ್ಲಿ ಅನಂತ ಕುಮಾರ್‌ ಮದುವೆಯಾದ ನಂತರ ಮೊದಲ ಟ್ರಿಪ್‌ಗೆ ಯಡಿಯೂರಪ್ಪ ದಂಪತಿಗಳು ಕೂಡ ಜೊತೆಗೆ ಹೋಗುವಷ್ಟರ ಮಟ್ಟಿಗೆ.

ಆದರೆ ಈಗ ವಿಜಯೇಂದ್ರ ಹಾಗೂ ಪಾರ್ಟಿಯ ಉಳಿದ ನಾಯಕರ ಪರಿಸ್ಥಿತಿ ಹಾಗಲ್ಲ. ಹೀಗಾಗಿ ಸರಿ ಮಾಡಬೇಕು ಅಂತ ಸ್ವತಃ ಅಮಿತ್ ಶಾ ಆಗಲಿ ಸಂಘದ ಹಿರಿಯರಾಗಲಿ ಕುಳಿತುಕೊಂಡರು ಕೂಡ ಸಮಸ್ಯೆ ಬಗೆ ಹರಿಸಲು ಸಿದ್ಧ ಸೂತ್ರಗಳು, ಫಾರ್ಮುಲಾಗಳು ಯಾವುವೂ ಇಲ್ಲ. ವಿಜಯೇಂದ್ರರನ್ನು ಕೆಳಗಿಳಿಸಿ ಪಾರ್ಟಿ ಕಟ್ಟಿ ಎಂದು ಯತ್ನಾಳ್‌ ಹಠ ಮತ್ತು ಯತ್ನಾಳರನ್ನು ಹೊರಗೆ ಹಾಕಿ ನನ್ನ ಕೈಯಲ್ಲಿ ಪಾರ್ಟಿ ಕೊಡಿ ಅನ್ನುವ ವಿಜಯೇಂದ್ರ ಹಠ ಎರಡೂ ಕರ್ನಾಟಕದ ಬಿಜೆಪಿ ಸಮಸ್ಯೆ ಹೆಚ್ಚಿಸುತ್ತವೆ ಹೊರತೂ ಪರಿಹಾರ ಇರೋದು ಮಧ್ಯಮ ಮಾರ್ಗದಲ್ಲಿ ಮಾತ್ರ. ಆದರೆ 2028ರ ದೃಷ್ಟಿಯಿಂದ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಯತ್ನಾಳ್‌, ವಿಜಯೇಂದ್ರ ಮತ್ತು ಮಧ್ಯಇರುವವರು ಎನ್ನುವ ತಯಾರಿ ತೋರಿಸಿದರೆ ಮಾತ್ರ ಪರಿಹಾರ ಸಾಧ್ಯ ಆಗಬಹುದು. ಇಲ್ಲವಾದಲ್ಲಿ ಹರಿ ಬ್ರಹ್ಮ ಬಂದು ಕುಳಿತರೂ ಜಗಳ ಮುಗಿಯೋಲ್ಲ ಅಷ್ಟೇ.

ಮುಂದೇನು?

ಕರ್ನಾಟಕದ ರಾಜಕಾರಣ 2004 ರಿಂದ 2024ರ ವರೆಗೆ ಸುತ್ತಿದ್ದೂ ಮೂರು ವ್ಯಕ್ತಿಗಳ ಸುತ್ತಾ ಮುತ್ತಾ. ಯಡಿಯೂರಪ್ಪ, ದೇವೇಗೌಡರು ಮತ್ತು ಸಿದ್ಧರಾಮಯ್ಯ ಸುತ್ತ. ಲಿಂಗಾಯಿತರು, ಒಕ್ಕಲಿಗರು ಮತ್ತು ಹಿಂದುಳಿದ ಸಮುದಾಯಗಳು ಮೂರು ನಾಯಕರ ಸುತ್ತಲೇ ಗಿರಕಿ ಹೊಡೆದಿವೆ. ಆದರೆ 2028ಕ್ಕೆ ಜಾತಿ ಮತ್ತು ನಾಯಕರು ಬದಲಾಗೋದು ನಿಶ್ಚಿತ. ಅದರಲ್ಲಿ ಒಂದು ವೇಳೆ ಡಿ.ಕೆ.ಶಿವಕುಮಾರ್‌ 2025 ಅಥವಾ 2026ರಲ್ಲಿ ಅವರೇ ಹೇಳುತ್ತಿರುವ ಒಪ್ಪಂದದಂತೆ ಮುಖ್ಯಮಂತ್ರಿ ಆದರೆ ಜೆಡಿಎಸ್ ನಿಂದ ಒಕ್ಕಲಿಗ ಮತಗಳು ಕಾಂಗ್ರೆಸ್ನತ್ತ ಸ್ವಲ್ಪ ವಾಲಿದರೆ ಕುರುಬ ಮತ್ತು ಹಿಂದುಳಿದ ಮತದಾರರು ಕಾಂಗ್ರೆಸ್ನಿಂದ ಇನ್ನೊಂದು ವಿಕಲ್ಪದತ್ತ ದೃಷ್ಟಿ ಹಾಯಿಸಬಹುದು. ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ ಬಳಿ ಹೊಸ ಮತಗಳನ್ನು ಹಿಡಿದಿಡುವ ಆಣೆಕಟ್ಟು ತರಹದ ಶಕ್ತಿ ಕಾಣುತ್ತಿದೆ. ಆದರೆ ಒಂದು ವೇಳೆ ಡಿಕೆ ಏನೋ ಕಾರಣಕ್ಕೆ ಮುಖ್ಯಮಂತ್ರಿ ಆಗದೇ ಇದ್ದರೆ ಒಕ್ಕಲಿಗ ಮತಗಳು 2023ಕ್ಕಿಂತ ತುಸು ಜಾಸ್ತಿ ಬಿಜೆಪಿ ಕಡೆ ಕೂಡ ಬರಬಹುದು. ಆದರೆ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಇದ್ದ ಒಂದೇ ದೀಪವನ್ನು ಆರಿಸಿಕೊಂಡು ಕೈಗೆ ಸಿಕ್ಕ ಚಾಕು, ಚೂರಿಯಿಂದ ತಮ್ಮ ಜನರ ಮೇಲೆ ಸಿಕ್ಕ ಸಿಕ್ಕ ಹಾಗೇ ಇರಿದು, ತಿವಿದು ತಾನು ಗಾಯಗೊಂದು ಎದುರಿನವನನ್ನು ಗಾಯಾಳುಗೊಳಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಪುರುಸೊತ್ತೇ ಇಲ್ಲ. ಹೊಸ ಜನರ ಬಗ್ಗೆ ಹೊಸ ವಿಚಾರದ ಬಗ್ಗೆ ಹೇಳೋದಕ್ಕೂ, ಕೇಳೋದಕ್ಕೂ ಈಗ ಜಗನ್ನಾಥ ಭವನದವರಿಗೆ ಸಮಯ ಇಲ್ಲ.