ಕ್ರೈಸ್ಟ್ ವಿಶ್ವವಿದ್ಯಾನಿಲಯ ಹಾಗೂ ತಂತ್ರಜ್ಞಾನ ದೈತ್ಯ ಐಬಿಎಂ ಜಂಟಿಯಾಗಿ ಎಐ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ನೀಡಲು ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಅನ್ನು ಸ್ಥಾಪಿಸಿವೆ.
ಬೆಂಗಳೂರು: ಕ್ರೈಸ್ಟ್ ವಿಶ್ವವಿದ್ಯಾನಿಲಯ ಹಾಗೂ ತಂತ್ರಜ್ಞಾನ ದೈತ್ಯ ಐಬಿಎಂ ಜಂಟಿಯಾಗಿ ಎಐ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ನೀಡಲು ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಅನ್ನು ಸ್ಥಾಪಿಸಿವೆ. ಈ ಹೊಸ ಎಐ ಕೇಂದ್ರವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ಅತ್ಯಾಧುನಿಕ ಎಐ ತಂತ್ರಜ್ಞಾನಗಳನ್ನು ನೇರವಾಗಿ ಬಳಸಿ ಪ್ರಯೋಗ ನಡೆಸಲು ವೇದಿಕೆ ಕಲ್ಪಿಸಲಿದೆ.
ಮುಖ್ಯವಾಗಿ ಜನರೇವ್ ಎಐ, ಏಜೆಂಟಿಕ್ ಎಐ, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ (ಎಲ್ಎಲ್ಎಂ), ರಿಟ್ರೀವಲ್ ಆಗ್ಮೆಂಟೆಡ್ ಜನರೇಷನ್ (ಆರ್ ಎ ಜಿ) ಹಾಗೂ ಇಂಟೆಲಿಜೆಂಟ್ ಆಟೋಮೇಷನ್ ನಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಜ್ಞಾನ ಪಡೆಯಲು ಇದು ನೆರವಾಗಲಿದೆ. ಎಐ ಸಾಫ್ಟ್ ವೇರ್ ಅಭಿವೃದ್ಧಿಗೆ ನೆರವಾಗುವ ಐಬಿಎಂ ಬಾಬ್, ಎಐ ಡೆವಲಪ್‌ಮೆಂಟ್ ಸ್ಟುಡಿಯೋ watsonx.ai ಹಾಗೂ ಎಐ ನಿಯಂತ್ರಣ ವ್ಯವಸ್ಥೆಯಾದ watsonx Orchestrate ತಂತ್ರಜ್ಞಾನಗಳು ಇಲ್ಲಿ ಲಭ್ಯವಿರಲಿವೆ. ಉದ್ಯಮ ರಂಗದ ವಾಸ್ತವಿಕ ಸವಾಲುಗಳಿಗೆ ಎಐ ತಂತ್ರಜ್ಞಾನದ ಮೂಲಕ ನೂತನ ಪರಿಹಾರಗಳನ್ನು ಕಂಡುಕೊಳ್ಳಲು ಸಂಶೋಧಕರಿಗೆ ಅವಕಾಶ ಸಿಗಲಿದೆ.
ಸಮಾಜದ ಪ್ರತಿಯೊಂದು ಕ್ಷೇತ್ರವನ್ನು ಮರುರೂಪಿಸುತ್ತಿದೆ
ಈ ಕುರಿತು ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಫಾದರ್ ಜೋಸ್ ಸಿ ಸಿ ಅವರು ಮಾತನಾಡಿ, ‘ಕೃತಕ ಬುದ್ಧಿಮತ್ತೆಯು ಸಮಾಜದ ಪ್ರತಿಯೊಂದು ಕ್ಷೇತ್ರವನ್ನು ಮರುರೂಪಿಸುತ್ತಿದೆ. ಐಬಿಎಂ ಜೊತೆಗಿನ ಈ ಪಾಲುದಾರಿಕೆಯ ಮೂಲಕ ಕ್ರೈಸ್ಟ್ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಮತ್ತು ಉದ್ಯಮ ರಂಗಗಳು ಒಂದಾಗುವ ಭವಿಷ್ಯದ ನಾವೀನ್ಯತಾ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಐಬಿಎಂ ಎಐ ಇನ್ನೋವೇಶನ್ ಸೆಂಟರ್ ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉದ್ಯಮ ಮಟ್ಟದ ಎಐ ತಂತ್ರಜ್ಞಾನಗಳ ಬೆಂಬಲ ನೀಡಲಿದ್ದು, ಜವಾಬ್ದಾರಿಯುತ ಹಾಗೂ ನೈತಿಕ ಎಐ ಜಗತ್ತಿಗೆ ಕೊಡುಗೆ ನೀಡುವ ಜೊತೆಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗಲಿದೆ’ ಎಂದರು.
ಈ ಸಹಭಾಗಿತ್ವದ ಭಾಗವಾಗಿ, ಐಬಿಎಂ ಎಕ್ಸ್ ಪರ್ಟ್ ಲ್ಯಾಬ್ಸ್ ಅಧ್ಯಾಪಕರು, ಪಿಎಚ್‌ಡಿ ಅಭ್ಯರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ಎಐ ತಂತ್ರಜ್ಞಾನಗಳಲ್ಲಿ ಪ್ರಾಯೋಗಿಕ ತರಬೇತಿ ಹಾಗೂ ನೈಪುಣ್ಯ ಕಾರ್ಯಕ್ರಮಗಳನ್ನು ನಡೆಸಲಿದೆ. ಇದು ವಿವಿಧ ವಿಷಯಗಳಲ್ಲಿ ಎಐ ಆಧಾರಿತ ಆಪ್ ಗಳ ಅಭಿವೃದ್ಧಿಯನ್ನು ಚುರುಕುಗೊಳಿಸಲು ನೆರವಾಗಲಿದೆ. ಜೊತೆಗೆ, ವಿದ್ಯಾರ್ಥಿಗಳ ಕಲಿಕೆ ಮತ್ತು ಪ್ರಮಾಣಪತ್ರ ಪಡೆಯಲು ಐಬಿಎಂ ಉಚಿತ ತಂತ್ರಜ್ಞಾನ ಶಿಕ್ಷಣ ಕಾರ್ಯಕ್ರಮವಾದ IBM SkillsBuild ಬಳಕೆಗೆ ಲಭ್ಯವಿರಲಿದೆ.
ಬಲವಾದ ಸಹಯೋಗ
ಐಬಿಎಂ ಇಂಡಿಯಾ & ದಕ್ಷಿಣ ಏಷ್ಯಾದ ತಂತ್ರಜ್ಞಾನ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧೇಶ್ ನಾಯಕ್ ಅವರು ಮಾತನಾಡಿ , ‘ಎಐ ನಾವೀನ್ಯತೆಯ ಭವಿಷ್ಯವು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮ ರಂಗದ ನಡುವಿನ ಬಲವಾದ ಸಹಯೋಗವನ್ನು ಅವಲಂಬಿಸಿದೆ. ಈ ಆಳವಾದ ಬಾಂಧವ್ಯದ ಮೂಲಕ ಭಾರತದ ಎಐ ಪ್ರತಿಭೆಗಳ ಜಾಲವನ್ನು ಬಲಪಡಿಸುವುದು, ಸಂಶೋಧನೆ ಹಾಗೂ ಹೊಸ ಆವಿಷ್ಕಾರ ಪ್ರಕ್ರಿಯೆಯನ್ನು ವೇಗಗೊಳಿಸುವುದು ಮತ್ತು ಎಐ ಭವಿಷ್ಯಕ್ಕೆ ಅಗತ್ಯವಿರುವ ಮಾನವಶಕ್ತಿಯನ್ನು ಸಿದ್ಧಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದರು.
ಈ ಕುರಿತು ಮಾತನಾಡಿದ ಐಬಿಎಂ ಇಂಡಿಯಾ ಸಾಫ್ಟ್‌ವೇರ್ ಲ್ಯಾಬ್ ನ ಉಪಾಧ್ಯಕ್ಷ ವಿಶಾಲ್ ಚಹಲ್ ಅವರು, ‘ಸಾಫ್ಟ್ ವೇರ್ ಅನ್ನು ನಿರ್ಮಿಸುವ ಸಾಂಪ್ರದಾಯಿಕ ವಿಧಾನವನ್ನು ಎಐ ತಂತ್ರಜ್ಞಾನವು ಮೂಲಭೂತವಾಗಿ ಬದಲಾಯಿಸುತ್ತಿದೆ. ಈ ಇನ್ನೋವೇಶನ್ ಸೆಂಟರ್ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಐಬಿಎಂ ಬಾಬ್ ಜೊತೆಗೂಡಿ ಕೆಲಸ ಮಾಡಲಿದ್ದು, ಸಾಫ್ಟ್ ವೇರ್ ಜೀವಿತಾವಧಿಯ ಪ್ರತಿಯೊಂದು ಹಂತದಲ್ಲೂ ಎಐ ಹೇಗೆ ವೇಗವನ್ನು ತರಬಲ್ಲದು ಎಂಬುದರ ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ. ಉದ್ಯಮ ಮಟ್ಟದ ಸಾಫ್ಟ್ ವೇರ್ ಅಭಿವೃದ್ಧಿಯನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಹತ್ತಿರ ತರುವ ಮೂಲಕ, ನೈಜ ಪ್ರಪಂಚದ ಬಳಕೆಗೆ ಸೂಕ್ತವಾದ, ದೊಡ್ಡ ಪ್ರಮಾಣದಲ್ಲಿ ಬೆಳೆಸಬಹುದಾದ ಮತ್ತು ವಿಶ್ವಾಸಾರ್ಹ ಎಐ ಅಪ್ಲಿಕೇಶನ್ ಗಳನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಆವಿಷ್ಕಾರಕರನ್ನು ಸಜ್ಜುಗೊಳಿಸುವುದು ನಮ್ಮ ಆಶಯವಾಗಿದೆ’ ಎಂದು ಹೇಳಿದರು.
