ಸಾರಾಂಶ
ಕಂಡ ಕನಸು ಈಡೇರಿಸಲು ಇಚ್ಚೆ, ಬದ್ಧತೆ, ಶಿಸ್ತು ಹೊಂದಿರಬೇಕು,ಬದ್ಧತೆ ಹಾಗೂ ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿದರೆ ಸಿ.ವಿ.ರಾಮನ್, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ರಾಕೇಶ್ ಶರ್ಮಾ ಅವರಂತೆ ಸಾಧನೆ ಮಾಡಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಹೇಳಿದರು.
ಬೆಂಗಳೂರು : ಯಾರೂ ಕೂಡಾ ಕಡಿಮೆ ಇಲ್ಲ. ಯಶಸ್ಸು ಸಾಧಿಸಲು ಕನಸು ಕಾಣಬೇಕು. ಕಂಡ ಕನಸು ಈಡೇರಿಸಲು ಇಚ್ಚೆ, ಬದ್ಧತೆ, ಶಿಸ್ತು ಹೊಂದಿರಬೇಕು,ಬದ್ಧತೆ ಹಾಗೂ ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿದರೆ ಸಿ.ವಿ.ರಾಮನ್, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ರಾಕೇಶ್ ಶರ್ಮಾ ಅವರಂತೆ ಸಾಧನೆ ಮಾಡಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಹೇಳಿದರು.
ಶುಕ್ರವಾರ ನಗರದ ನೆಹರೂ ತಾರಾಲಯದ ಆವರಣದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ‘ಪ್ರೊ.ಯು.ಆರ್.ರಾವ್ ಭವನ’ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರದ ಮಹಾ ಸಾಧಕರು ಹಾಕಿಕೊಟ್ಟಿರುವ ಬುನಾದಿ ಮೇಲೆ ಮುಂದೆ ಸಾಗಬೇಕಿದೆ. ತಾವು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಶಾಸಕ ಹಾಗೂ ಸಚಿವನಾದ ನಂತರ ನನಗೆ ಶಿಕ್ಷಣದ ಮೌಲ್ಯ ಗೊತ್ತಾಯಿತು. ವಿಧಾನಸಭೆಯಲ್ಲಿ ಅತ್ಯುತ್ತಮ ಭಾಷಣ ಮಾಡುವ ನಾಯಕರನ್ನು ನೋಡಿ ನಾನು ಹಿಂಜರಿಯುತ್ತಿದ್ದೆ ಎಂದು ಸ್ಮರಿಸಿದರು.
ಇತ್ತಿಚೆಗೆ ದುಬೈ ಪ್ರವಾಸದ ವೇಳೆ ಪ್ರೊಫೆಸರ್ ಒಬ್ಬರು ಮುಂದಿನ 15-20 ವರ್ಷದಲ್ಲಿ ಶಿಕ್ಷಕರ ಅವಶ್ಯಕತೆ ಇರುವುದಿಲ್ಲ. ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನದಿಂದ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂಬುದನ್ನು ತಿಳಿಸಿದರು ಎಂದರು.
ರಾಜ್ಯದಲ್ಲಿ ಇರುವಷ್ಟು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜು ಬೇರೆಲ್ಲೂ ಇಲ್ಲ. ಅತಿ ಹೆಚ್ಚು ಪ್ರತಿಭಾವಂತ ಮಾನವ ಸಂಪನ್ಮೂಲ ನಮ್ಮ ರಾಜ್ಯದಲ್ಲಿದೆ. ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಇಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಎಐ ಮತ್ತು ಮೆಷಿನ್ ಲರ್ನಿಂಗ್ ನಂತಹ ಕ್ಷೇತ್ರಗಳಲ್ಲಿ ಸಾಧನೆಗೆ ಪ್ರೇರೇಪಿಸುವಂತಹ ಕೌಶಲ್ಯಗಳನ್ನ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಅನುವು ಮಾಡಿಕೊಡುವ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈಗ ಅಂಗೈಯಲ್ಲಿಯೇ ಎಲ್ಲ ಮಾಹಿತಿ ಸಿಗಲಿದ್ದು, ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸ್ಪರ್ಧೆ ಮಾಡುವ ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ತಾವು ಮೂಲತಃ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ರಾಜಕಾರಣಿ. 30ನೇ ವಯಸ್ಸಿನಲ್ಲಿ ಮಂತ್ರಿಯಾದರೆ, 47ನೇ ವಯಸ್ಸಿನಲ್ಲಿ ಪದವಿ ಪಡೆದೆ. ಮಂತ್ರಿಯಾಗಿದ್ದಕ್ಕಿಂತ ಪದವಿ ಪಡೆದಾಗ ಹೆಚ್ಚು ಸಂತೋಷವಾಯಿತು. ನನ್ನ ಮಕ್ಕಳು, ನೀನೆ ಓದಿಲ್ಲ ಎನ್ನುತ್ತಾರೆ ಎನ್ನುವ ಭಯದಲ್ಲಿ ಪದವಿ ಪಡೆದೆ ಎಂದು ಹೇಳಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಎಂ.ಸಿ ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.
₹42 ಕೋಟಿ ವೆಚ್ಚದಲ್ಲಿ ಭವನ
ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಿಸಿರುವ ‘ಪ್ರೊ.ಯು.ಆರ್.ರಾವ್ ಭವನ’ 600 ಆಸನ ಇರುವ ಆಡಿಟೋರಿಯಂ, ತಲಾ 50 ಆಸನದ ನಾಲ್ಕು ಉಪನ್ಯಾಸ ಸಭಾಂಗಣ, 100 ಆಸನದ ಒಂದು ಉಪನ್ಯಾಸ ಸಭಾಂಗಣ ಹೊಂದಿದೆ. ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ ಕೊಠಡಿಗಳು, ವೀಕ್ಷಣಾ ದೂರದರ್ಶಕ, 50 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ, 20 ಕೆ.ಎಲ್.ಡಿ. ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಸೇರಿದಂತೆ ಒಟ್ಟು 9949 ಚದರಡಿ ವಿಸ್ತೀರ್ಣ ಕಟ್ಟಡ ನಿರ್ಮಿಸಲಾಗಿದೆ.