ಸಾರಾಂಶ
ಬೆಂಗಳೂರು : ಮೆದುಳಿನ ನರಕೋಶಗಳು ನಿಷ್ಕ್ರೀಯವಾಗಿ ಉಂಟಾಗುವ ಮರೆವಿನ ಕಾಯಿಲೆ ‘ಆಲ್‌ಝೈಮರ್’ನಿಯಂತ್ರಣಕ್ಕೆ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ಐಐಎಚ್‌ಆರ್) ಔಷಧೀಯ ಗುಣವುಳ್ಳ‘ಲಯನ್ಸ್‌ಮೇನ್’ ಹೆಸರಿನ ಅಣಬೆಯನ್ನು ಅಭಿವೃದ್ಧಿಪಡಿಸಿದೆ.
ಈ ‘ಲಯನ್ಸ್‌ಮೇನ್’ ಅಣಬೆ ಮೆದುಳಿನ ನರಕೋಶಗಳು ಸತ್ತಾಗ ಮೆದುಳು ಮತ್ತು ನರ ಮಂಡಲದ ಮೇಲೆ ಪರಿಣಾಮ ಬೀರಿ ಮರೆವಿನ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ನರಕೋಶಗಳು ಹಾನಿಗೊಳಗಾಗದಂತೆ ತಡೆಯುತ್ತದೆ. ಜೊತೆಗೆ ಈ ಅಣಬೆಯಲ್ಲಿ ಹಾನಿಗೊಳಗಾಗುವ ನರಗಳಿಗೆ ಬಲ ತುಂಬುವ ಅಗತ್ಯ ಪೋಷಕಾಂಶಗಳು ಇವೆ ಎನ್ನುತ್ತಾರೆ ಐಐಎಚ್‌ಆರ್ ವಿಜ್ಞಾನಿಗಳು.
ಮನುಷ್ಯನ ದೇಹದಲ್ಲಿ ವಿವಿಧ ಕಾರಣಗಳಿಂದ ಉಂಟಾಗುವ ಕ್ಯಾಲ್ಸಿಯಂ ಕೊರತೆ ನಿವಾರಣೆಗೂ ಕೂಡ ಎಲ್ಮ್‌ಆಯಿಸ್ಟರ್ ಎಂಬ ಅಣಬೆ ಬಳಸಬಹುದು. ನಿಯಮಿತ ಸೇವನೆಯಿಂದ ಕ್ಯಾಲ್ಸಿಯಂ ಸಹಜ ಸ್ಥಿತಿಗೆ ಬರಲು ಸಹಕಾರಿಯಾಗುತ್ತದೆ. ‘ಕಿಂಗ್ ಆಯಿಸ್ಟರ್’ ಎಂಬ ಅಣಬೆಯು ಸಿಹಿಯ ಸುವಾಸನೆಯೊಂದಿಗೆ ಕೂಡಿದೆ. ತಿನ್ನಲು ಕೂಡ ಹೆಚ್ಚು ರುಚಿಯಾಗಿ ಇರುವುದರಿಂದ ಇಷ್ಟಪಟ್ಟು ತಿನ್ನುತ್ತಾರೆ. ಅಣಬೆಗಳಲ್ಲಿ ನಾರಿನಾಂಶ, ವಿಟಮಿನ್ ಡಿ, ಪ್ರೋಟೀನ್, ಪೊಟ್ಯಾಸಿಯಂ ಸೇರಿದಂತೆ ಆರೋಗ್ಯಕ್ಕೆ ಉಪಯುಕ್ತವಾದ ಔಷಧೀಯ ಗುಣಗಳು ಇವೆ ಎನ್ನುತ್ತಾರೆ ತಜ್ಞರು.
ಐಐಎಚ್‌ಆರ್‌ನಲ್ಲಿ ಸಂಶೋಧನೆಗೆ ಒಳಪಡಿಸಿರುವ ಔಷಧೀಯ ಗುಣಗಳಿರುವ ಅಣಬೆ ತಳಿಗಳ ಬಿತ್ತನೆ ಬೀಜಗಳು ಲಭ್ಯವಿದ್ದು, ಆಸಕ್ತ ರೈತರು ಖರೀದಿಸಬಹುದು. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಣಬೆ ಬಿತ್ತನೆ ಬೀಜಗಳಿಗೆ ಹೆಚ್ಚು ಬೇಡಿಕೆಯಿದೆ. ಅಣಬೆ ಬೆಳೆಯುವುದರಿಂದ ರೈತರು ಆರ್ಥಿಕವಾಗಿಯೂ ಲಾಭಗಳಿಸಬಹುದು ಎನ್ನುತ್ತಾರೆ ಅಣಬೆ ವಿಭಾಗದ ವಿಜ್ಞಾನಿಗಳು.
ಅಣಬೆ ಬಿತ್ತನೆ ಬೀಜ ಲಭ್ಯ
ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ 110 ಅಣಬೆ ತಳಿಗಳ ಸಂಗ್ರಹವಿದೆ. 12 ಬಗೆಯ ಅಣಬೆ ತಳಿಗಳನ್ನು ಸಂಶೋಧನೆಗೊಳಪಡಿಸಿದ್ದು, ಅವುಗಳ ಬಿತ್ತನೆ ಬೀಜಗಳನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ವರ್ಷ 40-50 ಟನ್‌ನಷ್ಟು ಅಣಬೆ ಬೀಜ ಮಾರಾಟವಾಗುತ್ತಿದೆ. ಒಬ್ಬ ವ್ಯಕ್ತಿ 250 ಕೆ.ಜಿ.ವರೆಗೆ ಬೀಜ ಖರೀದಿಸಬಹುದು.
-ಸಿ. ಚಂದ್ರಶೇಖರ, ಹಿರಿಯ ವಿಜ್ಞಾನಿ, ಅಣಬೆ ವಿಭಾಗ, ಐಐಎಚ್‌ಆರ್