ರಾಜ್ಯದಲ್ಲಿ ಮಕ್ಕಳಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚಳ: 1 ವರ್ಷದಲ್ಲಿ 674 ಮಕ್ಕಳಿಗೆ ರೋಗ

| N/A | Published : Feb 15 2025, 02:18 AM IST / Updated: Feb 15 2025, 04:31 AM IST

vaccine

ಸಾರಾಂಶ

ರಾಜ್ಯದಲ್ಲಿ ಕಳೆದ ಒಂದೇ ವರ್ಷದಲ್ಲಿ 21,881 ಮಂದಿಗೆ ಕ್ಯಾನ್ಸರ್‌ ಚಿಕಿತ್ಸೆಗೆ ನೋಂದಣಿಯಾಗಿದ್ದು ಈ ಪೈಕಿ 674 ಮಕ್ಕಳು ಸೇರಿದ್ದಾರೆ. ಇದು ಮಕ್ಕಳಲ್ಲಿ ಕ್ಯಾನ್ಸರ್‌ ಹೆಚ್ಚಾಗುತ್ತಿರುವ ಕುರಿತ ಎಚ್ಚರಿಕೆ ಗಂಟೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

 ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದೇ ವರ್ಷದಲ್ಲಿ 21,881 ಮಂದಿಗೆ ಕ್ಯಾನ್ಸರ್‌ ಚಿಕಿತ್ಸೆಗೆ ನೋಂದಣಿಯಾಗಿದ್ದು ಈ ಪೈಕಿ 674 ಮಕ್ಕಳು ಸೇರಿದ್ದಾರೆ. ಇದು ಮಕ್ಕಳಲ್ಲಿ ಕ್ಯಾನ್ಸರ್‌ ಹೆಚ್ಚಾಗುತ್ತಿರುವ ಕುರಿತ ಎಚ್ಚರಿಕೆ ಗಂಟೆ ಎಂದು ವೈದ್ಯರು ಎಚ್ಚರಿಸಿದ್ದಾರೆ. 

ವಿಶ್ವದಲ್ಲಿ ಪ್ರತಿವರ್ಷ 3 ಲಕ್ಷ ಮಕ್ಕಳು ಹಾಗೂ ಯುವಕರಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಅನುವಂಶಿಕತೆ, ಅನಾರೋಗ್ಯಕರ ಜೀವನಶೈಲಿ ಮುಂತಾದ ಕಾರಣದಿಂದ ರಾಜ್ಯದಲ್ಲೂ ಇತ್ತೀಚೆಗೆ ಮಕ್ಕಳಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚಾಗುತ್ತಿದೆ.

 ಅದರಲ್ಲೂ ರಕ್ತ ಕ್ಯಾನ್ಸರ್‌, ಮಿದುಳು ಮತ್ತು ಕ್ಯಾನ್ಸರ್‌ ಗಡ್ಡೆ ಪ್ರಕರಣ ಹೆಚ್ಚಾಗುತ್ತಿವೆ.ಕಳೆದ ಒಂದೇ ವರ್ಷ 674 ಮಕ್ಕಳಲ್ಲಿ ಕ್ಯಾನ್ಸರ್‌ ಪತ್ತೆಯಾಗಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲೇ 400ಕ್ಕೂ ಹೆಚ್ಚು ಪ್ರಕರಣ ವರದಿಯಾಗಿದೆ. 2023ರಲ್ಲಿ ಒಟ್ಟು 435 ಮಂದಿ ಮಕ್ಕಳಿಗೆ ಕ್ಯಾನ್ಸರ್ ವರದಿಯಾಗಿತ್ತು. ಈ ಪೈಕಿ 154 ಮಕ್ಕಳಲ್ಲಿ ಲ್ಯುಕೆಮಿಯಾ (ರಕ್ತ) ಕ್ಯಾನ್ಸರ್‌ ವರದಿಯಾಗಿತ್ತು. ಇದರಲ್ಲಿ 92 ಮಂದಿ ಬಾಲಕರಿದ್ದರು. ಉಳಿದಂತೆ ಲಿಂಫೋಲಾ ಅಥವಾ ರೆಟಿಕ್ಯುಲೋ ಎಂಡೋಥೆಲಿಯನ್‌ ಎಂಬ ಕ್ಯಾನ್ಸರ್‌ (ಗಡ್ಡೆ ಕ್ಯಾನ್ಸರ್) 57 ಮಂದಿಯಲ್ಲಿ, ರೆನಾಲ್‌ ಟ್ಯೂಮರ್ಸ್ 17 ಹೀಗೆ ಒಟ್ಟು 435 ಮಂದಿಯಲ್ಲಿ ಕ್ಯಾನ್ಸರ್‌ ವರದಿಯಾಗಿತ್ತು. ಇದರಲ್ಲಿ 264 ಹುಡುಗರು, 171 ಹುಡುಗಿಯರಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡಿದೆ ಎಂದು ಕಿದ್ವಾಯಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಡಾ.ಟಿ. ನವೀನ್‌ ಹೇಳಿದ್ದಾರೆ.

ಯಾವುದೇ ಶಂಕಿತ ಕ್ಯಾನ್ಸರ್‌ ಗಡ್ಡೆ ಇದ್ದರೆ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು. ತಡವಾಗಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಿದ್ದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ಹೀಗಾಗಿ ಫೆ.15 ರಂದು ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಜಾಗೃತಿ ಜಾಥಾ ಹಾಗೂ ಕ್ಯಾನ್ಸರ್‌ ಕುರಿತು ಅರಿವು ಕಾರ್ಯಗಾರ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಎನ್‌ಎಚ್‌ಎಂ ನಿರ್ದೇಶಕ, ಕಿದ್ವಾಯಿ ಆಡಳಿತಾಧಿಕಾರಿ ಡಾ.ವೈ. ನವೀನ್‌ ಭಟ್‌ ಮಾತನಾಡಿ, ಕಿದ್ವಾಯಿಯಲ್ಲಿ ಕ್ಯಾನ್ಸರ್‌ ಪೀಡಿತ ಮಕಲ್ಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಎಬಿ-ಎಆರ್‌ಕೆ ಅಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಎಪಿಎಲ್‌ ಕುಟುಂಬಗಳಿಗೂ ರಿಯಾಯಿತಿ ಚಿಕಿತ್ಸೆ ನೀಡಲಾಗುತ್ತಿದೆ.

ರೊಬೊಟಿಕ್‌ ಶಸ್ತ್ರಚಿಕಿತ್ಸೆ ಸೌಲಭ್ಯ ಪರಿಚಯಿಸಿದ್ದು, 1000 ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 100 ಅಸ್ತಿಮಜ್ಜೆ ಕಸಿ ಕೂಡ ನಡೆಸಲಾಗಿದೆ ಎಂದು ಹೇಳಿದರು.