ಉಪನಗರ ರೈಲ್ವೆ ಯೋಜನೆಗಾಗಿ ನಿರ್ಮಿಸಲಾದ ದೇಶದ ಅತೀ ಉದ್ದದ 31ಮೀ ಉದ್ದದ ‘ಯು ಗರ್ಡರ್‌’ ಅನ್ನು ( ಮೇಲ್ಸೇತುವೆ ಭಾಗ ) ಮಂಗಳವಾರ ರಾತ್ರಿ ಇಲ್ಲಿನ ಯಶವಂತಪುರದಲ್ಲಿ ಪಿಲ್ಲರ್‌ಗಳ ಮೇಲೇರಿಸುವ ಮೂಲಕ ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಹೊಸ ಮೈಲಿಗಲ್ಲು ಸ್ಥಾಪಿಸಿದೆ.

 ಬೆಂಗಳೂರು : ಉಪನಗರ ರೈಲ್ವೆ ಯೋಜನೆಗಾಗಿ ನಿರ್ಮಿಸಲಾದ ದೇಶದ ಅತೀ ಉದ್ದದ 31ಮೀ ಉದ್ದದ ‘ಯು ಗರ್ಡರ್‌’ ಅನ್ನು ( ಮೇಲ್ಸೇತುವೆ ಭಾಗ ) ಮಂಗಳವಾರ ರಾತ್ರಿ ಇಲ್ಲಿನ ಯಶವಂತಪುರದಲ್ಲಿ ಪಿಲ್ಲರ್‌ಗಳ ಮೇಲೇರಿಸುವ ಮೂಲಕ ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಹೊಸ ಮೈಲಿಗಲ್ಲು ಸ್ಥಾಪಿಸಿದೆ. 

ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಉಪನಗರ ರೈಲು ‘ಮಲ್ಲಿಗೆ’ ಮಾರ್ಗದಲ್ಲಿ ಮಂಗಳವಾರ ರಾತ್ರಿ ಇದನ್ನು ಅಳವಡಿಕೆ ಮಾಡಲಾಗಿದೆ. ಈವರೆಗೆ ಮೆಟ್ರೋದಲ್ಲಿ ಅತೀ ಉದ್ದದ್ದು ಎನ್ನಿಸಿಕೊಂಡ 28ಮೀ ಉದ್ದದ ‘ಯು ಗರ್ಡರ್‌’ ಬಳಕೆ ಮಾಡಲಾಗುತ್ತಿತ್ತು. ಕೆ-ರೈಡ್‌ ಇದನ್ನು ಮೀರಿ ಉದ್ದದ ಗರ್ಡರ್‌ ನಿರ್ಮಿಸಿದೆ.

ಎಸ್‌ಸಿಸ್ಟಮ್‌ ಎಸ್‌ಟಿಯುಪಿ ಕಂಪನಿ ಗೊಲ್ಲಹಳ್ಳಿಯ ಯಾರ್ಡ್‌ನಲ್ಲಿ ನಿರ್ಮಾಣ ಮಾಡಿದೆ. ಇದು 178 ಮೆಟ್ರಿಕ್‌ ಟನ್‌ ತೂಕವಿದ್ದು, ಇದರ ನಿರ್ಮಾಣಕ್ಕೆ 70 ಕ್ಯುಬಿಕ್‌ ಮೀಟರ್‌ ಕಾಂಕ್ರಿಟ್, 12.5 ಟನ್‌ ಸ್ಟೀಲ್‌ ಬಳಸಲಾಗಿದೆ. ಇದನ್ನು ಕಾಮಗಾರಿ ನಡೆಯುತ್ತಿರುವ ಯಶವಂತಪುರಕ್ಕೆ ತಂದು ಅಲ್ಲಿ ಬೃಹತ್‌ ಗಾತ್ರದ 2 ಕ್ರೇನ್‌ಗಳ ಮೂಲಕ ಕೇವಲ 15 ನಿಮಿಷದಲ್ಲಿ ಪಿಲ್ಲರ್‌ ಮೇಲೆ ಏರಿಸಲಾಗಿದೆ. ಬಾಕ್ಸ್‌ ಗರ್ಡರ್‌ಗಳು ತೀರಾ ಚಿಕ್ಕದಾಗಿರುತ್ತವೆ. ಅವುಗಳನ್ನು ಒಂದಕ್ಕೊಂದು ಜೋಡಿಸಿ ಪಿಲ್ಲರ್‌ಗಳ ಮೇಲೆ ಏರಿಸುವುದಕ್ಕೆ ಕಾಲಾವಕಾಶ ಹೆಚ್ಚು ಬೇಕು. 

ಆದರೆ, ‘ಯು’ ಆಕಾರದಲ್ಲಿ ಒಂದೇ ಸ್ಪ್ಯಾನ್‌ನಲ್ಲಿ ಇರುವ ‘ಯು ಗರ್ಡರ್‌’ ಅನ್ನು ಪಿಲ್ಲರ್‌ ಮೇಲೆ ಸುಲಭವಾಗಿ ಅಳವಡಿಸಬಹುದು. ಅಲ್ಲದೆ ಇವುಗಳನ್ನು ನಿರ್ಮಿಸುವ ಕಾರ್ಯವೂ ವೇಗವಾಗಿ ನಡೆಯುತ್ತದೆ. ಇದರಿಂದ ಒಟ್ಟಾರೆ ಕಾಮಗಾರಿಯು ಚುರುಕಾಗಿ ಸಾಗುತ್ತದೆ ಎಂದು ಕೆ-ರೈಡ್‌ ಅಧಿಕಾರಿಗಳು ತಿಳಿಸಿದರು.ಇನ್ನು, ‘ಮಲ್ಲಿಗೆ’ ಮಾರ್ಗದಲ್ಲಿ ಎಲಿವೆಟೆಡ್‌ ಕಾರಿಡಾರ್‌ ನಿರ್ಮಾಣ ಆಗುತ್ತಿರುವ ಹೆಬ್ಬಾಳದಿಂದ ಯಶವಂತಪುರದವರೆಗೆ 450 ‘ಯು ಗರ್ಡರ್‌’ಗಳ ಅಗತ್ಯವಿದ್ದು, ಇವುಗಳ ನಿರ್ಮಾಣ ಹಂತ ಹಂತವಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ‘ಕೆ-ರೈಡ್‌’ ಅಧಿಕಾರಿಗಳು ತಿಳಿಸಿದರು.