ಇಸ್ಲಾಮಿಕ್‌ ನ್ಯಾಟೋ ಕೂಟ ಭಾರತಕ್ಕೆ ಅಪಾಯವೇ ?

| N/A | Published : Sep 23 2025, 11:45 AM IST

Is the Islamic NATO a threat to India

ಸಾರಾಂಶ

ಪಹಲ್ಗಾಂ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಮತ್ತು ಹಮಾಸ್ ಉಗ್ರರನ್ನು ಗುರಿಯಾಗಿ ಇತ್ತೀಚೆಗೆ ಕತಾರ್ ಮೇಲೆ ಇಸ್ರೇಲ್‌ ವಾಯು ನಡೆಸಿದ ದಾಳಿ ಬೆನ್ನಲ್ಲೇ, ಇಸ್ಲಾಮಿಕ್‌ ದೇಶಗಳು ಮಿಲಿಟರಿ ಕೂಟ ರಚನೆಯತ್ತ ಹೆಜ್ಜೆ ಇಟ್ಟಿವೆ.

 ಸುಧಾಂಶು ಸಿಂಗ್‌ ಭೃಗುವಂಶಿ

ದ ವಾರ್ಯ್‌ ಸ್ಥಾಪಕ ಮತ್ತು ಕ್ರಿಯೇಟರ್‌

 ಪಹಲ್ಗಾಂ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಮತ್ತು ಹಮಾಸ್ ಉಗ್ರರನ್ನು ಗುರಿಯಾಗಿ ಇತ್ತೀಚೆಗೆ ಕತಾರ್ ಮೇಲೆ ಇಸ್ರೇಲ್‌ ವಾಯು ನಡೆಸಿದ ದಾಳಿ ಬೆನ್ನಲ್ಲೇ, ಇಸ್ಲಾಮಿಕ್‌ ದೇಶಗಳು ಮಿಲಿಟರಿ ಕೂಟ ರಚನೆಯತ್ತ ಹೆಜ್ಜೆ ಇಟ್ಟಿವೆ. ಅಮೆರಿಕ ನೇತೃತ್ವದ ನ್ಯಾಟೋ ಸೇನಾ ಕೂಟದ ಮಾದರಿಯಲ್ಲೇ ಧರ್ಮದ ಆಧಾರದಲ್ಲಿ ಹುಟ್ಟಿಕೊಂಡ ಈ ಕೂಟವನ್ನು ‘ಅರಬ್‌ ನ್ಯಾಟೋ’ ಎಂದೇ ಕರೆಯಲಾಗುತ್ತಿದೆ. ಇದು ಭಾರತಕ್ಕೆ ಎಚ್ಚರಿಕೆ ಕರೆಗಂಟೆ ಎಂದು ಭಾವಿಸಲಾಗುತ್ತಿದೆ.

 ಈಗಾಗಲೇ ಭಾರತ ನಡೆಸಿದ ಆಪರೇಷನ್‌ ಸಿಂದೂರದಿಂದ ಜರ್ಜರಿತವಾಗಿರುವ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿರುವುದು ಹೊಸ ವಿಷಯವೇನಲ್ಲ. ಈ ಸಮಸ್ಯೆ ಇಷ್ಟರವರೆಗೆ ಪಾಕ್‌ ಅನ್ನು ಮಾತ್ರವೇ ಭಾದಿಸುತ್ತಿತ್ತು. ಆದರೆ ದೋಹಾ ಮೇಲಿನ ಇಸ್ರೇಲ್‌ ದಾಳಿಯ ಬಳಿಕ ಯುದ್ಧಾತಂಕದ ಮೋಡ ಸಮಸ್ತ ಇಸ್ಲಾಮಿಕ್‌ ದೇಶಗಳನ್ನು ಆವರಿಸಿಕೊಂಡಿದೆ. ಇದರ ಬೆನ್ನಲ್ಲೇ ನಡೆದ 40 ಇಸ್ಲಾಂ ದೇಶಗಳ ದಿಢೀರ್‌ ಸಭೆಯಲ್ಲಿ, ಏಕೈಕ ಅಣುಶಕ್ತ ರಾಷ್ಟ್ರವಾಗಿರುವ ಪಾಕಿಸ್ತಾನವು ‘ಅರಬ್‌- ಇಸ್ಲಾಮಿಕ್‌ ಟಾಸ್ಕ್‌ ಫೋರ್ಸ್‌’ನ ಪ್ರಸ್ತಾಪ ಮಾಡಿದೆ. ಇದರರ್ಥ, ಅಮೆರಿಕ ಮತ್ತು ಸ್ನೇಹಿತರ ನ್ಯಾಟೋ ಕೂಟದ ಮಾದರಿಯಲ್ಲಿ ಇಸ್ಲಾಂ ದೇಶಗಳ ಒಕ್ಕೂಟದ ಬೇಡಿಕೆ ಇಟ್ಟಿದೆ. ಮೇಲ್ನೋಟಕ್ಕೆ ಇದು ಕತಾರ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯ ಪರಿಣಾಮವಾಗಿ ಇಟ್ಟಿರುವ ಹೆಜ್ಜೆಯಂತೆ ಕಂಡರೂ, ಪಾಕ್‌ ಇದನ್ನು ಪ್ರಸ್ತಾಪಿಸಿರುವ ಕಾರಣ ಭಾರತವೂ ಇದರ ಪ್ರಮುಖ ಗುರಿ ಎಂಬುದು ಸ್ಪಷ್ಟ.

ಸೌದಿ ಜತೆ ರಕ್ಷಣಾ ಒಪ್ಪಂದ: ಅರಬ್‌ ನ್ಯಾಟೋ ಕೂಟ ಅಧಿಕೃತವಲ್ಲದೆ ಇರಬಹುದು. ಆದರೆ ಆ ಸಭೆಯಾದ ಎರಡೇ ದಿನದಲ್ಲಿ ಪಾಕಿಸ್ತಾನ ಮತ್ತು ಸೌದಿಯ ನಡುವೆ ರಕ್ಷಣಾ ಒಪ್ಪಂದ ಏರ್ಪಟ್ಟಿದೆ. ‘ನಾ ನಿನಗೆ, ನೀ ನನಗೆ ರಕ್ಷೆಯಾಗಿ ಇರಬೇಕು’ ಎಂಬುದೇ ಈ ಒಡಂಬಡಿಕೆ. ಇದರಡಿಯಲ್ಲಿ, ಪಾಕ್‌ ಅಥವಾ ಸೌದಿ ಮೇಲೆ ಯಾವ ದೇಶವಾದರೂ ಆಕ್ರಮಣ ಮಾಡಿದರೆ, ಇನ್ನೊಂದು ದೇಶವೂ ದಾಳಿಗೊಳಗಾದ ರಾಷ್ಟ್ರದ ಪರವಾಗಿ ನಿಂತು ಬಡಿದಾಡಬೇಕು. ಈಗಾಗಲೇ ಪಾಕ್‌ ನಾಯಕರು, ‘ನಮ್ಮ ಅಣ್ವಸ್ತ್ರವನ್ನು ಸೌದಿಗೂ ಕೊಡುತ್ತೇವೆ. ಭಾರತ ಸಮರಕ್ಕೆ ಇಳಿದರೆ ಸೌದಿ ನಮ್ಮ ಬೆನ್ನಿಗೆ ನಿಲ್ಲಲಿದೆ’ ಎಂದು ವೀರಾವೇಶದಿಂದ ಹೇಳಿಕೊಂಡಾಗಿದೆ.

ಧರ್ಮ ಆಧರಿತ ಗುಂಪು: ಈಗಾಗಲೇ ಧರ್ಮದ ಆಧಾರದಲ್ಲಿ 50-55 ಇಸ್ಲಾಮಿಕ್‌ ದೇಶಗಳ ಕೂಟ ರಚಿಸಿಕೊಂಡಿವೆ. ಈಗ ಅದೇ ಮಾನದಂಡವನ್ನು ಆಧಾರವಾಗಿ ಇಟ್ಟುಕೊಂಡು ಸೇನಾ ಕೂಟ ಕಟ್ಟಿಕೊಳ್ಳಲು ಮುಂದಾಗಿವೆ. ಇದರಲ್ಲಿ ಪಾಕಿಸ್ತಾನ ಸೇರಿದಂತೆ ನಮ್ಮ ಜತೆ ಉತ್ತಮ ಸಂಬಂಧ ಹೊಂದಿರುವ ನೆರೆಯ ಬಾಂಗ್ಲಾದೇಶ, ಮಾಲ್ಡೀವ್ಸ್‌, ಗಲ್ಫ್‌ ದೇಶಗಳು ಇರಲಿವೆ. ಒಂದು ವೇಳೆ ಮುಂದೆಂದಾದರೂ ಪಾಕ್‌ ಜತೆ ಭಾರತದ ಯುದ್ಧ ಶುರುವಾದರೆ, 40 ಇಸ್ಲಾಮಿಕ್‌ ದೇಶಗಳು ಕೇವಲ ಧರ್ಮದ ಆಧಾರದಲ್ಲಿ ನಮ್ಮ ಮೇಲೆ ನಿರ್ಬಂಧಗಳನ್ನು ಹೇರಬಹುದು.

ಹೀಗೆ ಅವರುಗಳೆಲ್ಲಾ ಕೂಡಿಕೊಂಡು ಧಾರ್ಮಿಕ ತಳಪಾಯದ ಮೇಲೆ ರಾಷ್ಟ್ರಗಳನ್ನು ಒಗ್ಗೂಡಿಸಿ, ತಮ್ಮ ಒಗ್ಗಟ್ಟನ್ನು ಜಾಗತಿಕ ಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದರೆ, ಇತ್ತ ಹಿಂದೂಗಳದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಒಂದೇ ಒಂದು ದೇಶವಿಲ್ಲ. ಕಾರಣ, ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಧರ್ಮದ ಆಧಾರದಲ್ಲಿ ಯಾವುದೇ ಒಗ್ಗಟ್ಟು ಪ್ರದರ್ಶನ ಸಾಧ್ಯವಿಲ್ಲ.

Read more Articles on