ಇಸ್ಕಾನ್‌ ಸಂಸ್ಥೆ ದೇಶದ ಪರಂಪರೆಯ ಶ್ರೇಷ್ಠ ರಾಯಭಾರಿ : ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್

| Published : Dec 09 2024, 01:15 AM IST / Updated: Dec 09 2024, 06:17 AM IST

ಸಾರಾಂಶ

ಭಗವದ್ಗೀತೆಯ ಮೇಲಿನ ಭಕ್ತಿಯಿಂದ ಲಕ್ಷಾಂತರ ಪ್ರತಿಗಳನ್ನು 70 ಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಿ, ವಿತರಿಸಿರುವ ಇಸ್ಕಾನ್‌ ಸಂಸ್ಥೆ ಆಧುನಿಕ ಯುಗದ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠ ರಾಯಭಾರಿ ಎಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಶ್ಲಾಘಿಸಿದರು.

 ಬೆಂಗಳೂರು :  ಭಗವದ್ಗೀತೆಯ ಮೇಲಿನ ಭಕ್ತಿಯಿಂದ ಲಕ್ಷಾಂತರ ಪ್ರತಿಗಳನ್ನು 70 ಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಿ, ವಿತರಿಸಿರುವ ಇಸ್ಕಾನ್‌ ಸಂಸ್ಥೆ ಆಧುನಿಕ ಯುಗದ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠ ರಾಯಭಾರಿ ಎಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಶ್ಲಾಘಿಸಿದರು.

ರಾಜಾಜಿನಗರ ಇಸ್ಕಾನ್ ಹರೇ ಕೃಷ್ಣ ಗಿರಿಯ ಮಲ್ಟಿವಿಷನ್ ಥಿಯೇಟರ್‌ನಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಾ.ಮೊಗಸಾಲೆ ಅವರು ಬರೆದಿರುವ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಯ ಕಾದಂಬರಿ ‘ವಿಶ್ವಂಬರ’ ಪುಸ್ತಕವನ್ನು ಬಿಡುಗಡೆಗೊಳಿಸಿ ರಾಜ್ಯಪಾಲರು ಮಾತನಾಡಿದರು.

ಶ್ರೀ ಚೈತನ್ಯ ಮಹಾಪ್ರಭುಗಳು ಭಕ್ತಿ ಚಳವಳಿಯ ಮಹಾನ್ ಸಂತ. ಸಮಾಜ ಸುಧಾರಕ ಮತ್ತು ಕೃಷ್ಣ ಭಕ್ತ. ಈ ಯುಗದಲ್ಲಿ ಪ್ರೀತಿ ಮತ್ತು ಭಕ್ತಿಯ ಮೂಲಕ ಸಮಾಜಕ್ಕೆ ದೈವಿಕ ಆಧ್ಯಾತ್ಮಿಕತೆಯ ಮಾರ್ಗವನ್ನು ತೋರಿಸಿದವರು. ಭಗವದ್ಗೀತೆಯ ಸಂದೇಶಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಕೊಂಡೊಯ್ದರು. ಅಲ್ಲಿ ಶ್ರೀ ಕೃಷ್ಣನ ಬೋಧನೆಗಳನ್ನು ಸ್ವೀಕರಿಸಲು ಪ್ರಪಂಚದ ಮೂಲೆ ಮೂಲೆಯ ಜನರನ್ನು ಪ್ರೇರೇಪಿಸಿದರು. ಅವರ ಬೋಧನೆಗಳು ಆಧ್ಯಾತ್ಮಿಕ ಸಮಾನತೆ, ಸಹೋದರತ್ವ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ಆಧರಿಸಿವೆ. 2 ವರ್ಷಗಳಲ್ಲಿ ಆರು ಖಂಡಗಳಲ್ಲಿ ನೂರಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ಸಂಸ್ಕೃತಿಯನ್ನು ಹರಡಿದರು ಎಂದು ಶಾಘಿಸಿದರು.

ಲೇಖಕ ಡಾ. ಮೊಗಸಾಲೆ ಅವರು ಚೈತನ್ಯ ಮಹಾಪ್ರಭುಗಳ ಜೀವನ ಕುರಿತು ಕನ್ನಡದಲ್ಲಿ ಬರೆದಿರುವುದು ಶ್ಲಾಘನೀಯ. ಇದು ಚೈತನ್ಯ ಮಹಾಪ್ರಭುಗಳ ಚಿಂತನೆಗಳನ್ನು ಸಾರ್ವಜನಿಕರಿಗೆ ಹರಡಲು ಸಹಾಯ ಮಾಡುತ್ತದೆ. ಈ ಪುಸ್ತಕವು ಭಾರತೀಯ ಕನ್ನಡ ಸಾಹಿತ್ಯದ ಪ್ರಮುಖ ಪುಸ್ತಕವಾಗಲಿ. ಸ್ಫೂರ್ತಿಯ ಮೂಲವಾಗಲಿ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಹಾಯ ಮಾಡಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಮೈಸೂರು ಇಸ್ಕಾನ್ ಅಧ್ಯಕ್ಷ ಸ್ತೋಕಾ ಕೃಷ್ಣ ಸ್ವಾಮಿ, ಬೆಂಗಳೂರು ಇಸ್ಕಾನ್ ನ ಉಪಾಧ್ಯಕ್ಷ ಚಂಚಲಪತಿ ದಾಸ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.