ಸಾರಾಂಶ
ಬೆಂಗಳೂರು : ನಗರದಲ್ಲಿನ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ನೀರಿನ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಲು ಏ.1ರಿಂದ ನಗರ ವ್ಯಾಪ್ತಿಯಲ್ಲಿ ನೀರಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಜಲಮಂಡಳಿ ನೋಡಿಕೊಳ್ಳಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಾವೇರಿ 5ನೇ ಹಂತದ ಯೋಜನೆ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ. ಜತೆಗೆ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಒಂದೇ ಸಂಸ್ಥೆಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಏ.1ರಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕೊಳವೆಬಾವಿಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಹೊಣೆ ಜಲಮಂಡಳಿಯದ್ದಾಗಿರಲಿದೆ. ಜತೆಗೆ 110 ಹಳ್ಳಿ ಸೇರಿದಂತೆ ನಗರದಲ್ಲಿ ನೀರಿನ ಸಮಸ್ಯೆ ಎದುರಾಗುವ ಕಡೆಗಳಲ್ಲಿ ಟ್ಯಾಂಕರ್‌ಗಳಿಂದ ನೀರು ಪೂರೈಕೆ ಸೇರಿ ಎಲ್ಲ ಕಾರ್ಯಗಳನ್ನೂ ಜಲಮಂಡಳಿಯೇ ಮಾಡಲಿದೆ ಎಂದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳು ಬಿಬಿಎಂಪಿಗೆ ನೀಡುವ ಅನುದಾನವನ್ನು ಜಲಮಂಡಳಿಗೆ ವರ್ಗಾಯಿಸಲಾಗುವುದು. ಕೊಳವೆಬಾವಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜಲಮಂಡಳಿಗೆ ಪತ್ರವನ್ನೂ ಬರೆಯಲಾಗಿದೆ. ನಗರದಲ್ಲಿ ಕೊಳವೆಬಾವಿ ಕೊರೆಯಲು ಇನ್ನು ಮುಂದೆ ಜಲಮಂಡಳಿ ಅನುಮತಿ ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳು ತೆರಿಗೆ ವ್ಯಾಪ್ತಿಗೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಮತ್ತು ಈವರೆಗೆ ಖಾತೆ ಮಾಡಿಸಿಕೊಳ್ಳದ ಆಸ್ತಿಗಳನ್ನು ಈಗ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಹೊಸ ಖಾತೆ ಪಡೆಯಲು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು. ಹೊಸದಾಗಿ ಖಾತೆ ಪಡೆಯುವ ಸಂದರ್ಭದಲ್ಲಿಯೇ ತೆರಿಗೆ ಪಾವತಿಸಿ, ಆಸ್ತಿ ತೆರಿಗೆ ವ್ಯಾಪ್ತಿಗೆ ಬರಬಹುದಾಗಿದೆ. ಈಗಾಗಲೇ 10 ಸಾವಿರ ಆಸ್ತಿಗಳು ಖಾತಾ ಪಡೆದು, ತೆರಿಗೆ ಪಾವತಿಸಿವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.