ಜನವರಿ 14ರಿಂದ 20ರವರೆ ನಿಮ್ಮ ರಾಶಿ ಫಲ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ

| Published : Jan 14 2024, 01:31 AM IST / Updated: Jan 14 2024, 12:31 PM IST

ಜನವರಿ 14ರಿಂದ 20ರವರೆ ನಿಮ್ಮ ರಾಶಿ ಫಲ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮೇಷ ರಾಶಿಯಿಂದ ಮೀನರಾಶಿಯ ವರೆಗೂ ಜ.14ರಿಂದ ಜ.20ರವರೆಗಿನ ರಾಶಿ ಫಲ ಇಲ್ಲಿದೆ ನೋಡಿ.

ಮೇಷರಾಶಿ:
ಈ ವಾರ ನಿಮಗೆ ಮಿಶ್ರಫಲ. ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯ ಪ್ರಗತಿ. ಹಣಕ್ಕಾಗಿ ಒದ್ದಾಡ ಬೇಕಿಲ್ಲ. ಅನುಕೂಲಕ್ಕೆ ತಕ್ಕಷ್ಟು ಹಣ ಸಿಕ್ಕೇ ಸಿಗುತ್ತದೆ. ಆದರೆ ಇತ್ತೀಚಿನ ಕೆಲವು ಸಮಯದಿಂದ ಒತ್ತಡ ಅನುಭವಿಸುತ್ತಾ ಬಂದಿರುವ ನೀವು ಇನ್ನಷ್ಟು ಒತ್ತಡಕ್ಕೆ ಒಳಗಾಗಲಿದ್ದೀರಿ. 

ನಿಮ್ಮ ಬಗ್ಗೆಯೇ ನಿಮಗೆ ಸಿಟ್ಟು ಬರಬಹುದು. ಮನೆಯವರ, ಸ್ನೇಹಿತರ ಮೇಲೆ ಸಿಟ್ಟು ತೋರಿಸುವಿರಿ. ಇದು ನಿಮ್ಮ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಹಿರಿಯ ಆಶೀರ್ವಾದ ನಿಮ್ಮ ಮೇಲಿದೆ. ಹಾಗಾಗಿ ವಾರದ ಕೊನೆಯಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ವೃಷಭ ರಾಶಿ:
ಸದ್ಯಕ್ಕೀಗ ಶತ್ರು ಎಲ್ಲಿದ್ದಾರೆ ಅಂದರೆ ನಿಮ್ಮೊಳಗೇ ಇದ್ದಾರೆ ಅನ್ನಬಹುದು. ಏಕೆಂದರೆ ಹೊರಗಿನ ಶತ್ರುಗಳಿಗಿಂತ ನಿಮ್ಮೊಳಗಿನ ಶತ್ರುಗಳಿಗೆ ಪಾಠ ಕಲಿಸಿ ಮತ್ತೆ ಮೇಲೇಳದ ಹಾಗೆ ಮಾಡುವುದು ನಿಮ್ಮ ಮುಂದಿರುವ ಸವಾಲು. 

ಇಗೋ ಕಡಿಮೆ ಮಾಡಿಕೊಳ್ಳಿ. ಅತಿಯಾದ ಯೋಚನೆ ಬೇಡ. ನಿಮ್ಮೊಳಗೆ ನೀವೇ ಚಿಂತಿಸಿ ಒತ್ತಡಗಳನ್ನು ಸೃಷ್ಟಿಸಿಕೊಳ್ಳುತ್ತೀರಿ‌. ಮಾನಸಿಕ ಚಿಂತೆಯಿಂದ ಬಳಲುತ್ತೀರಿ. ಇದರಿಂದ ಹೊರಬರಲು ಪ್ರಯತ್ನಿಸಿ. ರಾಹು ನಿಮಗೆ ಶಕ್ತಿ ಕೊಡುತ್ತಾನೆ. ಧನಲಾಭ ಕೊಡುತ್ತಾನೆ. ಮಾನಸಿಕ ಒತ್ತಡಗಳಿಂದ ಹೊರಬರುವ ದಾರಿ ತೋರಿಸುತ್ತಾನೆ. ಖರ್ಚು ಹೆಚ್ಚಾಗಬಹುದು.

ಮಿಥುನ ರಾಶಿ:
ಗುರು ಲಾಭದಲ್ಲಿ‌ ಇದ್ದು ನಿಮಗೆ ಧನಲಾಭ ಕಾರ್ಯಸಫಲತೆ, ಉದ್ಯೋಗ ಪ್ರಾಪ್ತಿ, ವಿವಾಹಯೊಗ ಮುಂತಾದ ಶುಭಫಲಗಳನ್ನು ಕೊಡುತ್ತಾನೆ. ಕೋರ್ಟು ಕೇಸುಗಳಿದ್ದರೆ ನಿಮ್ಮ ಪರವಾಗಿ ಆಗುತ್ತದೆ. ಮಾನಸಿಕ ನೆಮ್ಮದಿ ಇದೆ. ಸ್ವಾರ್ಥ ಮನೋಭಾವದಿಂದ ಇತರರ ಮೇಲೆ ಗೂಬೆ ಕೂರಿಸುವಿರಿ. 

ಇದು ಭವಿಷ್ಯದಲ್ಲಿ ನಿಮಗೆ ಹಾನಿ ಮಾಡಲಿದೆ. ನಿಮ್ಮ ನಿರ್ದಯ ನಡವಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ಇದರ ಫಲ ಅನುಭವಿಸಬೇಕಾಗುತ್ತದೆ. ಭವಿಷ್ಯದ ಬಗ್ಗೆ ಆಶಾವಾದ ಒಳ್ಳೆಯದೇ. ಆದರೆ ವಾಸ್ತವವನ್ನು ಮರೆಯಬಾರದು. ಇತರರೆಡೆ ಬೊಟ್ಟು ಮಾಡುವ ಮೊದಲು ನಮ್ಮ ಅಂತರಂಗ ನೋಡಿಕೊಳ್ಳಬೇಕು.

ಕಟಕರಾಶಿ:
ಅಷ್ಟಮ ಶನಿಯ ಪ್ರಭಾವದಿಂದ ಕೆಲಸಗಳು ನಿಧಾನ. ಪ್ರಗತಿ‌ ಕಡಿಮೆ. ಶ್ರಮ ಹೆಚ್ಚು. ನೀವು ಬೇಸತ್ತು ಬಸವಳಿದು ಒದ್ದಾಡಿದ್ದಕ್ಕೆ ಈ ವಾರ ಕೊಂಚ ರಿಲೀಫ್‌ ಸಿಗಬಹುದು. ಶುಕ್ರ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಮಗು ಬೇಕೆನ್ನುವವರಿಗೆ ಗುಡ್‌ನ್ಯೂಸ್‌ ಇದೆ. ಈಗಾಗಲೇ ಇರುವ ಮಕ್ಕಳಿಗೆ ಅಭಿವೃದ್ಧಿ ಇದೆ. 

ಸಂಗಾತಿಯ ಕಡೆಯಿಂದ ಸಹಾಯ ಒದಗಿ ಬರುತ್ತದೆ. ವಾರದ ಮಧ್ಯಭಾಗದವರೆಗೆ ಶುಭಫಲಗಳನ್ನು ನಿರೀಕ್ಷಿಸಬಹುದು. ಆ ಬಳಿಕ ಮನಸ್ಸಿಗೆ ಕೊಂಚ ಕಿರಿಕಿರಿ, ತಾಯಿಯಿಂದ ಮನಸ್ಸಿಗೆ ನೋವಾಗುವ ಘಟನೆ ನಡೆಯಬಹುದು. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೋಗಿ.

ಸಿಂಹರಾಶಿ:
ಇಡೀ ಜಗತ್ತೇ ನನ್ನ ಬಗ್ಗೆ ಒಳ್ಳೆಯ ಮಾತು ಹೇಳಬೇಕು ಎಂಬ ಭಾವನೆ ಸರಿಯಲ್ಲ. ಇದರಿಂದ ಸುಮ್ಮ ಸುಮ್ಮನೇ ಮನಃಶಾಂತಿ ಹಾಳಾಗುತ್ತದೆ. ಅದರ ಬದಲು ಇರುವ ಒಳಿತಿನ ಬಗ್ಗೆ ಚಿಂತಿಸಿ. ಈಗ ನಿಮಗೆ ಗುರುಬಲ ಇದೆ. ಯಾವುದೇ ಹೊಸ ಕೆಲಸ ಹೊಸ ಯೋಜನೆ ಕೈಗೆತ್ತಿಕೊಂಡರೆ ತುದಿ ಮುಟ್ಟುತ್ತದೆ. 

ಕೆಲಸಗಳು ಅಂದುಕೊಂಡ ವೇಗದಲ್ಲಿ ನಡೆಯುತ್ತದೆ.‌ ಎಲ್ಲ ಗ್ರಹಗಳೂ ನಿಮಗೆ ಪೂರಕವಾಗಿವೆ. ನಿಮ್ಮಬಲದ ಜೊತೆಗೆ ತಮ್ಮ ಬಲವನ್ನು ಸೇರಿಸಿ ಯಶಸ್ಸಿನ ಕಂಪ್ಲೀಟ್‌ ಪ್ಯಾಕೇಜ್‌ ಕೊಡುತ್ತವೆ. ಆದರೆ ನಿಮ್ಮ, ಮನೆಯವರ ಆರೋಗ್ಯ ಜಾಗ್ರತೆಯಿಂದ ನೋಡಿಕೊಳ್ಳಿ.

ಕನ್ಯಾರಾಶಿ:
ಮನೆಯಲ್ಲಿ ಹರ್ಷದ ವಾತಾವರಣ ಇರುತ್ತದೆ. ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿದೆ. ಅನೇಕ ಶುಭಫಲಗಳನ್ನು ನಿರೀಕ್ಷಿಸಬಹುದು. 

ವಾಹನದಿಂದ ಸಹೋದರಿಯಿಂದ ಲಾಭ ಇದೆ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಶನಿ ಧನಲಾಭ ಕೊಡುತ್ತಾನೆ. ಆದರೆ ವಾರಾಂತ್ಯದ ಹೊತ್ತಿಗೆಸಣ್ಣ ಪುಟ್ಟ ಅಡೆತಡೆಗಳು ಎದುರಾಗುತ್ತದೆ. ಮರ್ಯಾದೆ ಹೋಗುವಂಥಾ ಪ್ರಸಂಗಗಳೂ ಬರಬಹುದು.

ತುಲಾರಾಶಿ:
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ವಾರಪೂರ್ತಿ ಒಂದಲ್ಲ ಒಂದು ರೀತಿಯ ಸವಾಲುಗಳು ಎದುರಾಗಲಿವೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ಇರುವುದಿಲ್ಲ. ಬೇರೆಯವರನ್ನು ಟೀಕಿಸುವಿರಿ. ಸ್ವಲ್ಪ ಶಾಂತಿ ಸಹನೆಯಿಂದ ವರ್ತಿಸಿದರೆ ಸಮಸ್ಯೆಗಳಿಂದ ಪಾರಾಗಬಹುದು. 

ವಾರದ ಮಧ್ಯಭಾಗ ನಿಮ್ಮ ವರ್ಚಸ್ಸು ಬಲ ಪರಾಕ್ರಮ ಹೆಚ್ಚಾಗುತ್ತದೆ. ಏಳನೇ ಮನೆಯ ಗುರು ನಿಮಗೆ ಧನಲಾಭ ಕಾರ್ಯಸಿದ್ಧಿ ಮಾಡಿಕೊಡುತ್ತಾನೆ. ಮಾನಸಿಕ ಕಿರುಕುಳದ ಸಾಧ್ಯತೆ ಇದೆ. ಅನೇಕ ಲಾಭಗಳು ಸಿಗಬಹುದು. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.

ವೃಶ್ಚಿಕ ರಾಶಿ:
ಆತ್ಮವಿಶ್ವಾಸ ಒಳ್ಳೆಯದು, ಆದರೆ ನಾನೇ ಸರಿ ಎಂಬ ಭಾವನೆ ಬಿಡುವುದು ಒಳ್ಳೆಯದು. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಒಮ್ಮೆ ಕೈಹಿಡಿದ ಕೆಲಸ ಕಾರ್ಯಗಳು ಸಂಪೂರ್ಣವಾಗುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಶುಕ್ರ , ಬುಧ ನಿಮಗೆ ಶುಭಫಲಗಳನ್ನು ಕೊಡುತ್ತಾರೆ. 

ಆದರೆ ಕೊಂಚ ಮಾನಸಿಕ ಕಿರುಕುಳ, ಸಾಮಾಜಿಕ ಸ್ಥಾನಮಾನದಲ್ಲಿ ಹಿನ್ನಡೆ, ಸರೀಕರ ನಡುವೆ ಅವಮಾನವಾಗುವಂತ ಪ್ರಸಂಗಗಳು ಎದುರಾಗುತ್ತದೆ. ಧೃತಿಗೆಡಬೇಡಿ. ಪ್ರಾಮಾಣಿಕವಾಗಿ ನಡೆದುಕೊಳ್ಳಿ.‌ ಯಾರೊಂದಿಗೂ ಜಗಳ ವಾದ ಬೇಡ.

ಧನಸ್ಸುರಾಶಿ:
ಷೇರು ವಹಿವಾಟುಗಳಲ್ಲಿ ಧನಲಾಭ ಇದೆ. ಯಾವುದೇ ಕಂಪನಿಯಲ್ಲಿ ಬಂಡವಾಳ ಹೂಡಬಹುದು. ಲಾಭ ಇದೆ.‌ ಅವಿವಾಹಿತರಿಗೆ ವಿವಾಹ ಯೋಗ ಇದೆ. ಅರ್ಹರಿಗೆ ನೌಕರಿ, ಬಡ್ತಿ ನಿರೀಕ್ಷಿಸಬಹುದು. ಯಾವ ಕೆಲಸ ಹಿಡಿದರೂ ಯಶ ಮತ್ತು ಜಯ ನಿಮ್ಮದೇ. ಸಂತಾನದಿಂದ ಲಾಭ. ಮಕ್ಕಳಿಂದ ಶುಭ ಸುದ್ದಿ ಇದೆ. 

ಮಕ್ಕಳ ಅಭಿವೃದ್ಧಿ ನಿಮಗೆ ಸಂತಸ ಕೊಡುತ್ತದೆ. ವೃತ್ತಿ ವ್ಯಾಪಾರದಲ್ಲಿ ಯಶಸ್ಸು ಲಾಭ ಇದೆ.‌ ಆದರೆ ಕೊಂಚ ದೈಹಿಕ ಶ್ರಮ ಅಲೆದಾಟ ಇರುತ್ತದೆ. ನಿಮ್ಮ ಪರಾಕ್ರಮ, ಶಕ್ತಿ ಹೆಚ್ಚಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ.

ಮಕರ ರಾಶಿ:
ಕಷ್ಟಪಟ್ಟು ದುಡಿಯುವ ಕೈಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಆರ್ಥಿಕ ಪರಿಸ್ಥಿತಿಯು ಉತ್ತಮ ಗತಿಯಲ್ಲಿ ಅಭಿವೃದ್ಧಿ ಹೊಂದಲಿದೆ. ಸರಿಯಾದ ತೀರ್ಮಾನಗಳನ್ನು ಕೈಗೊಳ್ಳಿರಿ. ನೀವು ಕಷ್ಟಪಟ್ಟು ದುಡಿಯಲು ಹಿಂಜರಿಯುವುದಿಲ್ಲ. ಆದರೆ ಯಾವುದೇ ವಿಚಾರದಲ್ಲಿಯೂ ಬೇಗನೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಬೇಡ. 

ಯಾವುದೇ ಒತ್ತಡದ ಸನ್ನಿವೇಶದಲ್ಲಿಯೂ ಸೂಕ್ತವಾದ ತೀರ್ಮಾನಗಳನ್ನೇ ತೆಗೆದುಕೊಳ್ಳಿ. ವಾಹನದಿಂದ ನಷ್ಟ ಇದೆ. ಹೊಸ ಅವಕಾಶಗಳು ಬರುವ ಕಾಲ. ಅಲ್ಪ ಪ್ರಯತ್ನದಲ್ಲೇ ಒಳ್ಳೆಯ ಫಲ ದೊರಕುವ ಸಮಯ. ಮುಂದಿನ ದಿನಗಳಲ್ಲಿ ಬಹಳಷ್ಟು ಶುಭಫಲವಿದೆ.

ಕುಂಭರಾಶಿ:
ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆತರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಚಿಕ್ಕಪುಟ್ಟ ಕೆಲಸಗಳಿಗೂ ದೊಡ್ಡಮಟ್ಟದ ಪ್ರಯತ್ನವೇ ಬೇಕು. ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮಲ್ಲಿರುವ ಒಳ್ಳೆಯತನವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರಿಗಾಗಿ ಸಂಪಾದಿಸಿದ ಹಣದ ಬಹುಪಾಲು ಖರ್ಚಾಗಬಹುದು. 

ಯಾರನ್ನು ದೂರ ಮಾಡಿಕೊಳ್ಳದ ಪರಿಸ್ಥಿತಿಯಲ್ಲಿ ಇರುವಿರಿ. 12 ನೇ ಮನೆಯಲ್ಲಿ ಸೂರ್ಯ, ನಿಮ್ಮ ರಾಶಿಯಲ್ಲಿ ಇರುವ ಶನಿ ಹಾಗೂ ಎರಡನೇ ಮನೆಯ ರಾಹು ಈಗ ನಿಮಗೆ ಅನುಕೂಲರಲ್ಲ. ಹಾಗೆಂದು ಈ ವಾರ ಒಳ್ಳೆ ಫಲಗಳಂತೂ ಇವೆ.

ಮೀನರಾಶಿ:
ಕುಟುಂಬದ ನಡುವಿನ ಆತ್ಮೀಯತೆ ಹೊಸ ನಿರೀಕ್ಷೆಗಳನ್ನು ಮೂಡಿಸುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಒಂದೇ ಮನಸ್ಸಿನಿಂದ ಕೈಗೊಳ್ಳುವ ನಿರ್ಧಾರಗಳು ಜೀವನಕ್ಕೆ ಹೊಸ ಅರ್ಥವನ್ನು ನೀಡುತ್ತವೆ. ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ. ಕೇವಲ ಮಾತಿನಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲ. 

ಚಿಕ್ಕ ಪುಟ್ಟ ವಿಚಾರವಾದರೂ ಬದಲಾಗದ ಮನಸ್ಸು ಮುಖ್ಯವಾಗುತ್ತದೆ. ಗಾಂಭೀರ್ಯದ ನಡೆ ನುಡಿಯ ಕಾರಣ ಸ್ನೇಹ ಸಂಬಂಧಗಳು ಬಹುಕಾಲ ಉಳಿಯಬಹುದು. ತಪ್ಪು ಯಾರದೇ ಆದರೂ ಅನವಶ್ಯಕವಾಗಿ ಯಾರನ್ನು ಟೀಕಿಸದಿರಿ. ವೃತ್ತಿಯಲ್ಲಿ ಕಿರುಕುಳ.