ಸಾರಾಂಶ
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್‌ಎನ್ ಗ್ರಾಮದ 70 ವರ್ಷ ವಯಸ್ಸಿನ ಮಡಿವಾಳಪ್ಪ ಗೌಡ, ಬರೋಬ್ಬರಿ 2,500 ಕಿಲೋ ಮೀಟರ್ ದೂರ ಪಾದಯಾತ್ರೆ ಮೂಲಕ ಉತ್ತರಾಖಂಡದಲ್ಲಿರುವ ಕೇದಾರನಾಥ ದರ್ಶನ ಮಾಡಿದ್ದಾರೆ.
ಶೇಷಮೂರ್ತಿ ಅವಧಾನಿ
ಕಲಬುರಗಿ : ಬಿರುಬಿಸಿಲಿನಲ್ಲಿ ವೃದ್ಧರು ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟ ಎನ್ನುವ ಹೊತ್ತಿನಲ್ಲಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್‌ಎನ್ ಗ್ರಾಮದ 70 ವರ್ಷ ವಯಸ್ಸಿನ ಮಡಿವಾಳಪ್ಪ ಗೌಡ, ಬರೋಬ್ಬರಿ 2,500 ಕಿಲೋ ಮೀಟರ್ ದೂರ ಪಾದಯಾತ್ರೆ ಮೂಲಕ ಉತ್ತರಾಖಂಡದಲ್ಲಿರುವ ಕೇದಾರನಾಥ ದರ್ಶನ ಮಾಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರ ಈ ಭಕ್ತಿಯ ಪಾದಯಾತ್ರೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಡಿವಾಳಪ್ಪ ಗೌಡರು ನಿರಂತರವಾಗಿ, ನಿತ್ಯ 50ರಿಂದ 60 ಕಿ.ಮೀ.ನಂತೆ 61 ದಿನಗಳ ಕಾಲ ಪಾದಯಾತ್ರೆ ಮಾಡಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಂದಾಕಿನಿ ನದಿಯ ದಂಡೆಯ ಮೇಲಿರುವ ಕೇದಾರನಾಥ ದೇವಾಲಯವನ್ನು ತಲುಪಿ, ದೇವನ ದರ್ಶನ ಮಾಡಿದ್ದಾರೆ. ಕಾಲ್ನಡಿಗೆಯಲ್ಲಿಯೇ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಸಂಕಲ್ಪ ಅವರದು. ಈಗಾಗಲೇ ನಾಲ್ಕಾರು ಬಾರಿ ಇದೇ ರೀತಿ ಪಾದಯಾತ್ರೆಯಲ್ಲಿಯೇ ಬೇರೆ, ಬೇರೆ ದೇವರ ದರ್ಶನ ಮಾಡಿದ್ದಾರೆ. ಇದೀಗ ಬಿರುಬಿಸಿಲಲ್ಲಿ ಕಲಬುರಗಿಯಿಂದ ಕೇದಾರನಾಥದವರೆಗೂ ಪಾದಯಾತ್ರೆ ಮಾಡಿ, ಭಕ್ತಿ ಮೆರೆದಿದ್ದಾರೆ.
ಉರಿ ಬಿಸಿಲಲ್ಲೇ ಕಾಲ್ನಡಿಗೆ:
ಬಿರುಬೇಸಿಗೆ ಮಾರ್ಚ್ನಲ್ಲಿ ಕಲಬುರಗಿಯಿಂದ ಆರಂಭವಾದ ಇವರ ಆಧ್ಯಾತ್ಮಿಕ ಪಾದಯಾತ್ರೆ, ಸಾಕಷ್ಟು ಸವಾಲಿನಿಂದ ಕೂಡಿತ್ತು. ಕಲಬುರಗಿಯ ಬಿಸಿಲು ಹೊದ್ದ ದಖ್ಖನ್ ಪ್ರಸ್ತಭೂಮಿ, ಆ ಬಳಿಕ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ...ಹೀಗೆ ಸಾಗುತ್ತ ಉತ್ತರಾಖಂಡ್‌ನ ಬಯಲು, ಕಾಡು, ಪರ್ವತಗಳ ಶ್ರೇಣಿಯಲ್ಲಿ ಪಾದಯಾತ್ರೆ ಮಾಡಿ ಗಮ್ಯ ಸ್ಥಳ ತಲುಪಿದ್ದಾರೆ.
ಗ್ರಾಮದ ಇನ್ನೂ ಕೆಲವರು ಮಡಿವಾಳಪ್ಪ ಗೌಡರ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಎರಡು ತಿಂಗಳು ನಿರಂತರವಾಗಿ ಪಾದಯಾತ್ರೆ ಮಾಡಿ, ಕೇದಾರನಾಥನ ದರ್ಶನ ಪಡೆದ ಗೌಡರ ಭಕ್ತಿಗೆ ಜನ ಫೀದಾ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
9 ಜ್ಯೋತಿರ್ಲಿಂಗ ದರ್ಶನ, ಇನ್ನೂ 3 ಉಳಿದಿವೆ:
ಈಗಾಗಲೇ ಪಾದಯಾತ್ರೆ ಮೂಲಕ ಅವರು 9 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದಾರೆ. ಗುಜರಾಥ್‌ನ ಸೋಮನಾಥ ಸೇರಿದಂತೆ ಇನ್ನೂ 3 ಜ್ಯೋತಿರ್ಲಿಂಗಗಳ ದರ್ಶನ ಬಾಕಿಯಿದೆ ಎನ್ನುತ್ತಾರೆ ಅವರು. ಕೇದಾರಕ್ಕೆ ಹೋಗುವಾಗ ರಾಜಸ್ಥಾನದಲ್ಲಿ ಬಿಸಿಲು ತುಂಬ ಇತ್ತು, ಅದನ್ನು ಹೊರತುಪಡಿಸಿದರೆ ಉಳಿದೆಡೆ ಎಲ್ಲಿಯೂ ತೊಂದರೆ ಆಗಿಲ್ಲ. ಬೆಳಗ್ಗೆ 3 ರಿಂದ 11 ರವರೆಗೆ ಕಾಲ್ನಡಿಗೆ, ನಂತರ ಸ್ನಾನ, ಊಟ, ಮತ್ತೆ ಮಧ್ಯಾಹ್ನ 3 ರಿಂದ ಸಂಜೆ 8 ರವರೆಗೂ ಪಾದಯಾತ್ರೆ.. ಹೀಗೆ, ನಿತ್ಯ ಸರಾಸರಿ 50 ರಿಂದ 60 ಕಿ.ಮೀ. ಕಾಲ್ನಡಿಗೆ ಮಾಡುತ್ತಿದ್ದೇವು ಎನ್ನುತ್ತಾರೆ ಮಡಿವಾಳಪ್ಪ ಗೌಡರು.
12 ಜ್ಯೋತಿಲಿಂಗ ದರ್ಶನದ ಗುರಿ
ಮಾರ್ಚ್ನಲ್ಲಿ ಕಲಬುರಗಿಯಿಂದ ಉತ್ತರಾಖಂಡಕ್ಕೆ ಪಾದಯಾತ್ರೆ ಆರಂಭಿಸಿದ್ದ ವಯೋವೃದ್ಧ ಬೆಳಗ್ಗೆ 3 -11 ರವರೆಗೆ ಕಾಲ್ನಡಿಗೆ, ನಂತರ ಸ್ನಾನ, ಊಟ. ಮಧ್ಯಾಹ್ನ 3-8ರವರೆಗೂ ನಡಿಗೆ ಪಾದಯಾತ್ರೆ ಮೂಲಕವೇ ದೇಶದ ವಿವಿಧ ರಾಜ್ಯಗಳ 12 ಜ್ಯೋತಿರ್ಲಿಂಗ ದರ್ಶನ ಗುರಿಈಗಾಗಲೇ ಪಾದಯಾತ್ರೆ ಮೂಲಕ 9 ಜ್ಯೋತಿರ್ಲಿಂಗ ದರ್ಶನ ಪಡೆದಿರುವ ಮಡಿವಾಳಪ್ಪ
ನಾಡಿನ ಒಳಿತಿಗಾಗಿ 12 ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಸಂಕಲ್ಪವಿತ್ತು. ವರ್ಷಕ್ಕೆ 4ರಂತೆ ದರ್ಶನ ಮಾಡುವ ಸಂಕಲ್ಪ ನನ್ನದು. ಅದರಂತೆ ಮಾ.3ರಂದು ಕಲಬುರಗಿಯಿಂದ ಹೊರಟು, ಇದೇ ಮೊದಲ ಬಾರಿಗೆ ಕೇದಾರನಾಥಕ್ಕೆ ಭೇಟಿ ನೀಡಿದ್ದೇನೆ. ಮೇ 1ಕ್ಕೆ ಕೇದಾರನಾಥ ತಲುಪಿದ್ದೇನೆ.
- ಮಡಿವಾಳಪ್ಪ ಗೌಡರು.