ಕನ್ನಡ ಸಾಹಿತ್ಯದಲ್ಲಿ ಕಂಬಾರರ ಕೃತಿಗಳು ಯಾವ ಮಹಾ ಕಾವ್ಯಗಳಿಗೂ ಕಡಿಮೆಯಿಲ್ಲ: ಶಿವಪ್ರಕಾಶ್‌

| Published : Dec 09 2024, 12:45 AM IST / Updated: Dec 09 2024, 06:21 AM IST

ಸಾರಾಂಶ

ಕನ್ನಡ ಸಾಹಿತ್ಯದಲ್ಲಿ ದ್ರಾವಿಡ ಸಂವೇದನೆಯನ್ನು ತಂದ ಕೀರ್ತಿ ಹಿರಿಯ ಜಾನಪದ ವಿದ್ವಾಂಸ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಸಲ್ಲುತ್ತದೆ. ಕಂಬಾರರ ಕೃತಿಗಳಲ್ಲಿ ಇದನ್ನು ಕಾಣಬಹುದು ಎಂದು ಲೇಖಕ ಎಚ್‌.ಎಸ್‌.ಶಿವಪ್ರಕಾಶ್‌ ಅಭಿಪ್ರಾಯಪಟ್ಟರು.

 ಬೆಂಗಳೂರು : ಕನ್ನಡ ಸಾಹಿತ್ಯದಲ್ಲಿ ದ್ರಾವಿಡ ಸಂವೇದನೆಯನ್ನು ತಂದ ಕೀರ್ತಿ ಹಿರಿಯ ಜಾನಪದ ವಿದ್ವಾಂಸ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಸಲ್ಲುತ್ತದೆ. ಕಂಬಾರರ ಕೃತಿಗಳಲ್ಲಿ ಇದನ್ನು ಕಾಣಬಹುದು ಎಂದು ಲೇಖಕ ಎಚ್‌.ಎಸ್‌.ಶಿವಪ್ರಕಾಶ್‌ ಅಭಿಪ್ರಾಯಪಟ್ಟರು.

ಸಾಹಿತ್ಯ ಅಕಾಡೆಮಿಯು ನಗರದ ಮಲ್ಲತ್ತಹಳ್ಳಿಯ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಂದ್ರಶೇಖರ ಕಂಬಾರ ಅವರಿಗೆ ಫೆಲೋಶಿಪ್‌ ಪ್ರದಾನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಬಾರರು ತಮ್ಮ ಕೃತಿಗಳಿಗೆ ನೇರವಾಗಿ ಜನರ ಪರಂಪರೆಯಿಂದ ಸಂಪನ್ಮೂಲಗಳನ್ನು ಪಡೆದುಕೊಂಡಿದ್ದರಿಂದ ದ್ರಾವಿಡ ಪರಂಪರೆಯನ್ನು ನಾವು ಕಾಣಬಹುದು. ವಚನಕಾರರ ಪರಂಪರೆಯನ್ನೂ ಬಳಸಿಕೊಂಡು ಸೃಜನಶೀಲ ಸಾಹಿತ್ಯ ನಿರ್ಮಿಸಿದ್ದಾರೆ. ಕಂಬಾರರ ಟೀಕೆಗಳೂ ಸೂಕ್ಷ್ಮತೆಯನ್ನು ಹೊಂದಿವೆ. ಪಡೆದುಕೊಂಡಿರುವುದಕ್ಕಿಂತ ಇನ್ನೂ ಹೆಚ್ಚು ಅರ್ಥಪೂರ್ಣವಾದದ್ದನ್ನು ನಾವು ಕಳೆದುಕೊಂಡಿದ್ದೇವೆ ಎಂಬುದನ್ನು ಅವರ ಸಾಹಿತ್ಯಕೃಷಿಯಲ್ಲಿ ಕಾಣಬಹುದು ಎಂದು ವ್ಯಾಖ್ಯಾನಿಸಿದರು.

ರಾಮಾಯಣ, ಮಹಾಭಾರತ ಪ್ರೇರಣೆಯಲ್ಲ:  ಕಂಬಾರರ ಯಾವ ಕೃತಿಗಳೂ ರಾಮಾಯಣ, ಮಹಾಭಾರತದಿಂದ ಪ್ರೇರಣೆ ಪಡೆದುಕೊಂಡಿಲ್ಲ. ಮಲೆಮಾದೇಶ್ವರ ಕಾವ್ಯಗಳು, ಮಂಟೇಸ್ವಾಮಿ ಪುರಾಣ ಮತ್ತಿತರ ಕಂಬಾರರ ಕೃತಿಗಳು ಯಾವ ಮಹಾ ಕಾವ್ಯಗಳಿಗೂ ಕಡಿಮೆ ಇಲ್ಲ. ಪ್ರತಿಯೊಬ್ಬ ಲೇಖಕರೂ ತಮ್ಮದೇ ಆದ ಬರವಣಿಗೆ ಶೈಲಿ ಹೊಂದಿರುತ್ತಾರೆ. ಆದರೆ ಕಂಬಾರರು ಇದಕ್ಕೆ ಅಪವಾದವಾಗಿದ್ದಾರೆ. ತಮ್ಮದೇ ಆದ ವಿನೂತನ ಶೈಲಿಯಿಂದ ಹೆಸರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ ಕೌಶಿಕ್‌ ಮಾತನಾಡಿ, ಕಂಬಾರರು ಸಾಹಿತ್ಯ, ಜಾನಪದ, ನಾಟಕ, ಸಿನಿಮಾ ಮತ್ತಿತರ ಪ್ರಾಕಾರಗಳಲ್ಲಿ ತೊಡಗಿಕೊಂಡಿದ್ದು ಪರಿಪೂರ್ಣ ಸಾಹಿತಿಯಾಗಿದ್ದಾರೆ. ಬರವಣಿಗೆಯ ಜೊತೆ ಜೊತೆಗೇ ಕ್ಯಾಮೆರಾದಲ್ಲೂ ಕೈಚಳಕ ತೋರಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ವಕ್ತಾರರಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಈ ವೇಳೆ ಚಂದ್ರಶೇಖರ ಕಂಬಾರ ಅವರಿಗೆ ಫೆಲೋಶಿಪ್‌ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷೆ ಕುಮುದ್‌ ಶರ್ಮಾ, ಕಾರ್ಯದರ್ಶಿ ಕೆ.ಶ್ರೀನಿವಾಸರಾವ್‌, ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ಬಸವರಾಜ ಕಲ್ಗುಡಿ, ಲೇಖಕ ಬಸವರಾಜ ಸಾದರ ಮತ್ತಿತರರು ಉಪಸ್ಥಿತರಿದ್ದರು.ಬರವಣಿಗೆಯು ನನಗೆ ಉಸಿರಾಟದಷ್ಟೇ ಅವಶ್ಯಕವಾಗಿದ್ದು ಅದನ್ನು ಯಾವಾಗಲೂ ಮುಂದುವರೆಸುತ್ತೇನೆ. ಫೆಲೋಶಿಪ್‌ ಪ್ರದಾನ ಮಾಡಿದ್ದಕ್ಕಾಗಿ ಅಕಾಡೆಮಿಗೆ ಅಭಾರಿಯಾಗಿದ್ದೇನೆ.

-ಡಾ.ಚಂದ್ರಶೇಖರ ಕಂಬಾರ, ಜ್ಞಾನಪಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ