ಸಾರಾಂಶ
ಏಯ್....ಸುಮ್ನಿರಮ್ಮ..., ಏನೇನೋ ಹೇಳಬೇಡ. ಆಂಜನೇಯನ ಹೆಸ್ರು ಹಾಳ್‌ಮ್ಯಾಡಬೇಡ! ಎಂದು ಮಹಿಳೆ ಮಾತನ್ನು ಅರ್ಧದಲ್ಲೇ ತುಂಡರಿಸಿದ್ರು! ಆ ಮಾತೇನೋ ಅಲ್ಲಿಗೆ ನಿಲ್ತು.
ಎಲ್ಲೊ ಒಂದು ಕಡೆ ತಮ್ಮ ಹೆಸರಿಗೇ ತಳುಕು ಹಾಕಿಕೊಳ್ತಾ ಅಂದುಕೊಂಡ್ರೋ ಏನೋ? ತಕ್ಷಣ ಮುಖ ಕೆಂಪಗೆ ಮಾಡಿಕೊಂಡ ಮಾಜಿ ಸಚಿವರು, ಆಂಜನೇಯನಾ? ಏಯ್....ಸುಮ್ನಿರಮ್ಮ... ಏನೇನೋ ಹೇಳಬೇಡ. ಆಂಜನೇಯನ ಹೆಸ್ರು ಹಾಳ್‌ಮ್ಯಾಡಬೇಡ! ಎಂದು ಮಹಿಳೆ ಮಾತನ್ನು ಅರ್ಧದಲ್ಲೇ ತುಂಡರಿಸಿದ್ರು!
ದೇವದಾಸಿ ಪದ್ಧತಿಗೂ ಶ್ರೀರಾಮ ಭಕ್ತ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ? ಸಂಬಂಧ ಇಲ್ಲದಿದ್ದರೂ ಇದ್ದಕ್ಕಿದ್ದಂತೆ ಆಂಜನೇಯ ದೇವಸ್ಥಾನದಲ್ಲೂ ದೇವದಾಸಿ ಪದ್ಧತಿ ಇತ್ತು ಎಂದು ಹೇಳಿದರೆ ಯಾರಿಗೆ ತಾನೆ ಸಿಟ್ಟು ಬರಲ್ಲ ಹೇಳಿ. ಅದೂ ಶ್ರೀರಾಮನ ಭಕ್ತನ ಹೆಸರು ಇಟ್ಟುಕೊಂಡಿರುವ ನಮ್ಮ ಮಾಜಿ ಸಚಿವ ಎಚ್.ಆಂಜನೇಯ ಅವರ ಮುಂದೆ ಯೇಈ ರೀತಿ ಹೇಳಿದರೆ ಹೇಗೆ ತಾನೇ ಸುಮ್ಮನಿರಲು ಸಾಧ್ಯ? ಇಂಥ ಸಿಟ್ಟಿನ ಪ್ರಸಂಗ ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಭವಿಸಿತು!!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಆಂಜನೇಯ ಸಾಹೇಬ್ರು, ಸರ್ಕಾರದ ಸೌಲಭ್ಯ ಸರಿಯಾಗಿ ಸಿಗಬೇಕಾದರೆ ದೇವದಾಸಿಯರ ಮರುಸಮೀಕ್ಷೆ ನಡೆಸಬೇಕು ಅಂತ ಒತ್ತಾಯಿಸುತ್ತಾ, ದೇವದಾಸಿ ಹಿಂದೂ ಧರ್ಮದ ಅನಿಷ್ಠ ಪದ್ಧತಿ. ಕೊಪ್ಪಳದ ಹುಲಿಗೆಮ್ಮ, ಬೆಳಗಾವಿಯ ರೇಣುಕಾ ಯಲ್ಲಮ್ಮ, ಯಾದಗಿರಿ ಮಲ್ಲಯ್ಯ, ಮೈಲಾರಲಿಂಗೇಶ್ವರ ಸೇರಿ ಇನ್ನೂ ಹಲವೆಡೆ ಈ ಪದ್ಧತಿ ನಡೀತಿದೆ ಎಂದು ಹೇಳುತ್ತಾ ಹೋದರು. ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲೇ ಇದ್ದ ಮಹಿಳೆಯೊಬ್ಬರು, ಸಾರ್... ಆಂಜನೇಯ ದೇವಸ್ಥಾನದಲ್ಲೂ ದೇವದಾಸಿ ಪದ್ಧತಿ ಇತ್ತು ಅಂದು ಬಿಟ್ರು!
ಎಲ್ಲೊ ಒಂದು ಕಡೆ ತಮ್ಮ ಹೆಸರಿಗೆ ತಳುಕು ಹಾಕಿಕೊಳ್ತಾ ಅಂದುಕೊಂಡ್ರೋ ಏನೋ? ತಕ್ಷಣ ಮುಖ ಕೆಂಪಗೆ ಮಾಡಿಕೊಂಡ ಮಾಜಿ ಸಚಿವರು, ಆಂಜನೇಯನಾ? ಏಯ್....ಸುಮ್ನಿರಮ್ಮ..., ಏನೇನೋ ಹೇಳಬೇಡ. ಆಂಜನೇಯನ ಹೆಸ್ರು ಹಾಳ್‌ಮ್ಯಾಡಬೇಡ! ಎಂದು ಮಹಿಳೆ ಮಾತನ್ನು ಅರ್ಧದಲ್ಲೇ ತುಂಡರಿಸಿದ್ರು! ಆ ಮಾತೇನೋ ಅಲ್ಲಿಗೆ ನಿಲ್ತು. ಆದರೆ, ಸುದ್ದಿಗೋಷ್ಠಿಯಲ್ಲಿ ಸೇರಿದ್ದ ಪತ್ರಕರ್ತರಲ್ಲಿ ಆ ಕ್ಷಣದ ಮಹಿಳೆಯ ಮಾತು, ಅದಕ್ಕೆ ಆಂಜನೇಯ ಅವರ ರಿಯಾಕ್ಷನ್ ಕೆಲಕ್ಷಣ ನಗಲು ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.
ಕಲಬುರಗಿ ಕಾರ್ಪೋರೇಷನ್‌ದಾಗೆ ಮಿಡ್ ನೈಟ್ ಆಪರೇಷನ್
ಕಲಬುರಗಿ ಸಿಟಿ ಕಾರ್ಪೋರೇಷನ್‌ಗೆ ಅರ್ಜಿ ಹಿಡ್ಕೊಂಡು ಹಾಡು ಹಗಲು ಹನ್ನೆರಡು ಗಂಟೆಗೆ ಹೋದ್ರೂ ಕೆಲಸ ಕೈಗೂಡೋದು ಕಷ್ಟ ಕಷ್ಟ ಅನ್ನೋ ಮಾತೊಂದಿದೆ. ವಿಷಯ ಹೀಗಿದ್ರೂ ಪಾಲಿಕೆಯಲ್ಲಿನ ಕಂಪ್ಯೂಟರ್‌ಗಳಿಗೆ ಏಕಾಏಕಿ ಮಧ್ಯರಾತ್ರಿ ಜೀವ ಬರ್ತದೆ, ಲಾಗ್ ಇನ್ ನಡೀತಿದೆ, ಇ-ಖಾತಾ, ಆಸ್ತಿ ಹಕ್ಕು ವರ್ಗಾವಣೆ, ಹೊಸ ಆಸ್ತಿ ಸೇರ್ಪಡೆಯಂಥ ಕೆಲಸಗಳೆಲ್ಲವೂ ಚಕಾಚಕ್ ಅಪ್‌ಡೇಟ್ ಆಗ್ತವೆ ಅಂದ್ರೆ ನಂಬಲು ಸಾಧ್ಯವೇ? ಪಾಲಿಕೆಯೊಳಗಣ ಮಿಡ್‌ನೈಟ್ ಜಾದೂಗಾರ್‌ನ ಹಾವಳಿ ಬಗ್ಗೆ ಈಚೆಗೆ ಟೌನ್‌ಹಾಲ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಪಿತೃಗಳೇ ಪ್ರಸ್ತಾಪಿಸಿದಾಗ ಎಲ್ರಿಗೂ ಶಾಕ್!
ಕಂಪ್ಯೂಟರ್‌ಗಳು ಮಧ್ಯರಾತ್ರಿ ಆನ್ ಆಗ್ತಾವೆ, ಲಾಗಿನ್ ಆಗಿ 87 ಆಸ್ತಿಗಳ ಹಕ್ಕು ವರ್ಗವಾಗ್ತದೆ, ನಗರದಾಚೆ 7,500 ಮನೆಗಳು ಪಾಲಿಕೆ ಸೇರ್ತವೆ, ಇದೆಲ್ಲ ಮಾಡ್ತಿರೋ ಪಾಲಿಕೆಯೊಳಗಿನ ನಿಶಾಚರಿ ಶಕ್ತಿಮಾನ್ ಯಾರೆಂದು ಮಾಜಿ ಮೇಯರ್ ಸೈಯ್ಯದ್ ಅಹ್ಮದ್ ಪ್ರಶ್ನಿಸಿದಾಗ ಎಲ್ರೂ ಅವಾಕ್ಕಾದರೆನ್ನಿ. ಕಂಪ್ಯೂಟರ್ ಲಾಗಿನ್ ಹೇಗಾಗ್ತಿದೆ ಗೊತ್ತಿಲ್ಲ, ಮಧ್ಯರಾತ್ರಿ 87 ಆಸ್ತಿಗಳ ಹಕ್ಕು ವರ್ಗಾವಣೆ ಆಗಿರೋದು ಸತ್ಯವೆಂದು ಝೋನಲ್ ಅಧಿಕಾರಿಗಳು ಒಪ್ಪಿಕೊಂಡಾಗಂತು ಇಡೀ ಸಭೆಯೇ ದಂಗು! ಲಾಗಿನ್‌ಗೆ ಝೋನಲ್ ಅಧಿಕಾರಿಗಳ ಮೊಬೈಲ್ ನಂಬರ್, ಒಟಿಪಿ, ಆರ್‌ಐ, ಆರ್‌ಓಗಳ ಸೂಚನೆ ಬೇಕಿದ್ರೂ ಅದ್ಹೇಗೆ ಚುಪ್ ಕೆ, ಚುಪ್ ಕೆ... ರಾತ್ರೋರಾತ್ರಿ ಲಾಗಿನ್, ಲಾಗೌಟ್ ಸಾಧ್ಯ? ಇಷ್ಟೆಲ್ಲ ನಡೀತಿದ್ರೂ ವಲಯ ಆಯುಕ್ತರು, ಇಂಜಿನಿಯರ್‌ಗಳು ಮನೆಯಲ್ಲಿ ಕುಂತು ಚಿಕನ್, ಬಿರಿಯಾನಿ ತಿಂತಿದ್ದಾರಾ? ಎಂದು ಅಧಿಕಾರಿಗಳ ನಿಷ್ಕ್ರಿಯತೆಗೆ ಸದಸ್ಯರು ಮಾತಲ್ಲೇ ಕುಟುಕಿದರೆನ್ನಿ.
ಎಲ್ಲಿಂದ ಲಾಗಿನ್ ಆಗಿದೆ ಎಂಬುದನ್ನು ಕೇಳಿದ್ದೇವೆ. ಪಾಲಿಕೆ ಸಾಫ್ಟ್‌ವೇರ್‌ಗಳಿಗೆ ಬಳಸುತ್ತಿದ್ದ ಮೋಬೈಲ್ ನಂಬರ್ ಮರುಹೊಂದಾಣಿಕೆ ಮಾಡಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಮಧ್ಯರಾತ್ರಿ ಆಸ್ತಿಹಕ್ಕು ವರ್ಗ ಮಾಡಿದ ಜಾದೂಗರ್ ಯಾರೆಂದು ಪತ್ತೆ ಹಚ್ಚದೆ ಬಿಡೋದಿಲ್ಲವೆಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಶಪಥ ಮಾಡಿದ ಬೆನ್ನಲ್ಲೇ, ಕಲಬುರಗಿ ಕಾರ್ಪೋರೇಷನ್‌ದಾಗೇ ಯಾರೋ ಮಾಯಗಾರನು, ಮಧ್ಯರಾತ್ರಿ ಕಂಪ್ಯೂಟರ್‌ಗೆ ಜೀವ ತುಂಬೋನು... ಎಂದು ಆಕಾಶದಾಗೆ ಯಾರೋ ಮಾಯಗಾರನು ಎಂಬ ರಾಮಾಚಾರಿ ಸಿನಿಮಾ ಹಾಡಿನ ಸಾಲುಗಳನ್ನೇ ತುಸು ಮರು ಹೊಂದಿಸಿದ ಕಾರ್ಪೋರೇಟರ್‌ಗಳು ಅದನ್ನೇ ಗುನುಗುತ್ತ ಮಧ್ಯರಾತ್ರಿ ಮಾಯಗಾರನ ವಿಷಯದ ಚರ್ಚೆಗೆ ತೆರೆ ಎಳೆದರು.
-ಮಯೂರ್ ಹೆಗಡೆ
-ಶೇಷಮೂರ್ತಿ ಅವಧಾನಿ