ಮೆಟ್ರೋ ಚಾಲಕ ಹುದ್ದೆಯಿಂದ ಕನ್ನಡಿಗರ ದೂರ ಇಟ್ರೋ : ಹುದ್ದೆ ನೇಮಕಾತಿಯಲ್ಲಿ ಅನ್ಯ ಭಾಷಿಕರಿಗೆ ಅವಕಾಶ

| N/A | Published : Mar 16 2025, 01:46 AM IST / Updated: Mar 16 2025, 07:26 AM IST

ಮೆಟ್ರೋ ಚಾಲಕ ಹುದ್ದೆಯಿಂದ ಕನ್ನಡಿಗರ ದೂರ ಇಟ್ರೋ : ಹುದ್ದೆ ನೇಮಕಾತಿಯಲ್ಲಿ ಅನ್ಯ ಭಾಷಿಕರಿಗೆ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋದಲ್ಲಿ ‘ಟ್ರೈನ್‌ ಆಪರೇಟರ್’ ಹುದ್ದೆಗೆ ಆಹ್ವಾನಿಸಿರುವ ಅರ್ಜಿಯಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡದೆ ಅನ್ಯ ಭಾಷಿಕರಿಗೆ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 ಬೆಂಗಳೂರು  : ನಮ್ಮ ಮೆಟ್ರೋದಲ್ಲಿ ‘ಟ್ರೈನ್‌ ಆಪರೇಟರ್’ ಹುದ್ದೆಗೆ ಆಹ್ವಾನಿಸಿರುವ ಅರ್ಜಿಯಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡದೆ ಅನ್ಯ ಭಾಷಿಕರಿಗೆ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು 50 ಟ್ರೈನ್‌ ಆಪರೇಟರ್‌ ಹುದ್ದೆಗಳಿಗೆ ಅರ್ಜಿ ಕರೆದಿದೆ. ಆಸಕ್ತರು ಆನ್‌ಲೈನ್‌ ಮೂಲಕ ಏಪ್ರಿಲ್ 4 ಹಾಗೂ ಪ್ರಿಂಟ್‌ಕಾಪಿಯನ್ನು ಏಪ್ರಿಲ್ 9ರ ಸಂಜೆಯ ಒಳಗೆ ಸಲ್ಲಿಸಲು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಅರ್ಜಿ ಸಲ್ಲಿಕೆಯ ನಿಬಂಧನೆಯಲ್ಲಿ 38 ಗರಿಷ್ಠ ವಯಸ್ಸಿನ ಮೂರು ವರ್ಷ ಅನುಭವ ಇರುವವರಿಗೆ ಅವಕಾಶ ನೀಡಲಾಗಿದೆ. ಕನ್ನಡ ಅರ್ಥೈಸಿಕೊಳ್ಳಲು, ಓದಲು, ಬರೆಯಲು ಬರುವವರಿಗೆ ಅವಕಾಶವಿದೆ. ಜೊತೆಗೆ ಬಾರದವರಿಗೆ ಒಂದು ವರ್ಷ ಕಾಲ ಅವಕಾಶವಿದ್ದು, ಅಷ್ಟರಲ್ಲಿ ಕನ್ನಡ ಕಲಿಯಬೇಕು. ಬಳಿಕ ಬಿಎಂಆರ್‌ಸಿಎಲ್‌ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಬಿಎಂಆರ್‌ಸಿಎಲ್ ಮಾನವ ಸಂಪನ್ಮೂಲ ವಿಭಾಗದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಅಧಿಕಾರಿಗಳಿದ್ದು, ಅವರು ತಮ್ಮವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಅರ್ಜಿ ಕರೆದಿದ್ದಾರೆ. ರಾಜ್ಯದ ಕನ್ನಡಿಗರು ಟ್ರೈನ್ ಆಪರೇಟರ್‌ಗಳಾಗಿ ಇಲ್ಲಿ ಕೆಲಸಕ್ಕೆ ಬಂದಲ್ಲಿ ನಮ್ಮ ಮಾತು ಕೇಳಲ್ಲ, ಕನ್ನಡಿಗ ಟ್ರೈನ್ ಆಪರೇಟರ್ ನೇಮಕವಾದರೆ ಯೂನಿಯನ್ ಮಾಡುತ್ತಾರೆ ಎಂದು ನಿಬಂಧನೆಯಲ್ಲಿ ಅನ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ತಕ್ಷಣ ಈ ನೇಮಕಾತಿ ಸುತ್ತೋಲೆಯನ್ನು ಹಿಂಪಡೆದು ಕನ್ನಡಿಗರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಲಾಗಿದೆ.

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ , ದೂರಸಂಪರ್ಕ /ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್, ಎಲೆಕ್ನಿಕಲ್ ಪವರ್ ಸಿಸ್ಟಮ್ಸ್ /ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಂಡಿರಬೇಕು. ವೇತನ ಶ್ರೇಣಿ ₹35,000 ದಿಂದ ₹82,660 (ವಾರ್ಷಿಕ ಹೆಚ್ಚಳ 3 ಪ್ರತಿಶತ) ನೀಡಲಾಗುವುದು ಎಂದು ಉಲ್ಲೇಖಿಸಲಾಗಿದೆ.

ತಮಿಳು, ಆಂಧ್ರದವರ ಸೆಳೆಯುವ ಹುನ್ನಾರ: ಬಿಎಂಆರ್‌ಸಿಎಲ್‌ನ ಈ ಕ್ರಮ ಕನ್ನಡಿಗ ಅಭ್ಯರ್ಥಿಗಳು, ಕನ್ನಡಪರ ಮೆಟ್ರೋ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ತಮಿಳುನಾಡಿನ ಚೆನ್ನೈ ಮತ್ತು ಆಂಧ್ರಪ್ರದೇಶದ ಹೈದರಾಬಾದ್ ಮೆಟ್ರೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಟ್ರೈನ್‌ ಆಪರೇಟರ್ಸ್‌ಗಳನ್ನು ಸೆಳೆಯಲು, ಅವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಕನ್ನಡೇತರರಿಗೂ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಅನ್ಯ ಭಾಷಿಕರಿಗೆ ಕನ್ನಡ ಕಲಿಯಲು ಒಂದು ವರ್ಷ ಕಾಲಾವಕಾಶ ನೀಡುವ ಬದಲು ಕನ್ನಡಿಗರಿಗೆ ಒಂದಿಷ್ಟು ತಿಂಗಳ ಕಾಲ ಟ್ರೈನ್‌ ಆಪರೇಟರ್‌ ತರಬೇತಿ ನೀಡಿ ಉದ್ಯೋಗ ನೀಡಬೇಕು ಎಂದು ಬಿಎಂಆರ್‌ಸಿಎಲ್‌ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಹೇಳಿದ್ದಾರೆ.