ಸಾರಾಂಶ
ವೈಮಾನಿಕ ಉತ್ಪಾದನೆ, ರಫ್ತಿನಲ್ಲಿ ದೇಶದಲ್ಲಿ ಪ್ರಮುಖ ಸ್ಥಾನದಲ್ಲಿರುವ ಕರ್ನಾಟಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಹೂಡಿಕೆಗೆ ಅಗತ್ಯವಾದ ಪ್ರಶಸ್ತ ವಾತಾವರಣ ಹೊಂದಿದ್ದು, ಇಲ್ಲಿ ಹೂಡಿಕೆ ಮಾಡಲು ಮುಂದಾಗುವಂತೆ ಉದ್ಯಮಿಗಳಲ್ಲಿ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ। ಸೆಲ್ವ ಕುಮಾರ್ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈಮಾನಿಕ ಉತ್ಪಾದನೆ, ರಫ್ತಿನಲ್ಲಿ ದೇಶದಲ್ಲಿ ಪ್ರಮುಖ ಸ್ಥಾನದಲ್ಲಿರುವ ಕರ್ನಾಟಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಹೂಡಿಕೆಗೆ ಅಗತ್ಯವಾದ ಪ್ರಶಸ್ತ ವಾತಾವರಣ ಹೊಂದಿದ್ದು, ಇಲ್ಲಿ ಹೂಡಿಕೆ ಮಾಡಲು ಮುಂದಾಗುವಂತೆ ಉದ್ಯಮಿಗಳಲ್ಲಿ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ। ಸೆಲ್ವ ಕುಮಾರ್ ಮನವಿ ಮಾಡಿದರು.ಮಂಗಳವಾರ ಏರೋಇಂಡಿಯಾ-2025 ರಲ್ಲಿ ನಡೆದ ‘ರಕ್ಷಣಾ ವಲಯ ಮತ್ತು ಏರೋಸ್ಪೇಸ್ ಕ್ಷೇತ್ರನಲ್ಲಿ ಕರ್ನಾಟಕದಲ್ಲಿ ಹೂಡಿಕೆ ಅವಕಾಶ’ ಸೆಮಿನಾರ್‌ನಲ್ಲಿ ಮಾತನಾಡಿದರು.
ಕರ್ನಾಟಕವು ದೇಶದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಉತ್ಪಾದನೆಯಲ್ಲಿ ಶೇ.65, ಮಷಿನ್ ಟೂಲ್ಸ್‌ನಲ್ಲಿ ಶೇ.52, ಎಲೆಕ್ಟ್ರಾನಿಕ್ ಡಿಸೈನ್‌ನಲ್ಲಿ ಶೇ.47, ಬಯೋಟೆಕ್ ಉತ್ಪಾದನೆ, ರಫ್ತಿನಲ್ಲಿ ಶೇ.60 ಹಾಗೂ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.47 ಪಾಲುದಾರಿಕೆ ಹೊಂದಿದೆ. ಈ ಮೂಲಕ ಏರೋಸ್ಪೇಸ್ ಕ್ರಾಂತಿಯ ಮುಂದಾಳತ್ವ ವಹಿಸಿಕೊಂಡಿದೆ. ಹೂಡಿಕೆದಾರರು ಇಲ್ಲಿ ಬಂಡವಾಳ ವಿನಿಯೋಗಿಸಿದಲ್ಲಿ ಇನ್ನಷ್ಟು ಪ್ರಗತಿ ಸಾಧ್ಯ ಎಂದರು.ಚರ್ಚೆಯಲ್ಲಿ ಭಾಗವಹಿಸಿದ ಮಾತನಾಡಿದ ಸೆಂಟಮ್ ಎಲೆಕ್ಟ್ರಾನಿಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಪ್ಪರಾವ್ ವಿ. ಮಲ್ಲಾವರಾಪು, ಬೆಂಗಳೂರು ನಮಗೆ ದೊಡ್ಡ ಉತ್ಪಾದನಾ ವಲಯವಾಗಿದೆ. 7 ಸಾವಿರ ಜನ ನಮ್ಮಲ್ಲಿ ಕೆಲಸ ಮಾಡುತ್ತಾರೆ. ನಾವು ದೇಶದಲ್ಲೇ ಬೃಹತ್ ಅಡ್ವಾನ್ಸ್ ಮೈಕ್ರೊ ಡಿವೈಸ್ ಉತ್ಪಾದಕರಾಗಿದ್ದೇವೆ. 75ಕ್ಕಿಂತ ಹೆಚ್ಚು ಬಗೆಯ ವಿಭಿನ್ನ ಉತ್ಪನ್ನ ಇಲ್ಲಿ ಸಿದ್ಧಗೊಳ್ಳುತ್ತವೆ. ಸರ್ಕಾರ ನೀಡಿದ ಉತ್ತಮ ಬೆಂಬಲದಿಂದ ನಾವು ಕಂಪನಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡೈನಾಮೆಟಿಕ್ ಟೆಕ್ನಾಲಜೀಸ್ ಸಿಇಒ ಉದಯಂತ್ ಟೋಬಿ ಮಲ್ಹೊತ್ರ, ಸಾಮ್ಸೋಸ್ ಹೆಟ್ ಟೆಕ್ನಾಲಜೀಸ್ ಲಿ., ಸಂಸ್ಥಾಪಕ ಎಚ್.ಜಿ. ಚಂದ್ರಶೇಖರ್, ಕಾಲಿನ್ಸ್ ಇಂಡಿಯಾ ಆಪರೇಷನ್ಸ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಬಿನು ಕೃಷ್ಣಕುಟ್ಟಿ, ಸಿರಿಲ್ ಅಮರ್‌ಚಂದ್ ಮಂಗಲ್‌ದಾಸ್ ಪಾಲುದಾರರಾದ ಆನಂದಿತಾ ಕೌಶಿಕ್ ಸೇರಿ ಇತರರಿದ್ದರು.