ಸರಳ ಸಜ್ಜನಿಕೆಯ ಸಾಕಾರಮೂರ್ತಿ- ಭತ್ತದ ನಾಡಿನ ಬೆವರಿನ ಮನುಷ್ಯ : ಕೆ.ಆರ್. ಲಕ್ಕೇಗೌಡ

| Published : Sep 27 2024, 01:32 AM IST / Updated: Sep 27 2024, 07:09 AM IST

Paddy

ಸಾರಾಂಶ

ಶಿಕ್ಷಕರಾಗಿ, ಸಮಾಜ ಸೇವಕರಾಗಿ, ಸಾಹಿತ್ಯ ಚಿಂತಕರಾಗಿ ಕೆ.ಆರ್.ಲಕ್ಕೇಗೌಡರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 'ಪರೋಪಕಾರಾರ್ಥ ಇದಂ ಶರೀರಂ' ಎಂಬಂತೆ ಬದುಕಿದ ಅವರು ವೈಚಾರಿಕತೆ, ವೈಜ್ಞಾನಿಕತೆ, ಮಾನವೀಯತೆಗೆ ಪ್ರಾಮುಖ್ಯತೆ ನೀಡಿದರು.

‘ಭತ್ತದ ಕಣಜ’ವೆಂದು ಹೆಸರಾದ ಕೃಷ್ಣರಾಜನಗರ ತಾಲೂಕು ‘ದಕ್ಷಿಣ ಗಂಗೆ’ ಎಂದೇ ಪುರಾಣ ಪ್ರಸಿದ್ಧಿ ಪಡೆದ ಜೀವನದಿ ಕಾವೇರಿಯ ಎರಡೂ ದಂಡೆಗಳ ಮೇಲೆ ಹರಡಿಕೊಂಡಿರುವ ಸಂಪದ್ಭರಿತ ಪ್ರದೇಶ. ಮೈಸೂರಿನ ವಾಯುವ್ಯ ಭಾಗದಲ್ಲಿರುವ ಈ ತಾಲೂಕಿಗೆ ಚಾರಿತ್ರಿಕವಾದ ಮಹತ್ವ, ಸಾಂಸ್ಕೃತಿಕ ಹಿರಿಮೆ, ಧಾರ್ಮಿಕ ವಿಧ್ಯತೆಯಿದೆ.

ಶೈಕ್ಷಣಿಕವಾಗಿ, ಆರ್ಥಿಕವಾಗಿಯೂ ಅಭಿವೃದ್ಧಿಯಾಗಿದೆ. ಇಂತಹ ಪಾರಂಪರಿಕ ಶ್ರೀಮಂತಿಕೆಯುಳ್ಳ ನೆಲದಿಂದ ಬಂದವರು ಕೆ.ಆರ್.ಲಕ್ಕೇಗೌಡರು. ಕೃಷ್ಣರಾಜನಗರ ತಾಲೂಕಿನ ಮಿರ್ಲೆ ಹೋಬಳಿಯ ಕಾಟ್ನಾಳು ಎಂಬ ಗ್ರಾಮದ ಬಡಕೃಷಿಕ ರಂಗೇಗೌಡ ಮತ್ತು ನರಸಮ್ಮ ಅವರ ಪುತ್ರರಾಗಿ ಲಕ್ಕೇಗೌಡರು ಜನಿಸಿದರು.

ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿ, ಸಾಹಿತ್ಯ ಸಂಸ್ಕೃತಿ ಚಿಂತಕರಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಲಕ್ಕೇಗೌಡರು ಸಲ್ಲಿಸಿದ ಸಾರ್ಥಕ ಸೇವೆಯನ್ನ ಅವರು ಬಿಟ್ಟು ಹೋದ ಮಾದರಿ ಹೆಜ್ಜೆ ಗುರುತುಗಳನ್ನು ಅವರ ಮೊದಲ ಪುಣ್ಯ ಸ್ಮರಣೆಯ (ಸೆ.28) ಸಂದರ್ಭದಲ್ಲಿ ಅಕ್ಷರ ನಮನ ದಾಖಲಿಸಲಾಗುತ್ತಿದೆ.

ಕೆ.ಆರ್.ಲಕ್ಕೇಗೌಡರು ಬದುಕಿನುದ್ದಕ್ಕೂ ‘ಪರೋಪಕಾರಾರ್ಥ ಇದಂ ಶರೀರಂ’ ಉಕ್ತಿಗನುಗುಣವಾಗಿ ಬಾಳ್ವೆ ನಡೆಸಿದ ಕಾಯಕಜೀವಿ. ಶ್ರಮ ಸಂಸ್ಕೃತಿಯ ಒಕ್ಕಲುತನದ ಒಡಲಿನಿಂದ ಹುಟ್ಟಿ ಬೆಳೆದು ಬೆಳಕು ಕಂಡ ಹೃದಯವಂತ ಪ್ರತಿಭೆ.

ನಡೆ-ನುಡಿ ಒಂದಾಗಿರಬೇಕೆಂಬ ಶಿವಶರಣರ ಜೀವನ ಸತ್ಯ ಸಂದೇಶವನ್ನುಕರಗತ ಮಾಡಿಕೊಂಡಿದ್ದರು. ಅಪ್ಪಟ ಗ್ರಾಮೀಣ ಸಂಸ್ಕೃತಿ, ಮಾನವೀಯ ಮೌಲ್ಯಗಳ ಗಣಿಯಂತಿದ್ದ ಅವರು ಸರಳ ಸಜ್ಜನಿಕೆಗೆ ಅನ್ವರ್ಥವಾಗಿ ತೊಂಬತ್ತು ವರ್ಷ ಸಾರ್ಥಕ ಬದುಕು ನಡೆಸಿದರು.

ಕೆ.ಆರ್.ಲಕ್ಕೇಗೌಡರು ತಮ್ಮೂರಿಗೆ ಸಮೀಪವಿರುವ ಸಾಲಿಗ್ರಾಮದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ಪದವಿಪೂರ್ವ ಶಿಕ್ಷಣವನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮಹಾರಾಜ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮಾನಸ ಗಂಗೋತ್ರಿಯಲ್ಲೂ ಪಡೆದರು. ವಿದ್ಯಾರ್ಥಿ ಬದುಕು ಕಷ್ಟಕರಾಗಿತ್ತು. 

ಹಾಸ್ಟೆಲನಲ್ಲಿ ಹಾಗೂ ಅಧ್ಯಾಪಕರ ಮನೆಯಲ್ಲಿ ವಾರಾನ್ನ ಉಂಡು ಓದಿದವರು. ಬಡತನವೆಂಬ ಬೆಂಕಿಯಲ್ಲಿ ಅರಳಿದ ಲಕ್ಕೇಗೌಡರು ನಿಜಕ್ಕೂಅದೃಷ್ಟವಂತರು. ಏಕೆಂದರೆ ಅವರಿಗೆ ಸಿಕ್ಕ ಮಹಾ ಗುರುಪರಂಪರೆ. ತೀ.ನಂ.ಶ್ರೀಕಂಠಯ್ಯ, ಡಿ.ಎಲ್. ನರಸಿಂಹಚಾರ್ಯ, ಜಿ.ಎಸ್. ಶಿವರುದ್ರಪ್ಪ, ಎಂ. ಚಿದಾನಂದಮೂರ್ತಿ, ಎಸ್.ವಿ. ಪರಮೇಶ್ವರಭಟ್ಟ, ಜಿ. ವರದರಾಜರಾಯರು, ಎನ್. ಅನಂತರಂಗಾಚಾರ್, ತ.ಸು. ಶಾಮರಾಯರು, ಸುಜನಾ, ಎಸ್.ಕೆ. ರಾಮಣ್ಣ, ದೇ. ಜವರೇಗೌಡ, ಪ್ರಭುಶಂಕರ, ಸಿ.ಡಿ. ನರಸಿಂಹಯ್ಯ, ಹಾ.ಮಾ.ನಾಯಕ್ ಅವರಂತಹ ಅಸಾಮಾನ್ಯಗುರುಶ್ರೇಷ್ಠರ, ಮಹಾಕವಿ ಕುವೆಂಪುರಂತಹ ಮೇರು ಸಾಹಿತ್ಯ ದಿಗ್ಗಜರ ಮಹಾದರ್ಶನ, ಮಾರ್ಗದರ್ಶನ ಕೆ.ಆರ್.ಲಕ್ಕೇಗೌಡರ ಬದುಕಿಗೆ ತೋರಿದ ಮಹಾತೋರು ದೀಪಗಳಾಗಿದ್ದವು.

ಕೆ.ಆರ್.ಲಕ್ಕೇಗೌಡರ ವೃತ್ತಿ ಬದುಕು 1964 ರಲ್ಲಿ ಕೃಷ್ಣರಾಜನಗರ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಶಿಕ್ಷಕರಾಗುವ ಮೂಲಕ ಪ್ರಾರಂಭವಾಯಿತು. ಇದಾದ ಆರೇಳು ತಿಂಗಳುಗಳ ಬಳಿಕ ಮೈಸೂರಿನ ಅಶೋಕಪುರಂ ಪ್ರಾಥಮಿಕ ಶಾಲೆಯಲ್ಲಿ ಒಂದೂವರೆ ವರ್ಷ ಶಿಕ್ಷಕರಾಗಿದ್ದರು. ಆ ವೇಳೆಗೆ ಎಂ.ಎ., ಬಿ.ಇಡಿ ಪದವಿ ಪೂರೈಸಿ ಮಂಡ್ಯ ಸಮೀಪದ ಕಲ್ಲಹಳ್ಳಿಯಲ್ಲಿ ಮುಖ್ಯ ಶಿಕ್ಷಕರಾಗಿ, ಅನಂತರ ಮೈಸೂರಿನ ಶಾರದಾ ವಿಲಾಸ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಇದಾದ ನಂತರ ಬಡ್ತಿ ಪಡೆದು ಹುಣಸೂರು ಸರ್ಕಾರಿ ಪದವಿಪೂರ್ವಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದರು.1979 ರಲ್ಲಿ ಕೃಷ್ಣರಾಜನಗರದ ಶ್ರೀ ಕೃಷ್ಣರಾಜೇಂದ್ರ ಪದವಿಪೂರ್ವಕಾಲೇಜಿಗೆ ವರ್ಗಾವಣೆಗೊಂಡು 1993 ಅಕ್ಟೋಬರ್ 31 ರವರೆಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಕೆ.ಆರ್.ಲಕ್ಕೇಗೌಡರು ನಾವು ಕಂಡಂತೆ ತುಂಬಾ ಸರಳವಾಗಿ ಬದುಕಿದವರು. ಆಡಂಬರದ ಹತ್ತಿರವು ಸುಳಿಯಲಿಲ್ಲ. ಜುಬ್ಬಾ ಪೈಜಾಮ, ಖಾದಿ ಪಂಚೆ ಇವರ ದಿನನಿತ್ಯದ ಉಡುಗೆಗಳು, ಮೌಢ್ಯತೆ ಹಾಗೂ ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿ ವೈಚಾರಿಕತೆ, ವೈಜ್ಞಾನಿಕತೆ, ಮಾನವೀಯತೆಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸ್ಪಂದಿಸಿ ಕೈಲಾದ ಸಹಾಯ ಮಾಡುತ್ತಿದ್ದರು. ಸಮಾಜದಲ್ಲಿ ಎಲ್ಲಾ ಧರ್ಮ, ಜಾತಿ, ವರ್ಗದವರೊಂದಿಗೆ ಸಾಮರಸ್ಯದಿಂದ ಬದುಕಬೇಕೆಂಬ ಆದರ್ಶವನ್ನಿಟ್ಟುಕೊಂಡಿದ್ದರು. 

ವೈಷಮ್ಯಕ್ಕೆ ಅವಕಾಶವಿಲ್ಲದಂತೆ ನಿಂದಿಸುವವರಿಗೆ ಮರಳಿ ವಂದಿಸುವ ಗುಣ ಅವರಲ್ಲಿತ್ತು. ಹಿರಿಯರಾಗಲಿ ಕಿರಿಯರಾಗಲಿ ಪರಿಚಿತರು ಸಿಕ್ಕಾಗ ತುಂಬು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ದುಃಖದುಮ್ಮಾನ ಹೇಳಿಕೊಂಡು ಬಂದವರಿಗೆ ಧೈರ್ಯ ತುಂಬುತ್ತಿದ್ದ ರೀತಿ ನಿಜಕ್ಕೂ ಅನನ್ಯ, ಅನುಕರಣೀಯ. ಶಿಕ್ಷಕರಾಗಿ, ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರಿಗೆ ಅಪಾರ ಸಂಖ್ಯೆಯ ಶಿಷ್ಯ ಬಳಗವಿದೆ. ವೃತ್ತಿಯಿಂದ ನಿವೃತ್ತ ಜೀವನಕ್ಕೆಕಾಲಿಟ್ಟರೂ ಬದುಕಿನ ಅಂತ್ಯದವರೆಗೂ ಅವಿಶ್ರಾಂತವಾಗಿ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪುರಸಭಾ ಸದಸ್ಯರಾಗಿ, ಭ್ರಷ್ಟಾಚಾರ ವಿರೋಧಿ ವೇದಿಕೆಯ ತಾಲೂಕು ಅಧ್ಯಕ್ಷರಾಗಿ, ಭಾರತ ಸೇವಾದಳದ ಅಧ್ಯಕ್ಷರಾಗಿ ಅವಿರತವಾದ ಸೇವೆ ಸಲ್ಲಿಸಿದ್ದಾರೆ.

ಇಂದು ಜನಸೇವೆ ಎಂಬುದು ಸ್ವಹಿತಕ್ಕಾಗಿ, ಸ್ವಾರ್ಥ ಸಾಧನೆಗಾಗಿ ಎಂಬಂತಾಗಿದೆ. ರಾಜಕೀಯ ಭ್ರಷ್ಟತೆ, ಸ್ವಜನಪಕ್ಷಪಾತದಿಂದ ಕಲುಷಿತಗೊಂಡಿದೆ. ಅಧಿಕಾರದ ದರ್ಪ- ದೌಲತ್ತು, ತಂತ್ರ- ಕುತಂತ್ರಗಳು ಸಾರ್ವಜನಿಕ ಬದುಕನ್ನು ಭ್ರಮನಿರಸನಗೊಳಿಸಿವೆ. ಸಾಮಾನ್ಯ ಜನರ ನಿರೀಕ್ಷೆಗಳು, ಆಶಯಗಳು ನಿರಾಸೆಯಲ್ಲಿಯೇ ಅಂತ್ಯವಾಗುತ್ತಿವೆ. ಇಂತಹ ಹೊತ್ತಿನಲ್ಲಿ ಕೆ.ಆರ್.ಲಕ್ಕೇಗೌಡರಂತಹ ಮಾನವೀಯ ಮಮಕಾರವುಳ್ಳ ಮಾತೃಹೃದಯಿ ಸಮಾಜಮುಖಿ ಬಂಧುಗಳು ನೆನಪಾಗುತ್ತಾರೆ. ಈ ಬಗೆಯ ವಿಶಿಷ್ಟ ಮಾದರಿ ವ್ಯಕ್ತಿತ್ವದ ಕೆ.ಆರ್. ಲಕ್ಕೇಗೌಡ ಮತ್ತು ಅವರ ಧರ್ಮಪತ್ನಿ ಜಯಲಕ್ಮಮ್ಮ ಅವರು ಬದುಕಿತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಅವರ ಮಕ್ಕಳಾದ ಕೆ.ಎಲ್. ಯಮುನಾ, ಕೆ.ಎಲ್. ಭಾರತಿ, ಕೆ.ಎಲ್. ಹೇಮಂತ್ಕುಮಾರ್, ಕೆ.ಎಲ್. ರಮೇಶ್, ಕೆ.ಎಲ್.ಜಗದೀಶ್ ಅವರು ಕೂಡ ಮುನ್ನಡೆಯುತ್ತಿದ್ದಾರೆ.

-ಪ್ರೊ. ಸಿ.ಡಿ.ಪರಶುರಾಮ, ಕನ್ನಡ ಪ್ರಾಧ್ಯಾಪಕರು ಯುವರಾಜಕಾಲೇಜು, ಮೈಸೂರು ಮೊ: 8453578405

ನಾಳೆ ಪುಣ್ಯಸ್ಮರಣೆ ಕಾರ್ಯಕ್ರಮ

ಕೆ.ಆರ್.ಲಕ್ಕೇಗೌಡರ ಮೊದಲನೇ ವರ್ಷದ ಪುಣ್ಯಸ್ಮರಣೆಯು ಸೆ.28 ರಂದು ಬೆಳಗ್ಗೆ 10.30ಕ್ಕೆ ಕೆ.ಆರ್. ನಗರದ ಪಿಎಲ್ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ನಡೆಯಲಿದೆ. ಖ್ಯಾತ ಹೃದ್ರೋಗತಜ್ಞ, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್, ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ಭಾಗವಹಿಸುವರು.