ಸಾರಾಂಶ
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ರಚಿಸುವ ಪಾಲಿಕೆಗಳ ಗರಿಷ್ಠ ಸಂಖ್ಯೆಯನ್ನು 10 ರಿಂದ 7ಕ್ಕೆ ಇಳಿಸುವುದು, ಪ್ರತಿ ಪಾಲಿಕೆಯ ವಾರ್ಡ್ ಸಂಖ್ಯೆಯನ್ನು 100 ರಿಂದ 125ಕ್ಕೆ ಮಿತಿಗೊಳಿಸುವುದು ಸೇರಿದಂತೆ ಮೊದಲಾದ ಶಿಫಾರಸು ವರದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ಸೋಮವಾರ ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ರಚಿಸುವ ಪಾಲಿಕೆಗಳ ಗರಿಷ್ಠ ಸಂಖ್ಯೆಯನ್ನು 10 ರಿಂದ 7ಕ್ಕೆ ಇಳಿಸುವುದು, ಪ್ರತಿ ಪಾಲಿಕೆಯ ವಾರ್ಡ್ ಸಂಖ್ಯೆಯನ್ನು 100 ರಿಂದ 125ಕ್ಕೆ ಮಿತಿಗೊಳಿಸುವುದು ಸೇರಿದಂತೆ ಮೊದಲಾದ ಶಿಫಾರಸು ವರದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಪರಿಶೀಲನಾ ಜಂಟಿ ಸಮಿತಿ ರಚಿಸಿದ್ದರು. ಕಳೆದ ಆರು ತಿಂಗಳಿನಿಂದ ಅಧ್ಯಯನ ನಡೆಸಿದ ಸಮಿತಿಯು ಇದೀಗ ವರದಿ ಸಿದ್ಧಪಡಿಸಿದೆ.
ಮೂಲಗಳ ಮಾಹಿತಿ ಪ್ರಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಗರಿಷ್ಠ 7 ಪಾಲಿಕೆಯಷ್ಟೇ ಇರಬೇಕು. ವಾರ್ಡ್ ಸಂಖ್ಯೆ ಚಿಕ್ಕದಾಗಿರಬೇಕು. ಪ್ರತಿ ಪಾಲಿಕೆಯ ವಾರ್ಡ್ ಸಂಖ್ಯೆ 100 ರಿಂದ 125 ಇರಬೇಕು. ಸ್ಥಳೀಯ ಮಟ್ಟದಲ್ಲಿ ಇಲಾಖೆಗಳ ನಡುವೆ ಸಮನ್ವಯ ಸಮಿತಿ ರಚನೆ, ಭ್ರಷ್ಟಾಚಾರ ತಡೆಗೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ವಿಚಕ್ಷಣಾ ದಳ ಸ್ಥಾಪನೆ ಸೇರಿದಂತೆ ಮೊದಲಾದ ಅಂಶಗಳು ಪರಿಶೀಲನಾ ಸಮಿತಿ ಸಲ್ಲಿಕೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ರಿಜ್ವಾನ್, ಸೋಮವಾರ 12 ಗಂಟೆಗೆ ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಕೆ ಮಾಡಲಾಗುವುದು. ಶುಕ್ರವಾರ ಸಚಿವಾಲಯಕ್ಕೆ ವರದಿಯ ಪ್ರತಿ ಕಳುಹಿಸಿಕೊಡಲಾಗಿದೆ. ವರದಿಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಬೇಕಿರುವುದರಿಂದ ಪರಿಶೀಲನಾ ಸಮಿತಿಯ ಅಧಿಕಾರಾವಧಿಯನ್ನು ಮತ್ತೊಂದು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 7 ಪಾಲಿಕೆ ರಚನೆಗೆ ಮಿತಿಗಳಿಸಲಾಗಿದೆ. ಅಂತಿಮವಾಗಿ ಎಷ್ಟು ಪಾಲಿಕೆ ರಚನೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ. ಇನ್ನೂ ಐಟಿ-ಬಿಟಿ ಅಗಾಧವಾಗಿ ಬೆಳೆದಿರುವ ಬೆಂಗಳೂರಿನ ಹೊರ ಭಾಗದ ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ವಿಧೇಯಕ?
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶವನ್ನು ಸೇರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ, ಇದರಡಿ 1 ರಿಂದ 10 ಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಜುಲೈನಲ್ಲಿ ವಿಧಾನಸಭೆಯಲ್ಲಿ ಕರಡು ವಿಧೇಯಕ ಮಂಡಿಸಿದ್ದರು.
ಈ ವೇಳೆ ವಿರೋಧ ಪಕ್ಷದ ಸದಸ್ಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನೇತೃತ್ವದಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಿ ವರದಿ ನೀಡುವುದಕ್ಕೆ ಸೂಚಿಸಿತ್ತು.