ಮುಳುಗದಿರಲಿ ಬದುಕು: ಇಲ್ಲಿ 45 ಲೇಖನಗಳಿವೆ. ಅರವತ್ತರ ನಂತರದ ಬದುಕು ಲೇಖನದಲ್ಲಿ ‘ಹಿರಿಯರು ಹೇಗೆ ಬದುಕಬೇಕು ಎನ್ನುವುದಕ್ಕಿಂತ ಅವರನ್ನು ಹೇಗೆ ನೋಡಿಕೊಳ್ಳಬೇಕೆನ್ನುವ ವಿದ್ಯೆಯನ್ನು ಮಕ್ಕಳಿಗೆ ಕಲಿಸಬೇಕಾಗಿದೆ’ ಎಂಬ ಮಾರ್ಮಿಕ ಸಲಹೆ ಗಮನ ಸೆಳೆಯುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಿವತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಿರ್ಲೆ ಚಂದ್ರಶೇಖರ ಅವರ ಮುಳುಗದಿರಲಿ ಬದುಕು- ಎಂಬ ಮತ್ತೊಂದು ಲೇಖನಗಳ ಸಂಕಲನವನ್ನು ಪ್ರಕಟಿಸಿದ್ದಾರೆ.

ಇಲ್ಲಿ 45 ಲೇಖನಗಳಿವೆ. ಅರವತ್ತರ ನಂತರದ ಬದುಕು ಲೇಖನದಲ್ಲಿ ‘ಹಿರಿಯರು ಹೇಗೆ ಬದುಕಬೇಕು ಎನ್ನುವುದಕ್ಕಿಂತ ಅವರನ್ನು ಹೇಗೆ ನೋಡಿಕೊಳ್ಳಬೇಕೆನ್ನುವ ವಿದ್ಯೆಯನ್ನು ಮಕ್ಕಳಿಗೆ ಕಲಿಸಬೇಕಾಗಿದೆ’ ಎಂಬ ಮಾರ್ಮಿಕ ಸಲಹೆ ಗಮನ ಸೆಳೆಯುತ್ತದೆ. ಕೇಳಿದ್ದನ್ನೂ ಪ್ರತ್ಯಕ್ಷ ಕಂಡು ಪ್ರಮಾಣಿಸಿ ನೋಡು! ಎಂಬ ಲೇಖನ ಸ್ನೇಹಿತ ರಾಮು ನಿಧನರಾದರು ಎಂಬ ಸುಳ್ಳು ಸುದ್ದಿಯ ಅವಾಂತರವನ್ನು ಅನಾವರಣ ಮಾಡಿದೆ. ಹೊಸವರ್ಷಕ್ಕೆ ಅದೇ ಹಳೆಯ ಸಂಕಲ್ಪಗಳು ಲೇಖನದಲ್ಲಿ ಗುಣಸ್ವಭಾವದಲ್ಲಿ ಬದಲಾಗದ ಹೊರತು ಪೊಳ್ಳು ನಿರ್ಣಯಗಳಿಂದ ಯಾವುದೇ ಪ್ರಯೋಜವಾಗದು ಎಂಬುನದ್ನು ತಿಳಿಸುತ್ತದೆ.

ಬೆಂಗಳೂರು ನೀರು ಸರಬರಾಜು ಮಂಡಳಿಯ ಎಂಜಿನಿಯರ್‌ ದಿನೇಶ್‌ ಅವರ ಪರಿಸರ ಪ್ರೇಮ, ಎಲೆಮಲ್ಲಪ್ಪಶೆಟ್ಟರ ವ್ಯಕ್ತಿಚಿತ್ರ, ಮೈಸೂರಿಗೆ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಬಂಗಾರದೊಡ್ಡಿ ನಾಲೆಯ ಪರಿಚಯದಿಂದ ಹಿಡಿದು ಕಲಿತ ವಿದ್ಯೆ ಸಹಬಾಳ್ವೆಯ ಸೂತ್ರ ಕಲಿಸದಿರುವುದು, ಕುಟುಂಬಗಳು ನೆಮ್ಮದಿ ಹಾಗೂ ಸದೃಢವಾಗಿ ಇದ್ದಾವೆಯೇ?, ಮದುವೆಯ ಅರ್ಥ ಉಳಿದಿದೆಯೇ?, ಮಕ್ಕಳಾಗಿದ್ದವರು ಪೋಷಕರಾವುದಿಲ್ಲವೇ? ಎಂಬ ಕೌಟುಂಬಿಕ ವಿಷಯಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಸಾಕು ಪ್ರಾಣಿಗಳನ್ನು ನಮ್ಮ ಮನೆಯ ಮಕ್ಕಳು ಎಂದಿದ್ದಾರೆ. ಕೊಟ್ಟಿಗೆಯಲ್ಲಿ ಸಗಣಿ ಕೆಲಸ ಮಾಡಲು ಒಪ್ಪದ ಸೊಸೆಯ ಸಮಸ್ಯೆಯನ್ನು ಮಂತ್ರವಾದಿ ಉಪಾಯದಿಂದ ಬಗೆಹರಿಸಿದ ಪ್ರಕರಣ ಸ್ವಾರಸ್ಯಕರವಾಗಿದೆ.

ಹಬ್ಬಗಳು ಒಗ್ಗೂಡಿಕೆಗೇ ಹೊರತು ಪರಿಸರ ವಿನಾಶಕ್ಕಲ್ಲ ಎಂದು ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಸ್ವಾವಲಂಬಿ ಆಗುವುದು ಹೇಗೆ?

ಶ್ರದ್ಧೆ ಮತ್ತು ಸ್ಪಷ್ಟತೆ ಮುಖ್ಯ, ಕನಸಿನ ಬೆನ್ನತ್ತಿ ಹೊರಟ ಆಕಾಂಕ್ಷಿಗಳೆ ನಿರಾಶರಾಗಬೇಡಿ ಎಂಬ ವ್ಯಕ್ತಿತ್ವ ವಿಕಸನದ ಪಾಠಗಳು ಇವೆ. ಗಣತಿ, ಕಾವೇರಿ ಆರತಿ, ಆರ್‌ಸಿಬಿ ವಿಜಯೋತ್ಸವ ಕಾಲಕ್ಕೆ ಆದ ಕಾಲ್ತುಳಿತ ಸೇರಿದಂತೆ ಕೆಲವೊಂದು ಸಾಂದರ್ಭಿಕ ಲೇಖನಗಳು ಇವೆ. ರಂಗಸ್ವಾಮಿ ಶಾಂತಾ ಅವರ ಮುನ್ನುಡಿ, ಕಳಲೆ ಗುರುಸ್ವಾಮಿ ಅವರ ಬೆನ್ನುಡಿ ಇದೆ. ಆಸಕ್ತರು ಮಿರ್ಲೆ ಚಂದ್ರಶೇಖರ, ಮೊ. 99161 29654 ಸಂಪರ್ಕಿಸಬಹುದು.