ಸಾರಾಂಶ
ಬೆಂಗಳೂರಿನಲ್ಲಿರುವ ಪುರುಷರಲ್ಲಿ ಶ್ವಾಸಕೋಶ, ಹೊಟ್ಟೆ ಪ್ರಾಸ್ಟೇಟ್ ಮತ್ತು ಅನ್ನನಾಳದ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ, ಗರ್ಭಕಂಠ, ಅಂಡಾಶಯ ಕ್ಯಾನ್ಸರ್ ಪ್ರಧಾನವಾಗಿ ಕಂಡು ಬರುತ್ತಿ ದೆ.
ಬೆಂಗಳೂರು : ಬೆಂಗಳೂರಿನಲ್ಲಿರುವ ಪುರುಷರಲ್ಲಿ ಶ್ವಾಸಕೋಶ, ಹೊಟ್ಟೆ ಪ್ರಾಸ್ಟೇಟ್ ಮತ್ತು ಅನ್ನನಾಳದ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ, ಗರ್ಭಕಂಠ, ಅಂಡಾಶಯ ಕ್ಯಾನ್ಸರ್ ಪ್ರಧಾನವಾಗಿ ಕಂಡು ಬರುತ್ತಿದ್ದು, ಕಳೆದ ವರ್ಷ 15ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪತ್ತೆ ಆಗಿರುವುದಾಗಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ತಿಳಿಸಿದೆ.
ನಗರದಲ್ಲಿ ವರ್ಷಕ್ಕೆ ಪುರುಷ ಮತ್ತು ಮಹಿಳೆಯರಲ್ಲಿ ಕ್ರಮವಾಗಿ 6880 ಮತ್ತು 8723 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಶ್ವಾಸಕೋಶ (9.7%), ಪ್ರಾಸ್ಟೇಟ್ (6.9%), ಹೊಟ್ಟೆ (6.5%) ಮತ್ತು ಬಾಯಿ (6.4%) ಕ್ಯಾನ್ಸರ್ ಪುರುಷರಲ್ಲಿ ಕಂಡು ಬಂದಿದೆ. ಸ್ತನ (31.5%), ಗರ್ಭಕಂಠ (9.1%), ಅಂಡಾಶಯ (6.4%) ಮತ್ತು ಬಾಯಿ (4.3%) ಕ್ಯಾನ್ಸರ್ ಮಹಿಳೆಯರಲ್ಲಿ ಪತ್ತೆಯಾಗಿದೆ. ಆರಂಭಿಕ ಹಂತದಲ್ಲಿ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ನೀಡಿದಲ್ಲಿ 60-70% ರಷ್ಟು ಕ್ಯಾನ್ಸರ್ ಗುಣಪಡಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಬೆಂಗಳೂರಲ್ಲಿ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ (ಪಿಬಿಸಿಆರ್) ವ್ಯವಸ್ಥೆಯ ಮೂಲಕ, ರಾಜ್ಯದಲ್ಲಿ ವಾರ್ಷಿಕವಾಗಿ ಸರಾಸರಿ ಶೇ.1 ರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣದಲ್ಲಿ ಹೆಚ್ಚಳ ಆಗುತ್ತಿರುವುದು ಗಮನಕ್ಕೆ ಬಂದಿದೆ. ಹಠಾತ್ ದೇಹದ ತೂಕ ಕಡಿಮೆಯಾಗುವುದು. ಸ್ತನದಲ್ಲಿ ನೋವು, ಗಡ್ಡೆಗಳು ಕಂಡು ಬಂದರೆ ಸ್ತನ ಕ್ಯಾನ್ಸರ್ ಇರಬಹುದು. ಹೊಟ್ಟೆ ಉಬ್ಬರ, ವಿಪರೀತ ರಕ್ತಸ್ರಾವ ಆದಲ್ಲಿ ಗರ್ಭಕೋಶದ ಕ್ಯಾನ್ಸರ್ ಇರಬಹುದು. ಚರ್ಮದ ತುರಿಕೆ ಹಾಗೂ ಗುಳ್ಳೆ. ಮೈಯಲ್ಲಿ ಊತ, ಸಂಧಿ ನೋವು. ಧ್ವನಿಯಲ್ಲಿ ಬದಲಾವಣೆ ಕ್ಯಾನ್ಸರ್ ಲಕ್ಷಣಗಳು. ಧೂಮಪಾನ, ತಂಬಾಕು, ಮದ್ಯಪಾನ ಮುಂತಾದ ದುಶ್ಚಟಗಳು ಹಾಗೂ ಅನುವಂಶೀಯತೆ ಕ್ಯಾನ್ಸರ್‌ಗೆ ಕಾರಣಗಳಾಗಿವೆ.
ಪುರುಷರಲ್ಲಿ ಪ್ರಾಸ್ಟೇಟ್, ಕೊಲೊನ್, ಲಿವರ್, ಮೆದುಳು, ನಾಲಿಗೆ, ಶ್ವಾಸಕೋಶ, ಲಿಂಫೋಮಾ, ಬಾಯಿ, ಅನ್ನನಾಳ, ಹೊಟ್ಟೆಯ ಕ್ಯಾನ್ಸರ್ ಗಣನೀಯವಾಗಿ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಗರ್ಭಾಶಯದ (ಕಾರ್ವಸ್ ಯುಟೇರಿ), ಶ್ವಾಸಕೋಶ, ಸ್ತನ, ಕೊಲೊನ್, ಅಂಡಾಶಯ, ಥೈರಾಯ್ಡ್, ಹೊಟ್ಟೆಯ ಕ್ಯಾನ್ಸರ್‌ಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ತಿಳಿಸಿದೆ.
ಕಿದ್ವಾಯಿ ಸಂಸ್ಥೆಯಲ್ಲಿನ ಅಸ್ತಿಮಜ್ಜೆ ಕಸಿ ಘಟಕವು (ಬಿಎಂಟಿ) ರಾಜ್ಯದಲ್ಲಿ ಏಕೈಕ ಸರ್ಕಾರಿ ಘಟಕವಾಗಿದ್ದು, ಜನವರಿಯಲ್ಲಿ ಮೂರು ಅಟೋಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆ ನೀಡಿರುವುದು ರಾಜ್ಯದಲ್ಲೆ ಮೊದಲಾಗಿದೆ. ಈವರೆಗೂ 105 ಮಂದಿಗೆ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಯಾಗಿ ನೀಡಲಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಅಯೋಡಿನ್ 125 ಬ್ರಾಕಿ ಥೆರಪಿ ಚಿಕಿತ್ಸೆ ನೀಡುತ್ತಿದ್ದು, ದೇಶಕ್ಕೆ ಮಾದರಿಯಾಗಿದೆ.
ಬಾಲ್ಯ ಕ್ಯಾನ್ಸರ್ ನೋಂದಣಿ:
2024ರಲ್ಲಿ 50ಕ್ಕೂ ಹೆಚ್ಚು ಶಿಬಿರ ಹಾಗೂ ಕಾರ್ಯಾಗಾರ ನಡೆಸಲಾಗಿದೆ. ಸಂಸ್ಥೆಯು 2024ರ ನವೆಂಬರ್ 7ರಂದು ರಾಷ್ಟ್ರದಲ್ಲಿ ಮೊದಲ ಬಾರಿಗೆ ಬಾಲ್ಯದ ಕ್ಯಾನ್ಸರ್ ನೋಂದಣಿ ಕಾರ್ಯಾಗಾರ ಆಯೋಜಿಸಿತ್ತು. ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಗೆ ಬಾಲ್ಯದ ಕ್ಯಾನ್ಸರ್ ಸಮಗ್ರ ನಿರ್ವಹಣಾ ನೀತಿಗಾಗಿ ವಿವರವಾದ ಪ್ರಸ್ತಾವನೆ ಸಲ್ಲಿಸಿದ್ದು, ರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ಯೋಜನೆ ಪರಿಗಣನೆಯಲ್ಲಿದೆ.
ಜಾಗೃತಿ: ಕ್ಯಾನ್ಸರ್‌ಗೆ ಕಾರಣವಾಗುವ ಜೀವನಶೈಲಿಯ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರಿ ಕ್ಯಾನ್ಸರ್ ತಪಾಸಣಾ ಬಸ್ ಮತ್ತು ಮ್ಯಾಮೋಗ್ರಫಿ ಒಳಗೊಂಡಿದೆ. ಈ ಬಸ್‌ನಲ್ಲಿ ಡಿಜಿಟಲ್ ಎಕ್ಸ್-ರೇ, ಸಿ.ಟಿ.ಸ್ಮಾನ್, ಆಟೋ -ಆನಸರ್ ಮತ್ತಿತರ ಸಲಕರಣೆಗಳಿವೆ.
ಇಂದು ಜಾಗೃತಿ ಜಾಥಾ:
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫೆ.4ರಂದು ಸಂಸ್ಥೆಯ ಆವರಣದಿಂದ ಲಾಲ್‌ಬಾಗ್ ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7.30ಕ್ಕೆ ಸಂಸ್ಥೆ ಆವರಣದಲ್ಲಿ ಜಾಥಾಗೆ ನಟ ವಶಿಷ್ಠ ಸಿಂಹ ಚಾಲನೆ ನೀಡಲಿದ್ದಾರೆ.
ಬೆಂಗಳೂರಲ್ಲಿ ಕ್ಯಾನ್ಸರ್ ಅಂಕಿಅಂಶ (2024)
ಲಿಂಗ
ಪುರುಷ 6,880 - 1,947
ಮಹಿಳೆ8,273 - 1,879
ಒಟ್ಟೂ15,153 - 3,826
------
ಕಿದ್ವಾಯಿ ನಡೆಸಿರುವ ಕಿಮೋಥೆರಪಿ
ಲಿಂಗ ಹೊಸ ನೋಂದಣಿಈವರೆಗೆ ನಡೆಸಿದ್ದು
ಪುರುಷ 9,816 -1,63,187
ಮಹಿಳೆ 11,235 - 2,05,354
ಒಟ್ಟೂ 21,608 - 3,68,541
--------------
ಕಿದ್ವಾಯಿ ಕ್ಯಾನ್ಸರ್ ರೋಗಕ್ಕೆ ಪೂರಕ ಚಿಕತ್ಸೆ ನೀಡುತ್ತಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸಿದಲ್ಲಿ ರೋಗಿ ಶೀಘ್ರ ಗುಣಮುಖರಾಗಬಹುದು.
। ಡಾ.ಟಿ.ನವೀನ್, ಅಧಿಕ ಪ್ರಭಾರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ