ಗಣರಾಜ್ಯೋತ್ಸವ ಪ್ರಯುಕ್ತ ಲಾಲ್‌ಬಾಗ್‌ ಪುಷ್ಪ ಪ್ರದರ್ಶನಕ್ಕೆ ಮಹರ್ಷಿ ವಾಲ್ಮೀಕಿ ಥಿಮ್‌

| Published : Jan 02 2025, 01:47 AM IST / Updated: Jan 02 2025, 04:50 AM IST

ಸಾರಾಂಶ

ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿವರ್ಷ ಆಯೋಜಿಸುವ ಲಾಲ್‌ಬಾಗ್‌ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ರಾಮಾಯಣ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಅವರ ಜೀವನ ಚಿತ್ರಣ ಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ.

 ಬೆಂಗಳೂರು : ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿವರ್ಷ ಆಯೋಜಿಸುವ ಲಾಲ್‌ಬಾಗ್‌ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ರಾಮಾಯಣ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಅವರ ಜೀವನ ಚಿತ್ರಣ ಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ.

ಈ ಬಾರಿ ಜ.16ರಿಂದ 26ರವರೆಗೆ ಪುಷ್ಪ ಪ್ರದರ್ಶನ ನಡೆಯಲಿದ್ದು, ಬೇಡ ಸಮುದಾಯದ ಮೊದಲ ಸಾಕ್ಷರ ಮಹಾನುಭಾವ, ರಾಮಾಯಣ ಎಂಬ ಮಹಾನ್ ಗ್ರಂಥ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನಾಧಾರಿತ ಪುಷ್ಪ ಚಿತ್ರಣಗಳು ನೋಡುಗರ ಮೈಮನ ಸೆಳೆಯಲಿವೆ. ಮಹರ್ಷಿ ಅವರು ರಾಮಾಯಣ ಬರೆಯುತ್ತಿರುವ ಚಿತ್ರ, ರಾಮಾಯಣ ಪುಸ್ತಕದ ಚಿತ್ರ ಸೇರಿದಂತೆ ಹಲವು ಆಕರ್ಷಣೆಗಳು ಚಳಿಗಾಲದ ಬಗೆ ಬಗೆಯ ನೈಜ ಹೂಗಳಿಂದ ವಿನ್ಯಾಸಗೊಳ್ಳಲಿವೆ.

ಪ್ರದರ್ಶನಕ್ಕಾಗಿ ಈಗಾಗಲೇ ಹೂಕುಂಡಗಳಲ್ಲಿ ಬೆಳೆಸಿದ ಪುಷ್ಪಗಳ ಜೋಡಣೆ ಆರಂಭವಾಗಿದ್ದು, ಓರೆ-ಕೋರೆಯಾಗಿ ಬೆಳೆದು ನಿಂತ ಗಿಡಗಳನ್ನು ಒಪ್ಪ-ಓರಣಗೊಳಿಸಲಾಗುತ್ತಿದೆ. ಹುಲ್ಲು ಹಾಸು ಸೇರಿದಂತೆ ಉದ್ಯಾನದ ನಾನಾ ಭಾಗಗಳಿಗೆ ತುಂತುರು ಹನಿ ನೀರನ್ನು ಹರಿಸುವ ಮೂಲಕ ಉದ್ಯಾನದ ಅಂದ ಹೆಚ್ಚಿಸುವಲ್ಲಿ ಸಿಬ್ಬಂದಿ ವಿಶೇಷ ನಿಗಾವಹಿಸಿದ್ದಾರೆ. ತೋಟಗಾರಿಕೆ ಇಲಾಖೆಯವರೇ ನಾನಾ ನರ್ಸರಿಗಳಲ್ಲಿ ಬೆಳೆಸಿದ ಪೆಟೋನಿಯಾ, ಅಕೇಷಿಯಾ ಮತ್ತಿತರ ಹೂಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತಿದ್ದು, ಜತೆಗೆ ವಿವಿಧ ಸಂಸ್ಥೆಗಳು ಬೆಳೆಸಿದ ಹೂವಿನ ಗಿಡಗಳು ಸ್ಪರ್ಧೆಯಲ್ಲಿ ರಾರಾಜಿಸಲಿವೆ.

ಲಾಲ್‌ಬಾಗ್‌ನಲ್ಲಿ ಈಗಾಗಲೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಲಾಲ್‌ಬಾಗ್‌ ಅಧಿಕಾರಿ, ಸಿಬ್ಬಂದಿ, ಪುಷ್ಪ ಪ್ರದರ್ಶನಕ್ಕೆ ಅಗತ್ಯವಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಪುಷ್ಪ ಪ್ರದರ್ಶನಕ್ಕೆ ಬೇಕಾದ ಪುಷ್ಪಗಳನ್ನು ನಾನಾ ಭಾಗಗಳಿಂದ ತರಲಾಗುತ್ತಿದೆ. ಗಾಜಿನಮನೆಯಲ್ಲಿ ವಾಲ್ಮೀಕಿ ಜೀವನ ಚಿತ್ರಣವನ್ನು ಪುಷ್ಪ ಮಾದರಿಯಲ್ಲಿ ಅನಾವರಣಗೊಳಿಸಲು ನೂರಾರು ಮಂದಿ ಶ್ರಮಿಸುತ್ತಿದ್ದಾರೆ.

ವಿವಿಧ ಬಗೆಯ ಹೂಗಳ ಆಕರ್ಷಣೆ: ರೆಡ್‌ಹಾಟ್ ಪೋಕರ್, ಆಲ್‌ಸ್ಟ್ರೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಟ್ಯೊಬಿರಸ್ ರೂಟೆಡ್ ಸೇರಿದಂತೆ ಹಲವು ಶೀತ ವಲಯದ ವಿಶೇಷ ಹೂಗಳ ಪ್ರದರ್ಶನ, ದೇಶ-ವಿದೇಶಗಳ ಹತ್ತಾರು ಬಗೆಯ ಕುಂಡಗಳಲ್ಲೇ ಅರಳಿದ ಹೂಗಳು, ಆರ್ಕಿಡ್ಸ್, ಬೋಗನ್‌ವಿಲ್ಲಾದ ಹೂ ಗಿಡಗಳನ್ನು ಕಂಟೈನ್‌ಗಳಲ್ಲಿ ಪ್ರದರ್ಶಿಸುತ್ತಿರುವುದು ಈ ಬಾರಿಯ ಮತ್ತೊಂದು ವಿಶೇಷ.