ಸಾರಾಂಶ
ಮುಡಾ ಪ್ರಕರಣದಲ್ಲಿ ಸಿದ್ದುಗೆ ಕೋರ್ಟ್‌ನಿಂದ ವ್ಯತಿರಿಕ್ತ ತೀರ್ಪು ಬಂದರೆ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಮತ್ತು ಖರ್ಗೆ ನಡುವೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿ ಶುರುವಾಗುತ್ತದೆ. ಈ ಸನ್ನಿವೇಶದಲ್ಲಿ ಖರ್ಗೆಗೆ ಅವಕಾಶ ಸಿಗುತ್ತದೆಯೇ ಅಥವಾ ಡಿ.ಕೆ.ಶಿ. ಮೇಲುಗೈ ಸಾಧಿಸುತ್ತಾರೆಯೇ ?
- ಪ್ರಶಾಂತ್ ನಾತು
-----
ಒಂದು ವೇಳೆ ಕೋರ್ಟ್‌ಗಳಿಂದ ಮುಡಾ ಪ್ರಕರಣದಲ್ಲಿ ಸಿದ್ದುಗೆ ರಿಲೀಫ್ ಸಿಗದೆ ವ್ಯತಿರಿಕ್ತ ತೀರ್ಪು ಬಂದರೆ ಡಿಕೆಶಿ, ಪರಂ ಮತ್ತು ಖರ್ಗೆ ನಡುವೆ ಮ್ಯೂಸಿಕಲ್ ಚೇರ್ ಆಟ ಶುರುವಾಗುತ್ತದೆ. ಆದರೆ, ಆಗ ಆಟದಲ್ಲಿ ಮ್ಯೂಸಿಕ್ ಬಂದ್ ಮಾಡುವ ಅಧಿಕಾರವೂ ಸಿದ್ದುಗೆ ದೊರೆಯಬಹುದು. ಆಗ ಖರ್ಗೆ ಸರಿಯಾಗಿ ಕುರ್ಚಿ ಹತ್ತಿರ ಬಂದು ನಿಂತಾಗಲೇ ಸಿದ್ದು ಸೀಟಿ ಹೊಡೆಯುತ್ತಾರಾ?
-----
ಬದುಕಿನಲ್ಲಿ ನನಸಾಗದ ಕನಸು ಹೇಗೆ ಮನುಷ್ಯನನ್ನು ಕೊನೆಯವರೆಗೆ ಕಾಡುತ್ತದೆಯೋ ಹಾಗೆಯೇ ಒಬ್ಬ ವೃತ್ತಿಪರ ರಾಜಕಾರಣಿಗೆ ಕೂರಲು ಸಿಗದೇ ಇರುವ ಕುರ್ಚಿ ಎಷ್ಟೇ ವಯಸ್ಸಾದರೂ ಕೂಡ ಹಂಬಲಿಸಿ ಹಂಬಲಿಸಿ ಕಡೆಗೆ ದ್ವಂದ್ವಕ್ಕೆ ದೂಡುತ್ತದೆ. ಕರ್ನಾಟಕದಲ್ಲಿ ಹಾಗೆ ಯೋಗ್ಯತೆ, ಅರ್ಹತೆ, ಹಿರಿತನ, ಪರಿಶ್ರಮ ಎಲ್ಲಾ ಇದ್ದರೂ ಕೂಡ ಮುಖ್ಯಮಂತ್ರಿ ಆಗದೇ ಇರುವವರು ಅಂದರೆ ನಿಸ್ಸಂದೇಹವಾಗಿ ಮಲ್ಲಿಕಾರ್ಜುನ ಖರ್ಗೆ. ಅದೇಕೋ ಏನೋ 2004ರಲ್ಲಿ ಮತ್ತು 2013ರಲ್ಲಿ ಮುಖ್ಯಮಂತ್ರಿ ಸ್ಥಾನ ಹತ್ತಿರ ಹತ್ತಿರ ಬಂದರೂ ಖರ್ಗೆ ಸಾಹೇಬರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಮುಡಾ ಕೇಸ್‌ನಲ್ಲಿ ತನಿಖೆಗೆ ಅನುಮತಿ ಕೊಟ್ಟ ನಂತರ ತೂಗು ಕತ್ತಿ ಹೊಯ್ದಾಡುತ್ತಿದೆ. ಈಗ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ಸಿದ್ದರಾಮಯ್ಯ ವಿರೋಧಿ ಕಾಂಗ್ರೆಸ್ ನಾಯಕರು ಸಿದ್ದು ಹಿಂದೆ ಗಟ್ಟಿಯಾಗಿ ನಿಂತಂತೆ ತೋರುತ್ತಿದ್ದರೂ ಒಂದು ವೇಳೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವ್ಯತಿರಿಕ್ತವಾದ ತೀರ್ಪು ಬಂದರೆ ಸಿದ್ದು ಕುರ್ಚಿಗೆ ಕುತ್ತು ಬರಲಿದೆಯೇ ಎಂಬ ಪ್ರಶ್ನೆಗಳು ಮೂಡುವುದು ಪಕ್ಕಾ.
ದಿಲ್ಲಿ ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ ಸೋನಿಯಾ ಮತ್ತು ರಾಹುಲ್ ಗಾಂಧಿ ಎದುರು ಖರ್ಗೆಯವರು, ‘ನಾನು ಕಾಂಗ್ರೆಸ್ ಪಾರ್ಟಿಗೆ ನಿಷ್ಠನಾಗಿ ಏನು ಹೇಳಿದ್ದೀರೋ ಎಲ್ಲವನ್ನೂ ಮಾಡಿದ್ದೇನೆ. ನಾನು ಜೀವನದಲ್ಲಿ ಮುಖ್ಯಮಂತ್ರಿ ಆಗಲು ಸಾಧ್ಯ ಆಗಲಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಕೆಳಗೆ ಇಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ನಂಗೆ ಎರಡು ವರ್ಷದ ಅವಕಾಶ ಕೊಡಿ. ಡಿ.ಕೆ.ಶಿವಕುಮಾರ್‌ಗೆ ಇನ್ನೂ ವಯಸ್ಸಿದೆ’ ಎಂದು ಹೇಳಿದ್ದಾರೆಂಬ ಮಾತು ಕೇಳಿಬರುತ್ತಿದೆ. ಆದರೆ ಸೋನಿಯಾ ಆಗಲಿ ರಾಹುಲ್ ಆಗಲಿ ಏನನ್ನೂ ನಿರ್ಧರಿಸಿಲ್ಲ ಎಂದು ಮೂಲಗಳು ಹೇಳುತ್ತಿವೆ. ಯಾವುದೇ ರಾಷ್ಟ್ರೀಯ ಪಾರ್ಟಿಯ 21ನೇ ಶತಮಾನದ ಹೈಕಮಾಂಡ್‌ಗಳು ಸೇತುವೆ ಮೇಲೆ ನೀರು ತುಂಬಿ ಹರಿಯುವವರೆಗೆ ಬದಲಿ ಮಾರ್ಗದ ಬಗ್ಗೆ ಯೋಚನೆ ಮಾಡುವುದು ಕಡಿಮೆ. ಈಗಿರುವ ಪರಿಸ್ಥಿತಿ ನೋಡಿದರೆ ಏನೂ ಕೂಡ ಆಗಬಹುದು ಅನ್ನಿಸುತ್ತದೆ.
ಅಧಿಕಾರವಂಚಿತ ನತದೃಷ್ಟ ಖರ್ಗೆ
ಕೆಲ ವರ್ಷಗಳ ಹಿಂದೆ ಟೀವಿಯಲ್ಲಿ ಮಾತನಾಡುವಾಗ ದಲಿತ ಅನ್ನುವ ಕಾರಣದಿಂದ ಖರ್ಗೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಯಿತು ಎಂದು ನಾನು ವಿಶ್ಲೇಷಣೆ ಮಾಡಿದ್ದೆ. ರಾತ್ರಿ ಬೇಸರದಿಂದ ಖರ್ಗೆ ಫೋನು ಮಾಡಿದರು. ‘ಅಲ್ಲಾರಿ ನಾತು, 1972ರಿಂದ ಲಗಾತಾರ್ ಶಾಸಕನಾಗಿದ್ದೇನೆ. ಶಿಕ್ಷಣ, ಗೃಹದಂಥ ಖಾತೆ ನಿಭಾಯಿಸಿದ್ದೇನೆ. ದಿಲ್ಲಿಯವರು ರಾಜ್ಯ ಸಿದ್ದರಾಮಯ್ಯನವರಿಗೆ ಬಿಡಿ, ನೀವು ಇಲ್ಲಿಗೆ ಬನ್ನಿ ಅಂದಾಗ ಒಂದೂ ಮಾತಿಲ್ಲದೆ ಬಂದಿದ್ದೇನೆ. ನಾನು ಇಷ್ಟೆಲ್ಲಾ ಮಾಡಿದ ಮೇಲೂ, ಕಡೆಗೆ ದಲಿತ ಅಂತ ಕೊಟ್ರು ಅಂತೀರಲ್ಲ, ನನಗೆ ಯೋಗ್ಯತೆ ಇಲ್ಲವೇನು?’ ಎಂದು ಕೇಳಿದಾಗ, ನನ್ನ ಬಳಿ ಉತ್ತರ ಇರಲಿಲ್ಲ. 2004ರಲ್ಲಿ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಂತ ದಿಲ್ಲಿಯವರಿಗೆ ಮನಸ್ಸು ಇತ್ತು. ಆದರೆ ದೇವೇಗೌಡರಿಗೆ ಇಷ್ಟ ಇರಲಿಲ್ಲ. ಒಮ್ಮೆ ದಲಿತರನ್ನು ಕೂರಿಸಿದರೆ ಇಳಿಸಿದಾಗ ರಾದ್ದಾಂತ ಆಗಬಹುದು ಎಂದು ದೇವೇಗೌಡರ ಮನಸ್ಸಿನಲ್ಲಿ ಇದ್ದಿರಬಹುದು. ಜೊತೆಗೆ ಮಗನನ್ನು ಮುಖ್ಯಮಂತ್ರಿ ಮಾಡುವ ಇರಾದೆಯೊಂದಿಗೆ ದೇವೇಗೌಡರು ಸಿದ್ದು ಮತ್ತು ಖರ್ಗೆ ಇಬ್ಬರನ್ನೂ ಬದಿಗೆ ಸರಿಸಿ, ಧರ್ಮಸಿಂಗ್‌ರಂಥ ಜಾತಿಯ ಬಲ ಇಲ್ಲದ ನಾಯಕನನ್ನೇ ಅಯ್ದುಕೊಂಡರು. ನಂತರ 2008ರಲ್ಲಿ ಖರ್ಗೆ ಸ್ವತಃ ಟಿಕೆಟ್ ಹಂಚಿದಾಗ ವಚನಭ್ರಷ್ಟತೆಯ ಅನುಂಕಪದಿಂದ ಹುಟ್ಟಿದ ಯಡಿಯೂರಪ್ಪ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಹೋಯಿತು. ಆಮೇಲೆ 2009ರಲ್ಲಿ ಖರ್ಗೆ ದಿಲ್ಲಿಗೆ ಹೋದರು. 2013ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಾಗ ಹೈಕಮಾಂಡ್ ಸಿದ್ದು ಜೊತೆ ನಿಂತುಕೊಂಡಿತು. ಹೀಗಾಗಿ ಖರ್ಗೆಗಿಂತ ಶಾಸಕರು ಸಿದ್ದು ಕಡೆ ಸಹಜವಾಗಿ ವಾಲಿದರು. ಈಗ ಅದಾದ 11 ವರ್ಷದ ನಂತರ ಮತ್ತೊಂದು ಕೊನೆ ಅವಕಾಶ ಖರ್ಗೆ ಅವರಿಗೆ ದೂರದಲ್ಲಿ ಕಾಣುತ್ತಿದೆ. ಆದರೆ ಅದು ಮರಳುಗಾಡಿನ ಮರೀಚಿಕೆ ಎಂಬ ಭ್ರಮೆಯೋ ಅಥವಾ ನೀರಿನ ಸೆಲೆಯೋ ಎಂಬುದು ಕೋರ್ಟ್‌ಗಳು ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಒಂದೊಂದು ಸಲ ಕೈಗೆ ಬಂದ ತುತ್ತೇ ಬಾಯಿಗೆ ಬರುವುದಿಲ್ಲ, ಇನ್ನು ಕಣ್ಣಿಗೆ ಕಾಣುವ ತುತ್ತು ಬಂದೇ ಬರುತ್ತದೆ ಎಂದು ಭವಿಷ್ಯ ಹೇಳುವುದು ಸ್ವಲ್ಪ ಪ್ರಯಾಸದ ಕೆಲಸ ಬಿಡಿ.
ಕಾಂಗ್ರೆಸ್ ಆಂತರಿಕ ರಾಜಕಾರಣ
2006ರಲ್ಲಿ ಸಿದ್ದು ಕಾಂಗ್ರೆಸ್‌ಗೆ ಬಂದ ನಂತರ ಅವರ ಮೊದಲ ಪೈಪೋಟಿ ಶುರುವಾಗಿದ್ದು ಖರ್ಗೆ ಜೊತೆಗೆ. ಆದರೆ ಒಂದು ಒರೆಯಲ್ಲಿ ಎರಡು ಖಡ್ಗಗಳು ಬೇಡ ಎಂದು ಸೋನಿಯಾ ಗಾಂಧಿ, ‘ಖರ್ಗೇಜಿ, ನೀವು ದಿಲ್ಲಿಗೆ ಬನ್ನಿ’ ಅಂದರು. 2013ರಲ್ಲಿ ಸಿದ್ದು ಸಂಘರ್ಷ ಆಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ ಜೊತೆ ಶುರುವಾಯಿತು. ಆದರೆ ವಿಚಿತ್ರ ಕಾಕತಾಳೀಯ ನೋಡಿ. ಕೊರಟಗೆರೆಯಲ್ಲಿ ಪರಮೇಶ್ವರ ಚುನಾವಣೆ ಸೋತರು. ಸಿದ್ದು ಸುಲಭದಲ್ಲಿ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಪಾರ್ಟಿಗೆ ಅತಿಯಾಗಿ ನಿಷ್ಠರಾದ ಖರ್ಗೆ ಮತ್ತು ಪರಮೇಶ್ವರ್‌ರನ್ನು ಸಿದ್ದು ಸುಲಭವಾಗಿ ರಾಜಕೀಯವಾಗಿ ಮಣಿಸಿದರು. ಆದರೆ ಈಗ ಸಿದ್ದು ಫೈಟ್ ನಡೆಯುತ್ತಿರುವುದು ಚತುರಮತಿ ಹಾಗೂ ಯಾವುದೇ ಹಂತಕ್ಕೂ ಹೋಗಿ ಹೋರಾಟ ಮಾಡಬಲ್ಲ ಡಿ.ಕೆ.ಶಿವಕುಮಾರ್ ಜೊತೆಗೆ. ಸಿದ್ದರಾಮಯ್ಯಗೆ ಕಾಗ್ರೆಸ್‌ನಲ್ಲಿರುವ ವಿರೋಧಿಗಳ ಸಹಾಯವಿಲ್ಲದೆ ಮುಡಾ ಹಗರಣ ಹೊರಗಡೆ ಬಂದಿದೆ ಅನ್ನೋದೇ ನಂಬಲು ಅಸಾಧ್ಯ. ಹೀಗಿರುವಾಗ ಒಂದು ವೇಳೆ ಕೋರ್ಟ್‌ಗಳಿಂದ ಪರಿಹಾರ ಸಿಗದೇ ವ್ಯತಿರಿಕ್ತ ತೀರ್ಪು ಬಂದರೆ ಡಿ.ಕೆ.ಶಿವಕುಮಾರ್, ಪರಮೇಶ್ವರ ಮತ್ತು ಖರ್ಗೆ ನಡುವೆ ಮ್ಯೂಸಿಕಲ್ ಚೇರ್ ಶುರು ಆಗಿಯೇ ಆಗುತ್ತದೆ. ಆದರೆ ಆಗ ಆಟದಲ್ಲಿ ಮ್ಯೂಸಿಕ್ ಬಂದ್ ಮಾಡುವ ಅಧಿಕಾರ ಸಿದ್ದುಗೆ ದೊರೆಯಬಹುದು. ಆಗ ಸಿದ್ದು ಏನು ಮಾಡಬಹುದು ಕಾಗಿನೆಲೆ ಕೇಶವರಾಯನಿಗೇ ಗೊತ್ತು!
ಖರ್ಗೆ ಪ್ಲಸ್ಸು ಮತ್ತು ಮೈನಸ್ಸುಗಳು
ಒಂದು ವೇಳೆ ಕೋರ್ಟ್‌ಗಳಿಂದ ವ್ಯತಿರಿಕ್ತ ತೀರ್ಪು ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಹಂತ ಬಂದಲ್ಲಿ ಆಗ ಸಿದ್ದು ಬೆಂಬಲಿಗರಾದ ಸತೀಶ್ ಜಾರಕಿಹೊಳಿ, ರಾಜಣ್ಣ, ಮಹಾದೇವಪ್ಪ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್‌ರಿಗೆ ಡಿ.ಕೆ.ಶಿವಕುಮಾರ್‌ಗಿಂತ ಖರ್ಗೆ ಮುಖ್ಯಮಂತ್ರಿ ಆಗುವುದು ಒಳ್ಳೇದು ಅನ್ನಿಸಬಹುದು. ಹಿರಿತನ ಮತ್ತು ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಹೆಸರಿಗೆ ಸರ್ವಸಮ್ಮತಿ ಬರುವುದು ಸಹಜ ಮತ್ತು ಸ್ವಾಭಾವಿಕ. ಇದಕ್ಕೆ ಸಿದ್ದು ಒಪ್ಪಿಗೆ ಕೂಡ ಸಿಗಬಹುದು. ಆದರೆ ಖರ್ಗೆ ಅವರಿಗೆ 82 ವರ್ಷ ವಯಸ್ಸು. ಇದೇ ಅವರಿಗಿರುವ ದೊಡ್ಡ ಮೈನಸ್ ಪಾಯಿಂಟ್. ಸಂಘಟನೆ, ಸಮುದಾಯ ಮತ್ತು ಸಂಪನ್ಮೂಲದಲ್ಲಿ ಬಲಾಢ್ಯರಾಗಿರುವ ಡಿ.ಕೆ.ಶಿವಕುಮಾರ್ ಇದಕ್ಕೆ ಒಪ್ಪುತ್ತಾರಾ ಅನ್ನೋದು ಕೂಡ ಖರ್ಗೆಗಿರುವ ಮೈನಸ್ ಪಾಯಿಂಟ್. ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ನೀರು ಶಾಂತ ಎಂಬಂತೆ ಭಾಸವಾಗುತ್ತಿದೆ. ಒಳಗಡೆ ಮಾತ್ರ ದಾವಾನಲ ಕುದಿಯುತ್ತಿದೆ. ಸನ್ಯಾಸಿಗಳ ಆಟದಲ್ಲಿ ‘ತ್ಯಾಗ’ಕ್ಕೆ ಪ್ರಾಶಸ್ತ್ಯವಾದರೆ, ರಾಜಕಾರಣಿಗಳ ಆಟದಲ್ಲಿ ‘ಮಹತ್ವಾಕಾಂಕ್ಷೆ’ ಮತ್ತು ‘ದಾಹ’ವೇ ಪ್ರಧಾನ ವಿಷಯ ವಸ್ತು.
ಈ ಬಿಂದುಗಳನ್ನು ಜೋಡಿಸಿ ನೋಡಿ
ಕಳೆದ ತಿಂಗಳು ತರಾತುರಿಯಲ್ಲಿ ಬೆಂಗಳೂರಿಗೆ ಬಂದಿದ್ದ ಕೆ.ಸಿ.ವೇಣುಗೋಪಾಲ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸಿದ್ದು ಸಂಪುಟದ ಹಿರಿಯರನ್ನೆಲ್ಲ ಕರೆದು ಮೊದಲು ತರಾಟೆಗೆ ತೆಗೆದುಕೊಂಡಿದ್ದು ಮುಖ್ಯಮಂತ್ರಿಗಳ ಕಾರ್ಯದರ್ಶಿಯನ್ನು. ನೀವು ಇರುವಾಗ ಇದೆಲ್ಲ ಹೇಗೆ ನಡೆಯಿತು? ನೀವು ಏನು ಮಾಡುತ್ತಿದ್ದೀರಿ? ಅನ್ನುತ್ತಲೇ ಕೂಗಾಡಿದ ವೇಣುಗೋಪಾಲ್, ಸದಾ ಮುಖ್ಯಮಂತ್ರಿಗಳ ಅಕ್ಕಪಕ್ಕ ಕಾಣಿಸಿಕೊಳ್ಳುತ್ತಿದ್ದ ಸಚಿವರೊಬ್ಬರನ್ನು ನಿಮ್ಮಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದೆಲ್ಲ ಹೇಳಿ, ನೀವು ಸ್ವಲ್ಪ ಸಿಎಂರಿಂದ ದೂರವಿರಿ ಎಂದು ಸೂಚಿಸಿದರಂತೆ. ಅಷ್ಟೇ ಅಲ್ಲ, ದಿಲ್ಲಿಯಲ್ಲಿ ಒಮ್ಮೆ ಮಾತಿಗೆ ಮಾತು ಬಂದಾಗ ‘2013ರಿಂದ 18ರಲ್ಲಿ ಇದ್ದ ಆಡಳಿತದಲ್ಲಿನ ಬಿಸುಪು ಈಗ ಕಾಣಿಸುತ್ತಿಲ್ಲ’ ಎಂದು ಸಿಎಂಗೆ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟ ಮೇಲೆ ಸ್ವತಃ ಖರ್ಗೆ ಸಾಹೇಬರು ಕೊಟ್ಟ ಹೇಳಿಕೆ ಕೂಡ ಸಿದ್ದುಗೆ ಒಳ್ಳೆ ಸಂಕೇತಗಳನ್ನು ಕೊಟ್ಟಿಲ್ಲ. ಆದರೆ ಸಿದ್ದುಗಿರುವ ದೊಡ್ಡ ಸಾಮರ್ಥ್ಯ ಈ ಹೈಕಮಾಂಡ್‌ನ ಪ್ರೀತಿ ಅಲ್ಲ, ಬದಲಿಗೆ ಅವರ ಶಕ್ತಿಯೆಂದರೆ ಅವರಿಗಿರುವ ವೋಟ್ ಬ್ಯಾಂಕ್. ರಾಜಕಾರಣಿಗಳಿಗೆ ಮತ್ತು ಹೈಕಮಾಂಡ್‌ಗಳಿಗೆ ಈ ಜನಪ್ರಿಯತೆ ಮತ್ತು ವೋಟ್ ಬ್ಯಾಂಕ್‌ನ ಭಾಷೆ ಅರ್ಥ ಆಗುತ್ತದೆ. ಆದರೆ ಕೋರ್ಟ್‌ಗಳಿಗೆ ಇದೆಲ್ಲ ಬೇಕಾಗುವುದಿಲ್ಲ. ಅವು ಪರಿಗಣಿಸುವುದು ಕೇವಲ ಮತ್ತು ಕೇವಲ ತಥ್ಯ, ತರ್ಕ ಮತ್ತು ದಾಖಲೆಗಳನ್ನು ಮಾತ್ರ.