ಸಾರಾಂಶ
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮುನ್ನಡೆಸಿದ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರುವ ಕರ್ನಾಟಕದ ಹೆಮ್ಮೆಯ ಪುತ್ರ ಖರ್ಗೆ
ಶಾಸಕ ಮಂಜುನಾಥ್
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮುನ್ನಡೆಸಿದ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರುವ ಕರ್ನಾಟಕದ ಹೆಮ್ಮೆಯ ಪುತ್ರ ಖರ್ಗೆ. ಅವರ ಬದುಕು ಬೆಂಕಿಯಲ್ಲಿ ಅರಳಿದ ಹೂವಿದ್ದಂತೆ. ಅವರು ಅಧಿಕಾರದ ಬೆನ್ನತ್ತಿದವರಲ್ಲ. ಜವಾಬ್ದಾರಿ ಬಂದಾಗಲೆಲ್ಲಾ ತಪ್ಪದೇ ಪಾಲಿಸಿದವರು. ಯುವ ರಾಜಕಾರಣಿಗಳನ್ನು ಬೆಳೆಸುವ ಹೊಣೆಗಾರಿಕೆ ಹೊತ್ತವರು. ಅವರು ನೊಂದವರ ಧ್ವನಿಯೂ ಹೌದು. ಅನುಭವದ ಗಣಿಯೂ ಹೌದು.
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಅನೇಕ ನಾಯಕರು ಬಂದಿದ್ದಾರೆ, ಹೋಗಿದ್ದಾರೆ. ಆದರೆ ಅನೇಕರು ಇಂದಿಗೂ ಹೆಸರು ಉಳಿಸಿಕೊಂಡಿರುವುದು ತತ್ವ ಹಾಗೂ ಸಿದ್ಧಾಂತಕ್ಕೆ ನಿಷ್ಠರಾಗಿರುವುದರಿಂದಲೇ ಹೊರತು, ಅವರು ಮಾಡಿದ ರಾಜಕಾರಣದಿಂದಲ್ಲ. ಇಂತಹ ರಾಜಕಾರಣಿಗಳು ಅಧಿಕಾರ ಬಿಟ್ಟುಬಿಡಬಹುದು, ಆದರೆ ತಮ್ಮ ಆದರ್ಶಗಳನ್ನು ಬಿಡುವುದಿಲ್ಲ. ಅಂತಹ ಪ್ರಖರ ರಾಜಕಾರಣಿಯಲ್ಲೊಬ್ಬರು ಮಲ್ಲಿಕಾರ್ಜುನ ಖರ್ಗೆ. ಮಹಾಭಾರತದಲ್ಲಿ ಭೀಷ್ಮ ತನ್ನ ಪ್ರತಿಜ್ಞೆಯನ್ನು ಕಾಪಾಡಿಕೊಳ್ಳಲು ಸಿಂಹಾಸನದಲ್ಲಿ ಕೂರುವುದೇ ಇಲ್ಲ. ಬದಲಾಗಿ ತನ್ನ ಮುಂದಿನ ಪೀಳಿಗೆಯ ಯುವಕರನ್ನು ಕೂರಿಸಿ ಪ್ರೋತ್ಸಾಹಿಸುತ್ತಾನೆ. ಆತನಿಗೆ ತನ್ನ ಪ್ರತಿಜ್ಞೆಯೇ ಮುಖ್ಯವಾಗಿರುತ್ತದೆ. ಆದರೆ ಪ್ರತಿಜ್ಞೆಯ ಜೊತೆಗೆ ಸಾಮ್ರಾಜ್ಯದ ಸುಖ, ದುಃಖಗಳಿಗೂ ಆತ ಕಿವಿಯಾಗಬೇಕಾಗುತ್ತದೆ. ಅದರ ಜೊತೆಗೆ ತನ್ನ ಕುಟುಂಬದ ಯುವ ಪೀಳಿಗೆಯನ್ನು ಬೆಳೆಸುವ ಹೊಣೆಗಾರಿಕೆ ಆತನ ಮೇಲಿರುತ್ತದೆ.
ಮಲ್ಲಿಕಾರ್ಜುನ ಖರ್ಗೆ ಕೂಡ ಒಂದು ರೀತಿಯಲ್ಲಿ ಆಧುನಿಕ ರಾಜಕಾರಣದ ಭೀಷ್ಮರು ಎಂದು ನನಗೆ ಅನ್ನಿಸುತ್ತದೆ. ಜೀವನದುದ್ದಕ್ಕೂ ರಾಜಕಾರಣದಲ್ಲಿದ್ದರೂ, ಅವರು ಅಧಿಕಾರದ ಆಸೆಗಾಗಿ ಮುಗಿಬಿದ್ದವರಲ್ಲ. ಆದರೆ ಜವಾಬ್ದಾರಿ ಬಂದಾಗಲೆಲ್ಲ ಅದನ್ನು ತಪ್ಪದೇ ವಹಿಸಿಕೊಳ್ಳುತ್ತಾರೆ. ಯುವ ರಾಜಕಾರಣಿಗಳನ್ನು ಬೆಳೆಸಬೇಕೆಂಬ ಹೊಣೆ ಬಂದಾಗಲೆಲ್ಲ ಅದನ್ನು ತಪ್ಪದೇ ತಲೆ ಮೇಲೆ ಹೊತ್ತು ಕಾರ್ಯೋನ್ಮುಖರಾಗುತ್ತಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆಗೆ 83ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಾನು ನೋಡಿದಂತೆ ರಾಜಕೀಯದ ಯಾವುದೇ ಬಿರುಗಾಳಿಗೆ ಹೆದರದೆ, ಜಗ್ಗದೆ ಬಿಗಿಯಾಗಿ ನಿಂತ ಅಪರೂಪದ ರಾಜಕಾರಣಿಗಳಲ್ಲಿ ಅವರೂ ಒಬ್ಬರು. ಅವರ ಬಾಲ್ಯದ ಬದುಕು, ಸಂಕಷ್ಟಗಳ ಸರಮಾಲೆಯ ಜೀವನ ಕೂಡ ಅದಕ್ಕೆ ಪ್ರೇರಣೆಯಾಗಿರಬಹುದು.
ಬಾಲ್ಯದಲ್ಲೇ ನಿಜಾಮರ ಕ್ರೌರ್ಯಕ್ಕೆ ಸಾಕ್ಷಿ: ಇಂದಿನ ಯುವಪೀಳಿಗೆ, ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮಾತ್ರ ನೋಡುತ್ತಿದೆ. ಆದರೆ ಅವರ ಸರಿಸಮಾನರಾದವರು, ಸಮ ವಯಸ್ಸಿನವರು ಅವರ ಕಷ್ಟಗಳನ್ನು ನೋಡಿದ್ದಾರೆ. ಅತಿ ಸಣ್ಣ ವಯಸ್ಸಿನಿಂದಲೂ, ಅವರು ಜೀವ ಬೆದರಿಕೆಯಲ್ಲೇ ಬದುಕಿದವರು. ಅವರು ಬದುಕು ಎಂದರೆ, ಬೆಂಕಿಯಲ್ಲಿ ಅರಳಿದ ಹೂವಿನಂತೆ. 1942 ರ ಜುಲೈ 21 ರಂದು ಬೀದರ್‌ನ ವರವಟ್ಟಿ ಎಂಬ ಪುಟ್ಟ ಗ್ರಾಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಜನಿಸಿದಾಗ, ಆ ಮಗುವಿಗೆ ಮುಂದಾಗಲಿರುವ ಅನಾಹುತಗಳ ಅರಿವೇ ಇರಲಿಲ್ಲ. ಅವರು ಜನಿಸಿದ ಕೆಲವೇ ವರ್ಷಗಳಲ್ಲಿ, 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಆಗ ಹೈದರಾಬಾದ್ ಇನ್ನೂ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಗದೆ, ನಿಜಾಮರ ಹಿಡಿತದಲ್ಲಿತ್ತು. ನಿಜಾಮನ ಸೈನಿಕರು ಸ್ಥಳೀಯ ಗ್ರಾಮಗಳ ಮೇಲೆ ದಾಳಿ ಮಾಡಿ ಕ್ರೌರ್ಯ ಮೆರೆಯುತ್ತಿದ್ದರು.
ಬಡ ಜನರು ಅಂತ ನೋಡದೆ ಅವರ ಮನೆಗಳನ್ನು ಸುಟ್ಟು ಬದುಕನ್ನು ಬೀದಿಗೆ ತರುತ್ತಿದ್ದರು. ತೀರಾ ಬಡಕುಟುಂಬದ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೂ ಬೆಂಕಿ ಹಾಕಿ ಇಡೀ ಕುಟುಂಬವನ್ನು ನಾಶ ಮಾಡಲು ಪ್ರಯತ್ನ ಮಾಡಿದರು. ದುರಾದೃಷ್ಟವೆಂದರೆ, ಖರ್ಗೆ ಅವರ ತಾಯಿ ಹಾಗೂ ಕುಟುಂಬದ ಇತರೆ ಸದಸ್ಯರು ಆ ಬೆಂಕಿಯಲ್ಲಿ ಬೆಂದುಹೋದರು. ಅದೃಷ್ಟವೆಂದರೆ, ಅಪ್ಪ ಮಾಪಣ್ಣ ತನ್ನ ಮಗು ಮಲ್ಲಿಕಾರ್ಜುನನನ್ನು ಎತ್ತಿಕೊಂಡು ಹೊರಗೆ ಓಡಿಹೋದರು. ಆ ಕ್ಷಣದಲ್ಲೇ ರಾಷ್ಟ್ರ ರಾಜಕಾರಣಕ್ಕೆ ಒಬ್ಬ ಮಹಾನ್ ನಾಯಕ ಬರಲಿದ್ದಾನೆ ಎಂಬ ಸುಳಿವು ಯಾರಿಗೂ ಇರಲಿಲ್ಲ. ಆ ರೀತಿ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡ ಖರ್ಗೆ, ಮುಂದೆ ಜನಪ್ರಿಯ ನಾಯಕರಾಗಿ ಬೆಳೆದರು. ಜನಸೇವೆಯ ಜೊತೆಗೆ ವ್ಯಕ್ತಿತ್ವ ಎಲ್ಲರ ಮನದಲ್ಲಿ ಅಚ್ಚಳಿಯುವಂತೆ ಮಾಡಿದರು. ಈಗ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಿಂದಲೇ ಹೋರಾಟ: ಖರ್ಗೆಯವರ ತಂದೆ, ಮಗನನ್ನು ಕಲಬುರಗಿಗೆ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿದರು. ಉತ್ತಮ ವಿದ್ಯಾರ್ಥಿಯಾಗಿದ್ದ ಅವರು, ಮುಂದೆ ಕಾನೂನು ಶಿಕ್ಷಣ ಪಡೆದರು. ಈ ಹಂತದಲ್ಲಿ ಹೋರಾಟವೇ ಉಸಿರಾಯಿತು. ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಇದರ ಫಲವಾಗಿ ರಾಜಕಾರಣಕ್ಕೆ ಕಾಲಿಡುವ ಮನಸ್ಸು ಮಾಡಿ, 1969 ರಲ್ಲಿ ಕಾಂಗ್ರೆಸ್ ಸೇರಿದರು. 1972 ರಲ್ಲಿ ಮೊದಲ ಬಾರಿಗೆ ಗುರುಮಿಠಕಲ್ ಕ್ಷೇತ್ರದಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿ, 2008 ರವರೆಗೆ ಒಂಬತ್ತು ಬಾರಿ ಜಯ ಸಾಧಿಸಿ ಸೋಲಿಲ್ಲದ ಸರದಾರರು ಎನಿಸಿಕೊಂಡರು. ಈ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ, ಪ್ರತಿ ಪಕ್ಷದ ನಾಯಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದರು.
2009 ಹಾಗೂ 2014 ರಲ್ಲಿ ಕಲಬುರಗಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿ, ಸಂಸದೀಯ ನಾಯಕರಾಗಿ ಕೆಲಸ ಮಾಡಿದರು. ಎಲ್ಲ ದಾಖಲೆಗಳಿಗೂ ಒಂದು ತೊಡಕು ಇದ್ದೇ ಇರುತ್ತದೆ. ಅಲ್ಲಿಯವರೆಗೆ ಸತತವಾಗಿ ಗೆದ್ದಿದ್ದ ಅವರು, 2019 ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರು. ಅದು ಕಾಂಗ್ರೆಸ್ ಮಾತ್ರವಲ್ಲದೆ, ಪ್ರತಿಪಕ್ಷಗಳಿಗೂ ಒಂದು ಅಚ್ಚರಿಯ ಸಂಗತಿ ಎನಿಸಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೂ ಹಾಗೂ ದೇಶಕ್ಕೂ ಅವರ ಅನುಭವ ಹಾಗೂ ಸಾಮರ್ಥ್ಯದ ಅಗತ್ಯವಿತ್ತೇನೋ. ಕಠಿಣ ಕಾಲದಲ್ಲಿ ರಾಜ್ಯ ಸಭೆಯ ವಿಪಕ್ಷ ನಾಯಕತ್ವದ ಹಾಗೂ ಕಾಂಗ್ರೆಸ್‌ನ ಅಧ್ಯಕ್ಷತೆಯ ಜವಾಬ್ದಾರಿ ಅವರ ಮೇಲೆ ಬಂತು.
ಮಲ್ಲಿಕಾರ್ಜುನ ಖರ್ಗೆಯವರ ಆಲೋಚನೆಗಳು ಯಾವಾಗಲೂ ತಳಮಟ್ಟದ್ದು. ಅವರು ತಂದ ಭೂ ಸುಧಾರಣೆಯ ಕ್ರಮಗಳೇ ಇದಕ್ಕೆ ಸಾಕ್ಷಿ. 1980 ರಲ್ಲಿ ಆರ್.ಗೂಂಡೂರಾವ್ ಸರ್ಕಾರದಲ್ಲಿದ್ದಾಗ ಭೂ ಸುಧಾರಣಾ ಕಾಯ್ದೆ ಜಾರಿ ಹಾಗೂ 1990 ರಲ್ಲಿ ಎಸ್.ಬಂಗಾರಪ್ಪ ಅವರ ಸರ್ಕಾರದಲ್ಲಿದ್ದಾಗ ಭೂ ಸುಧಾರಣಾ ಕಾಯ್ದೆಯನ್ನು ಶಾಸನವಾಗಿಸಿ ಭೂ ರಹಿತರಿಗೆ ಭೂ ಒಡೆತನ ಕಲ್ಪಿಸಿದ್ದು ಅವರ ಬಡವರ ಪರವಾದ ದೃಷ್ಟಿಗೆ ಒಂದು ಉದಾಹರಣೆ. 371 ಜೆ ಅಧಿನಿಯಮದಡಿ ಹೈದರಾಬಾದ್ ಕರ್ನಾಟಕದ (ಕಲ್ಯಾಣ ಕರ್ನಾಟಕ) ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ, ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪನೆ, ರೈಲ್ವೆ ಸಚಿವರಾಗಿ ಚಿಕ್ಕಮಗಳೂರು-ಸಕಲೇಶಪುರ, ಶಿವಮೊಗ್ಗ-ಹರಿಹರ, ಬಾಗಲಕೋಟೆ-ಕುಡಚಿ,
ಮಾರ್ಗಗಳಿಗೆ ಹೆಚ್ಚು ಅನುದಾನ ಮಂಜೂರು, ಹೈದರಾಬಾದ್-ಹುಬ್ಬಳ್ಳಿ, ಶಿವಮೊಗ್ಗ-ತಾಳಗುಪ್ಪ, ಯಶವಂತಪುರ-ಬೀದರ್, ಬೆಂಗಳೂರು-ತುಮಕೂರು, ಯಶವಂತಪುರ-ಚಂಡೀಗಢಕ್ಕೆ ‘ಸಂಪರ್ಕ ಕ್ರಾಂತಿʼ ರೈಲು ಸೇವೆ, ಹೀಗೆ ಅವರ ಸಾಧನೆಗಳು ಹಲವಾರು. ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಇದ್ದಾಗ, ವರನಟ ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದು ಇಡೀ ಸರ್ಕಾರಕ್ಕೆ ದಿಗಿಲು ಮೂಡಿಸಿತ್ತು. ಅಂತಹ ಸಮಯದಲ್ಲಿ ಗೃಹ ಸಚಿವರಾಗಿ, ಎಸ್.ಎಂ.ಕೃಷ್ಣ ಅವರೊಂದಿಗೆ ಹೆಗಲಿಗೆ ಹೆಗಲಾಗಿ ನಿಂತವರೇ ಮಲ್ಲಿಕಾರ್ಜುನ ಖರ್ಗೆ. ಆ ಸಮಯದಲ್ಲಿ ಅವರ ಮೇಲೆ ಅತಿಯಾದ ಒತ್ತಡ ಇತ್ತು. ಅಂತಹ ಸಂದರ್ಭವನ್ನು ಅವರು ಅತ್ಯಂತ ನಾಜೂಕಾಗಿ ನಿಭಾಯಿಸಿ ಪರಿಹರಿಸಿದ್ದರು.
ರಾಜ್ಯಕ್ಕೆ ಗ್ಯಾರಂಟಿಗಳ ಸಂಕಲ್ಪ: ಇಂದು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರವನ್ನು ಮರೆಯುವಂತಿಲ್ಲ. ಇಡೀ ರಾಜ್ಯ, ಎನ್‌ಡಿಎ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿರುವಾಗ, ಜನರಿಗೆ ಉಪಶಮನ ನೀಡಿದ್ದೇ ಗ್ಯಾರಂಟಿಗಳು. ಚುನಾವಣೆಗೆ ಮುನ್ನ ಈ ಯೋಜನೆಗಳ ನೀಲನಕ್ಷೆ ರೂಪಿಸುವಾಗ ಖರ್ಗೆ ನಮಗೆಲ್ಲರಿಗೂ ಮಾರ್ಗದರ್ಶನ ನೀಡಿದ್ದರು. ಇಂತಹ ಯೋಜನೆ ಜನರಲ್ಲಿ ಆಶಾವಾದ ಹುಟ್ಟುಹಾಕಲಿದೆ ಎಂದು ಪ್ರೋತ್ಸಾಹಿಸಿದ್ದರು. ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ಅದರ ಕುರಿತ ಟೀಕೆಗಳು ನಿಂತಿಲ್ಲ. ಆಗಲೂ ಖರ್ಗೆಯವರೇ ನಮಗೆಲ್ಲರಿಗೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದರು. ಇದರಿಂದಾಗಿ ಇಂದು ಜನರಿಗೆ ಆರ್ಥಿಕ ಶಕ್ತಿ ಸಿಕ್ಕಿದೆ. ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಿದೆ.
ಬಲಿಷ್ಠ ಪ್ರತಿಪಕ್ಷ ನಾಯಕ ಖರ್ಗೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿರುವ ಹೆಸರುಗಳೆಂದರೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ. ಖರ್ಗೆಯವರ ಮಾತಿನ ಶೈಲಿ, ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳುವ ಕಠಿಣತೆ, ನಿಖರತೆ, ಸ್ಪಷ್ಟತೆಯಿಂದಾಗಿ ಎನ್‌ಡಿಎ ಸರ್ಕಾರ ಪ್ರತಿ ಅಧಿವೇಶನದಲ್ಲೂ ಬೆಚ್ಚಿ ಬೀಳುತ್ತದೆ. ಸರ್ಕಾರದ ಜನವಿರೋಧಿ ನೀತಿಗಳು, ಎಡವಟ್ಟಿನ ತೀರ್ಮಾನಗಳಿಂದ ಜನರು ಅತೀವ ಕಷ್ಟ ಅನುಭವಿಸುವಂತಾಗಿದೆ. ಅಂತಹ ಸಂದರ್ಭಗಳಲ್ಲಿ ಜನರ ಮಾತಿಗೆ ಕಿವಿಯಾಗುವ ಕೆಲಸವನ್ನು ಖರ್ಗೆ ಮಾಡುತ್ತಿದ್ದಾರೆ. ಅವರು ನೊಂದ ಜನರ ಧ್ವನಿಯೂ ಹೌದು. ಅನುಭವದ ಗಣಿಯೂ ಹೌದು. ಕರ್ನಾಟಕ ಸರ್ಕಾರದ ಆಡಳಿತದ ಪ್ರತಿ ಹೆಜ್ಜೆಯಲ್ಲೂ ಅವರ ಅನುಭವದ ಮಾರ್ಗದರ್ಶನ ಇದ್ದೇ ಇದೆ.