ದೇಶಾದ್ಯಂತ ನಿರಂತರ ಅರಣ್ಯ ನಾಶ: ಮಲ್ಲಿಕಾರ್ಜುನ ಖರ್ಗೆ ಕಳವಳ

| Published : Jul 06 2025, 01:48 AM IST

ಸಾರಾಂಶ

ಅರಣ್ಯ ಸಂರಕ್ಷಣೆಗೆ ಹಲವಾರು ಕಾಯ್ದೆಗಳಿದ್ದರೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅರಣ್ಯ ನಾಶ ಮುಂದುವರಿದಿದೆ ಎಂದು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕಳವಳ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅರಣ್ಯ ಸಂರಕ್ಷಣೆಗೆ ಹಲವಾರು ಕಾಯ್ದೆಗಳಿದ್ದರೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅರಣ್ಯ ನಾಶ ಮುಂದುವರಿದಿದೆ ಎಂದು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕಳವಳ ಹೊರಹಾಕಿದ್ದಾರೆ.

ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿ.ಪಂ, ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇವುಗಳ ಸಹಯೋಗದಲ್ಲಿ ಹೆಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿನ “ವನಮಹೋತ್ಸವ-2025 ", “ಹಸಿರು ಪಥ” ಹಾಗೂ “ಕಲಬುರಗಿಯ ಹಸಿರು ಹೆಜ್ಜೆ” ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು, ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಿ ಚಾಲನೆ ನೀಡಿ ಮಾತನಾಡಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ 1980ರಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ತಂದರು. ರಾಜ್ಯದಲ್ಲಿ ಬರಗಾಲ ಬಂದಾಗ ಇಲ್ಲಿಗೆ ಬಂದಿದ್ದ ಅವರು ಅರಣ್ಯ ಬೆಳೆಸುವ ಬಗ್ಗೆ ಸಲಹೆ ನೀಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದು ಅರಣ್ಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ಅರಣ್ಯಕ್ಕೆ ಸಂಬಂಧಿಸಿದಂತೆ ಜಾರಿಗೆ ಬಂದ ಕಾನೂನು ದೇಶದ ಯಾವ ರಾಜ್ಯಗಳು ಪಾಲನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರಧಾನಿ ಮೋದಿ ಆಡಳಿತದಲ್ಲಿ 2023ರಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆ ತಿದ್ದುಪಡಿ ತಂದಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.

ಪರಿಸರ ಸಮತೋಲನ ಕಾಪಾಡಬೇಕಾದರೆ ಶೇ.33ರಷ್ಟು ಅರಣ್ಯ ಅವಶ್ಯಕ. ಇಂದು ದೇಶದಲ್ಲಿ ಶೇ.25.15 ಮಾತ್ರ ಅರಣ್ಯ ಪ್ರದೇಶ ಇದೆ. ಇನ್ನು ಕರ್ನಾಟಕದಲ್ಲಿ ಇದರ ಪ್ರಮಾಣ ಶೇ.21 ಮಾತ್ರ. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕು. ಮುನುಷ್ಯನ ದುರಾಸೆಯಿಂದ ಶೇ.20 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ನಾವು ಕಳೆದುಕೊಂಡಿದ್ದೇವೆ. ರಸ್ತೆ ಬದಿಯಲ್ಲಿ ಸಸಿ ನೆಡುವುದಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಬೇಕೆಂದು ಡಾ. ಖರ್ಗೆ ಒತ್ತಿ ಹೇಳಿದರು.

ಕಲ್ಯಾಣದ 7 ಜಿಲ್ಲೆಗಳಲ್ಲಿ 7 ಲಕ್ಷ ಸಸಿ ನೆಟ್ಟು ಪೋಷಣೆ

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ 21% ಹಾಗೂ ಕಲ್ಯಾಣ ಕರ್ನಾಟಕದಲ್ಲಿ 5% ಕ್ಕಿಂತ ಕಡಿಮೆ ಅರಣ್ಯಪ್ರದೇಶವಿದೆ. " ಮನೆಗೊಂದು ಮರ ಊರಿಗೊಂದು ವನ " ಯೋಜನೆಯಡಿಯಲ್ಲಿ ಈ ವರ್ಷ 3 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಕಲ್ಯಾಣ ಭಾಗದಲ್ಲಿ ಹಸಿರು ಹೊದಿಕೆ ಗುರಿಯೊಂದಿಗೆ 28 ಲಕ್ಷ ಸಸಿ ನೆಡಲಾಗುತ್ತಿದೆ. ಇವುಗಳಲ್ಲಿ 7 ಲಕ್ಷ ಎತ್ತರದ ಸಸಿಗಳಿವೆ. ಸರ್ಕಾರದಿಂದ ಕ.ಕ ಭಾಗದಲ್ಲಿ ಪ್ರತಿವರ್ಷ 1 ಕೋಟಿ ಸಸಿ ನೆಡಲಾಗುವುದು ಎಂದರು.

ಈಗಾಗಲೇ ನೆಟ್ಟಿರುವ ಸಸಿಗಳು ಅಸ್ತಿತ್ವದಲ್ಲಿಲ್ಲ ಎನ್ನುವ ಮಾತುಗಳಿವೆ. ಹಾಗಾಗಿ, ಮೂರನೆಯ ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲಾಗುವುದು. ಈಗಾಗಲೇ 6,500 ಹೆಕ್ಟೇರ್ ಪ್ರದೇಶದ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಜಿಲ್ಲೆಯಲ್ಲಿ ವನ್ಯ ಜೀವಿ ಸಂರಕ್ಷಣೆ, ಉದ್ಯಾನವನ, ಮೃಗಾಲಯ ಹಾಗೂ ಟೀ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಚಿಂಚೋಳಿಯ ಚಂದ್ರಂಪಳ್ಳಿಯ ಬಳಿ ಎಕೋ ಟೂರಿಸಂ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.

ಶಾಸಕ ಬಿಆರ್‌ ಪಾಟೀಲ್‌ ಮಾತನಾಡಿ, ಕಲುಬುರಗಿ‌ ಜಿಲ್ಲೆಯಲ್ಲಿ ಕೇವಲ 2% ಮಾತ್ರ ಅರಣ್ಯವಿದ್ದು ಅಪಾಯಕಾರಿ ಬೆಳವಣಿಗೆ, ಪ್ರತಿಯೊಬ್ಬರು ಸಸಿ ನೆಡುವ ಕಡ್ಡಾಯ ಕಾನೂನು ಜಾರಿಗೆ ತರಬೇಕೆಂದರು.

ಶಾಸಕ ಅಲ್ಲಂಪ್ರಭು ಪಾಟೀಲ್‌ ಮಾತನಾಡಿದರು. ಸಂಸದ ರಾಧಾಕೃಷ್ಣ ದೊಡ್ಡಮನಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಎಂ.ವೈ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಶಶೀಲ್ ನಮೋಶಿ, ಜಗದೇವ ಗುತ್ತೇದಾರ, ಚಂದ್ರಶೇಖರ್ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು, ರೇವುನಾಯಕ ಬೆಳಮಗಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಮೀಷನರ್ ಶರಣಪ್ಪ, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಕಮೀಷನರ್ ಶಿಂಧೆ ಅವಿನಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಕುಮಾರ ಪಾಟೀಲ್ ಇದ್ದರು.