ಸಾರಾಂಶ
ಮನೆಯಿಂದ ನಾಪತ್ತೆಯಾಗಿ ರೈಲಿಗೆ ಸಿಲುಕಿ ಮೃತಪಟ್ಟಿದ್ದ ನವವಿವಾಹಿತೆ ಸಾವಿಗೆ ಆಕೆಯ ಗಂಡ ಮತ್ತು ಆತನ ಕುಟುಂಬವೇ ಕಾರಣವಾಗಿದೆ. ಎಲ್ಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತಳ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಪ್ರತಿಭಟಿಸಿದ ಘಟನೆ ಚನ್ನಗಿರಿ ತಾಲೂಕು ಸೋಮಲಾಪುರದಲ್ಲಿ ತಡವಾಗಿ ವರದಿಯಾಗಿದೆ.
- ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದ ವಿದ್ಯಾ - - -
ದಾವಣಗೆರೆ: ಮನೆಯಿಂದ ನಾಪತ್ತೆಯಾಗಿ ರೈಲಿಗೆ ಸಿಲುಕಿ ಮೃತಪಟ್ಟಿದ್ದ ನವವಿವಾಹಿತೆ ಸಾವಿಗೆ ಆಕೆಯ ಗಂಡ ಮತ್ತು ಆತನ ಕುಟುಂಬವೇ ಕಾರಣವಾಗಿದೆ. ಎಲ್ಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತಳ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಪ್ರತಿಭಟಿಸಿದ ಘಟನೆ ಚನ್ನಗಿರಿ ತಾಲೂಕು ಸೋಮಲಾಪುರದಲ್ಲಿ ತಡವಾಗಿ ವರದಿಯಾಗಿದೆ.ಸೋಮಲಾಪುರದ ಜಿ.ಶಿವ ಎಂಬವರ ಜೊತೆಗೆ ಅಣಜಿ ಗ್ರಾಮದ ವಿದ್ಯಾ ಮದುವೆ ನವೆಂಬರ್ 2024ರಲ್ಲಿ ನಡೆದಿತ್ತು. ಪೊಲೀಸ್ ಕಾನ್ಸಟೇಬಲ್ ಆಗಿರುವ ಶಿವ ಬೆಂಗಳೂರಿನ ಶಂಕರಪುರಂ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪತ್ನಿ ವಿದ್ಯಾ ಜೊತೆಗೆ ಬೆಂಗಳೂರಿನ ಚಾಮರಾಜಪೇಟೆಯ ಕೆ.ಜಿ.ನಗರದಲ್ಲಿ ಶಿವ ವಾಸಿಸುತ್ತಿದ್ದರು. ಜೂ.30ರಂದು ವಿದ್ಯಾ ನಾಪತ್ತೆಯಾಗಿದ್ದರು. ಜು.1ರಂದು ಆಕೆ ಹಾಸನ ಜಿಲ್ಲೆ ಅರಸೀಕೆರೆ ರೈಲ್ವೆ ನಿಲ್ದಾಣ ಬಳಿ ರೈಲಿಗೆ ಸಿಲುಕಿ ಶವವಾಗಿ ಪತ್ತೆಯಾಗಿದ್ದಳು. ಈ ಬಗ್ಗೆ ಜು.1ರಂದು ವಿದ್ಯಾ ತವರು ಮನೆಯವರಿಗೆ ವಿಷಯ ತಿಳಿಸಲಾಗಿತ್ತು.ಪತಿ ಶಿವ ಹಾಗೂ ಆತನ ಕುಟುಂಬಸ್ಥರ ವರದಕ್ಷಿಣ ಕಿರುಕುಳದಿಂದಲೇ ವಿದ್ಯಾ ಸಾವನ್ನಪ್ಪಿದ್ದಾಳೆಂದು ಆರೋಪಿಸಿ, ಶಿವ ಹಾಗೂ ಆತನ ಕುಟುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಪ್ರತಿಭಟಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನವೊಲಿಸಿದ ನಂತರವಷ್ಟೇ ವಿದ್ಯಾ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಮುಂದಾದರು.