ಸಾರಾಂಶ
ಮೈಸೂರು : ಹಿರಿಯ ಲೇಖಕ ಎಸ್. ರಾಮಪ್ರಸಾದ್ ಅವರು ಮುಂಬಿಂಬಯಾನ, ಗುಳಿಗೆಗಳು-2, ಆಕಾಶದ ಶ್ರೀಮಂತಿಕೆ- ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಮುಂಬಿಂಬಯಾನ ಕೃತಿಯು ಎಸ್. ರಾಮಪ್ರಸಾದ್ ಅವರ ಜೀವನಯಾತ್ರೆಯ ಮುಂದುವರಿದ ಭಾಗ. ಸ್ವಾನುಭವ, ಕಂಡುಂಡ ಸಿಹಿ-ಕಹಿ ಘಟನೆಗಳನ್ನು ಅವರು ಇಲ್ಲಿ ಮುನ್ನೆವ ಹಾದಿಯಲಿ... ಸಂಘ- ಸಂಸ್ಥೆಗಳ ಒಡನಾಟ, ರೋಟರಿ ಸೇವೆ, ಸಾಹಿತ್ಯ ಕೃಷಿ, ಮನೆಯಂಗಳ, ವಾತಾವರಣ, ಶಾಪಗ್ರಸ್ತ ಮನೆ, ಆಗಲಿದ ಆಪ್ತ ಹಿರಿಯ- ಕಿರಿಯ ಸಜ್ಜನರು, ಪ್ರವಾಸ, ಮಿತ್ರ ಬಳಗ, ಸಂಗ್ರಹಣೆ, ದಾನ- ಧರ್ಮ- ಸಹಾಯ, ಮನಸ್ಸಿನಲ್ಲಿರುವ ಪ್ರಶ್ನೆ, ಅಭಿನಂದನಾ ಗ್ರಂಥಗಳು, ಆಸ್ಪಕ್ರೆಯೊಂದಿಗಿನ ನಂಟುಂ, ಹೃದಯಾಘಾತ, ಸನ್ಮಾನ- ಪುರಸ್ಕಾರ, ಮಾತೃಸಮಾನರಾದ ಹಿರಿಯಕ್ಕಂದಿರು ಅಧ್ಯಾಯಗಳ ಮೂಲಕ ನಿರೂಪಿಸಿದ್ದಾರೆ. ಆರಂಭದಲ್ಲಿಯೇ ವಿವಿಧ ಗಣ್ಯರ ಜೊತೆ ಇರುವ, ಪ್ರಮುಖ ಕಾರ್ಯಕ್ರಮಗಳ ವರ್ಣರಂಜಿತ ಫೋಟೋಗಳಿವೆ.
ಈಗಾಗಲೇ ಗುಳಿಗೆಗಳು ಕೃತಿ ಬಂದಿತ್ತು. ಹಾಗಾಗಿ ಈಗ ಗುಳಿಗೆಗಳು-2 ಕೃತಿಯನ್ನು ರಚಿಸಿದ್ದಾರೆ. ಗುಳಿಗೆ ಸಿದ್ದೇಶ್ವರಾ ಅಂಕಿತನಾಮದಲ್ಲಿ ಇಲ್ಲಿ 132 ಗುಳಿಗೆಗಳು ಹಾಗೂ 19 ಬಿಡಿಗವನಗಳಿವೆ. ಗುಳಿಗೆಗಳು ಮನದಲ್ಲಿ ಮೂಡವ ಹಲವಾರು ಚಿಂತನೆಗಳಿಗೆ ಉತ್ತರ ನೀಡುತ್ತವೆ. ಅಲ್ಲದೇ ಮನವನ್ನು ಚಿಂತನೆಗೆ ಹಚ್ಚಿ ಪ್ರಬುದ್ಧಗೊಳಿಸುವ ನಿಟ್ಟಿನಲ್ಲಿ ವೇಗೋತ್ಕರ್ಷದಂತೆ ಕೆಲಸ ಮಾಡುತ್ತವೆ.
ಹೇಳಬೇಕೆಂದಿರುವ ವಿಷಯವನ್ನು ಸಂಕ್ಷಿಪ್ತವಾಗಿ, ಪ್ರಾಸಬದ್ಧವಾಗಿ, ಆದರೆ ಮುಕ್ತಕಗಳ ಕಟ್ಟುನಿಟ್ಟಿನ ಆವರಣವಿಲ್ಲದೆ ಮುಕ್ತ ಛಂದಸ್ಸುಗಳು ಎಂದು ಕರೆಯಬಹುದಾದ ರೀತಿಯಲ್ಲಿ ಕಟ್ಟಿಕೊಟ್ಟಿರುವ ಗುಳಿಗೆಗಳ ವಸ್ತು ವೈವಿಧ್ಯತೆಗಳು ಬೆರಗುಗೊಳಿಸುವಂತಿವೆ ಎಂದಿದ್ದಾರೆ ಮುನ್ನುಡಿ ಬರೆದಿರುವ ಲೇಖಕಿ ಪದ್ಮಾ ಆನಂದ್.
ದೇಜಗೌ, ಹಿರೇಮಗಳೂರು ಕಣ್ಣನ್, ಸೇತುರಾಂ, ಹರಿಹರೇಶ್ವರ, ಅಕಬರ ಅಲಿ, ಲತಾ ರಾಜಶೇಖರ್, ಮಳಲಿ ವಸಂತಕುಮಾರ್, ಅ.ಚ. ಅಶೋಕಕುಮಾರ್, ಮಡಿಕೇರಿ ನಾಗೇಂದ್ರ, ಲ.ನ. ಶಾಸ್ತ್ರಿ, ಕೆ. ಭೈರವಮೂರ್ತಿ ಮತ್ತಿತರರ ಬಗ್ಗೆಯೂ ಗುಳಿಗೆಳನ್ನು ರಚಿಸಿದ್ದಾರೆ.
ಆಕಾಶದ ಶ್ರೀಮಂತಿಕೆ ಕೃತಿಯು ಎರಡನೇ ಮುದ್ರಣ. ದೂರಮಾನಕಗಳು, ಸ್ಥಾನ ನಿರ್ದೇಶಕಗಳು, ವಿಶ್ವ ಅಂಗರಚನಾ ವೃತ್ತಾಂತ- ಬ್ರಹ್ಮಾಂಡಗಳು, ಆಕಾಶಗಂಗೆ, ರಾತ್ರಿ ಆಕಾಶದ ಕತ್ತಲು- ಪ್ರಾಚೀನರ ಕಲ್ಪನೆ, ವಿಶ್ವ ಬ್ರಹ್ಮಾಂಡ, ಚಿಂತನೆ, ವಿರೋಧಾಭಾಸ, ಡಾಪ್ಲರ್ ಪರಿಣಾಮ, ವಿಶ್ವದ ವ್ಯಾಕೋಚನೆ, ಸೌರವ್ಯೂಹ- ಗ್ರಹಣಗಳು, ಉಲ್ಕೆಗಳು ಮತ್ತು ಧೂಮಕೇತುಗಳು, ನಕ್ಷತ್ರಗಳು- ಚಿಕ್ಕ, ಬೃಹತ್, ನ್ಯೂಟ್ರಾನ್ ನಕ್ಷತ್ರಗಳು, ಕೃಷ್ಣ ವಿವರಗಳು- ಉತ್ತಕ, ದಕ್ಷಿಣ ಖಗೋಳಾಕಾಶದ ನಕ್ಷತ್ರಗಳು, ನೀಹಾರಿಕೆಗಳು ಮತ್ತು ನಕ್ಷತ್ರಗುಚ್ಚಗಳ ಬಗ್ಗೆ ವಿಶ್ಲೇಷಣೆ ಇದೆ.
ಅನುಬಂಧದಲ್ಲಿ ನಕ್ಷತ್ರಪುಂಜಗಳು, ಇಪ್ಪತ್ತೇಳು ನಿತ್ಯ ನಕ್ಷತ್ರಗಳು, ಮೂವತ್ತು ಉಜ್ವಲ ನಕ್ಷತ್ರಗಳು, ದ್ವಾದಶ ರಾಶಿಗಳ ಪಟ್ಟಿ ಇದೆ. ಅಲ್ಲದೇ ಪಾರಿಭಾಷಿಕ ಪದಸೂಚಿಯು ಇದ್ದು,. ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ.
ಮುಂಬಿಂಬಯಾನ ಕೃತಿಯನ್ನು ಡಿ.ಎನ್. ಲೋಕಪ್ಪ ಅವರ ಸಂವಹನ ಪ್ರಕಾಶನ, ಗುಳಿಗೆಳು-2 ಅನ್ನು ಮಾನಸ ಪ್ರಕಾಶನ, ಆಕಾಶದ ಶ್ರೀಮಂತಿಕೆ ಕೃತಿಯನ್ನು ಸ್ವತಃ ಲೇಖಕರೇ ಪ್ರಕಟಿಸಿದ್ದಾರೆ. ಆಸಕ್ತರು ಎಸ್. ರಾಮಪ್ರಸಾದ್, ಮೊ. 98452 19796 ಸಂಪರ್ಕಿಸಬಹುದು.
29 ರಂದು ಬಿಡುಗಡೆ
ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ, ಮಾನಸ ಪ್ರಕಾಶನವು ಸೆ.29 ರಂದು ಬೆಳಗ್ಗೆ 10.30ಕ್ಕೆ ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಎಸ್. ರಾಮಪ್ರಸಾದ್ ಅವರ ಮುಂಬಿಂಬಯಾನ, ಗುಳಿಗೆಗಳು-2, ಆಕಾಶದ ಶ್ರೀಮಂತಿಕೆ ಕೃತಿಗಳನ್ನು ಕುಂದೂರು ಮಠದ ಶ್ರೀ ಶರತ್ಚಂದ್ರ ಸ್ವಾಮೀಜಿ ಬಿಡುಗಡೆ ಮಾಡುವರು. ಕೃತಿಗಳನ್ನು ಕುರಿತು ಎಚ್.ವಿ. ನಾಗರಾಜರಾವ್, ಕೆ. ರಾಮಮೂರ್ತಿರಾವ್, ಜಿ.ಬಿ. ಸಂತೋಷಕುಮಾರ್ ಮಾತನಾಡುವರು. ಕನ್ನಡ ಪುಸ್ಚಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸುವರು. ಎಂ. ಚಂದ್ರಶೇಖರ್, ಡಿ.ಎನ್. ಲೋಕಪ್ಪ, ಎಂ. ಮುತ್ತುಸ್ವಾಮಿ ಉಪಸ್ಥಿತರಿರುವರು.