ಸಾರಾಂಶ
ಬೆಂಗಳೂರು : ಬಹಳ ಸಮಯದಿಂದ ಕನ್ನಡ ಸಿನಿಮಾ ತಂಡಗಳು ತಮ್ಮ ಚಿತ್ರವನ್ನು ಕ್ಯೂಬ್‌ಗೆ ಅಪ್‌ಲೋಡ್ ಮಾಡಲು ಚೆನ್ನೈಗೆ ಹೋಗಬೇಕಾಗಿತ್ತು. ಇನ್ನು ಮುಂದೆ ಆ ಕಷ್ಟ ತಪ್ಪಲಿದೆ. ಇದೀಗ ಕ್ಯೂಬ್ ಸಿನಿಮಾ ಟೆಕ್ನಾಲಜೀಸ್‌ನ ಡಿಜಿಟಲ್ ಸಿನಿಮಾ ಮಾಸ್ಟರಿಂಗ್ ಸೌಲಭ್ಯ ಇದೀಗ ಬೆಂಗಳೂರಿನಲ್ಲಿ ಆರಂಭಗೊಂಡಿದೆ.
ನಟ ಶಿವರಾಜ್ ಕುಮಾರ್ ಕ್ಯೂಬ್ ಕಚೇರಿ ಉದ್ಘಾಟಿಸುವ ಮೂಲಕ ಹೊಸ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಕ್ಯೂಬ್ ಸಿನಿಮಾ ಕಂಟೆಂಟ್ ಸರ್ವೀಸಸ್ ದಕ್ಷಿಣ ವಿಭಾಗದ ಸಹಾಯಕ ಉಪಾಧ್ಯಕ್ಷ ಸತೀಶ್ ತುಳಸಿ, ಕ್ಯೂಬ್ ಬೆಂಗಳೂರಿಗೆ ಬರಬೇಕೆಂಬ ಬೇಡಿಕೆ 15 ವರ್ಷಗಳಿಂದಲೇ ಇತ್ತು. ಆದರೆ, ಸೂಕ್ತ ಬಂಡವಾಳದ ಕೊರತೆ, ಅಗತ್ಯ ತಂತ್ರಜ್ಞಾನಗಳಿರುವ ಸ್ಟುಡಿಯೋಗಳ ಕೊರತೆಯಿಂದ ವಿಳಂಬವಾಯಿತು. ಸದ್ಯ ಕರ್ನಾಟಕದಲ್ಲಿ 600 ಸ್ಕ್ರೀನ್‌ಗಳಲ್ಲಿ ಕ್ಯೂಬ್ ಮೂಲಕ ಸಿನಿಮಾ ತೆರೆ ಕಾಣುತ್ತಿದೆ ಎಂದರು.
ಏನಿದು ಕ್ಯೂಬ್?:
ಕ್ಯೂಬ್ ಎನ್ನುವುದು ಸಿನಿಮಾ ಡಿಜಿಟಲ್ ಮಾಸ್ಟರಿಂಗ್ ಮಾಡುವ ಸಂಸ್ಥೆ. ನಾವು ಥೇಟರ್‌ನಲ್ಲಿ ನೋಡುವ ಸಿನಿಮಾ ಕ್ಯೂಬ್‌ನ ಡಿಜಿಟಲೈಸೇಶನ್ ಪ್ರೊಸೆಸ್ ಮೂಲಕ ಹೊರಬರುತ್ತದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಬೇಕಾದರೆ ಕ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರಬೇಕು. ಕಳೆದ ಒಂದೂವರೆ ದಶಕಗಳಿಂದ ಡಿಜಿಟಲ್ ಮಾದರಿಯಲ್ಲಿ ಸಿನಿಮಾಗಳು ಅಪ್‌ಲೋಡ್ ಆಗಿ ತೆರೆ ಕಾಣುತ್ತಿವೆ.
ಸಮಸ್ಯೆ ಏನಾಗಿತ್ತು?:
ಕ್ಯೂಬ್ ಆಫೀಸ್ ಇರುವುದು ಚೆನ್ನೈಯಲ್ಲಿ. ಕನ್ನಡದ ಸಿನಿಮಾ ತಂಡಗಳು ಈ ಡಿಜಿಟಲೈಸೇಶನ್ ಪ್ರಕ್ರಿಯೆಗಳಿಗೆ ತಮ್ಮ ಸಿನಿಮಾವನ್ನು ಹಾರ್ಡ್ ಡಿಸ್ಕ್‌ನಲ್ಲಿ ಹಾಕಿ ಚೆನ್ನೈಗೆ ತೆಗೆದುಕೊಂಡು ಹೋಗಬೇಕಿತ್ತು. ಅಲ್ಲಿ ಡಿಜಿಟಲ್ ಮಾಸ್ಟರಿಂಗ್ ಮಾಡಿಸಿ ಅಪ್‌ಲೋಡ್ ಮಾಡಿಸಬೇಕಿತ್ತು. ಇದಕ್ಕೆ ಕನಿಷ್ಠ ಮೂರು ದಿನಗಳ ಸಮಯ ಬೇಕಿತ್ತು. ಅಲ್ಲಿಗೆ ಬೇರೆ ಭಾಷೆಗಳ ಸಿನಿಮಾಗಳೂ ಅಲ್ಲಿಗೆ ಬರುವ ಕಾರಣ ಅವರೊಂದಿಗೆ ಸ್ಪರ್ಧೆಗಿಳಿದು ತಮ್ಮ ಸಿನಿಮಾ ಕೆಲಸ ಮಾಡಿಸಿಕೊಳ್ಳಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಭದ್ರತಾ ಲೋಪ ಉಂಟಾಗಿ ಸಿನಿಮಾ ಪೈರೇಟ್ ಆಗುವ ಅಪಾಯವೂ ಇತ್ತು.
ಬೇಡಿಕೆ ಏನಿತ್ತು?:
ವರ್ಷಕ್ಕೆ 200ಕ್ಕೂ ಅಧಿಕ ಸಿನಿಮಾ ಬರುತ್ತಿರುವ ಕನ್ನಡ ಇಂಡಸ್ಟ್ರಿಯ ಡಿಜಿಟಲ್ ಮಾಸ್ಟರಿಂಗ್ ಕೆಲಸ ಬೆಂಗಳೂರಿನಲ್ಲೇ ಆಗಬೇಕು, ಒಂದೇ ಸೂರಿನಡಿ ಎಲ್ಲ ಡಿಜಿಟಲೈಸೇಶನ್ ಪ್ರಕ್ರಿಯೆ ಸಾಧ್ಯವಾಗಬೇಕು ಎಂಬುದು 15 ವರ್ಷಗಳಿಂದ ಕೇಳಿಬರುತ್ತಿದ್ದ ಕೂಗು. ಅದು ಕೊನೆಗೂ ಈಡೇರಿದೆ.
ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಪ್ರಯೋಜನ ಏನು?:
ಸಿನಿಮಾ ಡಿಜಿಟಲ್ ಮಾಸ್ಟರಿಂಗ್ ಕೆಲಸಗಳನ್ನೆಲ್ಲ ಬೆಂಗಳೂರಿನಲ್ಲೇ ಮಾಡಬಹುದು. ಇತರ ಭಾಷೆಯವರೊಂದಿಗೆ ಗುದ್ದಾಡಿ ಕೆಲಸ ಮಾಡಿಸಿಕೊಳ್ಳುವ ತಲೆನೋವಿಲ್ಲ. ಮೂರ್ನಾಲ್ಕು ದಿನ ತೆಗೆದುಕೊಳ್ಳುತ್ತಿದ್ದ ಕೆಲಸ ಒಂದೇ ದಿನದಲ್ಲಿ ಆಗುತ್ತದೆ. ಸಮಯ, ಹಣ, ಶ್ರಮ ಉಳಿತಾಯವಾಗಲಿದೆ. ಜೊತೆಗೆ ಒಮ್ಮೆ ಅಪ್‌ಲೋಡ್ ಆದ ಸಿನಿಮಾದಲ್ಲಿ ತಿದ್ದುಪಡಿ ಮಾಡಬೇಕಾಗಿ ಬಂದು ಮತ್ತೆ ಅಪ್‌ಲೋಡ್ ಮಾಡಬೇಕಾದಾಗ ಶುಲ್ಕ ಕಡಿತ ಮಾಡುವುದಾಗಿಯೂ ಕ್ಯೂಬ್ ತಿಳಿಸಿದೆ. ಕನ್ನಡ ಸಿನಿಮಾ ಪ್ರಚಾರಕ್ಕೂ ಅವಕಾಶ ನೀಡುವುದಾಗಿ ಹೇಳಿದೆ.