ಸಾರಾಂಶ
ಬೆಂಗಳೂರು : ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಓಸಿ) ಪಡೆಯುವುದರಿಂದ ವಿನಾಯಿತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಅಧಿಕೃತವಾಗಿ ಪ್ರಕಟಿಸಿದ್ದು, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7) ಅವಕಾಶದಡಿ 1200 ಚದರಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಎಸ್ಕಾಂಗಳು ವಿದ್ಯುತ್ ಸಂಪರ್ಕ ಪಡೆಯಲು ಓಸಿ ಕಡ್ಡಾಯ ಮಾಡಿದ್ದವು. ಆದರೆ, ನಕ್ಷೆ ಮಂಜೂರಾತಿ ಇಲ್ಲದೆ ಓಸಿ ನೀಡಲು ಅವಕಾಶವಿರಲಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 3.30 ಲಕ್ಷ ಕಟ್ಟಡಗಳು ನಿರ್ಮಾಣ ಪೂರ್ಣಗೊಂಡರೂ ಓಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡದ ನಕ್ಷೆಗೆ ಅನುಮೋದನೆ ಪಡೆಯದೆ ಕಟ್ಟಡ ನಿರ್ಮಿಸಿ ವಿದ್ಯುತ್ ಸಂಪರ್ಕ ಕೋರಿ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿ ಬಾಕಿ ಇವೆ. ಇವುಗಳಿಗೆ ಒಂದು ಬಾರಿಯ ಕ್ರಮವಾಗಿ ವಿಲೇ ಮಾಡಲು ಪ್ರತ್ಯೇಕ ಕಾನೂನು ರಚಿಸಲು ಸಂಪುಟ ತೀರ್ಮಾನಿಸಿತು.
ಈ ಸಂಬಂಧ ಪ್ರಸ್ತುತ ನಿಯಮಗಳನ್ನು ಉಲ್ಲಂಘಿಸಿರುವರ ವಿರುದ್ಧ ದಂಡ ವಿಧಿಸಿ ಇನ್ನು ಮುಂದೆ ಇಂತಹ ಉಲ್ಲಂಘನೆಯಾಗದಂತೆ ಕಾನೂನು ನಿಯಮ ರೂಪಿಸಲು ವಿಧಾನಮಂಡಲದಲ್ಲಿ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ಇಲಾಖೆಗೆ ಸೂಚನೆ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
1200 ಚದರಡಿ ಕಟ್ಟಡಗಳಿಗೆ ಮೊದಲೇ ವಿನಾಯಿತಿ?:
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೆ.18 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ 1,200 ಚದರಡಿ ವಿಸ್ತೀರ್ಣದವರೆಗಿನ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಲು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ. ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಕಟ್ಟಡದ ನಕ್ಷೆಗೆ ಅನುಮೋದನೆ ಪಡೆಯದೆ ಕಟ್ಟಡ ನಿರ್ಮಿಸಿ ವಿದ್ಯುತ್ ಸಂಪರ್ಕ ಕೋರಿ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿಗಳನ್ನು ಒಂದು ಬಾರಿಯ ಕ್ರಮವಾಗಿ ವಿಲೇ ಮಾಡಲು ಸೆ.18ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಎಲ್ಲ ಕಟ್ಟಡಗಳಿಗೂ ವಿನಾಯ್ತಿ ನೀಡಲಾಗಲ್ಲ: ಅಡ್ವೊಕೇಟ್
1200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿನ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಲು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಅಭಿಪ್ರಾಯವನ್ನು ಸರ್ಕಾರ ಕೋರಿತ್ತು. ಈ ಬಗ್ಗೆ ಅಭಿಪ್ರಾಯ ನೀಡಿರುವ ಹೆಚ್ಚು ವಿಸ್ತೀರ್ಣದ ಎಲ್ಲ ಕಟ್ಟಡಗಳಿಗೆ ಓಸಿಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ನಿರ್ದಿಷ್ಟ ಕಟ್ಟಡಗಳಿಗೆ ಓಸಿಯಿಂದ ವಿನಾಯಿತಿ ನೀಡುವ ಅಧಿಕಾರ ಇದೆ ಎಂದು ತಿಳಿಸಿದ್ದಾರೆ. ಇದರ ಅನ್ವಯ ಕಟ್ಟಡಗಳನ್ನು ಪರಿಶೀಲಿಸಿ ವಿನಾಯಿತಿ ನೀಡಲು ಸರ್ಕಾರ ತೀರ್ಮಾನ ಮಾಡಿರುವುದಾಗಿ ತಿಳಿದುಬಂದಿದೆ.
₹56.45 ಕೋಟಿಯ ಸಿಗ್ನಲ್ ಅಳವಡಿಕೆ:
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ ₹56.45 ಕೋಟಿ ವೆಚ್ಚದಲ್ಲಿ 110 ಜಂಕ್ಷನ್‌ಗಳಲ್ಲಿ ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.