ವಿವಿಧ ಕಾರಣಗಳಿಂದಾಗಿ ಡೆಡ್‌ಲೈನ್‌ ಮೀರಿದ ನಮ್ಮ ಮೆಟ್ರೋ - 2 ಕಾಮಗಾರಿ : ಸೇವೆ ಇನ್ನಷ್ಟು ತಡ

| N/A | Published : Apr 24 2025, 02:03 AM IST / Updated: Apr 24 2025, 06:17 AM IST

ವಿವಿಧ ಕಾರಣಗಳಿಂದಾಗಿ ಡೆಡ್‌ಲೈನ್‌ ಮೀರಿದ ನಮ್ಮ ಮೆಟ್ರೋ - 2 ಕಾಮಗಾರಿ : ಸೇವೆ ಇನ್ನಷ್ಟು ತಡ
Share this Article
  • FB
  • TW
  • Linkdin
  • Email

ಸಾರಾಂಶ

ಭೂಸ್ವಾಧೀನ ಸಮಸ್ಯೆ, ಮರಗಳ ತೆರವು, ರೈಲುಗಳ ಕೊರತೆ, ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮೆಟ್ರೋ ಎರಡನೇ ಹಂತದ ಮೂರು ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರ ಸೇವೆ ಇನ್ನಷ್ಟು ತಡವಾಗುತ್ತಿದೆ.

 ಬೆಂಗಳೂರು : ಭೂಸ್ವಾಧೀನ ಸಮಸ್ಯೆ, ಮರಗಳ ತೆರವು, ರೈಲುಗಳ ಕೊರತೆ, ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮೆಟ್ರೋ ಎರಡನೇ ಹಂತದ ಮೂರು ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರ ಸೇವೆ ಇನ್ನಷ್ಟು ತಡವಾಗುತ್ತಿದೆ.

ಪ್ರಮುಖವಾಗಿ ವರ್ಷದ ಹಿಂದೆ ಸಂಚಾರಕ್ಕೆ ಮುಕ್ತವಾಗಬೇಕಿದ್ದ ಅರ್‌.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ಸಿದ್ಧವಾಗಿದ್ದರೂ ರೈಲಿನ ಕೊರತೆ ಎದುರಿಸುತ್ತಿದೆ. ಇದೇ ಮಾರ್ಚ್‌ಗೆ ಡೆಡ್‌ಲೈನ್‌ ಹೊಂದಿದ್ದ ಕಾಳೇನ ಅಗ್ರಹಾರ - ನಾಗವಾರ ನಡುವಿನ ಗುಲಾಬಿ ಮಾರ್ಗದ ಕಾಮಗಾರಿ ಇನ್ನೂ ಮುಗಿದಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದ ಆರಂಭವನ್ನು ಎರಡು ವರ್ಷಕ್ಕೆ ಮುಂದೂಡಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಅನುಷ್ಠಾನ ಮಾಡುತ್ತಿರುವ ನಮ್ಮ ಮೆಟ್ರೋದ ಎರಡನೇ ಹಂತದ ಒಟ್ಟಾರೆ 75.09 ಕಿ.ಮೀ. ಉದ್ದದ ಈ ಯೋಜನೆಗಳಲ್ಲಿ ಸುಮಾರು 41 ಕಿ.ಮೀ. ಉದ್ದದ ಮೆಟ್ರೋ ಮುಂದಿನ ವರ್ಷ ಪೂರ್ಣಗೊಂಡರೂ ಜನ ಸಂಚಾರ ಆರಂಭವಾಗಲ್ಲ ಎಂದು ಮೆಟ್ರೋ ಸಾರಿಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.2020ರಲ್ಲೇ ಸರ್ಕಾರ ಮೆಟ್ರೋದ 2ನೇ ಹಂತದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿತ್ತು. ಆದರೆ, ಭೂಸ್ವಾಧೀನ ಸಮಸ್ಯೆ, ಮರಗಳ ತೆರವು, ರೈಲುಗಳ ಕೊರತೆ, ತಾಂತ್ರಿಕ ಸಮಸ್ಯೆ, ಕೋರ್ಟ್ ವ್ಯಾಜ್ಯಗಳ ವಿಳಂಬದಿಂದಾಗಿ ಒಟ್ಟಾರೆ ಈ ಹಂತದ ಮೂರು ಯೋಜನೆಗಳು ನಿಧಾನಗತಿ ಪಟ್ಟ ಹೊತ್ತಿವೆ. ಇದರ ಪರಿಣಾಮ ಕಾಮಗಾರಿಗಳ ವೆಚ್ಚ ಹೆಚ್ಚುತ್ತಿದೆ.

ಹಳದಿ ಮಾರ್ಗಕ್ಕೆ ರೈಲುಗಳ ಕೊರತೆ:

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದ (19 ಕಿ.ಮೀ.) ಸಿವಿಲ್‌ ಕಾಮಗಾರಿ ಮುಗಿದು ವರ್ಷ ಕಳೆದಿದೆ. ಆದರೆ, ಕಳೆದ ವರ್ಷ ಫೆಬ್ರವರಿಯಲ್ಲಿ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿದ ಪ್ರೊಟೊಟೈಪ್‌ ಚಾಲಕರಹಿತ ರೈಲು ಹಾಗೂ ಈ ಫೆಬ್ರವರಿಯಲ್ಲಿ ಕೊಲ್ಕತ್ತಾದ ತೀತಾಘರ್‌ ರೈಲ್ ಸಿಸ್ಟಂ ಕಳಿಸಿದ್ದು ಸೇರಿ ಈವರೆಗೆ ಎರಡು ರೈಲುಗಳು ಮಾತ್ರ ಬಿಎಂಆರ್‌ಸಿಎಲ್‌ ಬಳಿಯಿದೆ. ಇದೇ ತಿಂಗಳ ಅಂತ್ಯಕ್ಕೆ ಇನ್ನೊಂದು ರೈಲು ಬರುವ ನೀರಿಕ್ಷೆಯಿದ್ದು, ಮೂರು ರೈಲುಗಳಿಂದ ಹಳದಿ ಮಾರ್ಗ ಆರಂಭಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ. ಆದರೆ, ರೈಲುಗಳ ನಡುವೆ 20 ನಿಮಿಷಕ್ಕೊಮ್ಮೆ ಸಂಚರಿಲಿವೆ. ಹೀಗಾಗಿ ಪ್ರಯಾಣಿಕರು ಹೆಚ್ಚು ಸಮಯ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಇರಲಿದೆ.

ಗುಲಾಬಿ ಮಾರ್ಗದಲ್ಲಿ ಟ್ರ್ಯಾಕ್‌ ಅಳವಡಿಕೆ:

ಬನ್ನೇರುಘಟ್ಟ ಮೂಲಕ ಹಾದು ಹೋಗುವ ಗುಲಾಬಿ ಮಾರ್ಗವನ್ನು (21.3 ಕಿ.ಮೀ.) ಮುಂದಿನ 2026ರ ಡಿಸೆಂಬರ್‌ಗೆ ತೆರೆಯುವುದಾಗಿ ಬಿಎಂಆರ್‌ಸಿಎಲ್‌ ಈಚೆಗೆ ಹೇಳಿದೆ. ಕಳೆದ ಅಕ್ಟೋಬರ್‌ನಲ್ಲೇ ಈ ಮಾರ್ಗದ 13.76 ಕಿ.ಮೀ. ಸುರಂಗ ಕಾಮಗಾರಿ ಮುಗಿದಿದ್ದು, ಶೇ.90ರಷ್ಟು ಸುರಂಗ ನಿಲ್ದಾಣ ಕಾಮಗಾರಿ ಮುಗಿದಿದೆ. ಟ್ರ್ಯಾಕ್‌ ಅಳವಡಿಕೆ ಮಾಡಲಾಗುತ್ತಿದೆ. ಇನ್ನು, ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗ 7.5 ಕಿ.ಮೀ. ಮಾರ್ಗದ ನಿಲ್ದಾಣ ಸಿವಿಲ್‌ ಕಾಮಗಾರಿ, ಟ್ರ್ಯಾಕ್‌ ಅಳವಡಿಕೆ ನಡೆಯುತ್ತಿದೆ. ಇದಕ್ಕೆ ಬಿಇಎಂಎಲ್ ರೈಲುಗಳನ್ನು ಒದಗಿಸಬೇಕಿದೆ.

ನೀಲಿ ಮಾರ್ಗ ನಿಲ್ದಾಣ ಕಾಮಗಾರಿ ಬಾಕಿ:

2021ರಲ್ಲಿ ಆರಂಭವಾದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌.ಪುರ (2ಎ) ಹಾಗೂ ಕೆ.ಆರ್‌.ಪುರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (2ಬಿ) ಸಂಪರ್ಕಿಸುವ ನೀಲಿ ಮಾರ್ಗವನ್ನು 2027ಕ್ಕೆ ತೆರೆಯುವುದಾಗಿ ಬಿಎಂಆರ್‌ಸಿಎಲ್‌ ಅಧಿಕಾರಿಗಳ ವಲಯ ತಿಳಿಸಿದೆ. 2ಎ ಹಂತದ 2ನೇ ಪ್ಯಾಕೇಜ್‌ ಕಾಮಗಾರಿಯಲ್ಲಿ ವಯಡಕ್ಟ್‌ ಅಳವಡಿಕೆ ಹಾಗೂ ಸ್ಟೇಷನ್ ನಿರ್ಮಾಣದ ಪಿಲ್ಲರ್‌ ಕಾಮಗಾರಿಗಳು ಮುಗಿದಿದ್ದು, ಪ್ಯಾಕೇಜ್‌-1 ಹಂತದ ಕಾಮಗಾರಿಯಲ್ಲಿ ಇನ್ನೂ 13 ಪಿಲ್ಲರ್‌ಗಳ ನಿರ್ಮಾಣ ಆಗಬೇಕಿದೆ.

2ಬಿ ಹಂತದ ಮೊದಲ ಪ್ಯಾಕೇಜ್‌ನಲ್ಲಿ ಶೇ.59ರಷ್ಟು ಪಿಲ್ಲರ್‌ ನಿರ್ಮಿಸಲಾಗಿದ್ದು, 2ನೇ ಪ್ಯಾಕೇಜ್‌ನಲ್ಲಿ ಶೇ.74 ಹಾಗೂ 3ನೇ ಪ್ಯಾಕೇಜ್‌ ಕಾಮಗಾರಿಯಲ್ಲಿ ಶೇ.96ರಷ್ಟು ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ ನೀಲಿ ಮಾರ್ಗದಲ್ಲಿ 30 ಎತ್ತರಿಸಿದ ನಿಲ್ದಾಣಗಳ ಕಾಮಗಾರಿ ಆಗಬೇಕಿದ್ದು, ಕಾಮಗಾರಿ ವಿಳಂಬವಾಗಿದೆ ಎಂದು ಮೆಟ್ರೋ ಸಾರಿಗೆ ತಜ್ಞರು ಹೇಳುತ್ತಿದ್ದಾರೆ.